ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಗುರಿ ಮತ್ತು ಕೃಷಿ ಸಮುದಾಯಗಳಿಗೆ ಆದಾಯ ಹೆಚ್ಚಿಸುವ ಉದ್ದೇಶ
ಬೆಳಗಾವಿ : ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ದಾಲ್ಮಿಯಾ ಸಿಮೆಂಟ್ (ಭಾರತ್) ಲಿಮಿಟೆಡ್‌ನ (ಡಿ.ಸಿ.ಬಿ.ಎಲ್) ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ವಿಭಾಗ ಆಗಿರುವ ದಾಲ್ಮಿಯಾ ಭಾರತ್ ಫೌಂಡೇಶನ್ (ಡಿ.ಬಿ.ಎಫ್) ಇಂದು ಯಾದವಾಡ, ಬೆಳಗಾವಿ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ 300 ಪವರ್ ಸ್ಪ್ರೇಯರ್ ಪಂಪ್‌ಗಳನ್ನು ವಿತರಿಸಿದೆ.
ಈ ಉಪಕ್ರಮವು ಕಳೆಗಳು ಮತ್ತು ಕೀಟಗಳಿಂದ ಉಂಟಾಗುವ ಬೆಳೆ ಹಾನಿಯನ್ನು ನಿಯಂತ್ರಿಸಲು, ಆ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ರೈತರಿಗೆ ಖರ್ಚು ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಡಿ.ಬಿ.ಎಫ್ ತನ್ನ ವಿಶಿಷ್ಟ ಗ್ರಾಮ ಪರಿವರ್ತನೆ ಯೋಜನೆಯ ಅಡಿಯಲ್ಲಿ ಆಹಾರ ಭದ್ರತೆಯನ್ನು ಹೆಚ್ಚಿಸಲು, ರೈತರ ಬದುಕನ್ನು ಸುಧಾರಿಸಲು ಮತ್ತು ಪರಿಸರಕ್ಕೆ ಕೊಡುಗೆ ನೀಡಲು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ವೆಚ್ಚ-ಹಂಚಿಕೆಯ ಆಧಾರದ ಮೇಲೆ ಪಂಪ್‌ಗಳ ವಿತರಣೆಯನ್ನು ಮಾಡಲಾಗಿದ್ದು, ಈ ಒಟ್ಟು ಯೋಜನೆಗೆ ರೈತರು ಮತ್ತು ಡಿ.ಬಿ.ಎಫ್ ಜಂಟಿಯಾಗಿ ಕೊಡುಗೆ ನೀಡಲಿದ್ದಾರೆ. ಯಾದವಾಡ, ಕಾಮನಕಟ್ಟಿ, ಕೊಪ್ಪದಟ್ಟಿ, ಕುನ್ನಾಳ, ಬುದ್ನಿ, ತೊಂಡಿಕಟ್ಟಿ ಮತ್ತು ಗುಲಗಂಜಿಕೊಪ್ಪ ಎಂಬ ಏಳು ಗ್ರಾಮಗಳ ರೈತರಿಗೆ 20 ಲೀಟರ್ ಸಾಮರ್ಥ್ಯದ ಪವರ್ ಸ್ಪ್ರೇಯರ್ ಪಂಪ್‌ಗಳನ್ನು ವಿತರಿಸಲಾಯಿತು.
ಯಾದವಾಡ ಗ್ರಾಮದಲ್ಲಿ ಪವರ್ ಸ್ಪ್ರೇಯರ್ ಪಂಪ್ ಗಳ ವಿತರಣಾ ಕಾರ್ಯಕ್ರಮ ನಡೆದಿದ್ದು, ರೈತ ಸಮುದಾಯದ ಉತ್ಸಾಹಕರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಪ್ರಭಾತ್ ಕುಮಾರ್ ಸಿಂಗ್ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ಮುಖ್ಯಸ್ಥರು ಬೆಳಗಾವಿ ವಿಭಾಗ, ಚನ್ನಬಸಪ್ಪ ಹುಬ್ಬಳ್ಳಿ ಗ್ರಾಮದ ಹಿರಿಯರು, ಅವದೆಶ್ ಕುಮಾರ್ ಮುಖ್ಯಸ್ಥರು ಮಾನವ ಸಂಪನ್ಮೂಲ ವಿಭಾಗ ದಾಲ್ಮಿಯಾ ಸಿಮೆಂಟ್ ಕಾರ್ಖಾನೆ, ಬೆಳಗಾವಿ ಹಾಗೂ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ಮಾನವ ಸಂಪನ್ಮೂಲದ ವಿಭಾಗದ ಅಧಿಕಾರಿಗಳಾದ ಈರಸಂಗಯ್ಯ ಭಾಗೋಜಿಮಠ, ಶಶಿಕಾಂತ್ ಹೀರೆಕೋಡಿ, ಲೋಕಣ್ಣ ನಂದಗಾಂವ್, ಅಮಿತ್ ಪಾಂಡ್ಯ, ರಾಜಶೇಖರ್ ಕನೆೇಕರ್, ರಾಮನಗೌಡ ಬಿರಾದಾರ, ಶ್ರೀಧರ್ ಪಾಟೀಲ್ ಹಾಗೂ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ಸಿ.ಎಸ್.ಆರ್ ತಂಡದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಡಾಕ್ಟರ್ ನೀಲಕಂಠಗೌಡ ಅವರು ನಡೆಸಿಕೊಟ್ಟರು.
ಈ ಉಪಕ್ರಮದ ಕುರಿತು ಮಾತನಾಡಿದ ಬೆಳಗಾವಿಯ ಘಟಕ ಮುಖ್ಯಸ್ಥ ಪ್ರಭಾತ್ ಕುಮಾರ್ ಸಿಂಗ್, ಸಾಮಾನ್ಯವಾಗಿ ರೈತರು ಹೊಸ ಕಾಲದ ಕೃಷಿ ಜ್ಞಾನ, ಸಂಪನ್ಮೂಲಗಳು ಮತ್ತು ಬೆಂಬಲ ವ್ಯವಸ್ಥೆ ಹೊಂದಿರುವುದಿಲ್ಲ. ದಾಲ್ಮಿಯಾ ಭಾರತ್‌ನಲ್ಲಿ ನಾವು ನಮ್ಮ ರೈತರು ಆಧುನಿಕ ಮತ್ತು ಸಮರ್ಥ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಉತ್ಪಾದಕತೆ ಮತ್ತು ಆದಾಯವನ್ನು ಹೆಚ್ಚುವಂತೆ ಮಾಡಿ ಪರಿಸರದ ಮೇಲೆ ಕೃಷಿ ಉಂಟು ಮಾಡುವ ಪರಿಣಾಮವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದ್ದೇವೆ. ರೈತರನ್ನು ಬೆಂಬಲಿಸುವ ಮೂಲಕ ಅವರ ಆರ್ಥಿಕತೆಯನ್ನು ಹೆಚ್ಚಿಸಲಾಗುತ್ತದೆ ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆಯ ಮೂಲಕ ಹೆಚ್ಚು ಸುಸ್ಥಿರವಾದ ಕೃಷಿ ಪದ್ಧತಿಯನ್ನು ಬಳಕೆ ಮಾಡುವಂತೆ ಮಾಡಲಾಗುತ್ತದೆ. ಆ ಮೂಲಕ ಈ ಪ್ರದೇಶದಲ್ಲಿ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲಾಗುತ್ತದೆ ಎಂದು ಹೇಳಿದರು.