Homeಸುದ್ದಿಗಳುರಾಷ್ಟ್ರದ ಸಮಗ್ರ ಅಭ್ಯುದಯಕ್ಕೆ ಯುವ ಜನತೆ ಶ್ರಮಿಸ ಬೇಕು : ಡಾ. ಭೇರ್ಯ ರಾಮಕುಮಾರ್

ರಾಷ್ಟ್ರದ ಸಮಗ್ರ ಅಭ್ಯುದಯಕ್ಕೆ ಯುವ ಜನತೆ ಶ್ರಮಿಸ ಬೇಕು : ಡಾ. ಭೇರ್ಯ ರಾಮಕುಮಾರ್

spot_img

ಮೈಸೂರು –   ಭಾರತವು ಸ್ವಾತಂತ್ರೋತ್ಸವದ ಎಂಬತ್ತನೇ ವರ್ಷಚಾರಣೆಯತ್ತ ಸಾಗಿರುವ ಸಂದರ್ಭದಲ್ಲಿ ಯುವ ಜನತೆ ರಾಷ್ಟ್ರವನ್ನು ಸಮಗ್ರ ಅಭ್ಯುದಯದತ್ತ ಸಾಗಿಸಬೇಕಾದ ಮಹತ್ವದ ಹೊಣೆ ಹೊರಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಡಾ. ಭೇರ್ಯ ರಾಮಕುಮಾರ್ ಕರೆ ನೀಡಿದರು.

ಅವರು ಮೈಸೂರು ಜಿಲ್ಲೆ ಹಂಪಾಪುರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ 79 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಭಾರತವನ್ನು ಬಂಧಮುಕ್ತ ಗೊಳಿಸಲು ನೂರಾರು ವರ್ಷಗಳ ಹೋರಾಟ ನಡೆಯಿತು. ಇದೀಗ ರಾಷ್ಟ್ರವನ್ನು ಕಾಡುತ್ತಿರುವ ಭ್ರಷ್ಟಾಚಾರ, ಜಾತಿವಾದ, ಗುಂಪುಗಾರಿಕೆ, ಭಯೋತ್ಪಾದನೆ ಗಳಿಂದ ಮುಕ್ತಿಗೊಳಿಸಲು ಯುವಜನತೆ ಜಾಗೃತಗೊಳ್ಳಬೇಕಾಗಿದೆ ಎಂದು ಭೇರ್ಯ ರಾಮ ಕುಮಾರ್ ನುಡಿದರು.

ಯುವ ಜನರು ತಮ್ಮ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಗಮನಹರಿಸಬೇಕು. ಪರಿಸರ ವಿನಾಶದ ಫಲವಾಗಿ ಆನೆ, ಚಿರತೆ, ಹುಲಿ ಮೊದಲಾದ ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಧಾಳಿ ಇಡುತ್ತಿವೆ. ಇದರಿಂದಾಗಿ ಹಲವೆಡೆ ಸಾವು ನೋವು ಉಂಟಾಗುತ್ತಿದೆ. ಮಾನವ ಬೆಳೆದ ಬೆಳೆ ನಾಶ ಆಗುತ್ತಿದೆ. ಯುವ ಜನತೆ ಪರಿಸರ ನಾಶ ತಡೆಗಟ್ಟ ಬೇಕು. ಪ್ರತಿಯೊಬ್ಬರೂ ತಮ್ಮ ಜನ್ಮ ದಿನದಂದು, ತಂದೆ ತಾಯಿಯ ಜನ್ಮ ದಿನದಂದು, ವಿವಾಹವಾರ್ಷಿಕೋತ್ಸವ ದಿನದಂದು, ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿ ನೆಡಬೇಕು. ಆ ಮೂಲಕ ಪರಿಸರ ಸಮೃದ್ಧ ಭಾರತ ನಿರ್ಮಾಣ ಮಾಡಬೇಕೆಂದು ಅವರು ನುಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಇರುವ ಪುರಾತನ ದೇಗುಲಗಳು, ಮಸೀದಿಗಳು, ಜೈನ ಬಸದಿಗಳು, ಪುರಾತನ ಶಾಸನಗಳು ಮೊದಲಾದ ಸಾಂಸ್ಕೃತಿಕ ಕೇಂದ್ರಗಳನ್ನು ಯುವ ಜನತೆ ರಕ್ಷಿಸಬೇಕು. ರಾಷ್ಟ್ರ ಪ್ರೇಮಿಗಳ ಸಾಹಸಮಯ ಕತೆಗಳನ್ನು ಮುಂದಿನ ತಲೆಮಾರಿನವರಿಗೆ ತಿಳಿಸಬೇಕು ಎಂದವರು ಮಕ್ಕಳಿಗೆ ಕಿವಿಮಾತು ನುಡಿದರು.

ಇದೆ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ದೇಹದಾನಿ ಭೇರ್ಯ ರಾಮಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಳೆಯ ವಿದ್ಯಾರ್ಥಿಗಳ ಸಂಘ ದಿಂದ ಅಭಿನಂದಿಸಲಾಯಿತು. ಸಭೆಯಲ್ಲಿ ಸಮಾಜಸೇವಕಿ ಶ್ರೀಮತಿ ಸ್ವರೂಪ ರಾಣಿ, ದಾನಿಗಳಾದ ಯುಸಫ್, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಕ್ಷಿತ್ ಸ್ವಾತಂತ್ರೋತ್ಸವ ಕುರಿತು ಮಾತನಾಡಿದರು.

ಶಾಲೆಯ ಮುಖ್ಯ ಶಿಕ್ಷಕರಾದ ಪ್ರದೀಪ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಕಿರಣ್, ಮಾಜಿ ತಾಲೂಕು ಪಂಚಾಯ್ತಿ ಸದಸ್ಯರಾದ ದೇವರಾಜ್, ಗ್ರಾಮದ ಪ್ರಮುಖರು, ಶಾಲಾ ಶಿಕ್ಷಕ ವರ್ಗದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
.

RELATED ARTICLES

Most Popular

error: Content is protected !!
Join WhatsApp Group