ಕೃತಿ ವಿಮರ್ಶೆ : ಕೌಂಡಿನ್ಯರ ಎರಡು ಐತಿಹಾಸಿಕ ಕಾದಂಬರಿಗಳು ಬೆಳವಾಡಿ ಮಲ್ಲಮ್ಮ, ಅಮೋಘವರ್ಷ ನೃಪತುಂಗ

Must Read

ಕೌಂಡಿನ್ಯ ಕಾವ್ಯನಾಮದ ವೈ.ಎನ್. ನಾಗೇಶ್ ಅವರು ತಮ್ಮ ೩೨ ವರ‍್ಷಗಳ ಸಾಹಿತ್ಯ ಕೃಷಿಯಲ್ಲಿ ಈ ವರೆಗೂ ೩೫೦ ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ಕಾದಂಬರಿಕಾರರಾಗಿ ಇವರ ಕಾದಂಬರಿಗಳು ವಾರಪತ್ರಿಕೆ, ಮಾಸಿಕಗಳಲ್ಲಿ ರಾಜ್ಯದ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ೩೫೦ನೇ ಕೃತಿ ಅಮೋಘವರ್ಷ ನೃಪತುಂಗ ಮತ್ತು ಬೆಳವಾಡಿ ಮಲ್ಲಮ್ಮ ಕೃತಿಗಳನ್ನು ಹೊಳೆನರಸೀಪುರ ತಾ. ಕಸಾಪ ಅಧ್ಯಕ್ಷರು ಆರ್.ಬಿ.ಪುಟ್ಟೇಗೌಡರು ನನಗೆ ಕೊಟ್ಟರು.

ಕರ‍್ನಾಟಕದ ಇತಿಹಾಸದ ಪರಂಪರೆಯನ್ನು ಅವಲೋಕನ ಮಾಡಿದಾಗ ಸಾಮ್ರಾಜ್ಯವನ್ನು ರಕ್ಷಿಸಲು ಬ್ರಿಟಿಷರ ವಿರುದ್ದ ಹೋರಾಡಿ ಸ್ವಾತಂತ್ರ‍್ಯ ಕಹಳೆಯನ್ನು ಊದಿದ ವೀರ ಮಹಾರಾಣಿಯರು ನಿತ್ಯ ಸ್ಮರಣೀಯರು. ಕಿತ್ತೂರು ರಾಣಿ  ಚೆನ್ನಮ್ಮ, ಝೂನ್ಸಿರಾಣಿ ಲಕ್ಷ್ಮೀಬಾಯಿ, ವೀರರಾಣಿ ಅಬ್ಬಕ್ಕ, ಕೆಳದಿಯ ಚೆನ್ನಮ್ಮ, ಚಿತ್ರದರ‍್ಗದ ಓಬವ್ವ, ಹೇಮರೆಡ್ಡಿ ಮಲ್ಲಮ್ಮ, ಉಳ್ಳಾಲದ ರಾಣಿ ಅಬ್ಬಕ್ಕ ದೇವಿ.. ಇವರೇ ಮೊದಲಾದವರು ತಮ್ಮ ವಿಶೇಷ ವ್ಯಕ್ತಿತ್ವದಿಂದ ಇತಿಹಾಸದ ಪುಟಗಳಲ್ಲಿ ತಮ್ಮದೇ ಛಾಪು ಮಾಡಿಸಿದ್ದಾರೆ. ಇತಿಹಾಸದ ಮಾಹಿತಿಯ ಪ್ರಕಾರ ತನ್ನ ಆಡಳಿತದ ಅವಧಿಯಲ್ಲಿ ಸುಮಾರು ಮೂರು ಸಾವಿರ ಸ್ತ್ರೀಯರನ್ನು ಸಂಘಟಿಸಿ, ಅವರಿಗೆಲ್ಲಾ ಯುದ್ಧ ತರಬೇತಿ ನೀಡಿ,  ರಣಾಂಗಣದಲ್ಲಿ ವೀರ ಸಾಹಸ ಮೆರೆದ ಮಹಾರಾಣಿ ಬೆಳವಡಿ ಮಲ್ಲಮ್ಮನ ಚರಿತ್ರೆ ಯನ್ನು ಕೌಂಡಿನ್ಯರು ಕಾದಂಬರಿಯಾಗಿಸಿದ್ದಾರೆ.

