ಮೂಡಲಗಿ – ಹಿಂದೂ ಮುಸ್ಲಿಮರು ಒಂದೇ ಎಂಬುದನ್ನು ಸಾರಿ ಹೇಳಲು ಗಣೇಶ ಹಾಗೂ ಈದ್ ಮಿಲಾದ ಹಬ್ಬಗಳು ಎರಡೂ ಕೂಡಿ ಬಂದಿವೆ. ಇದರೊಂದಿಗೆ ಸಾರ್ವಜನಿಕರ ಸಹಕಾರ ಮುಖ್ಯ. ಎಲ್ಲರೂ ಶಾಂತಿಯಿಂದ ಹಬ್ಬಗಳನ್ನು ಆಚರಿಸೋಣ ಎಂದು ಸಿಪಿಐ ಶ್ರೀಶೈಲ ಬ್ಯಾಕೂಡ ಹೇಳಿದರು.
ಮುಂಬರಲಿರುವ ಗಣೇಶ ಹಾಗೂ ಈದ್ ಮಿಲಾದ ಹಬ್ಬಗಳ ಸಲುವಾಗಿ ಶಾಂತಿಯುತವಾಗಿ ಹಬ್ಬಗಳ ಆಚರಣೆ ಮಾಡಲು ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕರೆಯಲಾದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಹಬ್ಬಗಳ ಆಚರಣೆಗೆ ಕೆಲವು ನಿಯಮ ನಿಬಂಧನೆಗಳು ಇರುತ್ತವೆ ಅವುಗಳನ್ನು ಯಾರೂ ಉಲ್ಲಂಘಿಸಬಾರದು. ಶಾಂತಿ ಕದಡುವ ಯಾವುದೇ ಪ್ರಯತ್ನ ಮಾಡಲೇಬಾರದು. ಹಬ್ಬಗಳು ಎನ್ನುವುದು ಒಳ್ಳೆಯದಕ್ಕೆ ನೆನಪಿನಲ್ಲಿ ಇರುವಂತಾಗಬೇಕು ಕೆಟ್ಟದಕ್ಕೆ ನೆನಪಿನಲ್ಲಿ ಉಳಿಯುವಂತಾಗಬಾರದು ಎಂದರು.
ರಾತ್ರಿ ಗಣೇಶ ಮಂಟಪದಲ್ಲಿ ಇಸ್ಪೀಟ್ ಆಡುವುದಾಗಲಿ ಇನ್ನುಳಿದ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಬಾರದು. ಗಣೇಶ ವಿಸರ್ಜನೆ ಕೂಡ ಶಾಂತಿಯುತವಾಗಿರಬೇಕು. ಎತ್ತರವಾದ ಗಣೇಶ ಮೂರ್ತಿಗಳಿಂದ ವಿದ್ಯುತ್ ಅವಘಡಗಳು ಸಂಭವಿಸುವ ಸಂಭವ ಇರುತ್ತದೆ. ವಿಸರ್ಜನೆ ಮಾಡುವ ಸ್ಥಳದಲ್ಲಿ ಕೂಡ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹಬ್ಬಗಳ ಸಮಯದಲ್ಲಿ ಮದ್ಯ ಸೇವನೆ ಮಾಡಬೇಡಿ ಎಂದರು.
ಪಿಎಸ್ಐ ರಾಜು ಪೂಜಾರಿ ಮಾತನಾಡಿ, ರಾತ್ರಿ ೧೦.೩೦ ರೊಳಗೆ ಗಣೇಶ ವಿಸರ್ಜನೆ ಮಾಡಿ. ಮಧ್ಯರಾತ್ರಿ ವಿಸರ್ಜನೆ ಮಾಡಿದರೆ ಮೆರವಣಿಗೆಯನ್ನು ವೀಕ್ಷಿಸಿ ಖುಷಿಪಡುವವರು ಯಾರೂ ಇರುವುದಿಲ್ಲ. ಅಲ್ಲದೆ ಬೇಗ ವಿಸರ್ಜನೆ ಮಾಡಿದರೆ ಅನೇಕ ಅಪಘಾತಗಳನ್ನು ನಿಯಂತ್ರಣ ಮಾಡಬಹುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಮಾದರ ಅವರು ಅನವಶ್ಯಕವಾಗಿ ಪಟಾಕಿ ಹಾರಿಸಬೇಡಿ ಎಂದು ತಿಳಿ ಹೇಳಿದರು.
ಹೆಸ್ಕಾಂ ಎಇಇ ನಾಗನ್ನವರ ಮಾತನಾಡಿ, ಗಣೇಶನ ಪೆಂಡಾಲ್ ನಲ್ಲಿ ವಿದ್ಯುತ್ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು.
ವೇದಿಕೆಯ ಮೇಲೆ ಅನ್ವರ ನದಾಫ, ಹಸನ ಡಾಂಗೆ, ಆದಮ ತಾಂಬೋಳಿ, ಹಣಮಂತ ಗುಡ್ಲಮನಿ, ಶಿವಬಸು ಸುಣಧೋಳಿ ಉಪಸ್ಥಿತರಿದ್ದರು.