ಸಿಂದಗಿ- ಪಟ್ಟಣದ ಸಾರಂಗಮಠದ ಮುಂದಿನ ಉತ್ತರಾಧಿಕಾರಿಯಾಗಿ ಜಮಖಂಡಿ ತಾಲೂಕಿನ ಕೊಣ್ನೂರು ಗ್ರಾಮದ ಹೊರಗಿನ ಕಲ್ಯಾಣಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ನೇಮಕಗೊಂಡಿದ್ದಾರೆ.
ಸಿಂದಗಿ ಸಾರಂಗಮಠದಲ್ಲಿ ಶ್ರೀ ಗುಡ್ಡಾಪೂರ ದಾನಮ್ಮದೇವಿ ದೇವಸ್ಥಾನದ ಮೊದಲ ವರ್ಷದ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅಫ್ಜಲಪುರಿನ ಪೂಜ್ಯ ಶ್ರೀ ಮಳೇಂದ್ರ ಶಿವಾಚಾರ್ಯರು ಘೋಷಣೆ ಮಾಡಿದರು.
ಈ ವೇಳೆ ಅವರು ಮಾತನಾಡಿ, ಸಿಂದಗಿ ಸಾರಂಗಮಠಕ್ಕೆ ತನ್ನದೇ ಆದ ಭವ್ಯ ಇತಿಹಾಸವಿದೆ. ಗುರುಪರಂಪರೆಯ ಮಠವಾದ ಸಾರಂಗಮಠ ಜಾತಿಧರ್ಮವನ್ನು ಮಿರಿದ ಮಠಗಳಲ್ಲಿ ಒಂದಾಗಿದೆ. ಶಿಕ್ಷಣ, ಧರ್ಮ ಪ್ರಸಾರ, ಸಾಮಾಜಿಕ ಸೇವೆ, ಕೃಷಿ, ಅಧ್ಯಾತ್ಮವನ್ನು ನಿತ್ಯ ಸಮಾಜಕ್ಕೆ ನೀಡುವ ಮೂಲಕ ಸಾಮಾಜಿಕ ಸೇವೆ ಮೆರೆಯುತ್ತಿದೆ. ಲಿಂ. ಪೂಜ್ಯ ಶ್ರೀ ಚನ್ನವೀರ ಸ್ವಾಮಿಗಳು ಮಠವನ್ನು ಬೆಳೆಸುವುದರ ಜೊತೆಗೆ ಈ ಭಾಗದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿದವರು ಪ್ರಸ್ತುತ ಪೀಠಾಧಿಪತಿಯಾಗಿರುವ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಠವನ್ನು ಬೆಳೆಸುವುದು ಜೊತೆಗೆ ಶಿಕ್ಷಣ ಸಂಸ್ಥೆಯನ್ನು ಉತ್ತರ ಕರ್ನಾಟಕದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಕೊಣ್ಣೂರಿನ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಜ್ಞಾನಿಗಳು, ವಿದ್ಯಾವಂತರು, ಧರ್ಮನಿಷ್ಠರು, ಶ್ರಮಜೀವಿಗಳು ಅಂತವರನ್ನು ಸಾರಂಗಮಠದ ೧೮ ನೇ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದು ಈ ಭಾಗದ ಜನತೆಗೆ ಸಂತಸ ತಂದಿದೆ ಎಂದರು.
