ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಬ್ರಹ್ಮ ಸಮಾಜದ ಮುಖಂಡ ಮತ್ತು ಹಿರಿಯ ಗಾಂಧಿವಾದಿ ಡಬ್ಲ್ಯೂ ಹೆಚ್. ಹನುಮಂತಪ್ಪ ಸ್ಮಾರಕ ದತ್ತಿ ಉಪನ್ಯಾಸವನ್ನು ನಗರದ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಗಾಂಧೀ ಮತ್ತು ಡಬ್ಲ್ಯೂ ಹೆಚ್. ಹನುಮಂತಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಅರಳಿ ಸಸಿಗೆ ನೀರೆರೆಯುವುದರ ಮೂಲಕ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಉದ್ಘಾಟಿಸಿ ಮಾತನಾಡುತ್ತ, ಇಂದಿನ ಸಮಾಜಕ್ಕೆ ಆದರ್ಶಪ್ರಾಯರಾದ ವೂಡೇ ಕುಟಂಬದವರ ನಿಸ್ವಾರ್ಥ ಸೇವಾಮನೋಭಾವ ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
`ಗಾಂಧೀಜಿಯವರ ವೈಜ್ಞಾನಿಕ ಚಿಂತನೆಗಳು’ ಕುರಿತು ಬೆಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರು ಮತ್ತು ವಿಜ್ಞಾನ ಸಾಹಿತಿಗಳಾದ ಸುಮಂಗಲಾ ಎಸ್. ಮುಮ್ಮಿಗಟ್ಟಿ ರವರು ದತ್ತಿ ಉಪನ್ಯಾಸವನ್ನು ನೀಡಿ ಮಾತನಾಡುತ್ತ, ಗಾಂಧೀಜಿಯವರು ಬೃಹತ್ ಕೈಗಾರಿಕೆಗಳಿಗೆ ಆದ್ಯತೆ ನೀಡದೆ ಗ್ರಾಮೋದ್ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ವ್ಶೆಜ್ಞಾನಿಕ ಚಿಂತನಾ ಕ್ರಮವನ್ನು ತಮ್ಮ ನಡೆ ನುಡಿಯಲ್ಲಿ ಆಳವಡಿಸಿಕೊಂಡಿದ್ದರು ಎಂದರು.
ಗಾಂಧೀ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಿರಿಯ ಶಿಕ್ಷಣ ತಜ್ಞ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌ. ಪ್ರಧಾನ ಕಾರ್ಯದರ್ಶಿ, ಇತ್ತೀಚೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ನಾಡೋಜ ಪ್ರಶಸ್ತಿ ಪುರಸ್ಕೃತ ಡಾ. ವೂಡೇ.ಪಿ. ಕೃಷ್ಣರವರಿಗೆ ಗೌರವಾಭಿನಂದನೆಯನ್ನು ಸಲ್ಲಿಸಲಾಯಿತು.
ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗಾಂಧಿ ಶಾಂತಿ ಪ್ರತಿಷ್ಠಾನದ ಖಜಾಂಚಿ ಪ್ರೊ. ಪ್ರತಾಪ್ ಲಿಂಗಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಎಸ್ ರಾಮಲಿಂಗೇಶ್ವರ (ಸಿಸಿರಾ) ರವರು ಕಾರ್ಯಕ್ರಮ ನಿರೂಪಿಸಿದರು. ವೂಡೇ ಪ್ರತಿಷ್ಠಾನದ ದತ್ತಿ ದಾನಿಗಳ ಪ್ರತಿನಿಧಿ ಡಬ್ಲ್ಯೂ ಹೆಚ್. ಅಶೋಕ್ ಉಪಸ್ಥಿತರಿದ್ದರು.