ಮೂಡಲಗಿ: ತಿರುಪತಿ ತಿಮ್ಮಪ್ಪ ಹೊನ್ನ ಬ್ರಹ್ಮ, ಧರ್ಮಸ್ಥಳದ ಮಂಜುನಾಥ ಅನ್ನ ಬ್ರಹ್ಮ, ಪಂಡರಪೂರದ ವಿಠ್ಠಲ ನಾದಬ್ರಹ್ಮ ಹೀಗೆ ದೇಶದಲ್ಲಿ ಹಲವಾರು ಸಂಪ್ರದಾಯಗಳಿದ್ದು ಅದೇ ರೀತಿ ಇಂಚಗೇರಿಯ ಮಾಧವಾನಂದ ಪ್ರಭುಗಳ ಸಂಪ್ರದಾಯವೂ ಕೂಡ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಪ್ರಚಲಿತವಿದೆ. ಇದು ಅಧ್ಯಾತ್ಮ ಸಂಪ್ರದಾಯಿಗಳ ಸಂಘಟನೆಯಾಗಿದ್ದು, ಆತ್ಮ ಎಂಬ ಪರಮಾತ್ಮನ ನೆಮ್ಮದಿಗಾಗಿ ಅಧ್ಯಾತ್ಮ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇಂಚಗೇರಿ ಸಂಪ್ರದಾಯವು ರಂಗಾಪೂರದಂತಹ ಸಣ್ಣ ಗ್ರಾಮದಲ್ಲಿ ಪ್ರಾರಂಭವಾಗಿದ್ದು ಪ್ರಶಂಸನೀಯ ಎಂದು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ರಂಗಾಪೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಸ. ಸ. ಮಾಧವಾನಂದ ಪ್ರಭೂಜಿಯವರ ಮಂದಿರ ಲೋಕಾರ್ಪಣೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಚಗೇರಿ ಸಂಪ್ರದಾಯ ಕೂಡ ಮೊದಲಿನಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳದು ಬಂದಿದೆ. ಮತ್ತು ಅಧ್ಯಾತ್ಮದ ಹಸಿವನ್ನು ತಣಿಸುವಂತಹ ಕೆಲಸ ಕೂಡ ಅವರು ಮಾಡುತ್ತಿದ್ದಾರೆ. ಹೀಗಾಗಿ ಇಂಚಗೇರಿ ಮಠದ ಪರಂಪರೆ, ಪಂಡರಪುರದ ವಾರಕರಿ ಪರಂಪರೆ, ಸಾಯಿ ಬಾಬಾ ಈ ರೀತಿ ಮಾನವ ದೇವರ ಸಲುವಾಗಿ ಎಲ್ಲಿ ಬೆನ್ನು ಹತ್ತುತ್ತಾನೋ ಅಲ್ಲಿ ಆಧ್ಯಾತ್ಮಿಕ ಪರಂಪರೆ ಇದೆ. ಹೀಗಾಗಿ ರಂಗಾಪೂರ ಒಂದು ಸಣ್ಣ ಗ್ರಾಮವಾದರು ಕೂಡ ಇಂಚಗೇರಿ ಮಠದ ಮಾದವಾನಂದ ಪ್ರಭೂಜಿಯವರ ಆಶ್ರಮವನ್ನು ಸ್ಥಾಪನೆ ಮಾಡಿರುವುದು ಅವರ ಭಕ್ತಿ ಪರಂಪರೆಗೆ ಸಾಕ್ಷಿಯಾಗಿದೆ ಎಂದರು.
ರಂಗಾಪೂರ ಗ್ರಾಮದ ಶ್ರೀ ಸ. ಸ. ಮಾಧವಾನಂದ ಆಶ್ರಮದ ಆವರಣದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ 5 ಲಕ್ಷ ರೂ.ಗಳು ಮತ್ತು ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ 5 ಲಕ್ಷ ರೂ.ಗಳ ನೀಡಿದ ಅನುದಾನವನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದರು.
ಇಂಚಗೇರಿ ಮಠದ ಪೀಠಾಧಿಪತಿಗಳಾದ ಶ್ರೀ ಸ.ಸ ರೇವಣಸಿದ್ದೇಶ್ವರ ಮಹಾರಾಜರ ದಿವ್ಯ ಸಾನ್ನಿಧ್ಯ ವಹಿಸಿ ಆರ್ಶಿವಚನ ನೀಡಿದರು. ಶಂಕ್ರೆಪ್ಪ ಮಹಾರಾಜರು, ನಾಮದೇವ ಮಹಾರಾಜರು, ರಾಮಣ್ಣ ಮಹಾರಾಜರು, ಭೀಮಣ್ಣ ಮಹಾರಾಜರು, ತಮ್ಮಣ್ಣ ಮಹಾರಾಜರು, ಕೆಂಚಪ್ಪಾ ಮಹಾರಾಜರು, ಮಹಾದೇವ ಮಸರಗುಪ್ಪಿ, ರಮೇಶ ಜಿರಗನ್ನವರ, ಮಹಾಂತೇಶ ತೇರದಾಳ, ನಿಜಗುಣಿ ಮಸರಗುಪ್ಪಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸದ್ಭಕ್ತರು ಉಪಸ್ಥಿತರಿದ್ದರು.