spot_img
spot_img

ಲೇಖನ : ಗೆಲುವು ಸೋತವರ ಪಾಲಿಗೆ!

Must Read

spot_img
- Advertisement -

  ನಾವಿಂದು ಬದುಕುತ್ತಿರುವ ಆಧುನಿಕ ಜೀವನದ ಮೇಲೆ ನಂಬಲಾಗದ ಪ್ರಭಾವ ಬೀರಿದ ಕೊಡುಗೆ ನೀಡಿದವರು ಅನೇಕರು. ಅದರಲ್ಲೂ ತಮ್ಮ ಮಹತ್ವದ ಕೊಡುಗೆ ನೀಡಿದವರು ಥಾಮಸ್ ಅಲ್ವಾ ಎಡಿಸನ್. ಸೃಜನಶೀಲ ಆವಿಷ್ಕಾರಕರಲ್ಲಿ ನಿಜವಾದ ರತ್ನವೆಂದು ಪರಿಗಣಿಸಲ್ಪಟ್ಟವರು. ಸಾರ್ವಕಾಲಿಕ ಅತ್ಯಂತ ಸೃಜನಶೀಲ ಆವಿಷ್ಕಾರಕರಲ್ಲಿ ಒಬ್ಬರು. ಅವರು ತಮ್ಮ ಆರಂಭಿಕ ವರ್ಷಗಳಲ್ಲಿ ಪ್ರಯಾಣಿಕರಿಗೆ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದರು. ಥಾಮಸ್ ಅಲ್ವಾ ಎಡಿಸನ್ ಬಲ್ಬ್ಅನ್ನು ಕಂಡು ಹಿಡಿಯುವಾಗ ಎಷ್ಟು ಬಾರಿ ವಿಫಲರಾದರು ಗೊತ್ತೆ? ಅಂತಿಮ ಫಲಿತಾಂಶವನ್ನು ಪಡೆಯುವ ಮೊದಲು ಒಂದಲ್ಲ ಎರಡಲ್ಲ ಒಂದು ಸಾವಿರ ಸಲ ವಿಫಲ ಪ್ರಯತ್ನಗಳನ್ನು ಮಾಡಿದರು. ಹೀಗೆ ಸೋತ ಎಡಿಸನ್ ಹೆಸರಲ್ಲಿ ೧೦೯೩ ಪೆಟೆಂಟ್‌ಗಳಿವೆ. ಪೆಟೆಂಟ್‌ಗಳ ವಿಶ್ವ ದಾಖಲೆಯನ್ನು ಹೊಂದಿರುವ ಅದ್ಭುತ ಅಮೇರಿಕನ್ ಸಂಶೋಧಕ.

ಆರಂಭ
ಆರಂಭ ಯಾವಾಗಲೂ ಗೆಲುವಿನಿಂದಲೇ ಆಗಬೇಕೆಂದಿಲ್ಲ. ಉದಾಹರಣೆಗೆ ಹೇಳಬೇಕೆಂದರೆ ಸ್ಪೂರ್ತಿದಾಯಕ ಯಶಸ್ಸನ್ನು ಪಡೆದ ಬಾಲಿವುಡ್ ಶೆಹನ್ ಶಾ ಎಂದು ಕರೆಯಲ್ಪಡುವ ಅಮಿತಾಬ್ ಬಚ್ಚನ್ ಅವರ ಆರಂಭಿಕ ದಿನಗಳಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸಿದರು. ಹಲವಾರು ತೊಂದರೆಗಳ ನಂತರವೂ ಅವರು ಎಂದಿಗೂ ಬಿಟ್ಟುಕೊಡಲಿಲ್ಲ. ಮೊದಮೊದಲು ಅವರ ಪ್ರಯಾಣ ಸುಲಭವಾಗಿರಲಿಲ್ಲ. ಪ್ರಾರಂಭದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಲು ವಿಫಲರಾದರು. ಬರಬರುತ್ತ ಅವರ ಚಲನಚಿತ್ರಗಳು ಅವರ ಸ್ಥಾನವನ್ನು ಗಟ್ಟಿಗೊಳಿಸಿದವು. ತಮ್ಮ ದಾರಿಯನ್ನು ತಾವೇ ಸೃಷ್ಟಿಸಿಕೊಂಡು ಆ ದಾರಿಯಲ್ಲಿ ಇತರರು ನಡೆಯಲು ಪೇರೇಪಿಸುವ ದಾರಿದೀಪ ಆದರು.

