ನಾವು-ನಮ್ಮವರು
ಶ್ರೀಮತಿ ಗೌರಮ್ಮ ನಾಶಿ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಸಂಸ್ಥೆಯ ಆಜೀವ ಸದಸ್ಯರು, ದತ್ತಿ ದಾಸೋಹಿಗಳು ಮತ್ತು ನಮ್ಮೆಲ್ಲರ ಮಾತೃಸ್ವರೂಪಿ ಸ್ಥಾನದಲ್ಲಿರುವವರು. ಒಬ್ಬ ನಿಷ್ಠುರ, ದಿಟ್ಟ, ನೇರನುಡಿಯ, ಸರಳ ವ್ಯಕ್ತಿತ್ವದ,ಅರಿವಿನ ಆಳವನ್ನು ತಿಳಿದಿರುವ, ಆಚರಣೆಯೇ ಮುಖ್ಯ ಎನ್ನುವ ನಿಲುವನ್ನು ತಳೆದಿರುವ ಶರಣೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಗೌರಮ್ಮ ಅವರ ಹುಟ್ಟಿದ ಊರು ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ .ಇವರು ಎಂ.ಎ. ಕನ್ನಡದಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ್ದಾರೆ. ಗೌರಮ್ಮ ಅವರು ರಾಧಾಕೇಸರಿ ವಿದ್ಯಾಸಂಸ್ಥೆಯ ಅಲೋಕ್ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಮೂರು ವರ್ಷ ಶಿಕ್ಷಕಿ ಯಾಗಿ ಸೇವೆ ಸಲ್ಲಿಸಿ, ನಂತರದಲ್ಲಿ ಪ್ರತಿಷ್ಠಿತ ಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಕಚೇರಿ ಅಧೀಕ್ಷಕರಾಗಿ ಸೇವೆಯನ್ನು ಮಾಡಿದ್ದಾರೆ. 1968-69 ರಲ್ಲಿ ಶಿವಾನುಭವ ಪಾಠಶಾಲೆಯನ್ನು ಪೂರೈಸಿದ್ದಾರೆ.
ಗೌರಮ್ಮ ಅವರ ತಂದೆ ತಾಯಿ ಹೆಚ್ಚು ಶಿಕ್ಷಿತರಲ್ಲದಿದ್ದರೂ ಸುಸಂಸ್ಕೃತರು.ತಂದೆಯ ಮೂಲಸ್ಥರು ಬಿದರಕೋಟೆ ಗೌಡರು. ನಿಜಾಮರ ಆಳ್ವಿಕೆಯ ಪರಿಣಾಮವಾಗಿ ಅಲ್ಲಿಂದ ಪಲಾಯನಗೊಂಡು ಬಾಗಲಕೋಟೆ ಜಿಲ್ಲೆ ಶಿರೂರಿ ನಲ್ಲಿ ಬಂದು ನೆಲೆಸಿದರು.
ನಂತರದಲ್ಲಿ ಬಾಗಲಕೋಟೆಯಲ್ಲಿ ವಾಸಿಸು ತ್ತಿದ್ದಾರೆ. ಅವರಿಗೆ ಹತ್ತು ಜನ ಒಡಹುಟ್ಟಿದವರು.ಎಲ್ಲ ಸಹೋದರರು ಅತ್ಯುನ್ನತ ಶಿಕ್ಷಣದೊಂದಿಗೆ ಅತ್ಯುತ್ತಮ ಹುದ್ದೆಯಲ್ಲಿ ಸೇವೆಸಲ್ಲಿಸಿ ನಿವೃತ್ತರಾದವರು.
