ಬೆಳಗಾವಿ – ಶಿವಾ ಆಫಸೆಟ್ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್, ಬೆಳಗಾವಿ ಹಾಗೂ ಶ್ರೀ ಗುರುದೇವ ಪ್ರಕಾಶನ, ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಡಾ. ಸುನೀಲ ಪರೀಟ ಅವರು ಸಂಪಾದಿಸಿದ “ನಮ್ಮ ವೈದ್ಯೋನಾರಾಯಣ” ಕವನ ಸಂಕಲನ ಹಾಗೂ ಅವರ ಸ್ವರಚಿತ”ಕ್ಷಣ ಹೊತ್ತಿನ ಕಥೆಗಳು” ಎಂಬ ಸಣ್ಣ ಕಥೆಗಳ ಸಂಗ್ರಹ ಲೋಕಾರ್ಪಣೆ ಮಾಡಲಾಯಿತು.
ಕೃತಿಗಳ ಬಿಡುಗಡೆ ಮಾಡಿ ಹಿರಿಯ ಸಾಹಿತಿಗಳು ಎಂ.ಎಸ್. ಇಂಚಲ ಅವರು ಮಾತನಾಡಿದರು, ಕನ್ನಡ ಭಾಷೆಯು ಶಾಸ್ತ್ರೀಯ ಭಾಷೆಯಾಗಿ ಸ್ಥಾನಮಾನವನ್ನು ಗಳಿಸಿದೆ, ಪಂಪ ರನ್ನರಂತಹ ಆದಿ ಕವಿಗಳು ಈ ಭಾಷೆಯನ್ನು ಸಮೃದ್ಧಗೊಳಿಸಿದರು, ಈ ಆಧುನಿಕ ಯುಗದಲ್ಲಿಯೂ ಇಂತಹ ಅದ್ಭುತ ಕೃತಿಗಳು ನಮ್ಮ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿವೆ ಎಂದರು
“ನಮ್ಮ ವೈದ್ಯೋನಾರಾಯಣ” ಕೃತಿಯನ್ನು ಪರಿಚಯಿಸುತ್ತ ಡಾ . ರಾಜಶೇಖರ ಬಿರಾದಾರ, ಈ ಕೃತಿಯಲ್ಲಿ 88 ಕವಿಗಳ ಕವನಗಳನ್ನು ಸಂಗ್ರಹಿಸಿ ಸಾರಸ್ವತ ಲೋಕಕ್ಕೆ ಸಮರ್ಪಿಸುತ್ತಿರುವುದು ಅದ್ಭುತ ಕೆಲಸ. ಇದರಿಂದ ವೈದ್ಯ ಲೋಕದಲ್ಲಿ ಹೊಸ ಸಂಚಲನ ಮೂಡುವುದು ಹಾಗೂ ವೈದ್ಯರ ಕುರಿತು ಮನ ಮನದಲ್ಲಿ ಅಭಿಮಾನ ಹೆಚ್ಚುವುದು. ಈ ನಡುವೆ ವೈದ್ಯರ ಕುರಿತು ಸ್ವರಚಿತ ಕವನವನ್ನು ಶ್ರೀಮತಿ ನಿರ್ಮಲಾ ಪಾಟೀಲ ಅವರು ಹಾಡಿ ಸಬಿಕರನ್ನು ಮಂತ್ರಮುಗ್ಧಗೊಳಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆಂಜನೇಯ ಅವರು ತಮ್ಮ ಅತಿಥಿ ಭಾಷಣದಲ್ಲಿ ಹೇಳಿದರು, ಶಿಕ್ಷಣ ಇಲಾಖೆಯಲ್ಲಿ ಇಂತಹ ಅಪರೂಪದ ಶಿಕ್ಷಕರು ಬಹಳ ಕಡಿಮೆ ಕಂಡುಬರುವರು, ಶೈಕ್ಷಣಿಕ ಪ್ರಗತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುವುದು ಎಂದರೆ ಅತ್ಯಂತ ಪ್ರಶಂಸನೀಯ ಕೆಲಸ. ಪರೀಟ ಅವರ ಸಾಹಿತ್ಯವು ಈ ಸಮಾಜಕ್ಕೆ ಮಾತ್ರವಲ್ಲ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಎಂದು ಹಾರೈಸುತ್ತೇವೆ.
