Homeಸುದ್ದಿಗಳುಕಾವ್ಯವು ಓದುಗರ ಹೃದಯ ತಟ್ಟುವಂತಿರಬೇಕು

ಕಾವ್ಯವು ಓದುಗರ ಹೃದಯ ತಟ್ಟುವಂತಿರಬೇಕು

ಚಿದಾನಂದ ಹೂಗಾರ ಅವರ ‘ಭಟ್ಟಿನೀಯ ಭ್ರಾಂತಿ ಚಿತ್ತ’ ಕವನ ಸಂಕಲನ ಬಿಡುಗಡೆ

ಮೂಡಲಗಿ: ‘ಕಾವ್ಯವು ಲೋಕಾನುಭವಗಳ ಜೊತೆಗೆ ಇಂದ್ರಿಯ ಗ್ರಹಿಕೆಗೆ ದೊರೆತ ಅಮೂರ್ತ ವಿಚಾರ ಮತ್ತು ಸಂವೇದನೆಗಳ ಮೂಲಕ ಓದುಗರ ಹೃದಯ ತಟ್ಟುವಂತಾಗಬೇಕು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.

ಇಲ್ಲಿಯ ಚೈತನ್ಯ ಸೊಸೈಟಿಯ ಸಭಾಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಮೂಡಲಗಿ ತಾಲ್ಲೂಕು ಘಟಕ, ಮಮದಾಪೂರದ ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ್ದ ಚಿದಾನಂದ ಹೂಗಾರ ಅವರ ‘ಭಟ್ಟಿನೀಯ ಭ್ರಾಂತಿ ಚಿತ್ತ’ ಕವನ ಸಂಕಲವನ್ನು ಲೋಕಾರ್ಪಣೆ ಸಮಾರಂಭದಲ್ಲಿ ಕೃತಿ ಪರಿಚಯ ಮಾಡಿ ಮಾತನಾಡಿದ ಅವರು ಕವಿಗೆ ಅಧ್ಯಯನಶೀಲತೆಯೊಂದಿಗೆ ಕಾವ್ಯವನ್ನು ಆಯಾ ಕಾಲಕ್ಕೆ ಧ್ವನಿಯಾಗಿಸುವ ಕೌಶಲತೆ ಹೊಂದಿರಬೇಕು ಎಂದರು.

ಯುವ ಕವಿಗಳು ಒಂದಿಷ್ಟು ಶಬ್ದ, ಸಾಲುಗಳನ್ನು ಜೋಡಿಸಿ ಕಾವ್ಯ ರಚಿಸುವ ಪ್ರವತ್ತಿಯಿಂದ ಹೊರಬರಬೇಕು. ಕವಿಯಾಗಬೇಕಾದವರು ಪಂಪನಿಂದ ಹಿಡಿದು ಚಂಪಾವರೆಗಿನ ಸಮಕಾಲಿನರ ಕಾವ್ಯ ಘಟ್ಟದ ಓದುವ ವ್ಯಾಪ್ತಿಯನ್ನಾಸಿಕೊಳ್ಳುವುದು ಅವಶ್ಯವಿದೆ ಎಂದರು.

ಕವಿ ಚಿದಾನಂದ ಹೂಗಾರ ಅವರ ಭಟ್ಟಿನೀಯ ಭ್ರಾಂತಿ ಚಿತ್ತ ಸಂಕಲನದಲ್ಲಿ ಅಧ್ಯಾತ್ಮದ ಅನುಸಂದಾನದೊಂದಿಗೆ ಹಳಗನ್ನಡ ಕಾವ್ಯದ ಮಾದರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಸಮಾಜಮುಖಿ, ಜೀವನ್ಮುಖಿ ತತ್ವ ಮತ್ತು ಮೌಲ್ಯಗಳು ಕಾವ್ಯಗಳ ಜೀವಾಳವಾಗಿವೆ ಎಂದರು.

