Homeಸುದ್ದಿಗಳುರಾಷ್ಟ್ರದ ಏಳಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ: ಪ್ರೊ.ಎಸ್.ಆರ್.ಪಾಟೀಲ

ರಾಷ್ಟ್ರದ ಏಳಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ: ಪ್ರೊ.ಎಸ್.ಆರ್.ಪಾಟೀಲ

ಬೈಲಹೊಂಗಲ: ಬೈಲಹೊಂಗಲ ಸಮೀಪದ ಇಂಚಲ ಗ್ರಾಮದ ಈಗ ಮೂಡಲಗಿ ತಾಲ್ಲೂಕಿನ ಹುಣಶ್ಯಾಳ ಪಿ.ವೈ.ಗ್ರಾಮದ ಆರೂಢಜ್ಯೋತಿ ಚೈತನ್ಯ ಶಾಲೆಯ ಕೋಚಿಂಗ್ ವಿಭಾಗದ ಶಿಕ್ಷಕರಾಗಿರುವ ಶಿವಾನಂದ ಬಸನಾಯ್ಕ ಪಟ್ಟಿಹಾಳ ಅವರನ್ನು ಗ್ಯಾಲಕ್ಸಿ ಗಾರ್ಡನ್ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಕಿತ್ತೂರ ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಪ್ರೊ.ಎಸ್.ಆರ್.ಪಾಟೀಲ ಅವರು ಸನ್ಮಾನಿಸಿ ಮಾತನಾಡಿ, ಸಮಾಜದಲ್ಲಿ ಶಿಕ್ಷಕರು ಉತ್ತಮ ಪಾತ್ರ ನಿರ್ವಹಿಸಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಆ ದಿಶೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ನೀಡಲು ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಿರುವ ಶಿವಾನಂದ ಪಟ್ಟಿಹಾಳ ಅವರು ವಿದ್ಯಾರ್ಥಿಗಳು ಆಳ್ವಾಸ್, ನವೋದಯ, ಮೊರಾರ್ಜಿ, ಆದರ್ಶ ಹಾಗೂ ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾಗಿ ಉತ್ತಮ ಶಿಕ್ಷಣ ಪಡೆದು ತಮ್ಮ ಬದುಕಿನಲ್ಲಿ ಉನ್ನತ ಸ್ಥಾನ ಹೊಂದುವಂತೆ ತರಬೇತಿ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ ಮಹಾನ್ ದಾರ್ಶನಿಕ ಬಸವಣ್ಣ 500 ಪ್ರತಿ ಗ್ರಂಥಗಳನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀಗಳಿಗೆ, ಶಾಸಕರಿಗೆ, ಗಣ್ಯರಿಗೆ ಮತ್ತು ಗ್ರಾಹಕರಿಗೆ ಹೋಟೆಲ್ ಉದ್ಯಮಿ ಮಹಾಂತೇಶ ಪಾಟೀಲ ಅರ್ಪಿಸಿದರು.

ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಕೊಪ್ಪದ ಅವರು ಮಾತನಾಡಿ, ಶೈಕ್ಷಣಿಕ ಕಾರ್ಯದೊಂದಿಗೆ ಬಿಡುವಿನ ವೇಳೆಯಲ್ಲಿ ಬಸವಾದಿ ಶರಣರ ವಚನಗಳನ್ನು ಮನೆಮನೆಗೆ ಪ್ರಚುರಪಡಿಸುತ್ತಿದ್ದಾರೆ ಎಂದರು.

ಸಾಮಾಜಿಕ ಕಾರ್ಯಕರ್ತರಾದ ಬಸವರಾಜ ಬಡಿಗೇರ ಅವರು ಮಾತನಾಡಿ ಶಾಲಾಕಾರ್ಯಗಳಲ್ಲಿ ಅಷ್ಟೇ ಅಲ್ಲದೆ ಪ್ರಬಂಧ ರಚನೆ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕೀರ್ತಿ ತಂದಿದ್ದಾರೆ ಎಂದರು.

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಮಾತನಾಡಿ ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ ರಂಗದಲ್ಲಿ ಉತ್ತಮ ಮೌಲ್ಯ ಒಳಗೊಂಡು ಇಂದಿನ ಸಮಾಜಕ್ಕೆ ಶಿವಾನಂದ ಅವರ ಸೇವೆ ಅತ್ಯಮೂಲ್ಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಾನಂದ ಪಟ್ಟಿಹಾಳ ಅವರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಷ್ಟೇ ಅಲ್ಲದೆ ಪಾಲಕರ ಉತ್ತಮ ಸಹಕಾರ ಇದ್ದಾಗ ಮಾತ್ರ ಶೈಕ್ಷಣಿಕ ಅಭಿವೃದ್ಧಿಯಾಗಿ ಉತ್ತಮ ಸಾಧನೆ ಹೊರಹೊಮ್ಮಲು ಸಾಧ್ಯ ಎಂದರು.

ನಿವೃತ್ತ ಪ್ರೌಢಶಾಲಾ ಶಿಕ್ಷಕರಾದ ಸಿದ್ಧರಾಮ ತಲ್ಲೂರ(ನಾಗನೂರ) ಅವರು ಸ್ವಾಗತಿಸಿದರು. ಶಿಕ್ಷಕರಾದ ಚಂದ್ರಶೇಖರ ಧರೆಪ್ಪನವರ ಅವರು ವಂದಿಸಿದರು. ಜಾಗತಿಕ ಲಿಂಗಾಯತ ಮಹಾಸಭಾ ನಗರ ಘಟಕದ ಅಧ್ಯಕ್ಷರಾದ ಮಹೇಶ ಕೋಟಗಿ, ಕನ್ನಡ ಜಾನಪದ ಪರಿಷತ್ತಿನ ಕೋಶಾಧ್ಯಕ್ಷರಾದ ಮಹಾಬಳೇಶ್ವರ ವಾಲಿ, ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಶ್ರೀಶೈಲ ಶರಣಪ್ಪನವರ, ಶ್ರೀ ಮಹಾಲಕ್ಷ್ಮಿ ಪಟ್ಟಣ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಅನ್ವರಹುಸೇನ ಪಾಟೀಲ, ತೆರಿಗೆ ಸಲಹೆಗಾರರಾದ ಆನಂದ ವಾಲಿ, ಉದ್ಯಮಿ ರಮೇಶ ಸುತಾರ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group