ಎಸ್.ಎಸ್.ಎಲ್.ಸಿಯಲ್ಲಿ ರೂಪಾ ಪಾಟೀಲ ಅವರ ಸಾಧನೆ ತಾಲೂಕಿನ ಹೆಮ್ಮೆ : ಎನ್.ಆರ್. ಠಕ್ಕಾಯಿ

Must Read

ಬೈಲಹೊಂಗಲ: 2025 ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತಾಲೂಕಿನ ದೇವಲಾಪೂರ ಗ್ರಾಮದ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ(ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿನಿ ರೂಪಾ ಚನಗೌಡ ಪಾಟೀಲ ಅವರ ಸಾಧನೆ ತಾಲೂಕಿನ ಹೆಮ್ಮೆ ಎಂದು ಕಸಾಪ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಪ್ರಶಂಸೆ ವ್ಯಕ್ತಪಡಿಸಿದರು.

ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ರೂಪಾ ಪಾಟೀಲ ಅವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಸ್ತು ಮತ್ತು ಬದ್ಧತೆಯಿಂದ ಅಧ್ಯಯನ ಮಾಡಿದರೆ ಉತ್ತಮ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ರೂಪಾ ನಿದರ್ಶನ ಎಂದು ಅವರು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರೂಪಾ ಪಾಟೀಲ ತಂದೆ ತಾಯಿಯರ ಬೆಂಬಲ ಹಾಗೂ ಎಲ್ಲ ಗುರುಗಳ ಮಾರ್ಗದರ್ಶನ ಮತ್ತು ಪ್ರೇರಣೆ ಉತ್ತಮ ಅಂಕ ಗಳಿಸಲು ಸಹಕಾರಿಯಾಯಿತು ಎಂದು ಹೇಳಿದರು.

ಬೆಳಗಾವಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಕಸಾಪ ಮಾರ್ಗದರ್ಶನ ಮಂಡಳಿ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ದೇವಲಾಪೂರ ಗ್ರಾಮ ವಿವಿಧ ಕ್ಷೇತ್ರಗಳಲ್ಲಿ ಅನೇಕ ಮಹಾನ್ ಸಾಧಕರಿಗೆ ಹೆಸರುವಾಸಿಯಾಗಿದ್ದು ತನ್ನದೇ ಆದ ಇತಿಹಾಸ ಹೊಂದಿದೆ ಎಂದರು.

ಗೌರವ ಕಾರ್ಯದರ್ಶಿಗಳಾದ ಡಾ. ಪ್ರಕಾಶ ಮೆಳವಂಕಿ ಮಾತನಾಡಿ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಲಭಿಸಲಿ ವಿದ್ಯಾರ್ಥಿನಿಗೆ ಶುಭಕೋರಿದರು. ಕಸಾಪ ಗೌರವ ಕಾರ್ಯದಶಿಗಳಾದ ಮಂಜುಳಾ ಶೆಟ್ಟರ ಮಾತನಾಡಿ ಮುಂದಿನ ಎಲ್ಲ ಪರೀಕ್ಷೆಗಳಲ್ಲಿಯೂ ಉತ್ತಮ ಫಲಿತಾಂಶ ಬರಲಿ ಎಂದು ಶುಭ ಹಾರೈಸಿದರು. ಕಸಾಪ ಪದಾಧಿಕಾರಿಗಳಾದ ಬಿ.ಎನ್. ಕಸಾಳೆ ಮಾತನಾಡಿ ಸರಕಾರಿ ಶಾಲೆಯಿಂದ ಸಾಧನೆ ಮಾಡಿದ ಕುವರಿಯ ಬಗ್ಗೆ ನಮಗೆಲ್ಲ ತುಂಬಾ ಅಭಿಮಾನವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಸಾಪ ಪದಾಧಿಕಾರಿಗಳಾದ ಶ್ರೀಕಾಂತ ಉಳ್ಳೇಗಡ್ಡಿ ಮಾತನಾಡಿ, ಸತತ ಪ್ರಯತ್ನವಿದ್ದರೆ ಯಶಸ್ಸು ಖಂಡಿತ ಸಾಧ್ಯ ಎನ್ನುವುದಕ್ಕೆ ರೂಪಾ ಮಾದರಿ ಎಂದರು. ಕಸಾಪ ಪದಾಧಿಕಾರಿ ದುಂಡಪ್ಪ ಗರಗದ ಮಾತನಾಡಿ ಅಪ್ಪಟ ಗ್ರಾಮೀಣ ಪ್ರತಿಭೆ ಇಂದು ದೊಡ್ಡ ಹೆಸರು ಮಾಡಿದ್ದು ಎಲ್ಲ ವಿದ್ಯಾರ್ಥಿಗಳಿಗೆ ಸ್ಫರ್ತಿಯಾಗಲಿ ಎಂದರು.

ದೇವಲಾಪೂರ ಗ್ರಾಮದ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ(ಪ್ರೌಢಶಾಲಾ ವಿಭಾಗ) ಮುಖ್ಯಶಿಕ್ಷಕರಾದ ಗಾಂಧಿ ಮರೆಣ್ಣವರ ಮಾತನಾಡಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ರೂಪಾಳ ಸರಳತೆ ಮತ್ತು ಸಜ್ಜನಿಕೆ ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟರು. ನಿವೃತ್ತ ಮುಖ್ಯಶಿಕ್ಷಕರಾದ ಗುರುದೇವ ಮೂಲೆಮನಿ ಮಾತನಾಡಿ ಗ್ರಾಮದ ಮಕ್ಕಳು ಪ್ರತಿವರ್ಷ ಉತ್ತಮ ಫಲಿತಾಂಶ ಪಡೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗಂಗನಗೌಡ ಪಾಟೀಲ, ಲತಾ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕರಾದ ರಾಜು ಹಕ್ಕಿ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು. ಶಿಕ್ಷಕ ಮಂಜುನಾಥ ಮರೆಣ್ಣವರ ವಂದಿಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group