ಸಂಕಲ್ಪ
ಕೆಲವರು ಮೊದ ಮೊದಲು ಸೋತು ಸುಣ್ಣವಾದರೂ ನಂತರ ಎಲ್ಲರೂ ನೆನಪಿಡುವಂತೆ ಗೆಲುವಿನ ಪತಾಕೆ ಹಾರಿಸಿಬಿಡುತ್ತಾರೆ. ಸೋಲು ಸದಾ ಬೆಂಬಿಡದೇ ಕಾಡುತ್ತಿದೆ ಅಂದರೆ ಅದು ನಮ್ಮನ್ನು ಗೆಲುವಿಗೆ ಸಕ್ಷಮರನ್ನಾಗಿಸುತ್ತಿದೆ ಎಂತಲೇ ಅರ್ಥ. ಸಂಕಲ್ಪ ಶಕ್ತಿಯಿಂದ ನಮ್ಮ ಗೆಲುವನ್ನು ನಾವೇ ಬರೆದುಕೊಳ್ಳಬಹುದು. ನಾನು ಸೋಲುತ್ತಿದ್ದೇನೆ ಎಂಬ ಚಿಂತೆ ಬೇಡ. ಈಗಲ್ಲದಿದ್ದರೂ ಒಂದಲ್ಲ ಒಂದು ದಿನ ಗೆಲುವು ಸಿಕ್ಕೇ ಸಿಗುತ್ತದೆ ಎಂದು ಸಾವಧಾನವಾಗಿ ವಿನಮ್ರರಾಗಿ ಪ್ರಯತ್ನ ನಡೆಸುತ್ತಿರಬೇಕು. ಗೆಲುವು ಎನ್ನುವುದು ಸಿಕ್ಕವರಿಗೆ ಸೀರುಂಡೆ ಅಲ್ಲವೇ ಅಲ್ಲ. ಒಮ್ಮೆ ದೃಢ ಸಂಕಲ್ಪ ಮಾಡಿದರೆ ಸಾಕು ಪದೇ ಪದೇ ಕಳೆದುಕೊಂಡರೂ ಕೊನೆಗೊಮ್ಮೆ ಪಡೆಯುತ್ತೇನೆಂಬ ಛಲದಲ್ಲಿ ಮುನ್ನುಗ್ಗುವ ಧೈರ್ಯ ಬರುತ್ತದೆ.

- Advertisement -

ಹಗುರ
ಗೆಲುವು ಎಂಬುದು ಒಂದೇ ರಾತ್ರಿಯಲ್ಲಿ ಸಿಗುವಂತಹದಲ್ಲ. ಗೆಲುವಿನ ಹಾದಿಯಲ್ಲಿ ದಿನ ಸಾಗುತ್ತಿದ್ದರೆ ಒಂದಲ್ಲ ಒಂದು ದಿನ ಸಿಕ್ಕೇ ಸಿಗುತ್ತದೆ ಅನ್ನುವುದು ಗೊತ್ತಿದೆ. ಆದರೆ ಅದನ್ನು ಹೇಗೆ ಪಡೆಯಬೇಕು ಎಂಬುದನ್ನು ನಾವು ಜ್ಞಾನದಿಂದ ಸಂಪಾದಿಸಬೇಕು. ನಿಜ, ಗೆಲುವಿನ ಬಗ್ಗೆ ವಿಚಾರ ಮಾಡುತ್ತ ಹೋದರೆ ಅದನ್ನು ಪಡೆಯುವುದು ಭಾರ ಎತ್ತಿದಂತೆ ಕಷ್ಟವೆನಿಸುವುದು. ಅದರತ್ತ ಹೆಜ್ಜೆ ಹಾಕುತ್ತ ಹೋದರೆ ಹಗುರ ಎನಿಸುತ್ತದೆ. ಸಾಲು ಸಾಲು ಸೋಲುಗಳನ್ನು ನುಂಗುತ್ತ ಮುನ್ನುಗ್ಗುವ ಎದೆಗಾರಿಕೆಯಿಂದ ಗೆಲುವಿನ ಆಗಸವನ್ನು ಸ್ಪರ್ಶಿಸಬಹುದು.

