ಸಿಂದಗಿ; ಗ್ರಾಪಂ ನೌಕರರ ಬೇಡಿಕೆಗಳು ತಾನಾಗಿಯೇ ಬಂದಿಲ್ಲ ಹೋರಾಟದಿಂದಲೇ ಪಡೆದುಕೊಳ್ಳಲಾಗಿದೆ ಈ ಸರ್ಕಾರದಲ್ಲಿ ದುಡಿಯುವ ಕೈಗಳಿಗೆ ಮೂಲ ಸೌಲಭ್ಯಕ್ಕೂ ಹೋರಾಟ ಮಾಡುವ ಸಂದಿಗ್ದ ಪರಿಸ್ಥಿತಿ ಬಂದಿದೆ ಎಂದು ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ರಾಜ್ಯಾಧ್ಯಕ್ಷ ಬಿ.ಎಂ.ನಾಡಗೌಡ ಹೇಳಿದರು.
ಪಟ್ಟಣದ ತಾಪಂ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘ(ಸಿಐಟಿಯು) ಸಂಯೋಜಿತ ತಾಲೂಕು ಸಮಿತಿ ಆಲಮೇಲ ಮತ್ತು ಸಿಂದಗಿ ೯ನೇ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮ ಪಂಚಾಯತ ನೌಕರರ ಪ್ರಮುಖ ಬೇಡಕೆಗಳಾದ ವೇತನ, ಅನುಮೋದನೆ, ಪಿಂಚಣಿ ಸೇರಿದಂತೆ ಮೂಲಭೂತ ಸೌಲಭ್ಯಗಳು ಒದಗಿಸಲು ಸರಕಾರ ವಿಫಲವಾಗಿದೆ ಕಾರಣ ನೌಕರರ ಶ್ರಮಕ್ಕನುಗುಣವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ವಿವರಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಆಡಳಿತರೂಢ ಸರಕಾರವು ಕೂಲಿಕಾರರ ಹಾಗೂ ರೈತರ ಪರವಾದ ಸರಕಾರವಲ್ಲ. ಇದು ಕೇವಲ ಬಂಡವಾಳ ಶಾಹಿಗಳ ಪರವಾದ ಸರಕಾರವಾಗಿದೆ. ಬೆಲೆ ಏರಿಕೆಗೆ ಸರಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳು ಗ್ರಾಮ ಪಂಚಾಯತ ನೌಕರರಿಗೂ ದೊರಕುವಂತಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಂದಗಿ ಮತ್ತು ಆಲಮೇಲ ನೌಕರರ ಸಂಘದ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಿಂದಗಿ ತಾಲೂಕಾ ಅದ್ಯಕ್ಷರಾಗಿ ಎಮ್.ಎಸ್. ಕೊಂಡಗೂಳಿ, ಪ್ರ.ಕಾರ್ಯದರ್ಶಿಯಾಗಿ ಬರಮಣ್ಣ ಸುರಪುರ, ಖಜಾಂಚಿಯಾಗಿ ಮಲಕಣ್ಣ ಸುಂಗಠಾಣ ಇವರನ್ನು ಆಯ್ಕೆ ಮಾಡಲಾಯಿತು. ಆಲಮೇಲ ತಾಲೂಕಾಧ್ಯಕ್ಷರಾಗಿ ಚಾಂದಸಾಬ ಅಡಾಡಿ, ಪ್ರ.ಕಾರ್ಯದರ್ಶಿಯಾಗಿ ಅಂಬಾಜಿ ಬಾವೂರ, ಖಜಾಂಚಿಯಾಗಿ ಶ್ರೀಶೈಲ ತಳವಾರ ಆಯ್ಕೆ ಮಾಡಲಾಯಿತು.
ಅಂಗನವಾಡಿ ನೌಕರರ ಸಂಘದ ಗೌರವಾಧ್ಯಕ್ಷೆ ಸರಸ್ವತಿ ಮಠ, ಪ್ರ.ಕಾರ್ಯದರ್ಶಿ ಚಂದ್ರಶೇಖರ ವಾಲಿಕಾರ ಜಿಲ್ಲಾ ಖಜಾಂಚಿಲಾಲಹ್ಮದ ಶೇಖ, ಕೆಪಿಆರ್‌ಎಸ್ ಮುಖಂಡ ಬಸೀರಹ್ಮದ ತಾಂಬೆ ವೇದಿಕೆ ಮೇಲಿದ್ದರು.
ಎಂ.ಕೆ.ಚಳ್ಳಗಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.