ಹಾಲು ಉತ್ಪಾದಕ ಸಹಕಾರಿ ಸಂಘಗಳ ರೈತರಿಗೆ 6 ಕೋಟಿ ರೂಪಾಯಿ ವೆಚ್ಚದ ರಬ್ಬರ್ ಮ್ಯಾಟ್, ವಿದ್ಯುತ್ ಚಾಲಿತ 2 ಹೆಚ್.ಪಿ. ಮೇವು ಕತ್ತರಿಸುವ ಯಂತ್ರಗಳು, ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರಗಳ ವಿತರಣೆ
ಬೆಳಗಾವಿ- ಜಿಲ್ಲಾ ಹಾಲು ಒಕ್ಕೂಟಕ್ಕೆ ಕಳೆದ ವರ್ಷ ಸುಮಾರು 13 ಕೋಟಿ ರೂಪಾಯಿಗಳ ಲಾಭಾಂಶವಾಗಿದ್ದು, ಈ ಲಾಭಾಂಶದಲ್ಲಿ ಸುಮಾರು 10 ಕೋಟಿ ರೂಪಾಯಿಗಳಷ್ಟು ಹಣವನ್ನು ರೈತರಿಗಾಗಿಯೇ ವಿವಿಧ ಯೋಜನೆಗಳಿಗಾಗಿ ಮೀಸಲಿಟ್ಟಿರುವುದಾಗಿ ಬೆಮುಲ್ ಅಧ್ಯಕ್ಷರಾಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ರವಿವಾರದಂದು ನಗರದ ಜಿಲ್ಲಾ ಹಾಲು ಒಕ್ಕೂಟದ
ಸಭಾಗೃಹದಲ್ಲಿ ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ರೈತರಿಗೆ ವಿವಿಧ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಅವರು, ಬೆಳಗಾವಿ ಹಾಲು ಒಕ್ಕೂಟಕ್ಕೆ ಬಂದ ಲಾಭದಲ್ಲಿ 10 ಕೋಟಿ ರೂಪಾಯಿಗಳನ್ನು ರೈತರಿಗೆ ಖರ್ಚು ಮಾಡುತ್ತಿರುವುದಾಗಿ ಅವರು ತಿಳಿಸಿದರು.
ಲಾಭದ ಹಂಚಿಕೆಯಲ್ಲಿ ರೈತರಿಗೆ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈಗಾಗಲೇ ಶೇ. 60 ರಷ್ಟು ರಿಯಾಯ್ತಿ ದರದಲ್ಲಿ ವಿವಿಧ ಸಾಮಗ್ರಿಗಳನ್ನು ವಿತರಿಸಲು ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲ 15 ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ. 2.46 ಕೋಟಿ ರೂಪಾಯಿ ವೆಚ್ಚದಲ್ಲಿ 3100 ಫಲಾನುಭವಿಗಳಿಗೆ 10 ಸಾವಿರ ರಬ್ಬರ್ ಮ್ಯಾಟ್ ಗಳನ್ನು ಖರೀದಿಯನ್ನು ಮಾಡಲಾಗಿದೆ. 86.10 ಲಕ್ಷ ರೂಪಾಯಿ ವೆಚ್ಚದಲ್ಲಿ 350 ಫಲಾನುಭವಿಗಳಿಗೆ ವಿದ್ಯುತ್ ಚಾಲಿತ 2 ಹೆಚ್.ಪಿ. ಮೇವು ಕತ್ತರಿಸುವ ಯಂತ್ರಗಳು, 13.95 ಲಕ್ಷ ರೂಪಾಯಿ ವೆಚ್ಚದಲ್ಲಿ 50 ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರಗಳನ್ನು ಖರೀದಿಸಲಾಗಿದೆ.