ಗೌರಮ್ಮ ಅವರು ಐದನೇ ಯವರು. ಮನೆಗೆ ಮಧ್ಯದ ಮೇಟಿಯಾಗಿ ನಿಂತವರು.ಅವರ ಬಾಲ್ಯ,ಶಿಕ್ಷಣ, ವೃತ್ತಿ ಎಲ್ಲವನ್ನೂ ಬಾಗಿಲಕೋಟೆಯಲ್ಲಿ ಪೂರೈಸಿದ್ದಾರೆ. ಪ್ರಾಥಮಿಕ ಹಂತದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು ಮುಂದೆ ಸರಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ದೊಂದಿಗೆ ಪಾಸಾಗಿದ್ದು ಕ್ರೀಡೆಯಲ್ಲಿಯೂ ಕೂಡ ಅತ್ಯಂತ ಮುಂಚೂಣಿಯಲ್ಲಿದ್ದು ಅವ್ಯಾಹತವಾಗಿ ಮೂರು ವರ್ಷ ಚಾಂಪಿಯನ್ಶಿಪ್ ಪಡೆದಿದ್ದರು. 1968ರಲ್ಲಿ ಧಾರವಾಡ ಮುರುಘಾ ಮಠದವರು ನಡೆಸುತ್ತಿದ್ದ ಶಿವಾನುಭವ ಪಾಠಶಾಲೆ ಅವರ ಊರಿನಲ್ಲಿ ಪ್ರಾರಂಭವಾಗಿದ್ದರಿಂದ, ಆ ಪಾಠಶಾಲೆಗೆ ಸೇರಿಕೊಂಡಿದ್ದು, ಅವರ ಬದುಕಿನಲ್ಲಿ ಹೊಸ ತಿರುವು ಪಡೆದುಕೊಂಡಿತು. ಅಲ್ಲಿಂದ ಬಸವ ಧರ್ಮ ಚಿಂತನೆ,ಅಧ್ಯಯನ,ಪ್ರಚಾರ ಪ್ರಾರಂಭಗೊಂಡಿತು. ಶಿವಾನುಭವದಲ್ಲಿ ಮೂರು ಪರೀಕ್ಷೆಗಳಿದ್ದು, ಅವನ್ನೆಲ್ಲಾ ಪೂರೈಸಿ ಬಸವ ತತ್ವದಡಿ ಕಾಯಕ ದಾಸೋಹದಲ್ಲಿ ಗುಡಿ ಕೈಗಾರಿಕೆಯೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಆವಾಗಿನಿಂದಲೇ ಅನೇಕ ಲೇಖನಗಳನ್ನು, ಕವನಗಳನ್ನು, ವಚನಗಳನ್ನು ಬರೆಯಲಾರಂಭಿಸಿದರು. ಶಾಲೆ ಗಳಲ್ಲಿ ,ಮಠಗಳಲ್ಲಿ,ಚಿಕ್ಕ ಪುಟ್ಟ ಉಪನ್ಯಾಸಗಳನ್ನು ಕೊಡಲು ಪ್ರಾರಂಭಿಸಿದರು.
ಅವರನ್ನು ಪ್ರೋತ್ಸಾಹಿಸಿದವರು ಅವರ ಗುರುಗಳಾದ ಲಿಂ. ಪೂಜ್ಯ ಮೃತ್ಯುಂಜಯ ಗುರುಗಳು ಹಾಗೂ ಲಿಂ. ಮಂಜುಳಾ ತಾಯಿ ಅಂಗಡಿಯವರು ( ರಾವ್ ಬಹದ್ದೂರ್ ಷಣ್ಮುಖಪ್ಪ ಅಂಗಡಿಯವರ ಸೊಸೆ )
ಇದಲ್ಲದೆ ಅವರು ಹತ್ತಿರದ ಹಳ್ಳಿಗಳಿಗೆ ಹೋಗಿ ಶಿವಾನುಭವ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದರು. 1978ರ ಮದುವೆಯ ನಂತರ ಮನೆಯ ಮಕ್ಕಳ ಜವಾಬ್ದಾರಿಯೊಂದಿಗೆ ಅವರ ಈ ಪ್ರವೃತ್ತಿ ಕುಂಠಿತಗೊಂಡಿತು. ಇವರಿಗೆ ಇಬ್ಬರು ಮಕ್ಕಳು.ಮಗ ವಿಜಯ ಮಹಾಂತೇಶ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಇಪ್ಪತ್ತು ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದಾರೆ. ಮಗಳು ಡಾ. ವಿಜಯಲಕ್ಷ್ಮಿ ಬಾಗಲಕೋಟೆ ಪಿ.