Homeಲೇಖನಕನ್ನಡ ಸಾಹಿತ್ಯದ ವೈಚಾರಿಕ ಚಿಂತಕ - ಎಲ್. ಎನ್. ಮುಕುಂದರಾಜ

ಕನ್ನಡ ಸಾಹಿತ್ಯದ ವೈಚಾರಿಕ ಚಿಂತಕ – ಎಲ್. ಎನ್. ಮುಕುಂದರಾಜ

ನಾವು ನಮ್ಮವರು

ಬಹುಮುಖ ಪ್ರತಿಭೆಯ, ಅತ್ಯಂತ ಸೌಜನ್ಯಶೀಲರಾದ, ಗಂಭೀರ ವ್ಯಕ್ತಿತ್ವದ,ಯಾವುದೇ ಆಡಂಬರವಿಲ್ಲದ ಸರಳಜೀವಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್. ಎನ್.ಮುಕುಂದರಾಜ ಅವರನ್ನು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ -ಪುಣೆ ವೇದಿಕೆಯ ಮೂಲಕ ಪರಿಚಯಿಸುತ್ತಿರುವುದು ಅಭಿಮಾನ ಮತ್ತುಹೆಮ್ಮೆಯ ವಿಷಯ.

ಅವರು ಕನ್ನಡದ ಪ್ರಸಿದ್ಧ ಲೇಖಕರು. ಸಾಹಿತ್ಯ ಸಂಸ್ಕೃತಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಿಯಾಶೀಲರು.ಎರಡು ವರ್ಷದ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಅಧಿವೇಶನದಲ್ಲಿ ಒಂದೇ ವೇದಿಕೆ ಮೇಲೆ  ಎಲ್. ಎನ್. ಮುಕುಂದರಾಜ ಅವರ ಜೊತೆಗೆ ನಮ್ಮ ವೇದಿಕೆಯ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರ ಉಪನ್ಯಾಸವೂ ಸಹ ಇತ್ತು.

ಅಂದು ಡಾ. ಪಟ್ಟಣ ಅವರಿಂದ ಪರಿಚಿತರಾದ  ಎಲ್. ಎನ್. ಮುಕುಂದರಾಜ ಅವರ ಬಗೆಗೆ ಬರೆಯಲು “ನಾವು-ನಮ್ಮವರು” ಅಂಕಣದ ಮೂಲಕ ಅನುವು ಮಾಡಿಕೊಟ್ಟಡಾ. ಶಶಿಕಾಂತ ಪಟ್ಟಣ  ಅವರಿಗೆ ಅಭಾರಿಯಾಗಿದ್ದೇನೆ. ಈ ಅಂಕಣದ ಮೂಲಕ ನಮ್ಮವರನ್ನು ಎಲ್ಲರಿಗೂ ಪರಿಚಯಿಸುವುದು ಡಾ.ಶಶಿಕಾಂತ ಪಟ್ಟಣ ಅವರ ಬಹುದಿನಗಳ ಕನಸಾಗಿತ್ತು.

ತುಮಕೂರು ಜಿಲ್ಲೆ ನಾಗವಲ್ಲಿ ಬಳಿಯ ಲಕ್ಕೇನಹಳ್ಳಿ ಇವರ ಹುಟ್ಟೂರು. ಇವರ ತಂದೆ ನರಸೇಗೌಡರು, ತಾಯಿ
ಲಕ್ಷ್ಮಮ್ಮನವರು. ಹೆಬ್ಬೂರು, ಗುಬ್ಬಿ, ತುರುವೇಕೆರೆ ಹಾಗೂ ತುಮಕೂರುಗಳಲ್ಲಿ ವಿದ್ಯಾಭ್ಯಾಸ. 1984ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ತೌಲನಿಕ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ರಾಜ್ಯದ ಹಲವು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮುಕುಂದರಾಜ್ ಅವರು ಹಲವಾರು ಕವನ ಸಂಕಲನ ಗಳನ್ನು, ನಾಟಕಗಳನ್ನು, ಜೀವನ ಚರಿತ್ರೆಗಳನ್ನು, ಅನುವಾದಿತ ಕೃತಿಗಳನ್ನು, ಗದ್ಯ ಕೃತಿಗಳನ್ನು ರಚಿಸಿದ್ದಾರೆ. ಬಂಗಾಲಿ,ಮಲಯಾಳಂ, ಉರ್ದು, ತಮಿಳು,
ತೆಲುಗು,ನೇಪಾಳಿ ಮುಂತಾದ ಭಾಷೆಗಳಿಗೆ ಇವರ ಅನೇಕ ಕವಿತೆಗಳು ಅನುವಾದ ಗೊಂಡಿವೆ. ಇವರ ಕವಿತೆಗಳು, ಜೀವನ ಚರಿತ್ರೆ, ನಾಟಕಗಳು, ಆತ್ಮಕಥನ ಹೀಗೆ ಬಹಳಷ್ಟು ಬರಹಗಳು ವಿಶ್ವವಿದ್ಯಾಲಯಗಳ ಪ್ರಕಟಣೆ ,ಕರ್ನಾಟಕ ಸಾಹಿತ್ಯ ಅಕಾಡೆಮಿ,ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಪ್ರತಿಷ್ಠಿತ ಸಾಹಿತ್ಯ ಸಂಸ್ಥೆಗಳ ವಾರ್ಷಿಕ ಮತ್ತು ಶತಮಾನದ ಕೃತಿಗಳಲ್ಲಿ ಸೇರ್ಪಡೆಯಾಗಿವೆ. ನಾಟಕಗಳನ್ನು ನಿರ್ದೇಶನ ಮಾಡಿ ರಂಗಭೂಮಿಯಲ್ಲೂ ಸೈ ಎನಿಸಿಕೊಂಡ ಹಿರಿಮೆ ಇವರದು.