ಸ್ವಂತ ಕಟ್ಟಡವನ್ನು ಹೊಂದಿರುವ 40 ಸಂಘಗಳಿಗೆ ತಲಾ 5 ಲಕ್ಷ ರೂಪಾಯಿಗಳಂತೆ ಒಟ್ಟು 2 ಕೋಟಿ ರೂಪಾಯಿ ಸಹಾಯಧನವನ್ನು ನೀಡಲಾಗುತ್ತಿದೆ. 15 ಹೊಸ ಬಿಎಂಸಿ ಘಟಕಗಳನ್ನು ಖರೀದಿಸಲು 1.72 ಕೋಟಿ ರೂಪಾಯಿ (ಶೇ.100 ರಷ್ಟು ರಿಯಾಯ್ತಿ) ಸೇರಿದಂತೆ ಸುಮಾರು 6 ಕೋಟಿ ರೂಪಾಯಿಗಳ ವೆಚ್ಚದ ಸಾಮಗ್ರಿಗಳನ್ನು ಈಗ ಹಂಚಿಕೆಯನ್ನು ಮಾಡಲಾಗುತ್ತಿದ್ದು, ಒಟ್ಟಾರೆ ಹತ್ತು ಕೋಟಿ ರೂಪಾಯಿಗಳನ್ನು ಹೈನುಗಾರ ರೈತರ ಅನುಕೂಲಕ್ಕಾಗಿ ಸದ್ಭಳಕೆ ಮಾಡುತ್ತಿರುವುದಾಗಿ ಅವರು ಹೇಳಿದರು.
ಪ್ರಸ್ತುತ ಆಕಳು ಹಾಲಿಗೆ 38 ರೂಪಾಯಿ ಮತ್ತು ಎಮ್ಮೆ ಹಾಲಿಗೆ 52 ರೂಪಾಯಿಗಳಿದ್ದು, ಗ್ರಾಹಕರಿಂದ ಹೆಚ್ಚಿನ ಪ್ರಮಾಣದಲ್ಲಿ ಎಮ್ಮೆ ಹಾಲಿಗೆ ಬೇಡಿಕೆ ಬರುತ್ತಿದೆ. ಹಾಲು ಪೂರೈಕೆ ಮಾಡುತ್ತಿರುವ ರೈತರಿಗೆ 10 ದಿನಗಳೊಳಗೆ ಬಿಲ್ಲನ್ನು ಸಂದಾಯ ಮಾಡುತ್ತಿದ್ದೇವೆ. ರೈತರು ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿ ಅವರನ್ನು ಬಲಶಾಲಿಗಳನ್ನಾಗಿ ಮಾಡಲು ನಮ್ಮ ಒಕ್ಕೂಟದಿಂದ ಅನೇಕ ಸೌಲಭ್ಯಗಳನ್ನು ದೊರಕಿಸಿಕೊಡಲು ಸಿದ್ಧರಿದ್ದೇವೆ. ರೈತರೇ ಈ ದೇಶದ ಆಸ್ತಿಯಾಗಿದ್ದು, ಅವರನ್ನು ಆರ್ಥಿಕವಾಗಿ ಬಲಾಢ್ಯರನ್ನಾಗಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿಯವರು 2.26 ಕೋಟಿ ರೂಪಾಯಿ ಮೊತ್ತದ 3.5 ಮೆ.ಟನ್ ಸಾಮರ್ಥ್ಯದ ಮಲ್ಟಿ ಪ್ಯೂಯಲ್ ಬಾಯ್ಲರ್ ನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಡಾ. ಬಸವರಾಜ ಪರಣ್ಣವರ, ಬಾಬುರಾವ ವಾಘಮೋಡೆ, ವೀರುಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಮಹಾದೇವ ಬಿಳಿಕುರಿ, ಸಂಜಯ ಶಿಂತ್ರೆ, ರಮೇಶ ಅಣ್ಣಿಗೇರಿ, ಸದೆಪ್ಪ ವಾರಿ, ಶಂಕರ ಇಟ್ನಾಳ, ಸವಿತಾ ಖಾನಪ್ಪಗೋಳ, ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎನ್. ಶ್ರೀಕಾಂತ ಅವರು ಉಪಸ್ಥಿತರಿದ್ದರು.