ಎಂ ನಾಡಗೌಡ ಡೆಂಟಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2020 ರಿಂದ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರಡಿಯಲ್ಲಿ ನಡೆಯುವ ಅಕ್ಕನ ಅರಿವು ಸಂಸ್ಥೆಯ ಅಜೀವ ಸದಸ್ಯತ್ವ ಪಡೆದು. ಪ್ರಸ್ತುತ ಇಲ್ಲಿ ಬಸವ ಚಿಂತನೆ ಪ್ರಸಾರ, ಲಿಂಗಾಯತ ಬಸವ ಧರ್ಮದ ಪ್ರಚಾರದ ಅನ್ವಯ ಲೇಖನ ಬರೆಯುವುದು, ಉಪನ್ಯಾಸಗಳು, ಅಭಿನಂದನಾ ಕಾರ್ಯಕ್ರಮಗಳು ಹೀಗೆ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸಾಧನೆಗಳು —
1..1967 ರಿಂದ ಶಿವಾನುಭವ ಪಾಠಶಾಲೆಯ ಮೂರು ಪರೀಕ್ಷೆಗಳಲ್ಲಿ ಎರಡು ರಜತ ಪದಕಗಳು
2..ವಚನ ರಚನೆಯ ಲೇಖನಗಳನ್ನು ಬರೆಯುವುದು ಬಸವ ತತ್ವ ಕುರಿತು ಉಪನ್ಯಾಸಗಳು
3..ಹಳ್ಳಿಗಳಿಗೆ ಹೋಗಿ ಶಿವಾನುಭವ ತರಬೇತಿ ಶಿಬಿರಗಳನ್ನು ನಡೆಸುವುದು
4– ಗುಡಿ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿದ್ದು
5– ನಿಸ್ಸಹಾಯಕ ಹೆಣ್ಣು ಮಕ್ಕಳಿಗೆ ಮಾರ್ಗದರ್ಶನದೊಂದಿಗೆ ಧೈರ್ಯವನ್ನು ತುಂಬಿ ಬೆಂಬಲವಾಗಿ ನಿಲ್ಲುವುದು.
6– ಯೋಗಾಭ್ಯಾಸ ಹಾಗೂ ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಯೋಗಾಸನ ಶಿಬಿರ ನಡೆಸುವುದು
7– ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಧನ ಸಹಾಯದೊಂದಿಗೆ
ಪ್ರೋತ್ಸಾಹಿಸುವುದು.
ಸೇವೆ ಸಲ್ಲಿಸಿದ ಸಂಸ್ಥೆಗಳು
1..ವೀರಶೈವ ಲಿಂಗಾಯತ ಮಹಾಸಭೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ. 2..ಅಕ್ಕನ ಬಳಗದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ. 3..ರಾಜರಾಜೇಶ್ವರಿ ಮಹಿಳಾ ಮಂಡಳದ ಕಾರ್ಯದರ್ಶಿಯಾಗಿ ಸೇವೆ.
4..ಪ್ರಸ್ತುತ ಅಕ್ಕನ ಅರಿವಿನ ಹಿರಿಯ ಸದಸ್ಯರಾಗಿ ಸಕ್ರಿಯವಾಗಿ ಸೇವೆ.
ಗೌರಮ್ಮ ಅವರು ಅನುಭವಸಿರಿ ಅಭಿನಂದನಾ ಗ್ರಂಥದ ಗೌರವ ಸಂಪಾದಕರಾಗಿ ಮತ್ತು ಅನೇಕ ಗ್ರಂಥಗಳ ಸಹ ಸಂಪಾದಕರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ.
