ಪ್ರಯೋಗಶೀಲ ಮನಸ್ಸಿನ ಭಾವಜೀವಿ ಕವಿಯಿತ್ರಿ, ಗ್ರಹಿಣಿ ತನ್ನ ಅನುಭಗಳನ್ನು ಸುಂದರವಾಗಿ ಕಾವ್ಯ ಭಾವಕ್ಕೆ ಅಕ್ಷರ ಶಬ್ದಗಳು ಲೇಪನ ಮಾಡಬಲ್ಲರೆಂಬುದಕ್ಕೆ ಲೇಖಕಿಯ ಪ್ರತಿಯೊಂದು ಕವನಗಳು ಸಾಕ್ಷಿಯಂತಿವೆ.
‘ಆವಿಯಾಯಿತು ಭಾವ’ ಎಂಬ ಅರ್ಥಗರ್ಭಿತವಾಗಿರುವ, ಅತ್ಯುತ್ತಮ ಸರಳ ಸುಂದರ ಒಳಾರ್ಥವುಳ್ಳ ಔಚಿತ್ಯಪೂರ್ಣ ಈ ಶೀರ್ಷಿಕೆ ತುಂಬಾ ಸ್ವಾರಸ್ಯಕರವಾಗಿದೆ.ಉದಾ-
ಆವಿಯಾಯಿತು ಭಾವ
ಅತಿಯಾದ ಆಶಯ ಭಾವ
ಹಗುರಾದ ಆವಿಯಾಗಿ
ದುರಾಸೆಯ ಭಾವ ಬಲು ದೂರವಾಗಲಿ
ಸತ್ಯದ ಭಾವ ಜೊತೆಯಾಗಿ ಸಾಗಲಿ
ಧರ್ಮದ ಭಾವ ದಾರಿಯುದ್ದಕ್ಕೂ ಬರಲಿ
ನಿರಾಸೆಯ ಭಾವ ನೀರಲ್ಲಿ ಕರಗಲಿ
ಕೆಲವು ಭಾವಗಳಿಗೆ ಗುಡುಗು ಸಿಡಿಲು ಬಡಿದು
ಹರಿದ ಗಂಗೆಗೆ ಬಿಸಿಲು ತಾಗಿ ಆವಿಯಾಗಿ ಮಧುರ ಕಂಪನ ನೀಡಿದ ಭಾವ ಕಮರದಿರಲಿ ಹೃದಯದ ಮೌನ ನೂರು ಭಾವ ತೋರುತ್ತೆ ಸಂತಸದ ಭಾವ ಮೂಡಲಿ
ಹೃದಯ ನಲಿಯುವ ನಲುಮೆಯ ಸಿರಿ
ಅನುಭವಿಸಲಿ ಎನ್ನುವುದೆ ಆಶಯ
ಕವಿಯಿತ್ರಿಯ ಸೂಕ್ಷ್ಮ ಮನಸ್ಸು , ಭಾವ ಪ್ರಧಾನವಾದ ಕಾವ್ಯ ವಸ್ತುವನ್ನು ಕೈಯಲ್ಲಿ ಹಿಡಿದಾಗ ಅದು ವಿಮರ್ಶಕರ ಕೈಯಿಂದ ಆವಿಯಾಗಿ ಹೋಗದಿರಲಿ ಎಂಬ ಕವಯಿತ್ರಿಯ ಕಳಕಳಿಯುಳ್ಳ ಇಂತಹ ಹಲವಾರು ಕವನಗಳು ಯಥೋಚಿತವಾಗಿರುತ್ತವೆ. ತಮ್ಮ ಬದುಕಿನ ಪಯಣದಲ್ಲಿ ತಮ್ಮನ್ನು ತಾವೇ ಹುರಿದುಂಬಿಸಿಕೊಳ್ಳುವ ಮನೋಸಂವಾದ ‘ಹುರಿದುಂಬಿಸು’ಈ ಕವನದಲ್ಲಿ ಹ್ರದಯಂಗಮವಾಗಿ ಮೂಡಿಬಂದಿದೆ.
ಹತ್ತಿರವಿರಲು ಆತ್ಮವಿಶ್ವಾಸ
ಎದ್ದು ನಿಲ್ಲದಿರುವದುಂಟೆ
ಉತ್ಸಾಹದ ಚಿಲುಮೆ ಚಿಮ್ಮದಿರುವದುಂಟೆ
ಓಡಲು ಹವಣಿಸುತ್ತಿರುವ ಮನ ಓಡದಿರುವದುಂಟೆ ಪದಗಳ ಗಂಟು ಕಟ್ಟಿದರು
ಬಿಚ್ಚಿ ಆಡುತ್ತಿವೆ ಕೈಗೆ ಸಿಗದೆ
ಭಾವನೆಗಳು ಕುಣಿದಾಡುತ್ತಿವೆ
ಬಣ್ಣತಾಳಲು ಹುರಿದುಂಬಿಸುವಿಕೆಯೆ
ನಿನ್ನ ಜೊತೆಯಾಗಿ ಬರುವೆ
ನೀ ತೋರಿದ ದಾರಿಲಿ ನಾ
ಸಾಗುವೆ ನಡೆ ಮುಂದೆ
ನಾ ನಿನ್ನ ಹಿಂದೆ ಸಾಗಲಿ ಪಯಣ.
