Homeಲೇಖನಬಯಲಾಟ ಕಲಾವಿದ ಶಿವಗೊಂಡ ಚಡಚಣ

ಬಯಲಾಟ ಕಲಾವಿದ ಶಿವಗೊಂಡ ಚಡಚಣ

ಬಯಲಾಟ ಕಲೆಯನ್ನು ಉಳಿಸಿಕೊಂಡು ಬರುವ ಲ್ಲಿ ವಿಜಯಪುರ ಜಿಲ್ಲೆಯ ಚಡಚಣ ಗ್ರಾಮದ ಲಕ್ಷ್ಮೀದೇವಿ ದೊಡ್ಡಾಟ ಸಂಘ ಕ್ರಿಯಾಶೀಲವಾಗಿದೆ. ಶ್ರೀ ಲಕ್ಷ್ಮಿ ಅಕ್ಕನ ಬಳಗದೊಂದಿಗೆ ದೊಡ್ಡಾಟ ಕಲಾವಿದರು ಮೂರು ಜನ ಹಾಸನಕ್ಕೆ ಬಂದಿದ್ದರು. ಇಲ್ಲಿಯ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಇವರ ದೊಡ್ಡಾಟ ಕಾರ‍್ಯಕ್ರಮ ಆಯೋಜಿಸಲಾಗಿತ್ತು.

ಈ ತಂಡದೊಂದಿಗೆ ಬಂದಿದ್ದ ಮಹಿಳಾ ತಂಡ ಲಕ್ಷ್ಮಿ ಅಕ್ಕನ ಬಳಗದ ಸದಸ್ಯರು ಜಾನಪದ ಗೀತೆಗಳು ಪ್ರಸ್ತುತಪಡಿಸಿದರು. ನಾನು ಅಂದಿನ ಕಾರ್ಯಕ್ರಮದ ನಿರೂಪಕ. ಉತರ ಕರ್ನಾಟಕದಿಂದ ಆಗಮಿಸಿದ್ದ ತಂಡದ ಪುರುಷ ಸದಸ್ಯರೊಬ್ಬರನ್ನು ಮಾತನಾಡಿಸಿದೆ. ಅವರು ತಮ್ಮ ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಬಯಲಾಟ ಕಲೆಯ ಬಗ್ಗೆ ಹೇಳಿದರು. ಹದಿನೈದು ನಿಮಿಷ ನಿಮ್ಮ ಬಯಲಾಟ ಕಲೆಯನ್ನು ಪ್ರದರ್ಶಿಸಲು ಸಾಧ್ಯವೇ ಎಂದು ಕೇಳಿದೆ.ಆದರೆ ಅವರು ಯಾವುದೇ ಡ್ರೆಸ್ ಸಲಕರಣೆಗಳಿಲ್ಲದೆ ಅಭಿನಯಿಸುವದು ಅಷ್ಟೊಂದು ಸರಿಯಾಗುವುದಿಲ್ಲ ಎಂದು ಹೇಳಿದರು.

ಆದರೂ ಅಷ್ಟು ದೂರದಿಂದ ಬಂದಿದ್ದೀರಾ. ನಿಮ್ಮ ಭಾಗದ ಕಲೆಯ ಪರಿಚಯ ಈ ಭಾಗದ ನಮ್ಮ ಕಲಾಭಿಮಾನಿಗಳಿಗೂ ಕೊಂಚ ಪರಿಚಯವಾಗಲಿ. ನಾನು ಈ ಕಾರ್ಯಕ್ರಮದ ಆಯೋಜಕರಿಗೆ ಬೇಕಾದರೆ ಹೇಳುವೆ ಎಂದೆನು. ಸರಿ ನನ್ನ ಆಪೇಕ್ಷೆ ಕುತೂಹಲಕ್ಕೆ ಕಲಾವಿದರು ಯಾವುದೇ ಪರಿಕರಗಳು ಇಲ್ಲದೆ ಬಣ್ಣ ಕೂಡ ಹಚ್ಚದೆ ತಮ್ಮ ಸಂಭಾಷಣೆಗಳನ್ನು ವಿಜಯಪುರದ ಭಾಷೆಯಲ್ಲಿ ಬಹಳ ಗಟ್ಟಿ ಧ್ವನಿಯಲ್ಲಿ ಹೇಳಿದರು. ಅವರ ಭಾಷೆ ಅಭಿನಯ ಶೈಲಿ ಈ ಭಾಗದ ಜನರಿಗೆ ವಿಶೇಷವಾಗಿತ್ತು.