ಇವರ ವಚನ ಸಾಹಿತ್ಯ ಹಾಗೂ ಶರಣರ ಕುರಿತ ಅನೇಕ ಬಿಡಿ ಲೇಖನಗಳು ಪ್ರಕಟವಾಗಿವೆ . ಶರಣರು ಹಾಗೂ ವಚನ ಸಾಹಿತ್ಯ ಕುರಿತು ಅನೇಕ ಉಪನ್ಯಾಸಗಳು ಆನ್ಲೈನ್ ಮೂಲಕ ನೀಡಿದ್ದಾರೆ. ಇವರು ಅನೇಕ ಗ್ರಂಥಗಳ ಎಡಿಟಿಂಗ್ ಕಾರ್ಯ ಸಹ ನಿರ್ವಹಿಸಿದ್ದಾರೆ. ಸಾವಿಲ್ಲದ ಶರಣರಾದ ವಚನ ಪಿತಾಮಹ ಫ. ಗು. ಹಳಕಟ್ಟಿಯವರು, ಡಾ. ಎಂ ಎಂ ಕಲಬುರ್ಗಿಯವರು, ಕರ್ನಾಟಕ ಗಾಂಧಿ ಹರಡೇಕರ್ ಮಂಜಪ್ಪನವರು ಶ್ರೇಷ್ಠ ಸಂಶೋಧಕರಾದ ಶಿ. ಶಿ. ಬಸವನಾಳರು, ಹಾಗೂ ಪೂಜ್ಯ ಬಂತನಾಳ ಸಂಗನ ಬಸವ ಸ್ವಾಮಿಗಳವರ ಹೆಸರಿನಲ್ಲಿ ಬಸವ ತಿಳುವಳಿಕೆ ಹಾಗೂ ಸಂಶೋಧನಾ ಕೇಂದ್ರ ಪುಣೆ ಇವರಿಗೆ ದತ್ತಿ ದಾಸೋಹದ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ಕೃತಿಗಳು
ಗೌರಮ್ಮ ಅವರ”ಹೊಂಗಿರಣ “ಕವನ ಸಂಕಲನ ಪ್ರಕಟಗೊಂಡಿದ್ದು ವಚನ ಸಂಕಲನ ಪ್ರಕಟಣೆಗೊಳ್ಳುವ ಹಂತದಲ್ಲಿದೆ.
ಪ್ರಶಸ್ತಿ —
ಗೌರಮ್ಮ ಅವರು 2023ರ ಸಾಲಿನ ಡಾಕ್ಟರ್ ಎಂ. ಎಂ.ಕಲಬುರ್ಗಿ ಫೌಂಡೇಶನ್ ದವರು ಕೊಡಮಾಡಲ್ಪಟ್ಟ ಡಾ. ಎಮ್.ಎಮ್ ಕಲಬುರ್ಗಿ ವಚನ ಸಿರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಬಂದ ತಕ್ಷಣವೇ ಆಗೀoದಾಗಲೇ ವೇದಿಕೆ ಮೇಲೆ ತಮಗೆ ಬಂದ ಪ್ರಶಸ್ತಿಯನ್ನು ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆ ಸಂಸ್ಥೆಗೆ ದತ್ತಿ ದಾಸೋಹ ರೂಪದಲ್ಲಿ ಕೊಟ್ಟು ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ. ಇವರಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆ, ವೀರ ವಿರಾಗಿಣಿ ಅಕ್ಕಮಹಾದೇವಿ, ದಿಟ್ಟ ಗಣಾಚಾರಿ ಆಯ್ದಕ್ಕಿ ಲಕ್ಕಮ್ಮ ಅವರ ಮೌಲ್ಯಗಳನ್ನು ನಾವು ಕಾಣುತ್ತೇವೆ. ಇದರಿಂದಾ ಗಿಯೇ ಇವರಿಗೆ ಅರಿವು ಆಚಾರದ ಘನತೆಯ ವ್ಯಕ್ತಿತ್ವ ಎನ್ನುವ ಹೆಸರು ಹೆಚ್ಚು ಸೂಕ್ತ ವಾಗುತ್ತದೆ.
ಗೌರಮ್ಮ ಅವರು ಪ್ರಸ್ತುತ ನಿರಂತರವಾಗಿ ಅಕ್ಕನ ಅರಿವು ವೇದಿಕೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೆಂದ್ರ – ಪುಣೆ