ಸಜ್ಜನರ ಸಂಗ ಹಾಗೂ ದುರ್ಜನರ ಸಂಗ ಎಂಬ ಎರಡು ಸಂಗಗಳಿವೆ. ಮನುಷ್ಯ ಸಂಗ ಜೀವಿ. ಸಂಗವಿಲ್ಲದೆ ಮಾತು, ವ್ಯವಹಾರ, ಬೆಳವಣಿಗೆ ಅಸಾಧ್ಯ. ಅನುಭಾವಿಗಳ, ಸಜ್ಜನರ ಸಂಗದಿಂದ ರಾಗ, ದ್ವೇಷ, ತಮದಂತಹ ದುರ್ಗುಣಗಳು ನಾಶವಾಗುತ್ತವೆ ಎಂದು ನಿವೃತ್ತ ಗ್ರೇಡ್-೧ ಪ್ರಾಚಾರ್ಯ ಡಾ.ಎಸ್.ಎಸ್. ಸುವರ್ಣಖಂಡಿ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಓಣಿಗೊಂದು ದಿನ ವಚನ ಶ್ರಾವಣ ಅಂಗವಾಗಿ ಬಸವ ಭವನದಲ್ಲಿ ಶುಕ್ರವಾರ ಸಂಜೆ ನಡೆದ ಇಪ್ಪತ್ತೆರಡನೆ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ‘ಸಂಗವೆರಡು ಉಂಟು: ಒಂದ ಹಿಡಿ, ಒಂದ ಬಿಡು’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ದುರ್ಜನರ, ಉಂಡ ಮನೆಗೆ ಎರಡು ಬಗೆಯುವವರ, ಉಪಕಾರ ಮಾಡಿದವರಿಗೆ ಅಪಕಾರ ಎಸಗುವವರ, ಚಾಡಿ ಹೇಳುವವರ, ನಂಬಿಕೆ ದ್ರೋಹ ಮಾಡುವವರ, ಜಗಳವನ್ನು ಸಂಭ್ರಮಿಸುವವರ, ಕುಹಕ ಮಾತುಗಳನ್ನಾಡುವವರ ಸಂಗ ಮಾಡಬಾರದು ಎಂದರು.
ಓಲೆಮಠದ ಆನಂದ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ನೆಮ್ಮದಿಯಿಂದ ಸುಖಕರ ಮತ್ತು ಆನಂದಮಯ ಬದುಕು ನಡೆಸಬೇಕೆಂದರೆ ಸಜ್ಜನರ, ಉತ್ತಮರ ಸಂಗ ಮಾಡಬೇಕು. ಅನುಭಾವಿಗಳ ಸಂಗ ಮಾಡಿ ಪರಮಸುಖಿ ಆಗಿರಬೇಕು ಎಂದು ಆಶೀರ್ವಚನ ನೀಡಿದರು.
ಮೊಸರಾಗಿ ಬೆಣ್ಣೆ ತುಪ್ಪವಾಗಲು ಹಾಲು ಮೊಸರಿನ ಸಂಗ ಮಾಡಬೇಕು. ಆದರೆ, ನಿಂಬೆ ಹಣ್ಣಿನಂತೆ ಹುಳಿ ಹಿಂಡುವವರ ಸಂಗ ಮಾಡಬಾರದು. ಭ್ರಮರ ಕೀಟವನ್ನು ತನ್ನಂತೆ ಭ್ರಮರವನ್ನಾಗಿ ಮಾಡುವಂತೆ ಮಹಾತ್ಮರ ಸಂಗದಿಂದ ಮಹಾತ್ಮರಾಗಬೇಕು. ತಾಪತ್ರಯಗಳು ಬೆನ್ನುಹತ್ತಿ ಬರಬಾರದೆಂದರೆ ಸಜ್ಜನರ ಸಂಗ ಮಾಡಬೇಕು ಎಂದರು.
ಬಸವ ಕೇಂದ್ರದ ಉಪಾಧ್ಯಕ್ಷ ಮಹಾಂತೇಶ ಅಂಗಡಿ, ಲಯನ್ಸ್ ಸಂಸ್ಥೆಯ ಉಪಾಧ್ಯಕ್ಷ ನಿತಿನ ಹುಲ್ಯಾಳಕರ, ರೋಟರಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಕೋವಳ್ಳಿ ಇದ್ದರು. ಸರಸ್ವತಿ ಸಬರದ(ಹೆಗಡಿ), ಗೋಪಾಲ ತುಳಜಾಪೂರ ಸಂಗೀತ ಸೇವೆ ಸಲ್ಲಿಸಿದರು. ಕಾಡು ಮಾಳಿ ಸ್ವಾಗತಿಸಿದರು. ಅಣ್ಣಾಸಾಹೇಬ ಜಗದೇವ ನಿರೂಪಿಸಿದರು.