ಇನ್ನೊಂದು ಕೃತಿ “ಕ್ಷಣ ಹೊತ್ತಿನ ಕಥೆಗಳು”ಯನ್ನು ಪರಿಚಯಿಸುತ್ತ ಗೋಕಾಕ ತಾಲೂಕಿನ ಕಸಾಪ ಅಧ್ಯಕ್ಷರು ಶ್ರೀಮತಿ ಭಾರತಿ ಮದಬಾವಿ ಅವರು ಹೇಳಿದರು, ಈ ಕೃತಿ ಚಿಕ್ಕದಾಗಿ ಕಂಡ ಬಂದರೂ ಚೊಕ್ಕದಾದ ಜ್ಞಾನವನ್ನು ನೀಡುವ ಸಂಗ್ರಹವಾಗಿದೆ. ಇದರಲ್ಲಿ ಅತ್ಯಂತ ಕಡಿಮೆ ಶಬ್ದಗಳಲ್ಲಿ ಕಥೆ ರೂಪದಲ್ಲಿ ಒಂದು ಘಟನೆಯನ್ನು ಸರಿ ಹಿಡಿದು ಓದುಗರ ಮನಸ್ಸಿಗೆ ಸ್ಪರ್ಶಿಸುವಂತೆ ವರ್ಣಿಸಿದ್ದಾರೆ. ಸರ್ಕಾರಿ ವೈದ್ಯರಾದ ಡಾ. ಜಯಾನಂದ ಧನವಂತ ಅವರು ತಮ್ಮ ಅತಿಥಿಯ ಭಾಷಣದಲ್ಲಿ, ಸಾಹಿತ್ಯವು ಕಲ್ಪನೆಗೆ ಮೀರಿದ್ದಾಗಿರುತ್ತದೆ ಎಂಬುದಕ್ಕೆ ಈ ಎರಡು ಕೃತಿಗಳು ಸಾಕ್ಷಿಯಾಗಿವೆ, ವೈದ್ಯರನ್ನು ಹಾಡಿ ಹೊಗಳಿದ ಈ ಕೃತಿಯು ವಿಸ್ಮಯಕ್ಕೆ ಸಾಕ್ಷಿಯಾಗಿದೆ. ವೈದ್ಯರೆಂದರೆ ಉದಾಸೀನತೆ ಭಾವನೆ ಹೊಂದಿರುವ ಈ ಸಂದರ್ಭದಲ್ಲಿ ವೈದ್ಯರ ಕುರಿತು ಇಂತಹ ಕೃತಿಗಳು ನಮ್ಮೆಲ್ಲರ ಅಭಿಮಾನವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
ಅತಿಥಿಗಳಾದ ನಿವೃತ್ತ ಮುಖ್ಯೋಪಾಧ್ಯಾಯರು ಡಿ . ಎಸ್. ಪೂಜಾರ ಅವರು ತಮ್ಮ ಮಾತುಗಳಲ್ಲಿ ಇಂದಿನ ಸಮಾಜಕ್ಕೆ ಹಾಗೂ ಸಾಹಿತ್ಯಕ್ಕೆ ಇಂತಹ ಧಾರ್ಮಿಕ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಕೃತಿಗಳು ಬಹಳ ಅತ್ಯವಶ್ಯಕ. ಹಿರಿಯ ಮರಗಳು ಕಿರಿಯ ಸಸಿಗಳಿಗೆ ಆಧಾರವಾಗಿ ನಿಂತು ಎಲ್ಲರನ್ನೂ ಸಾಮಾಜಿಕವಾಗಿ ಧಾರ್ಮಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮುನ್ನಡೆಯುವಂತೆ ದಾರಿ ತೋರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಾ ಆಫ್ ಸೆಟ್ ಮಾಲೀಕರಾದ ಡಾ. ಶಿವು ನಂದಗಾಂವ ಅವರು ತಮ್ಮ ಮಾತುಗಳಲ್ಲಿ ಮಕ್ಕಳನ್ನು ಮೊಬೈಲ್ ಗಳಿಂದ ದೂರ ಇಡಲು ಉಪಾಯವೆಂದರೆ ಅದು ಸಾಹಿತ್ಯ ಜಗತ್ತಿನ ಇಂತಹ ಕೃತಿಗಳು, ಅತಿಯಾದ ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿಕರ ಜೊತೆಗೆ ಆರ್ಥಿಕವಾಗಿ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಮಕ್ಕಳ ಕೈಯಲ್ಲಿ ಮೊಬೈಲ್ ಬದಲಾಗಿ ಇಂತಹ ಕೃತಿಗಳನ್ನು ನೀಡುವುದು ಒಳಿತು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಎಂ. ವೈ. ಮೆಣಸಿನಕಾಯಿಯವರು ಮಾತನಾಡಿ, ಸಾಹಿತ್ಯ ಜಗತ್ತಿಗೆ ಇಂಥ ಕೃತಿಗಳು ಮೆರಗನ್ನು ನೀಡುತ್ತವೆ, ಇಂತಹ ಉಪಯುಕ್ತವಾದಂತಹ ಕೃತಿಗಳು ನಾವೆಲ್ಲರೂ ಓದಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು, ಸಾಹಿತಿಗಳಿಗೆ ಪ್ರೋತ್ಸಾಹವನ್ನು ನೀಡಬೇಕು ಎಂದು ಹೇಳಿದರು.
