Homeಸುದ್ದಿಗಳುಸಾಹಿತ್ಯಕ್ಕೆ ಹೊಸ ಆಯಾಮ ಕೊಟ್ಟ ಹುನಗುಂದ - ರವಿ ಕಂಗಳ

ಸಾಹಿತ್ಯಕ್ಕೆ ಹೊಸ ಆಯಾಮ ಕೊಟ್ಟ ಹುನಗುಂದ – ರವಿ ಕಂಗಳ

ಹುನಗುಂದ: ಪ್ರಸ್ತುತ ಸಾಹಿತ್ಯದಲ್ಲಿ ಹೊಸ ಪ್ರಕಾರಗಳನ್ನು ಹುಟ್ಟುಹಾಕಿದ ಕೀರ್ತಿ ಈ ಹುನಗುಂದ ಪ್ರದೇಶಕ್ಕೆ ಸಲ್ಲುತ್ತದೆ ಎಂದು ಬದಾಮಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ರವಿ ಕಂಗಳ ಅಭಿಪ್ರಾಯ ಪಟ್ಟರು.

ಅವರು ಪಟ್ಟಣದ ವಿ.ಮ. ಕಾಲೇಜು ಸಭಾಂಗಣದಲ್ಲಿ ಹೊನ್ನಕುಸುಮ ಸಾಹಿತ್ಯ ವೇದಿಕೆಯ ವತಿಯಿಂದ ನಡೆದ ತಿಂಗಳ ಬೆಳಕು-27 ಕಾರ್ಯಕ್ರಮದಲ್ಲಿ ಶಿಕ್ಷಕ ಅಶೋಕ ವಿ ಬಳ್ಳಾ ಅವರ ಡೆವಿಲ್ ಕಾಲಿಂಗ್ . . . ! ನ್ಯಾನೋ ಥ್ರಿಲ್ಲರ್ ಕಥಾ ಸಂಕಲನವನ್ನು ಅವಲೋಕಿಸಿ ಮಾತನಾಡುತ್ತಿದ್ದರು.

ನ್ಯಾನೋ ಕಥೆಗಳು, ಹೈಕುಗಳು, ತನಗಗಳು, ಪಂದಳ ಎಂಬ ಹೊಸ ಕಾವ್ಯ ಪ್ರಕಾರಕ್ಕೆ ಇಲ್ಲಿನ ಸಾಹಿತಿಗಳ ಕೊಡುಗೆ ಅಮೋಘವಾದದ್ದು. ಈ ನಿಟ್ಟಿನಲ್ಲಿ ಎರಡ್ಮೂರು ಸಾಲಿನಲ್ಲಿ ನೀತಿ, ಸಂದೇಶ, ವಿಡಂಬನೆ, ಹಾಸ್ಯ, ಪ್ರೀತಿ, ಭಯ, ಕರುಣೆ ಮೊದಲಾದ ಭಾವಗಳನ್ನು ಹೊಮ್ಮಿಸುವ ಅಷ್ಟೇ ರೋಮಾಂಚನ ಉಂಟು ಮಾಡುವ ಪುಟ್ಟ ಕಥೆಗಳು ಈ ನ್ಯಾನೋ ಕಥೆಗಳು. ಅನುಭವ ಜನ್ಯವಾದ, ಕಾಲ್ಪನಿಕವಾದ, ಓದುತ್ತಿದ್ದಂತೆ ಕುತೂಹಲ ಮೂಡಿಸುವ, ಕಿರಿದರಲ್ಲಿ ಹಿರಿದರ್ಥವನ್ನು ಹೊಂದಿರುವ ಈ ಕಥೆಗಳು ಹೊಸದೊಂದು ಬರವಣಿಗೆಯ ಟ್ರೆಂಡ್ ಹುಟ್ಟುಹಾಕಿದೆ. ವಿಪರ್ಯಾಸದೊಂದಿಗೆ ಕಥೆ ಅಂತ್ಯಗೊಳ್ಳುವುದು, ಕಥೆಯ ಕೊನೆಯ ಪದಗಳನ್ನು ಓದಿದಾಗ ಹಠಾತ್ ತಿರುವು ಪಡೆದುಕೊಂಡು ವಿಶೇಷ ಅನುಭೂತಿ ನೀಡುವುದು ಈ ಕಥನ ಶೈಲಿಯ ವೈಶಿಷ್ಟ್ಯ ಎಂದರು.

