ಕರ್ನಾಟಕ ಸರಕಾರ ಬಡವರ ಪರ ಕಾಳಜಿ ಎಂದೆನ್ನುವುದು ಸಂಪೂರ್ಣ ಸುಳ್ಳಾಗಬಾರದು. ನಾಡು ಕಂಡ ಅತ್ಯಂತ ಭ್ರಷ್ಟ ಸರಕಾರ ಇದಾಗಬಾರದು. ಸಹಕಾರ ಕ್ಷೇತ್ರ,ಕಂದಾಯ ಇಲಾಖೆ ಮಂತ್ರಿಗಳು ಜನರ ಹಣವನ್ನು ಕೊಳ್ಳೆ ಹೊಡೆಯಲು ಬಿಟ್ಟು ಮೋಜು ನೋಡುತ್ತಿದ್ದಾರೆ.
ಬಹು ಕೋಟಿ ವಂಚನೆ ಹಗರಣದ ಬೆಳಗಾವಿ ಮೂಲದ ಸಂಗೊಳ್ಳಿ ರಾಯಣ್ಣ ಸಹಕಾರಿ ಸಂಸ್ಥೆಯಲ್ಲಿ ಸಾವಿರಾರು ಜನರು ತಮ್ಮ ಉಳಿತಾಯಕ್ಕಾಗಿ ಭವಿಷ್ಯಕ್ಕಾಗಿ ಠೇವಣಿ ಹಣವನ್ನ ಇಟ್ಟಿದ್ದರು. ಚಿತ್ರ ಉದ್ಯಮಿ ವಂಚಕ ಆನಂದ ಅಪ್ಪುಗೋಳ ಎಂಬವನು ಠೇವಣಿದಾರರಿಗೆ ಪಂಗನಾಮ ಹಾಕಿದ್ದು ಸಾವಿರಾರು ಕೋಟಿ ಆಸ್ತಿಯ ದಾಖಲೆ ಇದ್ದರೂ ಕಳೆದ ಏಳು ವರ್ಷದಿಂದ ಸಂಗೊಳ್ಳಿ ರಾಯಣ್ಣ ಸಹಕಾರಿ ಹಣಕಾಸು ಸಂಸ್ಥೆಯ ಅವ್ಯವಹಾರ ಇನ್ನೂ ಸರಕಾರ ಇತ್ಯರ್ಥ ಮಾಡಿಲ್ಲ. 2021 ರಲ್ಲಿ ಬೆಳಗಾವಿ ಅಸಿಸ್ಟೆಂಟ್ ಕಮಿಷನರ್ ಕಚೇರಿಯಲ್ಲಿ ಎಲ್ಲರಿಗೂ ಠೇವಣಿ ಪತ್ರದ ನಕಲು ಪ್ರತಿಗಳನ್ನು ಹಚ್ಚಲು ಹೇಳಿ ಅರ್ಜಿಗಳನ್ನು ಸ್ವೀಕರಿಸಿದರು. ಬಡವರು ಕಾರ್ಮಿಕರು ಮದ್ಯಮ ವರ್ಗದವರು ಅರ್ಜಿ ಸಲ್ಲಿಸಿ ತಾವು ತುಂಬಿದ ಠೇವಣಿ ಹಣ ಬರುವುದೆಂದು ದಾರಿ ಕಾಯ್ದರು.
ನಾಲ್ಕು ವರ್ಷ ಗತಿಸಿದವು. ಕಳೆದ ಡಿಸೆಂಬರ್ ನಲ್ಲಿ ವಿಶೇಷಾಧಿಕಾರಿ ( KPID ) ಕಂದಾಯ ಇಲಾಖೆಗೆ ಒಳಪಟ್ಟ ಸಂಸ್ಥೆ ಮತ್ತೆ ಪತ್ರಿಕೆಯಲ್ಲಿ ಜಾಹಿರಾತು ಮಾಡಿ, ಠೇವಣಿದಾರರು ಮತ್ತೆ ಅರ್ಜಿ ಸಲ್ಲಿಸಲು ಹೇಳಿದರು. ಬಡವರು ಕೂಲಿ ಕಾರ್ಮಿಕರು ಬೆಂಗಳೂರಿನ ಮಹಾನಗರದಲ್ಲಿ ರಸ್ತೆ ಬದಿ ಮಲಗಿ ತಮ್ಮ ಕಾಗದ ಪತ್ರಗಳನ್ನು ಸಲ್ಲಿಸಿದರು. ಅದನ್ನು ಅತ್ಯಂತ ಶಿಸ್ತುಬದ್ಧವಾಗಿ ಪರಿಶೀಲಿಸಿ ಅದಕ್ಕೆ ರಸೀದಿ ನೀಡಿದರು. ಹಣ ಬರುತ್ತದೆ ಎಂದು ಮತ್ತೆ ಜನರ ನಂಬಿಕೆ ಈಗ ಹುಸಿಯಾಗಿದೆ. 14 ತಿಂಗಳು ಕಳೆದ ನಂತರ ಈಗ ಅಸಿಸ್ಟೆಂಟ್ ಕಮಿಷನರ್ ಕೆ ಪಿ ಐ ಡಿ ಮೂರನೆಯ ಮತ್ತು ನಾಲ್ಕನೆಯ ಮಹಡಿ ಪೋಡಿಯಂ ಬ್ಲಾಕ್ ಡಾ ಅಂಬೇಡ್ಕರ ವೀಧಿ ಬೆಂಗಳೂರ ಕಚೇರಿಯಲ್ಲಿ ದಿನವಿಡೀ ತಪಾಸಣೆ ಮಾಡಿ ಮುದುಕರು ಮಹಿಳೆಯರು ಸಲ್ಲಿಸಿದ ಅರ್ಜಿಗಳು ಈಗ ಮತ್ತೆ ತಿರಸ್ಕ್ರತವೆಂದು ಪತ್ರ ಹಾಕಿದ್ದಾರೆ. ಇದರಿಂದ ಎಲ್ಲರಿಗೂ ಅತ್ಯಂತ ನೋವಾಗಿದೆ.