ಕೃತಿಕಾರರಾದ ಡಾ. ಸುನೀಲ ಪರೀಟ ರವರು ತಮ್ಮ ಭಾಷಣದಲ್ಲಿ ಹೇಳಿದರು, ಇಂದಿನ ಕಾಲದಲ್ಲಿ ಕೃತಿಗಳನ್ನು ಸಂಪಾದನೆ ಮಾಡಿ ಅವುಗಳನ್ನು ಪ್ರಕಟಿಸುವುದು ಅತ್ಯಂತ ಕಷ್ಟದ ಕೆಲಸವಾದರೂ, ಸಾಹಿತ್ಯ ಸೇವೆ ಎಂದು ನಿಸ್ವಾರ್ಥ ಭಾವನೆಯಿಂದ ಮಾಡಿದ ಕೆಲಸವೂ ಯಶಸ್ವಿಯಾಗುತ್ತದೆ. ಕಥೆಗಳು ಸಾಂದರ್ಭಿಕ ಹಾಗೂ ಅನುಭಾವಿಕವಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷರು ಡಾ. ಹೇಮಾ ಸೊನಳ್ಳಿ ತಮ್ಮ ಅಧ್ಯಕ್ಷತೆಯ ನುಡಿಯಲ್ಲಿ ಹೇಳಿದರು, ಇವತ್ತಿನ ಎರಡು ಕೃತಿಗಳು ಕನ್ನಡ ಸಾರಸ್ವತ ಜಗತ್ತಿಗೆ ಸಮರ್ಪಿತಗೊಂಡಿದ್ದು ಇವು ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಪ್ರಯತ್ನ ಮಾಡುತ್ತವೆ. ಸಂದರ್ಭೊಚಿತವಾದ ಅನುಭವ ಜನ್ಯ ಕಥೆಗಳು ಇಲ್ಲಿ ಮೂಡಿಬಂದಿವೆ. ಈ ಕಥೆಗಳು ಓದಿ ಬಿಡುವಂತಹ ಕಥೆಗಳು ಅಲ್ಲ ಇವುಗಳು ನೈತಿಕ ಮೌಲ್ಯವನ್ನು ವೃದ್ಧಿಸುವ ಕೆಲಸ ಮಾಡುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆಗಮಿಸಿದ ಕವಿ ಮನಸುಗಳಿಗೆ ಪ್ರಶಸ್ತಿ ಪತ್ರ, ಅಭಿನಂದನಾ ಪತ್ರ, ಸ್ಮರಣಿಕೆ, ಪುಸ್ತಕ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು. ಅನುರಾಧಾ ಕೋಲಕಾರ ವಿದ್ಯಾರ್ಥಿನಿ ನಾಡಗೀತೆಯನ್ನು ಹಾಡಿದಳು, ಪ್ರೊ. ಮಂಜುನಾಥ್ ಕಲಾಲ ಅವರು ನಿರೂಪಿಸಿದರು ಹಾಗೂ ಎಸ್. ಎಮ್. ಮಠದ ಅವರು ವಂದಿಸಿದರು.