ಲೇಖಕ ಅಶೋಕ ವಿ ಬಳ್ಳಾ ಮಾತನಾಡುತ್ತಾ, ತನ್ನ ಕೃತಿಯೊಂದು ಓದುಗರಿಂದ ವಿಮರ್ಶೆಗೊಳಗಾದಾಗ, ಚರ್ಚೆ ಸಂವಾದಗಳನ್ನು ಹುಟ್ಟು ಹಾಕಿದಾಗ ಬರಹಗಾರನಿಗೆ ಸಾರ್ಥಕತೆಯ ಭಾವ ಒಡ ಮೂಡುತ್ತದೆ. ಕೃತಿ ಬರೆದಾದ ಮೇಲೆ ಓದುಗನ ಸ್ವತ್ತು ಎಂಬ ಮಾತಿನಂತೆ ಓದುಗ ತನ್ನದೇ ದೃಷ್ಟಿಕೋನಕ್ಕೆ ತಕ್ಕಂತೆ ಆ ಬರಹವನ್ನು ವಿಶ್ಲೇಷಿಸುವ, ಅರ್ಥೈಸಿಕೊಳ್ಳುವ ಸ್ವಾತಂತ್ರ್ಯ ಹೊಂದಿರುತ್ತಾನೆ. ಪ್ರತಿಯೊಬ್ಬರ ಓದಿನ ಪ್ರೀತಿ, ಗ್ರಹಿಕೆ, ವ್ಯಾಖ್ಯಾನ ವಿಭಿನ್ನವಾಗಿರುತ್ತದೆ. ಆದರೆ ಅದು ಪೂರ್ವಾಗ್ರಹ ಪೀಡಿತವಾಗದೆ ಪ್ರಗತಿಪರ ಚಿಂತನೆಗೆ ಪೂರಕವಾಗಿರಬೇಕು ಎಂದರು.

ನಾಡಿನ ಬಹುತೇಕ ಪತ್ರಿಕೆಗಳು ಹೊಸ ಮಾದರಿಯ ನ್ಯಾನೋ ಕಥೆಗಳನ್ನು ಪ್ರಕಟಿಸುತ್ತಾ ಹೊಸ ಸಾಹಿತ್ಯ ಪ್ರಕಾರದ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿವೆ ಎಂದು ಪತ್ರಿಕೆಗಳ ಕಾರ್ಯವನ್ನು ಶ್ಲಾಘಿಸಿದರು.

ನಂತರ ನಡೆದ ಸಂವಾದದಲ್ಲಿ, ಪುನರ್ಜನ್ಮದಲ್ಲಿ ನಂಬಿಕೆ ಇದೆಯೇ? ಪ್ರಸ್ತುತ ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾಗುವ ಕೊಲೆ ಪ್ರಕರಣಕ್ಕೂ ನಿಮ್ಮ ಕಥೆಗಳಿಗೂ ಸಂಬಂಧವಿದೆಯೇ? ಪುಟ್ಟ ಕಥೆಗಳು ಕಾದಂಬರಿ, ಮಹಾಕಾವ್ಯಗಳಂತಹ ಬರಹಗಳಿಂದ ಓದುಗರನ್ನು ವಿಮುಖಗೊಳಿಸುತ್ತವೆಯೇ? ಎಂಬ ಪ್ರಶ್ನೆಗಳಿಗೆ ಕಥೆಗಾರ ಅಶೋಕ ವಿ ಬಳ್ಳಾ ಉತ್ತರಿಸಿದರು. ಸಂವಾದದಲ್ಲಿ, ಪ್ರೊ. ಕೆ ಎ ಬನ್ನಟ್ಟಿ, ಡಾ. ನಾಗರತ್ನ ಭಾವಿಕಟ್ಟಿ ಇತರರು ಭಾಗವಹಿಸಿದ್ದರು.

