ಮೂಡಲಗಿ: ಪ್ರತಿವರ್ಷ 400 ಮಿಲಿಯನ್ ಟನ್‌ಗೂ ಹೆಚ್ಚು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದು, ಅದರಲ್ಲೂ ಸುಮಾರು 11 ಮಿಲಿಯನ್ ಟನ್ ಪ್ಲಾಸ್ಟಿಕ್ ಸಮುದ್ರಗಳಲ್ಲಿ ಸೇರುತ್ತಿದೆ ಎಂಬ ಅಂದಾಜು ಇದೆ.
ಈ ಕಾರಣದಿಂದ ಪ್ಲಾಸ್ಟಿಕ್ ಮಾಲಿನ್ಯ ನಮ್ಮ ಕಾಲದ ಗಂಭೀರ ಪರಿಸರ ಸಮಸ್ಯೆಯಾಗಿದೆ.ವ್ಯಕ್ತಿಗಳು, ಸಮುದಾಯಗಳು, ಕೈಗಾರಿಕೆಗಳು ಹಾಗೂ ಸರ್ಕಾರಗಳು ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ಮತ್ತು ತ್ಯಜಿಸುವ ವಿಧಾನಗಳ ಬಗ್ಗೆ ಪುನರಾಲೋಚನೆ ಮಾಡಬೇಕಾಗಿದೆ ಎಂದು ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಚೇರಮನ್ನರಾದ ಬಸಗೌಡ ಪಾಟೀಲ ಹೇಳಿದರು.
ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಟ್ಟು, ನೀರು ಉಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಶುದ್ಧವಾದ ಗಾಳಿ, ನೀರು ಎಲ್ಲ ಜೀವಿಗಳಿಗೂ ಅವಶ್ಯಕವಾಗಿದೆ. ಸ್ವಚ್ಛ- ಸುಂದರ ಪರಿಸರ ನಿರ್ಮಾಣ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಸುರೇಶ ಹನಗಂಡಿ, ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯ ಎ.ಆರ್. ಪಾಟೀಲ, ಜಿಲ್ಲಾ ಪ್ರಭಾರಿ ಸಂಯೋಜನಾಧಿಕಾರಿ ಶಂಕರ ನಿಂಗನೂರ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಿ.ಎಸ್. ಹುಗ್ಗಿ, ಅಧ್ಯಾಪಕರುಗಳಾದ ಡಾ. ಎಂ.ಬಿ. ಕುಲಮೂರ, ಡಾ. ಕೆ.ಎಸ್. ಪರವ್ವಗೋಳ, ರವಿರಾಜ ಪಂಡಿತ, ಬಿ.ಸಿ. ಮಾಳಿ, ಸಂತೋಷ ಬಂಡಿ, ಎಂ.ಬಿ. ಜಾಲಗಾರ ಇನ್ನಿತರರು ಉಪಸ್ಥಿತರಿದ್ದರು.