ಕಲಿ-ತಿಳಿ
ಪ್ರತಿಯೊಂದು ಸೋಲಿನ ನಡಿಗೆಯಲ್ಲೂ ಗೆಲುವಿನ ಹೆಜ್ಜೆ ಕಾಯುತ್ತಿರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಎಲ್ಲರದೂ ಕೇಳು ಎಲ್ಲರಿಂದ ಕಲಿ ಎಲ್ಲರಿಂದ ತಿಳಿ ಏಕೆಂದರೆ ಎಲ್ಲರಿಗೂ ಎಲ್ಲವೂ ತಿಳಿದಿಲ್ಲ. ಎಲ್ಲರಿಗೂ ಏನಾದರೊಂದು ತಿಳಿದಿದೆ. ಆದ್ದರಿಂದ ಸರ್ವಜ್ಞನಂತೆ ಸರ್ವರಿಂದಲೂ ಒಂದನ್ನು ಕಲಿಯಬೇಕು. ಸೋಲು ಎನ್ನುವುದು ಹಾಗಲಕಾಯಿಯಂತೆ ತಿನ್ನಲು ಬೇಡವೆನಿಸುತ್ತದೆ. ತಿಂದರೆ ಗೆಲುವಿಗೆ ಮೆಟ್ಟಿಲಾಗುತ್ತದೆ. ಗೆಲುವಿನ ದಾರಿ ಎಂದಿಗೂ ಕಠಿಣ. ಆದರೆ ಬಿಟ್ಟೂಬಿಡದೇ ಶ್ರಮಿಸುತ್ತಿದ್ದರೆ ಒಂದು ದಿನ ಗೆಲುವಿನ ಸರದಾರನನ್ನಾಗಿಸುತ್ತದೆ.

ತುಡಿತ
ಗೆಲ್ಲಲು ಯಾವೆಲ್ಲ ಸಂಗತಿಗಳು ಮುಖ್ಯವಾಗಿ ಬೇಕೆಂದು ವಿಚಾರ ಮಾಡುತ್ತ ಹೋದರೆ….. ಗುರಿ, ಶಿಸ್ತು, ಸತತ ಪರಿಶ್ರಮ, ಉತ್ಸಾಹ, ಹೊಸದರಲ್ಲಿ ಆಸಕ್ತಿ, ಸಕಾರಾತ್ಮಕ ಮನೋಭಾವ, ಬದಲಾವಣೆಗೆ ಸಿದ್ಧ ಇರುವುದು ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಸಂವಹನ ಕಲೆಯಲ್ಲಿ ಅತಿರಥ ಮಹಾರಥರಾಗಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಅನ್ನೋದು ಕೆಲವರ ಅಂಬೋಣ. ಸಾಧಿಸಬೇಕನ್ನುವ ಹಟ, ತುಡಿತ, ಗೆಲ್ಲಲೇಬೇಕೆಂಬ ಹುಚ್ಚುತನ ಇವು ಅತಿ ಮುಖ್ಯವಾದುವುಗಳು. ಇವುಗಳನ್ನು ಯಾವ ವಿಶ್ವವಿದ್ಯಾಲಯವೂ ಕಲಿಸಲಾರದು, ಯಾರೂ ಕಲಿಸಲಾರರು.

- Advertisement -

ಉತ್ಸಾಹ
ಜೀವನದ ವೀಣೆಯನ್ನು ಮೀಟಿದಾಗ ಪ್ರತಿ ತಂತಿಯೂ ಗೆಲುವು ಗೆಲುವು ಎಂದು ನುಡಿಯಬೇಕು. ಆ ರೀತಿಯ ಉತ್ಸಾಹ ಇರಬೇಕು. ಉನ್ನತ ಮಟ್ಟಕ್ಕೆ ತಲುಪಿದವರೆಲ್ಲರಲ್ಲೂ ಇದ್ದ ಮಹತ್ವದ ಅಂಶ ಉತ್ಸಾಹ. ತುಡಿತವೊಂದಿದ್ದರೆ ಸಾಕು ಜೀವನದಲ್ಲಿ ಹಣ, ಗೆಲುವು ಸಮಾಜದ ಘನತೆ ಎಲ್ಲವನ್ನೂ ಪಡೆಯಬಹುದು. ಹಟ ಮತ್ತು ಉತ್ಸಾಹಗಳು ಒಂದಕ್ಕೊಂದು ಪೂರಕವಾದ ಪ್ರಕ್ರಿಯೆಗಳು. ಮಾನಸಿಕ ನಿರುತ್ಸಾಹ ದೌರ್ಬಲ್ಯಗಳಿಂದ ಸಾಗಿದರೆ ಗೆಲುವನ್ನು ಕುರಿತು ಕನಸು ಮನಸಿನಲ್ಲಿಯೂ ಆಲೋಚಿಸಲು ಸಾಧ್ಯವಿಲ್ಲ. ‘ಸಕ್ಸಸ್ ಈಸ್ ನಾಟ್ ಲಕ್, ಇಟ್ಸ್ ಗೇಮ್ ಆಫ್ ಪ್ಯಾಷನ್ ಆ್ಯಂಡ್ ಹಾರ್ಡವರ್ಕ್’