ಎಲ್. ಎನ್. ಮುಕುಂದರಾಜ ಅವರು ಹಲವಾರು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಇವರ ಅನೇಕ ಹೆಸರಾಂತ ಕಾರ್ಯಕ್ರಮಗಳು ಬಿತ್ತರಗೊಂಡಿವೆ. “ಕಾಡಹಾದಿಯ ಹೂವುಗಳು”ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಡಿನ ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ರಾಜ್ಯದ ಮತ್ತು ರಾಷ್ಟ್ರೀಯ ಹೆಸರಾಂತ ಕವಿಗೋಷ್ಠಿಗಳಲ್ಲಿ ಮುಕುಂದರಾಜ್ ಅವರು ಭಾಗವಹಿಸಿದ್ದಾರೆ. ಗಂಗಾವತಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರೂ ಸಹ ಆಗಿದ್ದರು. ಇವರು ವಿಧಾನಮಂಡಲದ ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ ಮತ್ತು ಅಕ್ಕ ಪ್ರಕಾಶನದ ಸುವರ್ಣ ಸಂಭ್ರಮ ಪುಸ್ತಕ ಶ್ರೇಣಿಗಳ ಸಂಪಾದಕರು.

ಎಲ್. ಎನ್.ಮುಕುಂದರಾಜ ಅವರು ಶಿಕ್ಷಕ ಸಂಘಟನೆಗಳ ಮುಖಂಡರಾಗಿ 10,000 ಗುತ್ತಿಗೆ ಶಿಕ್ಷಕರ ಖಾಯಮಾತಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರತ್ಯೇಕತೆ, ವೃಂದ ಮತ್ತು ನೇಮಕಾತಿ ನಿಯಮಗಳ ಜಾರಿ, ಖಾಸಗಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಮರು ನೇಮಕಾತಿ ಇತ್ಯಾದಿ ಯಶಸ್ವಿ ಹೋರಾಟಗಳನ್ನು ಸಂಘಟಿಸಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘ, ಪಿಯುಸಿ ಒಕ್ಕೂಟ, ಕರ್ನಾಟಕ ಸಾಹಿತ್ಯ ಪರಿಷತ್ತು ಮುಂತಾದ ಸಂಘಟನೆಗಳ ಸ್ಥಾಪಕರಾಗಿ ದುಡಿದಿದ್ದಾರೆ. ಕೇಂದ್ರ ಸರ್ಕಾರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಲ್ಲಿ ಕರ್ನಾಟಕ ಪ್ರತಿನಿಧಿಯಾಗಿ,ಕರ್ನಾಟಕ ಸರ್ಕಾರದ ಗ್ರಂಥಾಲಯ ಇಲಾಖೆಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿ,ಪಿಯುಸಿ ಕನ್ನಡ ಪಠ್ಯ ರಚನಾ ಸಮಿತಿಯ ಸಂಚಾಲಕರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಸಹ ಆಗಿದ್ದರು.

