ಮೂಡಲಗಿ: ‘ಮಹಿಳಾ ಸಂಘಟನೆಗಳು ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯಗಳನ್ನು ಗುರುತಿಸಿ ಅವುಗಳನ್ನು ತಡೆಗಟ್ಟುವಲ್ಲಿ ಕಾಳಜಿವಹಿಸಬೇಕು’ ಎಂದು ಮೂಡಲಗಿ ದಿವಾಣಿ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.
ಇಲ್ಲಿಯ ಬಣಜಿಗ ಸಮಾಜದ ಮಹಿಳಾ ಘಟಕದಿಂದ ಕೆ.ಎಚ್. ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಆಚರಿಸಿದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಮಹಿಳಾ ಸಂಘಟನೆಗಳು ಕೆಲಸವನ್ನು ಮಾಡಬೇಕು ಎಂದರು.
ಮಹಿಳೆಯರಿಂದ ಕೂಡು ಕುಟುಂಬಗಳು ತುಂಡು ಕುಟುಂಬಗಳಾಗುತ್ತವೆ ಎನ್ನುವ ಅಪವಾದವಿದ್ದು, ಹಾಗಾಗದಂತೆ ಮಹಿಳೆಯರು ತಮ್ಮ ತಮ್ಮ ಜವಾಬ್ದಾರಿಗಳನ್ನು ಕುಟುಂಬಗಳಲ್ಲಿ ನಿಭಾಯಿಸುವ ಮೂಲಕ ಕುಟುಂಬಗಳನ್ನು ಗಟ್ಟಿಗೊಳಿಸಬೇಕು ಅದರಿಂದ ಸುಸಂಸ್ಕೃತ ಸಮಾಜವನ್ನು ಬೆಳೆಸಬೇಕು ಎಂದರು.
ಮಹಿಳಾ ಸಂಘ, ಸಂಸ್ಥೆಗಳು ಕೇವಲ ಮನರಂಜನೆಗಾಗಿ ಇರಬಾರದು ಸಂಘಗಳು ಸಾಮಾಜಮುಖಿಯಾಗಿ ಕಾರ್ಯಮಾಡುವಂತಾಗಬೇಕು. ಬಣಜಿಗ ಮಹಿಳಾ ಘಟಕದವರ ಮಹಿಳೆಯರನ್ನು ಸಂಘಟಿಸಿರುವುದು ಶ್ಲಾಘನೀಯವಾಗಿದೆ ಎಂದರು.
ಗೋಕಾಕದ ವಕೀಲೆ ಮಂಗಲಾ ಜಕಾತಿ ಹಾಗೂ ಮೂಡಲಗಿಯ ವಕೀಲೆ ಕೆ.ಪಿ. ಕುಡತೆ ಕಾನೂನು ಕುರಿತು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪುರಸಭೆ ಅಧ್ಯಕ್ಷ ಖುರ್ಷದ ನದಾಫ, ಬಣಜಿಗ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ವಾಣಿ, ಉಪಾಧ್ಯಕ್ಷೆ ರಾಜೇಶ್ವರಿ ಗಾಡವಿ ವೇದಿಕೆಯಲ್ಲಿದ್ದರು.
ಶ್ರಾವಣಿ ತುಪ್ಪದ ಪ್ರದರ್ಶಿಸಿದ ಭರತ ನಾಟ್ಯವು ಎಲ್ಲರ ಗಮನಸೆಳೆಯಿತು.
ವೀಣಾ ಗಾಡವಿ, ಶಶಿಕಲಾ ಅಂಗಡಿ ಪ್ರಾರ್ಥಿಸಿದರು, ವೀಣಾ ಎಮ್ಮಿ ಸ್ವಾಗತಿಸಿದರು, ಪ್ರಭಾ ಜಕಾತಿ ನಿರೂಪಿಸಿದರು, ಲಕ್ಷ್ಮಿ ಬೆಲ್ಲದ ವಂದಿಸಿದರು.
ಮಹಿಳಾ ಸಂಘದ ಕಾರ್ಯದರ್ಶಿ ರಜನಿ ಬಂದಿ, ಖಜಾಂಚಿ ಮಂಜುಳಾ ಭುಜನ್ನವರ, ಜಯಶ್ರೀ ಯಕ್ಕುಂಡಿ, ಲಕ್ಷ್ಮಿ ಕೊಣ್ಣೂರ, ಶಶಿಕಲಾ ಅಂಗಡಿ, ಅನಿತಾ ಕೊಣ್ಣೂರ, ಲಕ್ಷ್ಮಿ ಶೆಟ್ಟರ, ರಾಜೇಶ್ವರಿ ಮೆಣಸಿ, ಅಶ್ವಿನಿ ಭುಜನ್ನವರ, ಜ್ಯೋತಿ ಎಮ್ಮಿ ಮತ್ತಿತರರು ಇದ್ದರು.
ಲಿಂಬೂ ಸ್ಪೂನ್ ಸ್ಪರ್ಧೆ: ರಾಜೇಶ್ವರಿ ಗಾಡವಿ (ಪ್ರಥಮ), ರಜನಿ ಬಂದಿ (ದ್ವಿತೀಯ), ಪ್ರೀತಿ ಬೆಲ್ಲದ (ತೃತೀಯ).
ಮೂಜಿಕಲ್ ಚೇರ್ ಸ್ಪರ್ಧೆ: ಶೀಲಾ ಭುಜನ್ನವರ (ಪ್ರಥಮ), ವೀಣಾ ಎಮ್ಮಿ (ದ್ವಿತೀಯ)