Homeಸುದ್ದಿಗಳುಸಹಬಾಳ್ವೆಗೆ ಬೇಕಾದ ಮೌಲ್ಯಗಳನ್ನು ನಮ್ಮಲ್ಲೇ ಹುಡುಕಬೇಕಿದೆ - ಸಾಹಿತಿ ಡಾ. ಬಿ. ಐ. ಚಿನಗುಡಿ ಅಭಿಮತ 

ಸಹಬಾಳ್ವೆಗೆ ಬೇಕಾದ ಮೌಲ್ಯಗಳನ್ನು ನಮ್ಮಲ್ಲೇ ಹುಡುಕಬೇಕಿದೆ – ಸಾಹಿತಿ ಡಾ. ಬಿ. ಐ. ಚಿನಗುಡಿ ಅಭಿಮತ 

ವೀರಶೈವ ಮಹಾಸಭಾ ಬೆಳಗಾವಿ ವತಿಯಿಂದ ‘ಅಮಾವಾಸ್ಯೆ ಸತ್ಸಂಗ’

ನಾನು, ನನ್ನದು, ಅಧಿಕಾರ ಅಹಂ ಮೇಲು-ಕೀಳು ಎಂಬುದನ್ನು ಬಿಟ್ಟು ನಮ್ಮಲ್ಲಿಯ ಮೌಲ್ಯಗಳನ್ನು ನಾವೇ ಹುಡುಕಿಕೊಂಡು ಬದುಕು ಸಾಗಿಸಿದರೆ ಜೀವನ ಸುಖಮಯವಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಶನಿವಾರ ದಿ 23ರಂದು ಬೆಳಗಾವಿ ನಗರದ ಲಿಂಗಾಯತ ಭವನದಲ್ಲಿ ಹಮ್ಮಿಕೊಳ್ಳಲಾದ ಅಮಾವಾಸ್ಯೆ ನಿಮಿತ್ತ ‘ಮಾಸಿಕ ಸತ್ಸಂಗ’ ಕಾರ್ಯಕ್ರಮದಲ್ಲಿ ‘ಶರಣ ಲಿಂಗಪತಿ’ ವಿಷಯದ ಕುರಿತು ಸಾಹಿತಿ ಡಾ ಬಾಳಪ್ಪ ಚಿನಗುಡಿ ಮಾತನಾಡಿದರು.

