ರಾಮನಗರ ಜಿಲ್ಲೆ ಗೊಂಬೆನಾಡು ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆಯಲ್ಲಿ ಪಂಚಲೋಹದ ೬೦ ಅಡಿ ಎತ್ತರದ ಶ್ರೀ ಚಾಮುಂಡೇಶ್ವರಿ ವಿಗ್ರಹ ರಾಜ್ಯದ ಗಮನ ಸೆಳೆದ ಕ್ಷೇತ್ರವಾಗಿ ನನ್ನ ಮಡದಿಯು ಶ್ರೀಕ್ಷೇತ್ರಕ್ಕೆ ಹೋಗಿಬರುವ ಬಯಕೆ ವ್ಯಕ್ತಪಡಿಸಿದಳು. ನಾವು ಭಾನುವಾರ ಬೆಳಿಗ್ಗೆ ಮೈಸೂರಿಗೆ ಹೋಗಿ ರಾತ್ರಿ ಅಲ್ಲಿಯ ಬೆಳವಾಡಿಯಲ್ಲಿ ತಂಗಿದ್ದು ಸೋಮವಾರ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿಯಾಗಿ ಗೌಡಗೆರೆಗೆ ಹೊರಟೆವು.
ಈಗಾಗಲೇ ಒಮ್ಮೆ ಗೌಡಗೆರೆಗೆ ಹೋಗಿಬಂದಿದ್ದ ಅವರಕ್ಕನವರು ಅಲ್ಲಿ ನಮಗೆ ಜೊತೆಯಾದರು. ನಾವು ಮೈಸೂರು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದರೆ ಅದೇನು ಜನಜಂಗುಳಿ! ಹಿಂದೊಮ್ಮೆ ನಾವು ದಂಪತಿಗಳು ಮೈಸೂರಿನಲ್ಲಿ ಮದುವೆ ಮುಗಿಸಿ ವಾಪಸ್ಸು ಹಾಸನಕ್ಕೆ ಬರುವಾಗ ಮಡದಿಯ ಮಿನಿ ಪರ್ಸ್ ಪಿಕ್ ಪ್ಯಾಕೆಟ್ ಆಗಿತ್ತು. ಸಧ್ಯ ನನ್ನ ಬಳಿ ಸ್ವಲ್ಪ ಮನಿ ಇದ್ದು ಪರದಾಟ ತಪ್ಪಿತ್ತು. ಇದೇ ನೆನಪಿನಲ್ಲಿ ನಾವು ಜನಜಂಗುಳಿ ನಡುವೆ ಗೌಡಗೆರೆೆ ಬಸ್ ಹುಡುಕಿದೆವು. ನಮ್ಮಂತೆಯೇ ಕೆಲವರು ನೇರ ಬಸ್ಸಿಗೆ ಪರದಾಡುತ್ತಿದ್ದರು. ಬಸ್ ಕಂಡಕ್ಟರ್ ಗೌಡಗೆರೆ ಗೇಟ್ಗೆ ಹೋಗುತ್ತೆ ಹತ್ತಿ ಎಂದರು ಹತ್ತಿದೆವು.
ಅದ್ಯಾವ ಊರೆಂದು ನೆನಪಿಲ್ಲ. ಅಲ್ಲಿ ನಮ್ಮನ್ನು ಇಳಿಸಿ ಬಸ್ ಮುಂದೆ ಹೋಯಿತು. ಅಲ್ಲಿಂದ ಮತ್ತೆ ಒಳದಾರಿಯಲ್ಲಿ ೩ ಕಿ.ಮೀ. ಹೋಗಬೇಕು ಗೌಡಗೆರೆಗೆ ಹೋಗುವ ಬಸ್ಸು ಮದ್ದೂರಿನಿಂದ ಬಂದರು ರಷ್ ಆಗಿತ್ತಾಗಿ ನಿಲ್ಲಿಸಲಿಲ್ಲ. ಅಲ್ಲಿಯ ಒಂದು ಆಟೋ ಹತ್ತಕ್ಕೂ ಹೆಚ್ಚು ಮಂದಿಯನ್ನು ತುಂಬಿಕೊಂಡು ಒಬ್ಬರಿಗೆ ಇಪ್ಪತ್ತು ರೂ.ನಂತೆ ಪಡೆದು ಗೌಡಗೆರೆಯಲ್ಲಿ ನಮ್ಮನ್ನು ಇಳಿಸಿತು.