ಈ ಸಂಧರ್ಭದಲ್ಲಿ ಶಾಸಕ ಅಶೋಕ ಮನಗೂಳಿ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿಮಠ ಮಾತನಾಡಿ, ಕೊಣ್ಣೂರಿನ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಸಿಂದಗಿ ಸಾರಂಗಮಠಕ್ಕೆ ಉತ್ತರಾಧಿಕಾರಿಗಳಾಗಿದ್ದು ಸಂತಸ ತಂದಿದೆ. ಸಾರಂಗಮಠ ಇಂದು ಹೆಮ್ಮರವಾಗಿ ಬೆಳೆದಿದೆ. ಈ ಮಠಕ್ಕೆ ಸಮರ್ಥ ಮತ್ತು ಸದ್ಗುಣ ಸಂಪನ್ನರಾದಂಥವರು ಬೇಕಿತ್ತು ಆ ಎಲ್ಲ ಗುಣಗಳು ಕೊಣ್ಣೂರಿನ ಪೂಜ್ಯರಲ್ಲಿ ಇವೆ ಎಂದ ಅವರು ಮಠದ ಸದ್ಬಕ್ತರು ಡಾ. ಪ್ರಭುಸಾರಂಗದೇವ ಶಿವಾಚಾರ್ಯರ ಮೇಲೆ ಇಟ್ಟಂತ ಗೌರವ ನೂತನ ಶ್ರೀಗಳ ಮೇಲೆಯೂ ಇಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ನೂತನ ಉತ್ತರಾಧಿಕಾರಿ ಆಯ್ಕೆಯಾಗಿರುವ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ನಾನು ಸಿಂದಗಿಯ ಸಾರಂಗಮಠಕ್ಕೆ ಹೆಚ್ಚು ಸಂಪರ್ಕದಲ್ಲಿದ್ದವನು. ಶ್ರೀಮಠ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸಮರ್ಥ ಗುರುಗಳು ಅನೇಕ ಮಠಾಧೀಶರಿಗೆ ಮಾದರಿಯಾದವರು. ನಾನು ಮಠದ ಆಸ್ತಿ ನೋಡಿ ಇಲ್ಲಿ ಬಂದಿಲ್ಲ ಸಾರಂಗಮಠದ ಸದ್ಬಕ್ತರು ಮತ್ತು ಸಿಂದಗಿಯ ಜನತೆಯ ಪ್ರೀತಿಗೆ ನಾನು ಬಂದಿದ್ದೇನೆ. ಶ್ರೀಗಳು ಕಂಡ ಕನಸನ್ನು ಭಕ್ತಿ ಮತ್ತು ಶ್ರದ್ದೆಯಿಂದ ಮಾಡುವ ಮೂಲಕ ಈ ಮಠವನ್ನು ಇನ್ನೂ ಹೆಚ್ಚು ಸಮರ್ಥವಾಗಿ ಎಲ್ಲರ ಸಹಕಾರದಿಂದ ನಡೆಸಿಕೊಂಡು ಹೊಗುತ್ತೇನೆ ಎಂದು ಆಶಯ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಮಠದ ಎಲ್ಲ ಭಕ್ತರ ಸಮಕ್ಷಮದಲ್ಲಿ ನೂತನ ಉತ್ತರಾಧಿಕಾರಿಗಳ ನೇಮಕವಾಗಿದ್ದು ನಾನು ಸಂತೋಷದಿಂದ ಸ್ವೀಕಾರ ಮಾಡುತ್ತೇನೆ. ಡಾ. ವಿಶ್ವಪ್ರಭುದೇವರು ಎಲ್ಲ ಜ್ಞಾನವನ್ನು ಬಲ್ಲವರು ಅವರು ಈ ಮಠವನ್ನು ಸರಿಯಾಗಿ ನಡೆಸಿಕೊಂಡು ಹೊಗುತ್ತಾರೆ. ಮಠದ ಭಕ್ತರು ನಮಗೆ ನೀಡಿದ ಸಹಕಾರ ಮತ್ತು ಪ್ರೀತಿಯನ್ನು ಅವರಿಗೂ ನೀಡಬೇಕು ಎಂದರು.
ವೇದಿಕೆ ಮೇಲೆ ಗಿರಿಸಾರಗ ಶ್ರೀಗಳು, ಪಾಳಾದ ಶ್ರೀಗಳು, ಬಂಥನಾಳದ ಶ್ರೀಗಳು, ಬಿಲಕೇರುರ ಶ್ರೀಗಳು, ಜಮಖಂಡಿ ಶ್ರೀಗಳು, ಬೀಳಗಿ ಶ್ರೀಗಳು, ಆಲಮೇಲ ಶ್ರೀಗಳು, ಯಂಕಂಚಿ ಶ್ರೀಗಳು, ಆದಿಶೇಷ ಸಂಸ್ಥಾನ ಹಿರೇಮಠದ ಶ್ರೀಗಳು, ಕೆರುಟಗಿ ಶ್ರೀಗಳು, ಸಿಂದಗಿ ಶ್ರೀಗಳು, ಕೊಕಟನೂರ ಶ್ರೀಗಳು, ನಾದ ಶ್ರೀಗಳು, ಬೋರಗಿ ಶ್ರೀಗಳು ಮತ್ತು ಅಶೋಕ ವಾರದ, ಗಂಗಾಧರ ಜೋಗೂರ, ಅಶೋಕ ಮಸಳಿ, ವಿಶ್ವನಾಥ ಜೋಗೂರ, ಡಾ. ಅರವಿಂದ ಮನಗೂಳಿ, ಡಾ. ಶರಣಬಸವ ಜೋಗೂರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ನೂರಾರು ಮುತೈದೆಯರಿಗೆ ಉಡಿತುಂಬವ ಕಾರ್ಯಕ್ರಮ ನೆರವೇರಿತು.