ಅವರು ಈಗ ಸದ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಅದರ ಅಡಿಯಲ್ಲಿ ಚಕೋರ ಸಾಹಿತ್ಯ ವಿಚಾರ ವೇದಿಕೆಯನ್ನು ಹಲವಾರು ಜಿಲ್ಲೆಗಳಲ್ಲಿ ಸ್ಥಾಪಿಸಿ ಸತತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ರಾಜ್ಯಾದ್ಯಂತ ಮನೆ ಮಾತಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಕನ್ನಡ ಭಾಷೆಯ ಸಂಸ್ಕೃತಿ ಮತ್ತು ಸಾಹಿತ್ಯ ಗ್ರಂಥಗಳ ಮಹತ್ವವನ್ನು ನಾಡಿನಾದ್ಯಂತ ಮನೆ ಮನೆಗೆ ಪರಿಚಯಿಸುವುದು ಅವಶ್ಯವಾಗಿದೆ ಎನ್ನುವುದು ಅವರ ಅಭಿಪ್ರಾಯ. ಸಾಹಿತ್ಯಾ ಸಕ್ತರನ್ನು ಒಟ್ಟುಗೂಡಿಸಿ ಸಾಹಿತ್ತಿಕ ಚಟುವಟಿಕೆಗಳನ್ನು ಹೆಚ್ಚಿಸುವ ದೃಷ್ಟಿಕೋನ ಅವರದು. ಜನರಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯವನ್ನು ಪ್ರಸಾರ ಮಾಡಬೇಕು ಮತ್ತು ಜಿಲ್ಲೆಯಾದ್ಯoತ ಸಣ್ಣ ಪುಟ್ಟ ಗ್ರಾಮಗಳಲ್ಲಿಯೂ ಚಕೋರ ವೇದಿಕೆಯ ಮುಖಾಂತರ ಸಾಹಿತ್ಯಕ ಕಾರ್ಯಕ್ರಮಗಳು ಜರುಗುವಂತಾಗಬೇಕು ಎನ್ನುವುದು ಅವರ ಹಂಬಲ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಸಕ್ತ ಸಾಲಿನಲ್ಲಿ ವಿಶೇಷ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರ ಅಂಗವಾಗಿ ಸಾಹಿತ್ಯ ಅಕಾಡೆಮಿ ನಡೆ -ಜೈಲಿನ ಕಡೆ ಎಂಬ ವಿನೂತನ ಕಾರ್ಯಕ್ರಮದ ಅಡಿಯಲ್ಲಿ ಸಾಹಿತ್ಯ ಕಮ್ಮಟ ಆಯೋಜಿಸುವ ಮೂಲಕ ಕೈದಿಗಳ ಮನ: ಪರಿವರ್ತನೆಗಾಗಿ ಅವರಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವುದೇ ಮುಕುಂದ ರಾಜ ಅವರ ಘನ ಉದ್ದೇಶವಾಗಿದೆ. ಎಲ್ಲ ಕಾರ್ಯಕ್ರಮಗಳನ್ನು ಯಾವುದೇ ಔಪಚಾರಿಕತೆಯಿಲ್ಲದೆ ತಮ್ಮ ಕವನ ಓದುವುದರ ಮೂಲಕ ಉದ್ಘಾಟನೆ ಮಾಡುವ ಅಪರೂಪದ ವ್ಯಕ್ತಿತ್ವವುಳ್ಳವರು.

ಎಲ್. ಎನ್. ಮುಕುಂದರಾಜ ಅವರಿಗೆ ಸಂದ ಪ್ರಶಸ್ತಿ- ಪುರಸ್ಕಾರಗಳು

1..ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
2..ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ 3.ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ
4.. ಎಸ್. ಚನ್ನಬಸವಯ್ಯ ಶ್ರೇಷ್ಠ ಉಪನ್ಯಾಸಕ ಪ್ರಶಸ್ತಿ
5..ಗೌತಮಬುದ್ಧ ಪ್ರಶಸ್ತಿ
6..ಕೆಂಪೇಗೌಡ ಪ್ರಶಸ್ತಿ
7..ಕುವೆಂಪು ಪ್ರಶಸ್ತಿ
8..ಶಿವರುದ್ರಪ್ಪ ಗೌರವ ಕಾವ್ಯ ಪ್ರಶಸ್ತಿ
9..ಕಿ. ರಂ. ನಾಗರಾಜ ಸಂಸ್ಕೃತಿ ಪ್ರಶಸ್ತಿ
10.. ಗೌರವಾನ್ವಿತ ಸಭಾಪತಿ ಹಾಗೂ ಸಭಾಧ್ಯಕ್ಷರ ಲೇಖಕ ಸನ್ಮಾನ
11.. ಘನತೆವೆತ್ತ ರಾಜ್ಯಪಾಲರಿಂದ ಲೇಖಕ ಸನ್ಮಾನ