ಈ ಕ್ಷೇತ್ರದಲ್ಲಿ ನಡೆಯುವ ಭೀಮನ ಅಮಾವಾಸ್ಯೆ ರಥೋತ್ಸವದಲ್ಲಿ ನವಜೋಡಿಗಳು ಹಣ್ಣು ಜವನ ಎಸೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ೨೦೨೧ರಲ್ಲಿ ಚಾಮುಂಡೇಶ್ವರಿ ಮೂರ್ತಿ, ೨೦೨೨ರಲ್ಲಿ ಮಹಾ ಮಸ್ತಕಾಭಿಷೇಕ ೨೦೨೩ರಲ್ಲಿ ಚಂಡಿಕಾ ಮಹಾಯಾಗ ೨೦೨೪ರಲ್ಲಿ ತೇರು ಲೋಕಾರ್ಪಣೆ ಆಗಿ ಚಾಮುಂಡಿ ದೇವಿಗೆ ಹಿಂಭಾಗ ಕೃತಕ ಬೆಟ್ಟ ನಿರ್ಮಾಣ ಮಾಡಿ ಈ ವರ್ಷ ನೀರಿನ ಝರಿ ಅನಾವರಣಗೊಂಡ ವರದಿ ಓದಿದೆ.
ನೈಸರ್ಗಿಕ ರೀತಿಯಲ್ಲಿ ಬೀಳುವ ನೀರಿನ ಸಮೇತ ದೇವಿಯ ದರ್ಶನ ಕಣ್ತುಂಬಿಕೊಳ್ಳಬಹುದಾಗಿದೆ. ಪಂಚಲೋಹದ ಸಿಂಹದ ವಿಗ್ರಹ ಕೆಲಸ ನಡೆದಿದ್ದು ವಿಶ್ವದಲ್ಲೇ ಅತಿ ಎತ್ತರದ (೧೮ಅಡಿ) ೨೩ ಅಡಿ ಉದ್ದದ ಸಿಂಹದ ವಿಗ್ರಹ ಪ್ರತಿಷ್ಠಾಪನೆ ಮಾಡಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಳ್ಳಲಾಗುವುದು ಎಂದು ಧರ್ಮದರ್ಶಿ ಶ್ರೀ ಮಲ್ಲೇಶ ಗುರೂಜಿ ಹೇಳಿದ್ದಾರೆ. ವಿಶ್ವದಲ್ಲೇ ಅತಿ ಎತ್ತರವಾದ ಪಂಚಲೋಹದ ಶ್ರೀ ಚಾಮುಂಡೇಶ್ವರಿ ವಿಗ್ರಹ ಏಷ್ಯ ಮತ್ತು ಇಂಡಿಯಾ ಬುಕ್ ಆಪ್ ರೆಕಾರ್ಡ್ನಲ್ಲಿ ಸೇರಿದೆ. ೧೮ ಕೈಗಳಿರುವ ನಿಂತ ಭಂಗಿಯ ವಿಗ್ರಹ ವಿಶಿಷ್ಟವಾಗಿದೆ. ಚಾಮುಂಡೇಶ್ವರಿ ಮೂರ್ತಿಯ ಸನಿಹಕ್ಕೆ ಹೋಗಲು ಮೆಟ್ಟಿಲುಗಳಿವೆ. ಮೂರ್ತಿಯ ಕೆಳಭಾಗದಲ್ಲಿ ಮ್ಯೂಸಿಯಂ ಮಾಡಿ ನಿರ್ಮಿತ ಕಲಾಕೃತಿಗಳ ಪುತ್ಥಳಿಗಳು ಮನ ಸೆಳೆಯುತ್ತವೆ. ಶಾಲಾ ಮಕ್ಕಳಿಗೆ ಇದು ಶೈಕ್ಷಣಿಕ ಸ್ಥಳವಾಗುವ ಆಶಯದಲ್ಲಿ ವೈಜ್ಞಾನಿಕ ರೀತಿ ನೀತಿಗಳ ಮಾದರಿ ಸೃಷ್ಟಿ ಮಾಡಲಾಗಿದೆ.