ನಂತರ ಊಟದ ಸಮಯದಲ್ಲಿ ತಂಡದ ಮುಖ್ಯಸ್ಥ ಶಿವಣ್ಣಗೌಡರನ್ನು ಮಾತನಾಡಿಸಿದೆ. ತದನಂತರದ ದಿನಗಳಲ್ಲಿ ಅವರು ನನಗೆ ಚೆನ್ನಾಗಿ ಪರಿಚಿತರಾದರು. ಅವರ ಕಲಾಸಾಧನೆ ಕುರಿತ್ತಾಗಿ ಮಾಹಿತಿ ಪಡೆದು ಲೇಖನವಾಗಿಸಿದೆ. ಅವರಿಗೆ ಈ ವರ್ಷ ಬಯಲಾಟ ಅಕಾಡೆಮಿ ಪ್ರಶಸ್ತಿಯೂ ಲಭಿಸಿತು. ಇದಕ್ಕಾಗಿ ಅವರನ್ನು ಅಭಿನಂದಿನಿಸಿ ನಿಮ್ಮ ತಂಡದ ಕಲಾವಿದರನ್ನು ಪರಿಚಯಿಸೋಣ ಅವರ ಕುರಿತಾಗಿ ಮಾಹಿತಿ ಕಳಿಸಿ ಎಂದೆ. ಆಗ ಅವರು ಅನಂತರಾಜು ಅವರೇ, ನಾವು ಹಾಸನಕ್ಕೆ ಬಂದಿದ್ದಾಗೆ ನಮ್ಮ ತಂಡದಲ್ಲಿ ಕೃಷ್ಣನ ಪಾತ್ರ ಅಭಿನಯಿಸಿದ ಶಿವಗೊಂಡನು ಬಹಳ ಪರಿಣಿತ ಕಲಾವಿದ. ಈತನು ತನ್ನ ೧೫ನೇ ರ‍್ಷದ ವಯಸ್ಸಿನಲ್ಲಿ ಗಣಪತಿ ಪಾತ್ರ ಮಾಡುವ ಮುಖಾಂತರ ಬೈಲಾಟ ರಂಗಕ್ಕೆ ಸೇರಿಕೊಂಡಿದ್ದಾನೆ. ಈತನದು ಅಪಾರ ಅನುಭವ. ಈತನು ಸಾಕಷ್ಟು ಬಯಲಾಟಗಳಲ್ಲಿ ತನ್ನ ಅಭಿನಯಯನ್ನು ನೀಡಿ ಜನ ಮೆಚ್ಚುಗೆ ಪಡೆದಿದ್ದಾನೆ ಎಂದರು.

