ಕೊಳಚೆಯಲ್ಲಿ ಗಣೇಶ ವಿಸರ್ಜನೆ ; ಬಿಕ್ಕಿ ಬಿಕ್ಕಿ ಅತ್ತ ಭಕ್
ಗಣೇಶ ಚತುರ್ಥಿಯಲ್ಲಿ ಗಣೇಶನಿಗೆ ನಮಗೆ ಮನಸಿಗೆ ಬೇಕಾದಂಥ ರೂಪಕೊಟ್ಟು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಸ್ಟೇಜ್ ಡೆಕಾರೇಶನ್ ಲೈಟಿಂಗ್ ಮಾಡಿ, ಹಲವಾರು ಕಾರ್ಯಕ್ರಮಗಳನ್ನು ಮಾಡಿ ಹನ್ನೊಂದು ದಿನಗಳವರೆಗೆ ಸಂಭ್ರಮಪಟ್ಟು ಭಕ್ತಿಯಿಂದ ನಮಗೆ ಏನು ಬೇಕೋ ಅದನ್ನು ಬೇಡಿ ಕೊನೆಗೆ ಗಣೇಶನನ್ನು ಕೊಳಚೆಯಲ್ಲಿ ವಿಸರ್ಜನೆ ಮಾಡುವ ದುರುಳರು ನಾವು !
ಹೀಗೆ ಕೊಳಚೆಯಲ್ಲಿ ವಿಸರ್ಜಿಸಲ್ಪಟ್ಟ ಗಣೇಶನನ್ನು ಭಕ್ತನೊಬ್ಬ ತಬ್ಬಿಕೊಂಡು ಅಳುತ್ತಿರುವ ವಿಡಿಯೋ ಎಲ್ಲರ ಕಣ್ಣು ತೆರೆಸಬೇಕಾಗಿದೆ. ನಮ್ಮಲ್ಲಿ ಅಡಗಿರುವ ನಕಲಿ ಭಕ್ತಿಯನ್ನು ತೊಳೆದುಹಾಕಬೇಕಾಗಿದೆ.
ಗಣಪನನ್ನು ಸಂಭ್ರಮದಿಂದ ತಂದು ಮನೆಯಲ್ಲಿ, ಬೀದಿಯಲ್ಲಿ ಕೂರಿಸಿ ಅನೇಕ ಕಾರ್ಯಕ್ರಮಗಳನ್ನು ಮಾಡೋದೇನು!, ಅನ್ನದಾನ ಮಾಡೋದೇನು!, ಭಕ್ತಿಯ ಹಾಡು ಹಾಕಿ ಡಾನ್ಸ್ ಮಾಡೋದೇನು! ಅಬ್ಬಬ್ಬಾ! ದೇವಲೋಕವೇ ಭುವಿಗೆ ಇಳಿದು ಬಂದಿದೆಯೇನೋ ಎಂಬಂತೆ ಗಣೇಶನ ಪೆಂಡಾಲು, ಸುತ್ತಮುತ್ತಲಿನ ವಾತಾವರಣ ಭಕ್ತಿಯಿಂದ ತುಂಬಿ ತುಳುಕುತ್ತಿರುತ್ತದೆ ಆದರೆ ವಿಸರ್ಜನೆಯ ನಂತರ ಹೇಗಿರುತ್ತದೆ ?
ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಿದನಂತರ ನೋಡುವುದೇ ಬೇಡ. ಒಂದು ವೇಳೆ ನೋಡಿದರೆ ಆ ಗಣೇಶನ ಮೇಲೆ ಇರುವ ಭಕ್ತಿಯೆಲ್ಲ ತೊಳೆದುಕೊಂಡು ಹೋಗಬೇಕು ಹಾಗಿರುತ್ತದೆ. ಈ ವಿಡಿಯೋದಲ್ಲಿನ ದೃಶ್ಯ ನೋಡಿದರೆ ಎಂಥ ಮರುಳ ಭಕ್ತನಿಗೂ ಕರುಳು ಕಿತ್ತುಬರುತ್ತದೆ ಈ ಭಕ್ತಿಯೆನ್ನುವುದು ಬರೀ ನಾಟಕವಾ ? ಎನ್ನಿಸುತ್ತದೆ.
ಗಣೇಶನ ಮೂರ್ತಿಗಳನ್ನು ಕೊಳಚೆಯಲ್ಲಿ ವಿಸರ್ಜನೆ ಮಾಡಲಾಗಿದೆ ವಿಸರ್ಜನೆ ಎನ್ನುವುದಕ್ಕಿಂತಲೂ ಎಸೆದಿದ್ದಾರೆ ಎನ್ನಬೇಕು. ಮೂರ್ತಿಗಳು ಪೂರ್ತಿಯಾಗಿ ಮುಳುಗಿಲ್ಲ. ಅದು ನಿಂತ ನೀರಲ್ಲ, ಕೊಚ್ಚೆ !
ಇಂಥದರಲ್ಲಿ ಗಣೇಶ ವಿಸರ್ಜನೆ ಮಾಡಲು ಇವರಿಗೆ ಮನಸಾದರೂ ಹೇಗೆ ಬಂತು ? ಎಂಬಂತೆ ಆ ಭಕ್ತ ಕಣ್ಣೀರಿಡುತ್ತ, ಗಣೇಶನನ್ನು ತಬ್ಬಿಕೊಳ್ಳುತ್ತ ‘ಭಾರತದ ಹೆಮ್ಮೆಯ’ ಗಣೇಶ ಭಕ್ತರನ್ನು ಹಳಿಯುತ್ತಾನೆ.
ಎಲೈ ನೀಚರೆ, ಗಣೇಶನನ್ನು ಸರಿಯಾಗಿ ವಿಸರ್ಜನೆ ಮಾಡುವ ಯೋಗ್ಯತೆ ಇಲ್ಲದಿದ್ದರೆ ಯಾಕೆ ತರಬೇಕು ? ನೀವು ಭಗವಂತನನ್ನೂ ಬಿಡಲಿಲ್ಲ ಕೊಚ್ಚೆಯಲ್ಲಿ ಎಸೆದಿರಿ. ಹೇ ಪ್ರಭು ! ಜಗತ್ತು ಬಹಳ ಕೆಟ್ಟದಾಗಿದೆ. ಅದಕ್ಕಾಗಿಯೇ ಈ ದೇಶಕ್ಕೆ ಇಂಥ ಕೆಟ್ಡ ಪರಿಸ್ಥಿತಿ ಬಂದಿದೆ ನಮ್ಮನ್ನು ಕ್ಷಮಿಸು ಎಂದು ಆತ ಅಳುತ್ತ ಬೇಡಿಕೊಳ್ಳುವ ವಿಡಿಯೋ ಮನಕಲಕುವಂತಿದೆ. ಸನಾತನ ಭಕ್ತರನ್ನು ವ್ಯಂಗ್ಯ ಮಾಡುವಂತಿರುವ ಕೆಲವರ ಈ ಕೃತ್ಯ ಎಲ್ಲ ಭಕ್ತರ ಕಣ್ಣು ತೆರೆಸಬೇಕಾಗಿದೆ