Homeಸುದ್ದಿಗಳು'ಗುರುಸ್ಮರಣೆ’ವಿಶಿಷ್ಟ ನೃತ್ಯ ರೂಪಕ ಆಯೋಜನೆ ; ಸಮುದ್ಭವ

‘ಗುರುಸ್ಮರಣೆ’ವಿಶಿಷ್ಟ ನೃತ್ಯ ರೂಪಕ ಆಯೋಜನೆ ; ಸಮುದ್ಭವ

ವಿದುಷಿ ಡಾ.ಪ್ರಿಯಾ ಗಣೇಶ ಮತ್ತು ಕು.ಶರ್ಲೋವಿ ಜಿ ಆತ್ರೇಯ ತಾಯಿ – ಮಗಳ ಅಪೂರ್ವ ಜುಗಲ್ಬಂದಿ

ಸಮುದ್ಬವ ತಂಡದಿಂದ ಗುರು ವಿದುಷಿ ಡಾ. ಪ್ರಿಯಾ ಗಣೇಶ್ ಹಾಗು ಅವರ ಪುತ್ರಿ ಕು. ಶರ್ಲೋವಿ ಜಿ ಆತ್ರೇಯ ಯವರು ವಿವಿಧ ನೃತ್ಯಪ್ರಕಾರಗಳಲ್ಲಿ ಗುರುಗಳನ್ನು ಸ್ಮರಿಸುವ ವಿಭಿನ್ನ ವಿಶಿಷ್ಟ ಕಾರ್ಯಕ್ರಮ ಇತ್ತೀಚೆಗೆ ನಗರದ ಜಯನಗರ ೮ನೇಬ್ಲಾಕ್ ಜೆ.ಎಸ್.ಎಸ್.ಆಡಿಟೋರಿಯಂ ನಲ್ಲಿ ಆಯೋಜಿಸಲಾಗಿತ್ತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಭಾಗವಹಿಸಿದ್ದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಟಿ.ಜಿ.ನರಸಿಂಹಮೂರ್ತಿ ಮಾತನಾಡುತ್ತ ಹಿಂದೆ ಗುರು, ಮುಂದೆ ಗುರಿ – ಇದ್ದರೇ ಏನನ್ನಾದರೂ ಸಾಧಿಸಬಹುದು ಎನ್ನುವ ಹಾಗೆ ನಾವು ಎಲ್ಲ ಕ್ಷೇತ್ರಗಳಲ್ಲಿ, ಗುರುಗಳನ್ನು ಹಾಗು ಮಾರ್ಗದರ್ಶಕರನ್ನು ಕಾಣಬಹುದು. ಅವರುಗಳ ಸ್ಮರಣೆ ಮಾಡುವುದು ಬಹು ಅಪರೂಪದ, ವಿಶಿಷ್ಟವಾದ ಕಾರ್ಯಕ್ರಮವಿದೆಂದು ಅಭಿಪ್ರಾಯಪಟ್ಟರು.

ಗುರುವಿನ ತತ್ವವನ್ನರಿಯದೆ ವೇದಗಳಾಗಲೀ, ಪುರಾಣಗಳಾಗಲೀ, ಇತಿಹಾಸ, ಮಂತ್ರವಿದ್ಯೆಯಾಗಲೀ, ಆಗಮ ವಿದ್ಯೆಯಾಗಲೀ, ಜಪ, ತಪ, ಯಜ್ಞ ದಾನಗಳ ಹಿರಿಮೆಯಾಗಲೀ ಅರಿವಾಗದಿರುವುದರಿಂದ, ಗುರುವಿನ ಅನುಗ್ರಹಕ್ಕೋಸ್ಕರ ಗುರುವಿಗೆ ನಮ್ಮ ನಮೋವಾಕ್ಕುಗಳು ಸಲ್ಲಬೇಕು. ಇಂತಹ ಭವ್ಯವಾದ ಗುರುಪರಂಪರೆಯನ್ನು ಒಳಗೊಂಡಿರುವ ಅವರೆಲ್ಲರನ್ನು ನೆನೆಯುವ ಈ ಸುಮಧುರ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಹಿರಿಯ ಸಂಗೀತ ಕಲಾವಿದ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ತಿಳಿಸಿದರು.