ಮಂಗಳ ಗ್ರಹ, ಚಂದ್ರಲೋಕ, ರಾಕೇಟ್ ಉಡಾವಣೆ, ಬೌಗೋಳಿಕವಾಗಿ ಮಕ್ಕಳು ಕಲಿಯಬಹುದಾದ ಹಲವು ಆಚಾರ ವಿಚಾರಗಳನ್ನು ಅಳವಡಿಸಲಾಗಿದೆ. ತಾಯಿ ಪ್ರತಿಮೆ, ರೈತರ ಪುತ್ಥಳಿಗಳು ಸೇರಿದಂತೆ ನಮ್ಮ ಸಂಪ್ರದಾಯ ಬಿಂಬಿಸುವ ಪುತ್ಥಳಿಗಳು ಕಲಾವಿದರ ಕೌಶಲ್ಯದಲ್ಲಿ ರೂಪು ತೆಳೆದಿವೆ. ಶ್ರೀಕ್ಷೇತ್ರ ೨೦೧೦ರಿಂದ ಪ್ರಚಲಿತವಾಗಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿಗೆ ಬಂದು ಒಳ್ಳೆಯ ಮನಸ್ಸಿನಿಂದ ತೆಂಗಿನಕಾಯಿ ಹರಕೆ ಕಟ್ಟಿದರೆ, ಉಪ್ಪಿನ ಸೇವೆ ಮಾಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಕಾಯಿಗಳ ಬ್ಯಾಗಿನಿಂದ ತುಂಬಿಹೋಗಿದೆ.
ನನ್ನ ಮಡದಿ ಮತ್ತು ಆಕೆಯ ಅಕ್ಕನವರು ತೆಂಗಿನಕಟ್ಟಿ ಕೈಮುಗಿದು ಹರಕೆ ಕಟ್ಟಿಕೊಂಡರು. ಭಕ್ತರು ಇಲ್ಲಿಯೇ ಇರುವ ಪವಾಡ ಬಸವಪ್ಪನ ಆರ್ಶೀವಾದ ಪಡೆದು ತೀರ್ಥಸ್ನಾನ ಮಾಡುತ್ತಾರೆ. ನಿಜ ಬಸವನು ಇಲ್ಲಿದ್ದು ಬಲಗಾಲಿನಿಂದ ಆರ್ಶಿವಾದ ಕೊಡುತ್ತೆ. ಇಲ್ಲಿಗೆ ಬಂದವರಿಗೆಲ್ಲಾ ಅನ್ನಪ್ರಸಾದ ಇದ್ದು ಸೌದೆ ಒಲೆ ಅಡಿಗೆ ಬಡಿಸುವರು. ನಾವು ದೇವಿ ದರ್ಶನ ಮಾಡಿ ಅನ್ನಪ್ರಸಾದ ಸೇವಿಸಿ ಮೈಸೂರು ಬಸ್ ಹತ್ತಿ ಬೆಳವಾಡಿಗೆ ತಲುಪವಷ್ಟರಲ್ಲಿ ಸಂಜೆಯಾಗಿತ್ತು.
—
ಗೊರೂರು ಅನಂತರಾಜು, ಹಾಸನ.
ಮೊ:೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.