ಎಲ್. ಎನ್. ಮುಕುಂದರಾಜ ಅವರು ಕಾರ್ಯ ನಿರ್ವಹಿಸಿದ ವಿವಿಧ ಸಂಘ -ಸಂಸ್ಥೆಗಳು

1.. ಪಿಯುಸಿ ಪಠ್ಯಪುಸ್ತಕ ಸಮಿತಿ – ಸಂಚಾಲಕರು
2.. ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು – ಕರ್ನಾಟಕದ ಪ್ರತಿನಿಧಿ
3.. ಕರ್ನಾಟಕ ಸರ್ಕಾರ ಗ್ರಂಥಾಲಯ ಇಲಾಖೆ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಸದಸ್ಯರು
4.. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ – ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು
5.. ಕಾವ್ಯ ಮಂಡಲ, ಸಂಸ್ಕೃತಿ ಅಧ್ಯಯನ ಕೇಂದ್ರ – ಸ್ಥಾಪಕ ಟ್ರಸ್ಟಿ ಹಾಗೂ ನಿರ್ದೇಶಕರು
6.. ಕರ್ನಾಟಕ ಸಂಘ, ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ವಿಶ್ವವಿದ್ಯಾಲಯ – ಸಹ ಕಾರ್ಯದರ್ಶಿ
7.. ಕರ್ನಾಟಕ ರಾಜ್ಯ ಪಿಯುಸಿ ಕಾಲೇಜು ಗುತ್ತಿಗೆ ಉಪನ್ಯಾಸಕರ ಸಂಘ – ಉಪಾಧ್ಯಕ್ಷರು
8.. ಕರ್ನಾಟಕ ರಾಜ್ಯ ಪಿಯುಸಿ ಒಕ್ಕೂಟ – ಸಹ ಕಾರ್ಯದರ್ಶಿ
9.. ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ – ಅಧ್ಯಕ್ಷರು
10.. ಪದವಿ ಪೂರ್ವ ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘ – ಸ್ಥಾಪಕ ನಿರ್ದೇಶಕರು
11.. ಪ್ರಥಮ ಪಿಯುಸಿ ಪಠ್ಯಪುಸ್ತಕ ಸಮಿತಿ – ಸದಸ್ಯರು
12.. ಕರ್ನಾಟಕ ಸಾಹಿತ್ಯ ಪರಿಷತ್ತು- ಸ್ಥಾಪಕ ಪ್ರಧಾನ ಕಾರ್ಯದರ್ಶಿ
13.. ನಾಡೋಜ ಡಾ. ಚಂದ್ರಶೇಖರ್ ಕಂಬಾರ ಪ್ರತಿಷ್ಠಾನ – ಕಾರ್ಯಕಾರಿ ಸಮಿತಿ ಸದಸ್ಯರು
14.. ಸಾಹಿತ್ಯ ಅಕಾಡೆಮಿ ನವದೆಹಲಿ – ಕನ್ನಡ ಸಲಹಾ ಸಮಿತಿ ಸದಸ್ಯರು
15.. ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ – ಸಂಚಾಲಕರು
16.. ವಿಶ್ವಮಾನವ ಕ್ರಾಂತಿಕಾರಿ ಮಹಾ ಕವಿ ಕುವೆಂಪು ಹೋರಾಟ ಸಮಿತಿ – ಸ್ಥಾಪಕರು
17.. ಸಮಾನ ಮನಸ್ಕರ ಒಕ್ಕೂಟ – ಸಂಚಾಲಕರು
18.. ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ – ಸಂಚಾಲಕರು