ನಟುವಾಂಗದಲ್ಲಿ ವಿದುಷಿ ಪದ್ಮಗಂಧಿನಿ ರಾವ್ ಹುಲಿಕಲ್,  ವಿ|| ಶ್ರೀಯಾ ನಾಯಕ್ , ಗಾಯನದಲ್ಲಿ ವಿದ್ವಾನ್ ಆರ್ ಶಂಕರ ಪ್ರಸಾದ್ , ವಿದುಷಿ ಡಾ. ಆಶ್ವಿನಿ ಪಿ.ಆರ್ , ಮೃದಂಗದಲ್ಲಿ ವಿದ್ವಾನ್ ಪುದುವೈ ಎಸ್ ಭಾರತ್, ವಯೋಲಿನ್ ವಿದ್ವಾನ್ ಟಿ ಶ್ರೀನಿವಾಸನ್, ರಿದಂಪ್ಯಾಡ್ ಮತ್ತು ಕೊಳಲಿನಲ್ಲಿ ವಿದ್ವಾನ್ ಕರಕೈಲ್ ಶರವಣನ್ ಸಹಕರಿಸಿದರು.

ಸಂಗೀತ ಸಂಯೋಜನೆ: ವಿದ್ವಾನ್ ಆರ್ ಶಂಕರ ಪ್ರಸಾದ್, ವಿದುಷಿ ಅಶ್ವಿನಿ ಪಿ ಆರ್
ಸಾಹಿತ್ಯ: ಉಡುಪಿ ಶ್ರೀ ಪಿ ಸುದರ್ಶನ್ ,ವಿದ್ವಾನ್ ಆರ್ ಶಂಕರ ಪ್ರಸಾದ್,ಸುಷ್ಮ ಡಿ.ಎಸ್ ನಿರೂಪಣೆ , ಕಲಾಯೋಗಿ ವಿಜಯ ಕುಮಾರ್ ಪ್ರಸಾಧನ , ಕು.ಆವನಿ.ಕೆ, ಲಕ್ಷ್ಮಿ ಅನನ್ಯ ,ಅನನ್ಯ ಮನೋಜ್ , ಸುಮೇಧ ತಲಗಳ್ಳ , ಅಕ್ಷತ ಎನ್, ಭುವನ ಎಸ್.ಮೊದಲಾದ ಸಹಕಲಾವಿದರು ಭಾಗವಹಿಸಿದ್ದರು.

ಗುರು ಸ್ಮರಣೆ ಕಾರ್ಯಕ್ರಮವು ವಿಭಿನ್ನ ಹಾಗೂ ವೈಶಿಷ್ಟ್ಯಮಯವಾಗಿತ್ತು. ಬಹಳ ಕ್ರಿಯಾತ್ಮಕವಾಗಿ ಎಲ್ಲ ಗುರುಗಳ ದರ್ಶನ ಮಾಡಿಸಿದ ಸಮುದ್ಭವ ಸಂಸ್ಥೆಯವರು ಅಚ್ಚುಕಟ್ಟಾದ ನೃತ್ಯವನ್ನು ಸೊಗಸಾಗಿ ಕಥೆ ಹಣೆದು , ಎಲ್ಲಾ ಗುರುಗಳ ತತ್ವಗಳನ್ನು ತಿಳಿಹೇಳಿ ,ಹಿಮ್ಮೇಳದವರು ಸಂಗೀತಗಾರರು ಹಾಗೂ ಪಕ್ಕ ವಾದ್ಯದವರು ಸುಮಧುರವಾಗಿ ಶ್ಲೋಕ -ಹಾಡುಗಳಿಂದ ನೃತ್ಯ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು. ವಿದುಷಿ .ಡಾ ಪ್ರಿಯ ಗಣೇಶ್ ಹಾಗೂ ಕು. ಶರ್ಲೋವಿ ಅಮ್ಮ ಮಗಳ ಜುಗಲ್ ಬಂದಿ ಯಲ್ಲಿ ಒಬ್ಬರನ್ನೊಬ್ಬರು ಮೀರಿಸುವಂತೆ ಪ್ರದರ್ಶನ ನೀಡಿದರು .

ಗುರುಗಳಾದ ದಕ್ಷಿಣ ಮೂರ್ತಿ ಲೀಲೆಗಳನ್ನು ವರ್ಣಿಸುತ್ತಾ , ಕೃಷ್ಣನ ಬಾಲ್ಯ ,ಯೌವನ ಹಾಗೂ ಅರ್ಜುನನಿಗೆ ಗೀತೋಪದೇಶ ಮಾಡಿದ ಸನ್ನಿವೇಶವನ್ನು ಸುಂದರವಾಗಿ ಅಭಿನಯಿಸಲಾಯಿತು. ಆಚಾರ್ಯತ್ರಯರಾದ ಶಂಕರಾಚಾರ್ಯರು ರಾಮಾನುಜಾಚಾರ್ಯರು ಹಾಗೂ ಮಧ್ವಾಚಾರ್ಯರು ಪ್ರತಿಪಾದಿಸಿದ ಅದ್ವೈತ ಸಿದ್ದಾಂತ – ವಿಶಿಷ್ಟಾದ್ವೈತ ಸಿದ್ದಾಂತ ಮತ್ತು ದ್ವೈತ ಸಿದ್ಧಾಂತದ ದರ್ಶನವನ್ನು ಅದ್ಭುತವಾಗಿ ತೋರಿಸಲಾಯಿತು.

ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಹಾಗೂ ಅದರ ಹಿನ್ನೆಲೆ, ಶ್ರೀ ವಿದ್ಯಾರಣ್ಯರು ಹೇಗೆ ಹಕ್ಕ-ಬುಕ್ಕರನ್ನು ಕರೆತಂದು ರಾಜ್ಯವನ್ನು ಸ್ಥಾಪಿಸಿದರು ಎಂಬುದನ್ನು ಪ್ರದರ್ಶಿಸಲಾಯಿತು. 12ನೇ ಶತಮಾನದ ಪ್ರಮುಖ ವಚನಕಾರರಾದ ಬಸವಣ್ಣ ಹಾಗೂ ಅಕ್ಕಮಹಾದೇವಿಯವರ ಸಮಾಜ ಸುಧಾರಣೆಯನ್ನು ಅವರು ರಚಿಸಿದ ವಚನಗಳನ್ನು ತುಂಬಾ ಸುಂದರವಾಗಿ ಅಭಿನಯಿಸಿದರು. ಕಾರ್ಯಕ್ರಮದ ಮೊದಲು ಗುರುವಿದುಷಿ ಪ್ರಿಯ ಗಣೇಶ್ ಎಲ್ಲಾ ಗುರುಗಳನ್ನು ಸಭೆಗೆ ಕರೆತಂದು ವಂದಿಸಿ, ನಂತರ ಪ್ರಾರಂಭಿಸಿದರು.
ಗುರು ವಿದುಷಿ ಪ್ರಿಯಾ ಗಣೇಶ ೨೫ ವರ್ಷಗಳ ಕಾಲ ತಮ್ಮ ಕಲಾ ಜೀವನವನ್ನು ಅರ್ಪಿಸಿ ,ಹಲವಾರು ಶಿಷ್ಯರನ್ನು ತಯಾರು ಮಾಡಿದ್ದಾರೆ ,ಅನೇಕ ಕ್ರಿಯಾತ್ಮಕ ರಂಗ ಪ್ರವೇಶವನ್ನು ಮಾಡಿಸಿದ್ದಾರೆ, ವಿಶೇಷ ಮಕ್ಕಳಿಗೆ ನೃತ್ಯ ಹಾಗೂ ಯೋಗವನ್ನು ಬೋಧಿಸುತ್ತಿದ್ದಾರೆ. ಸಮುದ್ಭವ ಸಂಸ್ಥೆಯ ಮೂಲಕ ಅನೇಕ ಕಲಾವಿದರನ್ನು ಬೆಳೆಸುತ್ತಿದ್ದಾರೆ , ಸಮಾನ್ ಟ್ರಸ್ಟ್ ಅನ್ನು ಸ್ಥಾಪಿಸಿ ಅನೇಕ ಸಾವಯವ ಉತ್ಪನ್ನಗಳನ್ನು ತಯಾರಿಸಿ , ಹಲವು ಮಹಿಳೆಯರಿಗೆ ಸ್ವಾಲಂಬನಾ ಬದುಕನ್ನು ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ .

ಕುಮಾರಿ ಶರ್ಲೋವಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ,ತನ್ನ 4ನೇ ವಯಸ್ಸಿನಲ್ಲಿ ನೃತ್ಯಾಭ್ಯಾಸವನ್ನು ಪ್ರಾರಂಭಿಸಿ, ಭರತನಾಟ್ಯ ರಂಗಪ್ರವೇಶವನ್ನು ಆರನೇ ವಯಸ್ಸಿನಲ್ಲಿ ಮಾಡಿ ಯಶಸ್ವಿಯಾಗಿದ್ದಾರೆ ,ಅನೇಕ ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಅನೇಕ ಬಹುಮಾನ ,ದಸರಾ ಜಿಮ್ನಾಸ್ಟಿಕ್ ನ ಲ್ಲಿ ಆಯ್ಕೆಯಾಗಿ ತನ್ನ ತಾಯಿಯ ಹಾದಿಯಲ್ಲಿ ಸಾಗುತ್ತಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group