ಪ್ರಯಾಣಿಕರ ಜೀವದ ಜೊತೆ ಆಟವಾಡುತ್ತಿರುವ ಚಾಲಕ
ಮೂಡಲಗಿ : ಕರ್ನಾಟಕರಸ್ತೆ ಸಾರಿಗೆ ಸಂಸ್ಥೆಯ ಗೋಕಾಕ ಘಟಕದ ಚಾಲಕರೊಬ್ಬರು ಮೊಬೈಲ್ ಬಳಕೆ ಮಾಡುತ್ತ ಚಾಲನೆ ಮಾಡಿದ್ದು, ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ. ದಿನೇ ದಿನೇ ಅಪಘಾತ ಹೆಚ್ಚುತ್ತಿರುವುದಕ್ಕೆ ಮೊಬೈಲ್ ಬಳಕೆ ಒಂದು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಪ್ರಯಾಣಿಕರು.
ಗೋಕಾಕ ಘಟಕದ ಚಾಲಕರೊಬ್ಬರು(ಆ, 18)ಚಾಲನಾ ಸಮಯದಲ್ಲಿ ಮೊಬೈಲ್ ಬಳಕೆ ಮಾಡಿದ್ದು ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಶ್ರಾವಣ ಮಾಸದ ಕಡೆಯ ಸೋಮವಾರವಿರುವುದರಿಂದ ಈ ಬಸ್ಸಲ್ಲಿ ಸುಮಾರು 70 ರಿಂದ 80 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳವಂತೆ ಒತ್ತಾಯಿಸಿದ್ದಾರೆ.
ಬಸ್ ಗೋಕಾಕದಿಂದ ಮೂಡಲಗಿ ಮಾರ್ಗವಾಗಿ ವಿಜಯಪುರ ಹೋಗುತ್ತಿತ್ತು. ನಿಪ್ಪಾಣಿ-ರಾಯಚೂರು ಹೈವೆ ರಸ್ತೆ ತುಂಬಾ ಚಿಕ್ಕದಾಗಿ ಇರುವುದರಿಂದ ವಾರಕ್ಕೊಂದು ಅಪಘಾತವನ್ನು ನೋಡುತ್ತಿರುವ ಪ್ರಯಾಣಿಕರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಬೈಕ್ ಬಿಟ್ಟು ಬಸ್ ನಲ್ಲಿ ಹೋದರೆ ಬಸ್ ಚಾಲಕರಂತೂ ಬೇಕಾಬಿಟ್ಟಿಯಾಗಿ ಚಾಲನೆ ಮಾಡುವುದು ಮೊಬೈಲ್ ಬಳಸುವುದು ಮಾಡುತ್ತಾರೆ. ದಿನನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ.ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವುದು ಚಾಲಕನ ಕರ್ತವ್ಯವಾಗಿದೆ,ಈ ಬಸ್ ಚಾಲಕನ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಯಾಣಿಕರು ಸಂಸ್ಥೆಯ ಮೇಲಧಿಕಾರಿಗಳನ್ನು ಒತ್ತಾಯಿಸಿದ್ದಾರೆ.