ಹಾಗೆಯೇ ಮುಂದುವರೆದು ಚಿತ್ರಸೇನ ಗಂಧರ‍್ವ ಬೈಲಾಟದಲ್ಲಿ ಭಾನುಮತಿಯ ಪಾತ್ರವನ್ನು ಹಾಗೂ ಬಾಣಸೂರನ ಕಥೆಯಲ್ಲಿ ವಿಷಯ ಪಾತ್ರವನ್ನು, ರಾಮಾಯಣದ ಕಥೆಯಾದ ಇಂದ್ರಜಿತ
ಕಾಳಗದಲ್ಲಿ ಮಂಡೋದರಿಯ ಪಾತ್ರವನ್ನು ಧರ‍್ಮ ವಿಜಯದಲ್ಲಿ ಶ್ರೀ ಕೃಷ್ಣನ ಪಾತ್ರವನ್ನು ಅಭಿನಯಿಸಿ ಅದ್ಭುತ ಕಲಾವಿದ ನೆನೆಸಿಕೊಂಡಿದ್ದಾನೆ. ಇದೀಗ ೬೩ರ ಹೊಸ್ತಿಲಲ್ಲಿರುವ ಈತನು ಬಯಲಾಟ ಕಲೆಯ ಹಾಡುಗಾರಿಕೆ ಕುಣಿತ ಬಣ್ಣಗಾರಿಕೆ ವೇಷಭೂಷಣ ವಾದ್ಯಗಳ ಹೊಂದಾಣಿಕೆ ಈ ರೀತಿ ಎಲ್ಲಾ ಮಜಲುಗಳನ್ನು  ಬಲ್ಲವನಾಗಿದ್ದಾನೆ. ಬಡತನದಲ್ಲಿ ಬೆಳೆದು ಬಂದ ಈತನು ಸಾಮಾಜಿಕ ಕರ‍್ಯಗಳಲ್ಲಿಯೂ ಕೂಡ ಭಾಗಿಯಾಗುತ್ತಾ ಬಂದಿರುವನು.

ಇವರ ತಂದೆ ಮಹದೇವ ತಾಯಿ ಮಲ್ಲಮ್ಮ. ಇವರ ತಂದೇನು ಕೂಡ ಪರಿಣಿತಿ ಕಲಾವಿದರೇ. ಈತನದು ನಮ್ಮ ಊರೇ ಚಡಚಣ. ಓದಿರುವುದು ಐದನೇ ತರಗತಿಯವರೆಗೆ ಅಷ್ಟೇ. ಈತನು ಕೂಡ ಆ ದಿನ ನಮ್ಮ ಜೊತೆ ಹಾಸನಕ್ಕೆ ಬಂದಿದ್ದ. ನೀವೇ ನೋಡಿದಿರಲ್ಲಾ ನೋಡಲು ಆತ ಅಷ್ಟೇನು ಎತ್ತರವಲ್ಲದಿದ್ದರೂ ಮಧ್ಯಮ ಕಾಯದ ಗುಂಡು ಮುಖದ ಶಿವಗೊಂಡನ ಪಾತ್ರ ಅಭಿನಯವನ್ನು ನೋಡಿದರೆ ಅದೆಷ್ಟು ಆನಂದ ಎಂದು ಗೆಳೆಯನನ್ನು ಹೊಗಳಿದರು.

ಇಂತಹ ರಂಗಭೂಮಿ ಕಲಾವಿದನು ಎಲೆಯ ಮರೆಯ ಕಾಯಿಯಾಗಿ ಉಳಿದಿದ್ದು ಆತನ ದುರ‍್ದೈವವೇ ಸರಿ ಎಂದು ಪೇಚಾಡಿದರು. ಆದರೂ ಇವರ ಅಭಿನಯವನ್ನು ಗುರುತಿಸಿ ಸಾಕಷ್ಟು ಸಂಘ-ಸಂಸ್ಥೆಗಳು ಪ್ರಶಂಸ ಪತ್ರಗಳನ್ನು ಅಭಿನಂದನಾ ಪತ್ರಗಳನ್ನು ನೀಡಿರುತ್ತಾರೆ. ಇವರು ಎಲ್ಲಾ ದಾಖಲಾತಿಗಳನ್ನು ಬೈಲಾಟ ಅಕಾಡೆಮಿಗೆ ತೋರಿಸಿ ತಮಗೆ ಮಾಸಾಶನ ಸಿಗಬೇಕೆಂದು  ಅರ‍್ಜಿ ಹಾಕಿ ಅಕಾಡೆಮಿಗೆ ಹೋಗಿ ಸಂದರ‍್ಶನ ನೀಡಿದ್ದಾರೆ. ಬಹುಶಃ ಕೆಲವೇ ದಿನಗಳಲ್ಲಿ ಇವರಿಗೆ ಮಾಸಾಶನ ಸಿಗಬಹುದು ಎಂದು ಭಾವಿಸಿದ್ದೇನೆ. ಇವರಿಗೆ ಸರಕಾರವು ಗುರುತಿಸಬೇಕಾಗಿದೆ ಎಂದರು. ನಾನು ಶಿವಣ್ಣ ಬಿರಾದಾರ ಅವರಿಗೆ ಈ ನಿಮ್ಮಬಯಲಾಟ ಕಲೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ದಿಶೆಯಲ್ಲಿ ಪ್ರಯತ್ನ ಮುಂದುವರೆಸಿ ಎಂದೆ.