ಕವನ ಸಂಕಲನವು ಓದುಗರೊಳಗೆ ದೈವತ್ವದ ಆಯಾಮಗಳನ್ನು ಮೂಡಿಸುವಲ್ಲಿ ಯಶಸ್ಸಿಯಾಗಿದೆ. ಸ್ತ್ರೀ ಅಸ್ಮಿತೆ, ನಾಡು ನುಡಿ, ಪ್ರಕೃತಿ ಪ್ರೀತಿ, ಮನೋವ್ಯಾಪಾರ, ಸಾಮಾಜಿಕ, ಮಾನವೀಯ ಕಳಕಳಿಯಿಂದ ಕೂಡಿರುವ ಕವನಗಳು ಓದುಗರ ಮನಸೂರೆಗೊಳಿಸುತ್ತವೆ ಎಂದರು.

ಕೃತಿ ಕೋಕಾರ್ಪಣೆಗೊಳಿಸಿದ ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ ಮಾತನಾಡಿ ‘ಕವಿಗೆ ಇರಬೇಕಾದ ಬದ್ಧತೆಯು ಚಿದಾನಂದ ಹೂಗಾರ ಅವರ ಕಾವ್ಯಗಳಲ್ಲಿ ಕಾಣಬಹುದಾಗಿದೆ. ಚಿದಾನಂದ ಹೂಗಾರ ಒಬ್ಬ ಭರವಸೆಯ ಕವಿಯಾಗಿ ರೂಪಗೊಂಡಿದ್ದಾರೆ ಎಂದರು.

ಸಾನ್ನಿಧ್ಯವಹಿಸಿದ್ದ ಮಮದಾಪೂರದ ಚರಮೂರ್ತೇಶ್ವರ ಸ್ವಾಮೀಜಿ, ಕಾರ್ಯಕ್ರಮ ಉದ್ಘಾಟಿಸಿದ ಶಿವಾಪುರದ ಮಲ್ಲನಗೌಡ ಪಾಟೀಲ, ಮಕ್ಕಳ ಸಾಹಿತಿ ಪ್ರೊ. ಸಂಸಗಮೇಶ ಗುಜಗೊಂಡ ಮತ್ತು ಕೃತಿಕಾರ ಚಿದಾನಂದ ಹೂಗಾರ ಮಾತನಾಡಿದರು.

ಚೈತನ್ಯ ಸೊಸೈಟಿ ಅಧ್ಯಕ್ಷ ತಮ್ಮಣ್ಣ ಕೆಂಚರಡ್ಡಿ ಅಧ್ಯಕ್ಷತೆವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಾಲಶೇಖರ ಬಂದಿ, ಬಿ.ವೈ. ಶಿವಾಪುರ, ಶಿವನಗೌಡ ಪಾಟೀಲ, ಬಿ.ಎಂ. ಸ್ವರಮಂಡಲ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ, ಈಶ್ವರ ಬೆಳಗಲಿ, ಸಿದ್ರಾಮ್ ದ್ಯಾಗಾನಟ್ಟಿ, ಡಾ. ಮಹಾದೇವ ಜಿಡ್ಡಿಮನಿ, ಡಾ. ಎಸ್.ಎಸ್. ಪಾಟೀಲ, ಗಾಯಕ ಶಬ್ಬೀರ ಡಾಂಗೆ, ಗಂಗಾಧರ ಬಿಜಗುಪ್ಪಿ, ಗುರುನಾಥ ಹೂಗಾರ, ಕೆಂಪಣ್ಣ ಮುಧೋಳ, ಶಿವಬಸು ಜುಂಝರವಾಡ, ಶಿವನಪ್ಪ ರಡರಟ್ಟಿ, ಮಾರುತಿ ಹೂಗಾರ, ಈರಯ್ಯ ಹಿರೇಮಠ, ಬಸವರಾಜ ಸಾಯನ್ನವರ, ರಮೇಶ ಬಿರದಾರ ಭಾಗವಹಿಸಿದ್ದರು.

ನಿಂಗಪ್ಪ ಸಂಗ್ರೇಜಿಕೊಪ್ಪ ಪ್ರಾಸ್ತಾವಿಕ ಮಾತನಾಡಿದರು.ಪ್ರಕಾಶ ಮೇತ್ರಿ, ಡಾ. ಮಹಾದೇವ ಪೋತರಾಜ ನಿರೂಪಿಸಿದರು. ದುರ್ಗಪ್ಪಾ ದಾಸನ್ನವರ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group