ಸಾಲದ ಶೂಲಕ್ಕೆ ದೂಡಿದ ಬಜೆಟ್
ಸಿದ್ದರಾಮಯ್ಯನವರು 16ನೇ ಬಜೆಟ್ ಮಂಡನೆ ಮಾಡಿರುವುದೇ ಸಾಧನೆಯಾಗಿದೆ ಮಾತ್ರವಲ್ಲ, ಮುಂಬರಲಿರುವ ತಾಪಂ, ಜಿಪಂ ಚುನಾವಣೆಯನ್ನು ಮುಂದಿಟ್ಟುಕೊಂಡು ವೋಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಅರಭಾವಿ ಶಾಸಕ ಹಾಗೂ ಬೆಮ್ಯೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆಯೊಂದರಲ್ಲಿ ಅವರು ರಾಜ್ಯ ಬಜೆಟ್ ಕುರಿತ ಹೇಳಿಕೆ ನೀಡಿದರು.
ಉತ್ತರ ಕರ್ನಾಟಕಕ್ಕೆ ಹೇಳಿಕೊಳ್ಳುವಂತಹ ಯಾವುದೇ ಯೋಜನೆಯನ್ನು ಘೋಷಣೆ ಮಾಡಿಲ್ಲ. ಕಲ್ಯಾಣ ಕರ್ನಾಟಕಕ್ಕೆ ₹5 ಸಾವಿರ ಕೋಟಿ ಮೀಸಲು, ಈ ಭಾಗಕ್ಕೆ 5 ಸಾವಿರಕ್ಕಿಂತ ಹೆಚ್ಚು ಶಿಕ್ಷಕರ ನೇಮಕ ಸೇರಿದಂತೆ ಹಲವು ಭರವಸೆ ನೀಡುವ ಮೂಲಕ ಪರೋಕ್ಷವಾಗಿ ರಾಷ್ಟ್ರೀಯ ಅಧ್ಯಕ್ಷರ ಮನವೊಲಿಸಿ ತಮ್ಮ ಸಿಎಂ ಸೀಟನ್ನು ಭದ್ರ ಮಾಡಿಕೊಂಡಿದ್ದಾರೆ. ಆದರೆ, ಕಿತ್ತೂರು ಕರ್ನಾಟಕ ಭಾಗಕ್ಕೆ ಮೂಗಿಗೆ ತುಪ್ಪ ಒರೆಸುವಂತೆ ಕೃಷ್ಣಾ ಸಂತ್ರಸ್ತರ ಬಾಧಿತರಿಗೆ ಸಮರ್ಪಕ ಪರಿಹಾರ ಎಂದಷ್ಟೇ ಹೇಳಿದ್ದಾರೆ. ಎಷ್ಟು ಹಣ ಎಂದು ಹೇಳಿಲ್ಲ ಎಂದರು.
ಹಣಕಾಸಿನ ಪರಿಸ್ಥಿತಿ ಸುಧಾರಿಸುವ ಯಾವುದೇ ದಿಟ್ಟ ಕ್ರಮವನ್ನು ಕೈಗೊಂಡಿಲ್ಲ. ಹೀಗಾಗಿ ಹೆಚ್ಚಿನ ಸಾಲ ತೆಗೆದುಕೊಳ್ಳುವುದೇ ಇವರ ಸಾಧನೆಯಾಗಿದೆ. ಸಾಲ ತೆಗೆದುಕೊಂಡು ಜನರ ಮೇಲೆ ಭಾರ ಹಾಕಿದ್ದಾರೆ. ಹೀಗಾಗಿ ಇದೊಂದು ಜನ ವಿರೋಧಿ ಮತ್ತು ಅಭಿವೃದ್ಧಿ ವಿರೋಧಿ ಬಜೆಟ್ ಆಗಿದೆ. ಮೈಸೂರು, ಬೆಂಗಳೂರಿನಲ್ಲಿ ಕೈಗಾರಿಕೆ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಿ ತಮ್ಮ ಭಾಗದ ಜನರಿಗೆ ಹೆಚ್ಚು ಉದ್ಯೋಗ ನೀಡಲು ಅನುಕೂಲವಾಗುವಂತೆ ಬಜೆಟ್ ಮಂಡಿಸಿದ್ದಾರೆ. ಕಳೆದ ಬಾರಿ ಕೂಡ ಪ.ಪಂಗಡ ಮತ್ತು ಪ.ಜಾತಿ ಅವರಿಗೆ ಮೀಸಲಾಗಿದ್ದ ಹಣವನ್ನು ಗ್ಯಾರಂಟಿಗೆ ಬಳಸುವ ಮೂಲಕ ಆ ಜನಾಂಗಕ್ಕೆ ಅನ್ಯಾಯ ಮಾಡಿದ್ದರು. ಈ ಬಾರಿಯೂ ಅದೇ ಪರಿಸ್ಥಿತಿ ಉಂಟಾಗಲಿದೆ. ಒಟ್ಟಾರೆ ಈ ಬಜೆಟ್ ರಾಜ್ಯಕ್ಕೆ ಆರ್ಥಿಕ ಚೈತನ್ಯ ನೀಡದೆ ಸಾಲ ಶೂಲಕ್ಕೆ ರಾಜ್ಯವನ್ನು ದೂಡಿದಂತಾಗಿದೆ ಎಂದು ಜಾರಕಿಹೊಳಿ ಹೇಳಿದ್ದಾರೆ.