ಪ್ರೊ. ಸಂಗಣ್ಣ ಮುಡಪಲದಿನ್ನಿ ಅಧ್ಯಕ್ಷೀಯ ನುಡಿಗಳನ್ನಾಡುತ್ತ, ಕೃತಿ ಅವಲೋಕನದ ಶೈಲಿ, ಬಳಸಿದ ತಂತ್ರಗಾರಿಕೆ, ಕಥೆಗಳನ್ನು ಗ್ರಹಿಸಿಕೊಂಡ ಬಗೆ ಮತ್ತು ಸಹೃದಯಿಗಳಿಗೆ ಅದನ್ನು ತಲುಪಿಸಿದ ಅಭಿವ್ಯಕ್ತಿ ಕೌಶಲ ರವಿ ರಾ. ಕಂಗಳ ಅವರನ್ನು ಶ್ರೋತೃಗಳಿಗೆ ಹತ್ತಿರವಾಗಿಸಿತು ಎಂದರು. ಇಲ್ಲಿನ ಕಥೆಗಳು ಕಡಿಮೆ ಪದಗಳಲ್ಲಿ ಇದ್ದು, ಓದುಗ ಸ್ನೇಹಿ ಆಗಿವೆ. ಕುಶಲ ಕಥೆಗಾರ ಮಾತ್ರ ಇಂತಹ ಕಥೆಗಳನ್ನು ಸೃಷ್ಟಿಸಬಲ್ಲ. ಇವು ಕಥೆಗಾರನ ಒಳನೋಟ, ಸೂಕ್ಷ್ಮವಾದ ಗ್ರಹಿಕೆ, ಸಾಮಾಜಿಕ ಕಳಕಳಿ, ಓದುಗರ ಎದೆ ಝಲ್ಲೆನಿಸುವ ಕಥಾವಸ್ತುವಿನಿಂದ ಗಮನ ಸೆಳೆಯುವ ಕೃತಿಯಾಗಿದೆ. ಲೇಖಕರು ಗಂಭೀರ ಪ್ರೌಢ ಕಥೆ ರಚನೆಯತ್ತಲೂ ಮುಂದಾಗಬೇಕು ಎಂದು ಸಲಹೆ ಇತ್ತರು.

ಕಾರ್ಯಕ್ರಮದಲ್ಲಿ ಸಿದ್ದಲಿಂಗಪ್ಪ ಬೀಳಗಿ, ನಾಗರಾಜ ನಾಡಗೌಡ್ರ, ಮಹಾಂತೇಶ ಆವಾರಿ, ಎಸ್ ಎನ್ ಹಾದಿಮನಿ, ಡಾ.ಶ್ರೀಶೈಲ ಗೋಲಗೊಂಡ, ಬಸವರಾಜ ನಾಡಗೌಡ್ರ, ಮಹಾಂತೇಶ ಹಳ್ಳೂರ, ಎಂ ಡಿ ಚಿತ್ತರಗಿ, ಮುರ್ತುಜಾಬೇಗಂ ಕೊಡಗಲಿ, ಡಾ. ಎಲ್ ಜಿ ಗಗ್ಗರಿ, ಡಾ. ವಸಂತ ಕಡ್ಲಿಮಟ್ಟಿ, ಡಾ. ಎಂ.ಬಿ. ಒಂಟಿ, ಶರಣಪ್ಪ ಹೂಲಗೇರಿ, ಐ ಎಚ್ ನಾಯಕ, ಸಿದ್ದು ಶೀಲವಂತರ, ಮುತ್ತು ವಡ್ಡರ, ಬಿ.ಡಿ. ಚಿತ್ತರಗಿ, ಜಗದೀಶ ಹದ್ಲಿ, ಅಂದಾನಯ್ಯ ವಸ್ತ್ರದ, ಶ್ರೀಮತಿ ನಿಂಗಮ್ಮ ಬಾವಿಕಟ್ಟಿ ಗೀತಾ ಇದ್ದಲಗಿ ವಿಜಯಲಕ್ಷ್ಮಿ ರಾಜೂರ, ಇತರರು ಉಪಸ್ಥಿತರಿದ್ದರು. ಡಾ ಎಲ್ ಜಿ ಗುಗ್ಗುರಿ ಪ್ರಾರ್ಥಿಸಿದರು
ಶ್ರೀಮತಿ ಗೀತಾ ತಾರಿವಾಳ ನಿರೂಪಿಸಿ ವಂದಿಸಿದರು

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group