ಆತ್ಮಸಾಕ್ಷಿ ಅಗ್ನಿಸಾಕ್ಷಿ ಮನುಷ್ಯನ ಬದ್ಧತೆಗೆ ಪ್ರಮುಖ ಕಾರಣ. ಅಗ್ನಿಸಾಕ್ಷಿಯಾಗಿ ನಿಲ್ಲುವ ಜೀವದ ಹೊರತುಪಡಿಸಿ ಮಾನವ ಸಂಬಂಧಗಳನ್ನು ಬೆಸೆಯುವ ಸುಂದರ ಕಾವ್ಯ ‘ಅಗ್ನಿಸಾಕ್ಷಿ’
ಬಸಮ್ಮನವರು ಒಬ್ಬ ಶ್ರೇಷ್ಠ ಕವಯಿತ್ರಿಯಾಗಿ ತಮ್ಮ ಕವನ ಸಂಕಲನ ಪ್ರಕಟಿಸಲು ಮಾಡಿದ ಹರಸಾಹಸದ ಒಟ್ಟು ಚಿತ್ರಣವನ್ನು ತಮ್ಮ ಬದುಕಿನ ಬವಣೆಯ ಯಶೋಗಾಥೆಯ ಅನುಭವಗಳನ್ನು ಕಾವ್ಯಾತ್ಮಕವಾಗಿ ಅಭಿವ್ಯಕ್ತಪಡಿಸಿರುವದು ಸಹೃದಯರಿಗೆ ಸ್ಪಷ್ಟವಾಗಿ ಗೋಚರವಾಗುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ.
ಸಾಧನೆಯ ಬೆನ್ನುಹತ್ತಿ ಹೊರಟ ಕನಸುಗಾರ ಅದರಲ್ಲೂ ಹಗಲುಗನಸು ಕಾಣುವವರ ಬಗ್ಗೆ ಕವಯಿತ್ರಿಯ ತಿಳಿಹಾಸ್ಯದ ವಿಶಿಷ್ಟ ಭಾವ ‘ಹಗಲುಗನಸು’ ಕವನದಲ್ಲಿ ವಿಡಂಬನಾತ್ಮಕವಾಗಿ ಚೇತೋಹಾರಿಯಾಗಿ ಚಿತ್ರಣಗೊಂಡಿರುತ್ತದೆ.
ಹಾಗೆ ಗೋಡೆಗೊರಗಿದಾಗ ಕಣ್ಣುಮುಚ್ಚಿತ್ತು
ನಾನೊ ಈಜು ಸ್ಪರ್ಧೆಯಲ್ಲಿ ಈಜುತ್ತಿದ್ದೆ
ಓಡುವ ಸ್ಪರ್ಧೆಯಲ್ಲಿ ಓಡುತ್ತಿದ್ದೆ
ಜಿಗಿಯುವ ಸ್ಪರ್ಧೆಯಲ್ಲಿ ಜಿಗಿಯುತ್ತಿದ್ದೆ
ಹಾಡಿನ ಸ್ಪರ್ಧೆಯಲ್ಲಿ ಹಾಡುತ್ತಿದ್ದೆ
ಕೋಗಿಲೆ ಕಂಠ ಅಂತಾ ನಿರ್ಣಾಯಕರು ಹೊಗಳಿ
ಎದ್ದುನಿಂತು ಚಪ್ಪಾಳೆ ತಟ್ಟಿ ನಿನಗೆ
ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿದೆ
ಎಂದು ಕೊರಳಿಗೆ ಬಂಗಾರದ ಪದಕ ಹಾಕಿದರು
ಧನ್ಯವಾದಗಳು ಅಂತ ಬಗ್ಗಿ ನಮಸ್ಕರಿಸಲು ಬಾಗಿದೆ ಉರುಳಿ ಕೆಳಗೆ ಬಿದ್ದೆ ಎಚ್ಚರಗೊಂಡಾಗ ಅರಿವಾಯಿತು ಇದು “ಹಗಲುಗನಸು’ ಕೈಲಾಗದವರು ಕಾಣುವುದು ಬರಿ ಕನಸಲ್ಲವೆ.!?
‘ಮಾಲೆಗಾರಂ ಕಟ್ಟಿಯುಮೇನೊ ಪೊಸ ಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಪುದೆ’ಎಂಬ ಕಾವ್ಯ ಮೀಮಾಂಸಕರ ಉಕ್ತಿಯಂತೆ ಸರಳ ಸಹಜ ದೃಷ್ಟಾಂತಗಳಿಂದೊಡಗೂಡಿರುವ ಬಸಮ್ಮನವರ ಭಾಷಾ ಶೈಲಿ ಅಯಸ್ಕಾಂತದಂತೆ ಆಕರ್ಷಕವಾಗಿದ್ದು ಓದುಗರನ್ನು ಚಿಂತನಮಂಥನದಲ್ಲಿ ತಲ್ಲೀನವಾಗಿಸುವಂತಿದೆ. ವಯಸ್ಸಿನ ನಿರ್ಬಂಧವಿಲ್ಲದಂತಹ ಉದಯೋನ್ಮುಖ ಕವಿವರ್ಯರು ಓದಲೇಬೇಕಾದ ಕವನ ಸಂಕಲನವಿದು ಎಂಬುದರಲ್ಲಿ ಎರಡು ಮಾತಿಲ್ಲ.
—**–

ಪ್ರೊ.ಶಕುಂತಲಾ ಚನ್ನಪ್ಪ ಸಿಂಧೂರ.
ಸಾಹಿತ್ಯ ಚಿಂತಕರು, ವಿಮರ್ಶಕರು.
ಗದಗ.
೯೯೮೦೭೧೧೪೩೫.