ಶಿವಣ್ಣ ಬಿರಾದಾರ ಅವರು ಭೀಮಾತೀರದ ಬಯಲಾಟ ದರ್ಶನ ಎಂಬ ಕೃತಿಯನ್ನು ಕೂಡ ಪ್ರಕಟಿಸಿರುವರು. ಈ ಕೃತಿಯಲ್ಲಿ ಈ ಕಲೆಯ ಬಗ್ಗೆ ತಮ್ಮ ಅನುಭವ ಸಂಶೋಧನೆ ಎಲ್ಲಾ ಕ್ರೂಢೀಕರಿಸಿದ್ದಾರೆ. ಇವರಿಗೆ ನಿಜವಾಗಿಯೂ ಈ ಬಯಲಾಟ ಕಲೆಯ ಬಗ್ಗೆ ಆಸಕ್ತಿ ಹೆಚ್ಚಿದೆ. ಅನಂತರಾಜು ಅವರೇ, ನಮ್ಮ ಯುವ ಜನಾಂಗವು ಈ ಕಲೆಯತ್ತ ಅನಾದರ ತೋರುತ್ತಿದೆ. ಯಾವ ಹುಡುಗರು ಕಲಿಯಲು ಆಸಕ್ತಿ ತೋರುವುದಿಲ್ಲ. ಯುವಕರು ಕಲಿಯಲು ಮುಂದೆ ಬಂದರೆ ನಾನು ಕಲಿಸಲು ತಯಾರಿದ್ದೇನೆ. ಆದರೆ ಯಾರೂ ಮುಂದೆ ಬರುತ್ತಿಲ್ಲ ಎಂದು ವಿಷಾದಿಸಿದರು. ಇರಲಿ ಸದ್ಯ ನನ್ನೊಂದಿಗೆ ನಮ್ಮ ತಂಡದ ಕಲಾವಿದ ಶಿವಗೊಂಡನು ಅಭಿನಯಿಸಿದ ಸತ್ಯ ಹರಿಶ್ಚಂದ್ರ ಹಾಗೂ ದಕ್ಷಬ್ರಹ್ಮ ಉತ್ತರ ರ‍್ನಾಟಕದಲ್ಲಿ ಹೆಸರಾಂತ ಕಥೆಗಳು. ಇಂತಹ ಕಥೆಗಳಲ್ಲಿ ಅಭಿನಯಿಸಿದ ಈ ಕಲಾವಿದನ ಬಗ್ಗೆ ನಾವು ಎಷ್ಟು ಹೇಳಿದರೂ ಕಡಿಮೆ ಎಂದು ಕಡಿಮೆ ಮಾತಿನಲ್ಲೇ ತಮ್ಮ ಮಿತ್ರ ಕಲಾವಿದರನ್ನು ಪರಿಚಯಿಸಿದರು.

ಗೊರೂರು ಅನಂತರಾಜು, ಹಾಸನ.
ಮೊ:೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group