Homeಸುದ್ದಿಗಳುಕೊಟ್ಟಿದ್ದು ಮಾತ್ರ ತಿರುಗಿ ಬರುತ್ತದೆ: ನಾರಾಯಣ ಶಾಸ್ತ್ರಿ

ಕೊಟ್ಟಿದ್ದು ಮಾತ್ರ ತಿರುಗಿ ಬರುತ್ತದೆ: ನಾರಾಯಣ ಶಾಸ್ತ್ರಿ

ಜಮಖಂಡಿ: ನಾವು ಇಹಲೋಕ ತ್ಯಜಿಸಿ ಹೊರಟು ನಿಂತಾಗ ನಾವು ಗಳಿಸಿದ್ದು ನಮ್ಮೊಂದಿಗೆ ಬರುವುದಿಲ್ಲ. ಬದಲಾಗಿ ಕೊಟ್ಟಿದ್ದು ಮಾತ್ರ ನಮಗೆ ತಿರುಗಿ ಬರುತ್ತದೆ. ಕ್ಷಣಿಕವಾದ ದ್ರವ್ಯವನ್ನು ಕೂಡಿಡಬಾರದು ಎಂಬ ವಿಶೇಷವಾದ ಸಂದೇಶವನ್ನು ಶರಣೆ ಆಯ್ದಕ್ಕಿ ಲಕ್ಕಮ್ಮ ಸಮಾಜಕ್ಕೆ ನೀಡಿದ್ದಾರೆ ಎಂದು ಕುಂಬಾರಹಳ್ಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು.

ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಓಣಿಗೊಂದು ದಿನ ವಚನ ಶ್ರಾವಣ ಅಂಗವಾಗಿ ಇಲ್ಲಿನ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಂಜೆ ನಡೆದ ಹದಿನೆಂಟನೆ ದಿನದ ಕಾರ್ಯಕ್ರಮ ಹಾಗೂ ಮಲ್ಲಿಕಾರ್ಜುನ ದೇವಸ್ಥಾನದ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಶರಣೆ ಆಯ್ದಕ್ಕಿ ಲಕ್ಕಮ್ಮನವರ ‘ಈಶಕ್ಕಿಯಾಸೆ ನಿಮಗೇಕೆ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಆಸೆಗಳು ಅರಸನಿಗೆ ಮಾತ್ರ. ಆದರೆ, ಶಿವಭಕ್ತರಿಗೆ ಶಿವನೇ ಸರ್ವಸ್ವ. ಅತಿಯಾಸೆ ಮಾಡಿದರೆ ಶಿವನು ಒಲಿಯಲು ಸಾಧ್ಯವಿಲ್ಲ. ಆದ್ದರಿಂದ ಕೊಳ್ಳಬಾಕ ಸಂಸ್ಕೃತಿಯನ್ನು ಆಯ್ದಕ್ಕಿ ಲಕ್ಕಮ್ಮ ತಿರಸ್ಕರಿಸಿದ್ದರು. ನಿಜವಾಗಿ ಸಂಪಾದಿಸಬೇಕಾಗಿರುವುದು ಭಕ್ತಿ ಎಂದರು.

ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸ್ಮಶಾನ ವೈರಾಗ್ಯ, ಪ್ರಸೂತಿ ವೈರಾಗ್ಯ, ಪುರಾಣ ವೈರಾಗ್ಯ ಬಂದಾಗ ಜೀವನ ನಶ್ವರ ಎನಿಸುತ್ತದೆ. ಹಾಗಾಗಿ ಆಸೆ ಇರಬೇಕು. ಆದರೆ, ದುರಾಸೆ ಇರಬಾರದು. ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದು ಆಶೀರ್ವಚನ ನೀಡಿದರು.

ಓಲೆಮಠದ ಆನಂದ ದೇವರು ಶ್ರೀಗಳು ನೇತೃತ್ವ ವಹಿಸಿ ಮಾತನಾಡಿ, ಉಡಿ ತುಂಬಿಸಿಕೊಳ್ಳುವ ಮುತ್ತೈದೆಯರು ಮಳೆ ಸರಿಯಾಗಿ ಬಂದು ಬೆಳೆಗಳು ಚೆನ್ನಾಗಿ ಬರಬೇಕು. ರೈತರು ಬೆಳೆದ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗಬೇಕು. ದೇಶದ ಗಡಿ ಕಾಯುವ ಸೈನಿಕರ ರಟ್ಟೆಗೆ ಶಕ್ತಿಕೊಡಬೇಕು ಎಂದು ಭಗವಂತನಲ್ಲಿ ಪ್ರಾರ್ಥಿಸಬೇಕು ಎಂದು ಆಶೀರ್ವಚನ ನೀಡಿದರು.

ಗೊರವನಕೊಳ್ಳದ ಓಲೆಮಠದ ಸಿದ್ದಪ್ಪ ಅಜ್ಜ ಸಾನ್ನಿಧ್ಯ ವಹಿಸಿದ್ದರು. ಸರಸ್ವತಿ ಸಬರದ(ಹೆಗಡಿ), ಗೋಪಾಲ ತುಳಜಾಪೂರ ಸಂಗೀತ ಸೇವೆ ಸಲ್ಲಿಸಿದರು. ಬಸವರಾಜ ಬಳಗಾರ, ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಶ್ರೀಶೈಲ ಪಾಟೀಲ ನಿರೂಪಿಸಿದರು. ಚಿದಾನಂದ ಸಿದ್ದಾಪೂರಮಠ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group