ಆನಂದ ಅಪ್ಪುಗೋಳ ಎಂಬ ಮೋಸ ವಂಚಕನ ಅಸ್ತಿ ಜಪ್ತಿ ಮಾಡಿ ತನಿಖೆ ನಡೆಸಿ ಶಿಕ್ಷೆ ಕೊಡುವ ಬದಲು ಬಡವರ ಠೇವಣಿ ಮುಳುಗಿಸುವ ಕಾರ್ಯ ಮಾಡ ಬೇಡಿ. ಕೃಷ್ಣಾ ಭೈರೇಗೌಡ ಕಂದಾಯ ಮಂತ್ರಿ ಕೆ ಏನ್ ರಾಜಣ್ಣ ಸಹಕಾರ ಮಂತ್ರಿ ಮತ್ತು ಜಾಣ ಕುರುಡುತನ ತೋರಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ. ಈ ಕೂಡಲೇ ಜನರಿಗೆ ಸಹಾಯ ಮಾಡಲಿ. ಸರಕಾರದ ಮೇಲೆ ಸಂಶಯ ಮೂಡುತ್ತಿದೆ. ಇದರಲ್ಲಿ ಎಷ್ಟೋ ಜನರು ಸತ್ತಿದ್ದಾರೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಹಣ ಬರದಿದ್ದರೆ ಮತ್ತಷ್ಟು ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದಿದೆ. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಕಿರುಕಳ ತಪ್ಪಿಸಿ *ಸನ್ಮಾನ್ಯ ಮುಖ್ಯ ಮಂತ್ರಿಗಳೇ* ಈ ಕೂಡಲೇ ಠೇವಣಿ ಇಟ್ಟ ಹಣವನ್ನು ಸಂಗೊಳ್ಳಿ ರಾಯಣ್ಣ ಅರ್ಬನ್ ಸಹಕಾರ ಸಂಸ್ಥೆಯಿಂದ ಮರುಪಾವತಿಸದಿದ್ದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ.
ಕರುಣೆ ಮಮತೆ ಇಲ್ಲದ ಕಟುಕರ ಸರಕಾರಕ್ಕೆ ಧಿಕ್ಕಾರವಿದೆ. ಬಡವರ ರಕ್ತವನ್ನು ಕುಡಿಯುವ ಮಧ್ಯಮವರ್ಗದವರ ಕನಸನ್ನು ನುಚ್ಚು ನೂರು ಮಾಡುವ ಅತ್ಯಂತ ಕೆಟ್ಟ ಸರಕಾರ ಎಂಬ ಅಪವಾದ ಆಗಬಾರದು. ಇಂತಹ ಹಿಂಸೆ ಕಿರುಕಳ ತಮಗೆ ಯೋಗ್ಯವಲ್ಲ. ಕೆ ಎನ್ ರಾಜಣ್ಣ, ಕೃಷ್ಣಾ ಭೈರೇಗೌಡ ಸಾಹೇಬರೇ ಆನಂದ ಅಪ್ಪುಗೋಳ ಅವನ ಆಸ್ತಿಯನ್ನು ಹರಾಜು ಹಾಕಿ ಎಲ್ಲ ಸ್ಥಿರ ಚರ ಆಸ್ತಿ ಜಪ್ತಿ ಮಾಡಿ ಅವನ ಬೇನಾಮಿ ಆಸ್ತಿ ಸರಕಾರ ಮುಟ್ಟುಗೋಲು ಹಾಕಿ, ಬಡವರ ಕಾರ್ಮಿಕರ ಮಧ್ಯಮ ವರ್ಗದವರ ಮಹಿಳೆಯರ ಹಣವನ್ನು ನ್ಯಾಯಾಲಯದ ಆದೇಶದಂತೆ ಮರು ಪಾವತಿಸಲು ಕೋರಿಕೆ.
—————————————————————
ನೊಂದ ಠೇವಣಿದಾರರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋಆಪರೇಟಿವ್ ಸೊಸೈಟಿ, ಬೆಳಗಾವಿ