ಸತಿ ಪತಿಯ ಅರಿವಿನ ಭಾವ ನಾವು ಕಾಯವೆಂಬ ದೇಹದಲ್ಲಿ ಅರಿವಿನಿಂದ ಲೇಸನ್ನು ಕಾಣಬೇಕಿದೆ. ಅಂತರಂಗದ ಭಾವಗಳು ಅರಿವುಗಳು ಒಂದಾಗಬೇಕು. ಪರಿಶುದ್ಧತೆ,ನೈಜತೆ, ಪರಿಪಕ್ವತೆ ಸಂಸ್ಕಾರ ಪರಸ್ಪರ ಚಿಂತನೆ, ಭಾವನಾತ್ಮಕ ಆಲೋಚನೆಗಳು ನಮ್ಮ ದೇಹವೆಂಬ ಮನೆಯನ್ನು ಆನಂದವಾಗಿ ಇಡುವುದಲ್ಲದೆ ಇಡೀ ಸಂಸಾರವನ್ನೇ ಅರ್ಥಪೂರ್ಣವನ್ನಾಗಿ ಮಾಡುತ್ತದೆ. ಮುತ್ತೈದೆಯರನ್ನು ಹಣ್ಣು ಕಾಯಿಯಿಂದ ಉಡಿ ತುಂಬದೆ ಅರಿವಿನ ಅನುಭಾವವನ್ನು ತುಂಬಿ ಮಾಡಿದ್ದೆ ಆದರೆ ಸಂಸಾರ ಎಂಬ ಬೆಸುಗೆಗೆ ಮತ್ತಷ್ಟು ಶಕ್ತಿ ಬರುತ್ತದೆ ಎಂದು ಅನೇಕ ಶರಣರ ವಚನಗಳನ್ನು ವಿಶ್ಲೇಷಣೆ ಮಾಡುತ್ತಾ ಶರಣ ಸತಿ ಲಿಂಗಪತಿ ವಿಷಯ ಕುರಿತು ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಪರಮ ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿ ನಮ್ಮ ಜೀವನದ ಮರ್ಮ ಅದರ ಅರ್ಥ ಗೊತ್ತಾಗುವಂತೆ ಸಾಧನೆಯ ಕಡೆಗೆ ನಾವು ಸಾಗಬೇಕಿದೆ ಮೂಢ ಆಚರಣೆ ಬಿಡಬೇಕಿದೆ ಅಜ್ಞಾನ ತೊಲಗಿಸಿ ಶರಣ ಮಾರ್ಗದಲ್ಲಿ ಸಾಗೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಶರಣೆ ಜ್ಯೋತಿ ಬದಾಮಿ ಮಾತನಾಡಿ, ದಾನ ಪ್ರವೃತ್ತಿ ಎಲ್ಲರಲ್ಲೂ ಬೇಕಿದೆ ಅನುಭಾವದ ಅನುಭವ ಎಲ್ಲರಲ್ಲೂ ಧಾರೆಯೆರೆದು ಸಮಾಜದಲ್ಲಿ ಗಟ್ಟಿತನ ಬರುವಂತೆ ಮತ್ತು ಪರಸ್ಪರ ಐಕ್ಯತೆ ಬೆಳೆಯುವಂತೆ ಮಾಡೋಣ ಅದಕ್ಕೆ ಯುವ ಜನತೆಯನ್ನು ಸಹ ಸತ್ಸಂಗದತ್ತ ಕರೆತರುವಲ್ಲಿ ಶ್ರಮ ವಹಿಸಬೇಕಿದೆ ಅಂದಾಗ ಮಾತ್ರ ಮೌಲ್ಯಗಳು ಬಲಯುತವಾಗುತ್ತದೆ ಎಂದರು.

ವಿದ್ಯಾ ಹುಂಡೆಕರ ದಾಸೋಹ ಸೇವೆ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಡಾ. ಎಫ್‌ ವಿ ಮಾನ್ವಿ, ವಿ.ಕೆ ಪಾಟೀಲ, ಅನಿತಾ ಮಾಲಗತ್ತಿ ಮಂಗಲಾ ಕಾಕತಿಕರ, ರಮೇಶ ಕಳಸನ್ನವರ, ಬಿ.ಬಿ ಮಠಪತಿ, ಶಿವಾನಂದ ನಾಯಕ, ಶಿವಾನಂದ ತಲ್ಲೂರ, ನಿತಿನ್ ಮೆಣಸಿನಕಾಯಿ ಸೇರಿದಂತೆ ಅನೇಕ ಶರಣರು ಉಪಸ್ಥಿತರಿದ್ದರು

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾ ಸವದಿ ವಚನ ಪ್ರಾರ್ಥನೆ ಮಾಡಿದರು. ರೇಣುಕಾ ಬಿರಾಲ ವಚನ ವಿಶ್ಲೇಷಣೆ ಮಾಡಿದರು ಆರ್. ಪಿ.ಪಾಟೀಲ ಸ್ವಾಗತಿಸಿದರು. ಸರೋಜಿನಿ ನಿಶಾನದಾರ ಅತಿಥಿಗಳನ್ನು ಪರಿಚಯಿಸಿದರು ಎಂ. ವೈ.ಮೆಣಸಿನಕಾಯಿ ನಿರೂಪಿಸಿದರು ಕೊನೆಯಲ್ಲಿ ಸೋಮಲಿಂಗ ಮಾವಿನಕಟ್ಟಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group