ಶಾಸಕರೊಬ್ಬರು ಪೋಲೀಸ್ ಅಧಿಕಾರಿಯನ್ನು ( ಎಸ್. ಪಿ.) ಮಂತ್ರಿ ಮನೆಯ ಪೊಮೆರಿಯನ್ ನಾಯಿಗೆ ಹೋಲಿಸಿದ ಘಟನೆ ವರದಿಯಾಗಿದ್ದು ಶಾಸಕರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ಬಹಿರಂಗವಾಗಿ ನಾಯಿಗೆ ಹೋಲಿಸಿ ಹೇಳಿದ್ದು ತಪ್ಪೇ. ಕೆಲವೊಂದು ಸಂಗತಿಗಳು ವಾಸ್ತವವಾಗಿದ್ದರೂ ಅದನ್ನು ಸಾರ್ವಜನಿಕವಾಗಿ ಹೇಳಿದಾಗ ಇನ್ನೊಬ್ಬರಿಗೆ ಅವಮಾನವಾಗುವುದುಂಟು. ಹಾಗೆ ಅವಮಾನಿಸುವುದು ಸರಿಯಲ್ಲ.
ಅದರಲ್ಲೂ ಅಧಿಕಾರಿಗಳನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಇತರ ಚಿಲ್ಲರೆ ರಾಜಕಾರಣಿಗಳತನಕ ಯಾವ ರೀತಿ ನಡೆಸಿಕೊಳ್ಳುತ್ತಾರೆ ಎನ್ನುವುದು ಜನತೆಗೆ ಗೊತ್ತಿರುವ ಸಂಗತಿಯೇ ಆಗಿದೆ. ಸಾರ್ವಜನಿಕ ವೇದಿಕೆಯ ಮೇಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಲೀಸ್ ಅಧಿಕಾರಿ ಮೇಲೆ ಕೈಯೆತ್ತಿದ ಅಪೂರ್ವ ದೃಶ್ಯವನ್ನು ನಾವು ಕಂಡಿದ್ದೇವೆ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಬಂದರೆ ಅಚ್ಚರಿಯೇನಲ್ಲ. ಅಲ್ಲದೆ ನಮ್ಮ ಕೆಲ ಮಂತ್ರಿಗಳ, ಶಾಸಕರ, ಸಂಸದರ ಸೊಕ್ಕಿನ ವರ್ತನೆಯನ್ನು, ಅಧಿಕಾರ ದರ್ಪವನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಅದೇನೂ ವಿಶೇಷವಲ್ಲ.
ಅಧಿಕಾರಿಗಳು , ನೌಕರರು ಸರಕಾರದ ಆಧೀನ ಕೆಲಸಗಾರರು ಎನ್ನುವುದು ನಿಜ. ಆದರೆ ತಾವು ರಾಜಕೀಯ ನಾಯಕರ ಅಥವಾ ಜನಪ್ರಗತಿ ನಿಧಿಗಳ ಗುಲಾಮರಲ್ಲ ಎನ್ನುವುದನ್ನೂ ಅರಿತು ಆತ್ಮಗೌರವದಿಂದ ಬಾಳಬೇಕಾದ್ದಗತ್ಯ. ನಮ್ಮ ಬಹಳಷ್ಟು ನಾಯಕರಲ್ಲಿ ಸುಸಂಸ್ಕೃತ ನಡತೆಯಿಲ್ಲ. ಸಂಸ್ಕಾರಹೀನರು , ಶಿಕ್ಷಣ ಹೀನರು. ಅವರಿಂದ ಸುಸಂಸ್ಕೃತ ನಡೆನುಡಿ ನಿರೀಕ್ಷಿಸುವಂತಿಲ್ಲ. ಯಾವ ಜ್ಞಾನವೂ ಇಲ್ಲದಿದ್ದರೂ ಬಡಬಡಿಸುವಿಕೆಗೇನೂ ಬರಗಾಲವಿಲ್ಲ. ಏನೂ ಗೊತ್ತಿಲ್ಲದಿದ್ದರೂ ಎಲ್ಲದರ ಕುರಿತೂ ಮಾತಾಡುತ್ತಾರೆ.ಅಂತಹ ಸಚಿವರುಗಳು ಯಾರು ಎನ್ನುವುದು ಜನಕ್ಕೆ ಗೊತ್ತೇ ಇದೆ.
ಏನೇ ಇರಲಿ, ಅಧಿಕಾರಿಗಳ ಜತೆಗಿರಲಿ, ಸಾಮಾನ್ಯ ಜನರ ಜತೆಗಿರಲಿ, ಯಾವ ರೀತಿ ನಡೆದುಕೊಳ್ಳಬೆಕೆಂಬುದನ್ನು ಪ್ರಧಾನಿ ಮೋದಿಯವರನ್ನುನೋಡಿ ಇವರೆಲ್ಲ ಕಲಿತುಕೊಳ್ಳಬೇಕಾಗಿದೆ. ಮೋದಿಯವರು ಯಾರನ್ನೂ ಅಸಡ್ಡೆಯಿಂದ, ತಿರಸ್ಕಾರದಿಂದ, ಅಲಕ್ಷ್ಯದಿಂದ ನೋಡುವುದಿಲ್ಲ. ಅದೊಂದು ಉನ್ನತ ಸಂಸ್ಕಾರ. ಆ ಸಂಸ್ಕಾರ ನಮ್ಮ ರಾಜ್ಯದ ಹಲವು ಮಹಾ ನಾಯಕರಲ್ಲಿ ಇಲ್ಲವೆನ್ನುವುದು ಮಾತ್ರ ಸತ್ಯ. ಆದರೆ ಸತ್ಯ ಹೇಳುವುದೂ ಕೆಲವೊಮ್ಮೆ ಕಷ್ಟ. ಅಪ್ರಿಯ ಸತ್ಯವನ್ನು ಹೇಳಬಾರದು ಎಂದು ನಮ್ಮ ಹಿರಿಯರು ಹೇಳಿದ್ದು ಅದಕ್ಕೇ ಇರಬೇಕು.
– ಎಲ್. ಎಸ್. ಶಾಸ್ತ್ರಿ