ಎಲ್. ಎನ್. ಮುಕುಂದರಾಜ ಅವರ ಪ್ರಕಟಿತ ಕೃತಿಗಳು

1.. ದೇಶಕೋಶ ದಾಸವಾಳ ಕವನ ಸಂಕಲನ
2.. ವೈಶಂಪಾಯನ ತೀರ ನಾಟಕ
3.. ನಮ್ಮ ದಾರಿಯ ನೆರಳು ಎಸ್.ಚನ್ನಬಸವಯ್ಯ ಜೀವನ ಚರಿತ್ರೆ
4.. ನಾಥರಿದ್ದೂ ಅನಾಥೆ ಅನುವಾದಿತ ಬಂಗಾಲಿ ನಾಟಕ
5.. ಜೀರೋ ಪಾಯಿಂಟ್ ಅನುವಾದಿತ ಬಂಗಾಲಿ ಕವಿತೆಗಳು
6.. ಟಿ.ಆರ್.ಶಾಮಣ್ಣ ಜೀವನ ಚರಿತ್ರೆ
7.. ಇಗೋ ಪಂಜರ ಅಗೋ ಮುಗಿಲು
8.. ನಿರಂಕುಶ ಕವನ ಸಂಕಲನ
9.. ದೇವರ ಆಟ ಮಕ್ಕಳ ನಾಟಕ
10..ಕೆ.ಎಚ್.ರಂಗನಾಥ್ ಜೀವನ ಚರಿತ್ರೆ
11.. ಮುಳ್ಳಿನ ಕಿರೀಟ ನಾಟಕ
12.. ಪುಟ ಬಂಗಾರ ಎಸ್ ಬಂಗಾರಪ್ಪ ಜೀವನ ಚರಿತ್ರೆ
13.. ಸರ್ವಜ್ಞನ ವಚನಗಳು ಸಂಪಾದನೆ
14.. ವಿಲೋಮ ಚರಿತೆ ಕವನ ಸಂಕಲನ
15.. ವಿಯತ್ತಳ ವಿಹಾರಿ ವಿಚಾರ ವಿಮರ್ಶೆ
16.. ಕೂಸು ಕಂಡ ಕನಸಿನಲ್ಲಿ ಜೈವಿಕ ಇಂಧನ ಗೀತೆಗಳ ಸಂಪಾದಿತ ಕೃತಿ
17.. ನಮ್ಮ ಸುಬ್ಬಣ್ಣ ಪರಿಚಯ ಪುಸ್ತಿಕೆ
18.. ತಾರುಣ್ಯ ಸಂಪಾದಿತ ಕವನ ಸಂಕಲನ
19.. ಸಾರೆ ಕೊಪ್ಪದ ಬಂಗಾರ ಎಸ್. ಬಂಗಾರಪ್ಪ ಅಭಿನಂದನಾ ಗ್ರಂಥ ( ಸಂಪಾದನೆ)
20.. ಕಾಲಾತೀತ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಅಭಿನಂದನಾ ಗ್ರಂಥ (ಸಂಪಾದನೆ)
21.. ಕೀ. ರಂ. ನಾಗರಾಜ ಜೀವನ ಚಿತ್ರಣ
22.. ಬಸವನೆ ಮಾಮರ ಹೊರನಾಡ ಕನ್ನಡಿಗನ ಹೋರಾಟ ಕಥನ (  ಮುಕುಂದರಾಜ ಮತ್ತು ಪದ್ಮ. ಟಿ. ಚಿನ್ಮಯಿ )
23.. ಕ್ರೈಂ 27 ಅನುವಾದಿತ ಮಲೆಯಾಳಿ ನಾಟಕ
24.. ಉಪ್ಪೇರಿದ ದರ್ಪಣ ಕವನ ಸಂಕಲನ
25.. ಸಂಗ್ರಾಮ ಭಾರತ ಮಕ್ಕಳ ನಾಟಕ
26.. ಶಿರೋಮಣಿ ಪ್ರೊ. ಅಂಬಾಮಣಿಮೂರ್ತಿ ಅಭಿನಂದನಾ ಗ್ರಂಥ
27.. ಸದನದಲ್ಲಿ ಭೂಪತಿ ಶಾಸಕರಾಗಿದ್ದ ಯು. ಭೂಪತಿಯವರ ವಿಧಾನಸಭಾ ಭಾಷಣಗಳ ಸಂಗ್ರಹ ( ಶ್ರೀ ಮುಕುಂದರಾಜ ಮತ್ತು ಪದ್ಮ. ಟಿ. ಚಿನ್ಮಯಿ )
28.. ದೇಶಕ್ಕಾಗಿ ಆರ್. ಎಸ್ ಎಸ್. ಬಿಟ್ಟೆ- ಅನುಭವಕಥನ
29.. ಮುನ್ನುಡಿಯ ಮಾಂದಳಿರು – ಹಲವು ಲೇಖಕರ ಕೃತಿಗಳಿಗೆ ಬರೆದ ಮುನ್ನುಡಿಗಳ ಸಂಕಲನ.
30..ನೀಲವೇಣಿ
31..ಕೆಂಪೇಗೌಡ ಕಥನಕ

ಎಲ್. ಎನ್. ಮುಕುಂದರಾಜ ಅವರು ನಿಜವಾದ ಅರ್ಥದಲ್ಲಿ ನಾಡು ಕಂಡ ಅಪರೂಪದ ಸಾಹಿತ್ಯದ ವೈಚಾರಿಕ ಚಿಂತಕರು ಮತ್ತು ಸಂವೇದನಾಶೀಲರು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group