ಕೌತುಕ
ನಮ್ಮ ಮೆದುಳು ಶೇಕಡ ೭೦ರಷ್ಟು ಸಮಯ ಹಗಲುಗನಸು ಕಾಣುತ್ತ ಜೀವನದಲ್ಲಿ ಆಗದಿರುವ ಸನ್ನಿವೇಶಗಳನ್ನು ಯೋಚಿಸುತ್ತಿರುತ್ತದೆ ಅಂತೆ. ಹಗಲುಗನಸು ಕಾಣುವುದನ್ನು ಬಿಟ್ಟು ನೀವು ನಿಮ್ಮ ಅತ್ಯುತ್ತಮ ಆವೃತ್ತಿ ಆಗಲು ಪ್ರಯತ್ನಿಸಬೇಕು. ಗೆಲ್ಲುತ್ತೇನೆ ಎಂಬ ಛಲವಿದ್ದರೆ ನೀನು ಗೆದ್ದೇ ಗೆಲ್ಲತ್ತೀಯಾ ಎಂದು ಸೋಲು ಕೂಡ ಭರವಸೆ ನೀಡುತ್ತದೆ. ಕೌತುಕವೆಂದರೆ ಸೋಲು ಮಿಂಚಿನAತೆ ದಾಳಿ ಮಾಡಿದರೂ ಗೆಲುವು ಮಾತ್ರ ಸೋತವರ ಪಾಲಿಗೆ ಸೇರುತ್ತದೆ. ಗೆಲುವೇ ಮುಖ್ಯವೆಂದು ಭಾವಿಸುವವರು, ಸೋಲಬಾರದೆನ್ನುವವರು ಕಷ್ಟಪಟ್ಟು ಪಡೆಯಬೇಕಿದ್ದ ಗೆಲುವು ಕಳೆದುಕೊಂಡದ್ದೇ ಹೆಚ್ಚು. ನಿಜವಾದ ವಿಜಯಶಾಲಿಗಳಿಗೆ ಸೋಲಿನ ಬಗ್ಗೆ ಕೊಂಚವೂ ಪಶ್ಚಾತ್ತಾಪವಿಲ್ಲ. ಸೋಲುಗಳನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿಸಿ ಗೆಲುವಿನ ಪರ್ವತದ ತುತ್ತತುದಿಯ ಮೇಲೆ ನಿಲ್ಲುತ್ತಾರೆ. ಎಲ್ಲ ದಿಕ್ಕುಗಳಲ್ಲೂ ಕ್ಯಾಮರಾವನ್ನು ಪಟ ಪಟ ತಿರುಗಿಸಿ ಅವರ ಪಟ ತೆಗೆಯುವಂತೆ ಮಾಡುತ್ತಾರೆ.

ಕೊನೆ ಹನಿ
ಪ್ರತಿಭೆ ಯಾರಪ್ಪನ ಸ್ವತ್ತಲ್ಲ. ಹಾಗೆ ಗೆಲುವು ಕೂಡ ‘ಸಕ್ಸಸ್ ಕಮ್ಸ್ ಟು ದೋಜ್ ಹೂ ಡರ‍್ಸ್ ಇಟ್.’ ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸುವುದು ಗೆಲುವಿನ ಮೊದಲ ಹೆಜ್ಜೆ. ಗೆಲ್ಲುವುದು ತಡವಾದರೂ ಪರವಾಗಿಲ್ಲ ಆದರೆ ಒಮ್ಮೆ ಗೆದ್ದರೆ ಅದು ಇತಿಹಾಸದ ಪುಟದಲ್ಲಿ ದಾಖಲಾಗುವಂತಿರಬೇಕು. ಕಠಿಣ ಪರಿಶ್ರಮ, ಬದ್ಧತೆ ಸಮರ್ಪಣೆ, ಛಲ ತುಡಿತ ಗೆಲುವನ್ನು ಸನಿಹ ತರುತ್ತವೆ. ಸಾಧಿಸುವ ಛಲ ಬಲವಾಗಿದ್ದರೆ ಸೋಲು ಗೆಲುವನ್ನು ಹಿಂದಿಕ್ಕುವುದು ಸಾಧ್ಯವೇ ಇಲ್ಲ. ಈಗಿನ ಸೋಲಿನ ದಿನಗಳೇ ನಾಳೆಯ ಗೆಲುವಿಗೆ ಕಾರಣ. ಸೋಲಿಗೆ ಸೋಲುವುದು ಬೇಡ ಏಕೆಂದರೆ ಗೆಲುವು ಯಾವತ್ತೂ ಸೋತವರ ಪಾಲಿಗೆ ಸೇರುತ್ತದೆ!
=======================================

ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಾಗರಿಕರು ಸ್ವತ್ತುಗಳಿಗೆ ಇ ಖಾತಾ ಪಡೆದುಕೊಳ್ಳಬೇಕು – ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ - ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೂ ಸಹ ಇ- ಖಾತಾ ಅಭಿಯಾನವು ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ...
- Advertisement -

More Articles Like This

- Advertisement -
close
error: Content is protected !!
Join WhatsApp Group