ಈಗಿನ ಬೆಳಗಾವಿ ಜಿಲ್ಲೆಯಲ್ಲಿರುವ ಸ್ವಾತಂತ್ರ‍್ಯ ಪೂರ‍್ವದ ಗ್ರಾಮವೇ ಬೆಳವಾಡಿ. ಕ್ರಿ.ಶ. ೧೫೧೧ ರ ಅವಧಿಯಲ್ಲಿ ಅವಂತಿಪುರ ಎಂಬ ಈ ಗ್ರಾಮ ಕುಗ್ರಾಮವಾಗಿತ್ತು. ಬೆಳವಾಡಿ ಸಂಸ್ಥಾನದ (ಪ್ರಾಂತೀಯ ರಾಜ್ಯ) ಮೂಲ ರಾಜನೆಂದರೆ ಚಂದ್ರಶೇಖರ ಮಹಾರಾಜ. ಇತಿಹಾಸ ತಜ್ಞರ ಪ್ರಕಾರ ಕ್ರಿ.ಶ. ೧೫೧೧ರಿಂದ ಆರಂಭವಾಗುತ್ತದೆ.
ಬೆಳವಾಡಿ ಮಲ್ಲಮ್ಮನ ಬಗ್ಗೆ, ಆಕೆಯ ವಂಶದ ಬಗ್ಗೆ ಶತಮಾನಗಳಿಂದ ಜಾನಪದ ಹಾಡುಗಳು ಉತ್ತರ ಕರ‍್ನಾಟಕದ ಹಲವಾರು ಗ್ರಾಮಗಳ ಸಾಮಾನ್ಯ ಜನರ ನಾಲಿಗೆಯಲ್ಲಿ ನಲಿದಾಡುತ್ತಿತ್ತು. ಮನೆಗಳ ಜಗುಲಿಯಲ್ಲಿ ಕುಳಿತು ಹೆಂಗಸರು ಆಕೆಯ ಸಾಹಸದ ಬಗ್ಗೆ ರಾಜವಂಶ ಬೆಳೆದ ಬಗ್ಗೆ ಲಾವಣಿಗಳ ರೂಪದಲ್ಲಿ ಹಾಡುತ್ತಿದ್ದರು. ಈಗಲೂ ಸಹ ಉತ್ತರ ಭಾಗದ ಗ್ರಾಮಗಳಲ್ಲಿ ಮಲ್ಲಮ್ಮನ ಸಾಹಸದ ಬಗ್ಗೆ ಕೊಂಡಾಡುತ್ತಾರೆ.

ಬೆಳಗಾವಿ ಜಿಲ್ಲೆಯ ಬೆಳವಾಡಿ ಗ್ರಾಮದಲ್ಲಿ ಪ್ರತಿ ವರ‍್ಷ ಆಗಸ್ಟ್ ೧೮ನೇ ತಾರೀಖು ಮಹತ್ವ ಪಡೆದಿದೆ. ಅಂದು ವೀರ ವನಿತೆ ಮಲ್ಲಮ್ಮ ಜನಿಸಿದ ಪುಣ್ಯ ದಿನ ಎಂದು ಹೇಳಲಾಗಿದೆ. ಆದರೆ ಈ ದಿನಾಂಕದ ಪೂರ‍್ಣ ವಿವರ ನಿಖರವಾದ ವರ‍್ಷದ ಬಗ್ಗೆ ದಾಖಲಾತಿ ಇಲ್ಲ. ಶಿವಾಜಿ ಮಹಾರಾಜರು ಸ್ವತಂತ್ರವಾಗಿ ಸಾಮ್ರಾಜ್ಯ ಕಟ್ಟಿ, ಕ್ಷತ್ರಿಯ ಪದ್ಧತಿಯಲ್ಲಿ ಪಟ್ಟಾಭಿಷಕ್ತರಾಗಿ ಆಳ್ವಿಕೆ ನಡೆಸಿದ್ದ ಕಾಲ ಮತ್ತು ವಿಜಯನಗರ ಸಾಮ್ರಾಜ್ಯದ ಮಹಾ ಪತನ ಮತ್ತು ಶಿವಾಜಿ ಮಹಾರಾಜರು ಸರ‍್ವನಾಶವಾಗಿದ್ದ ಹಾಳು ಹಂಪೆಗೆ ಭೇಟಿ ನೀಡಿದ್ದ ಕಾಲಮಾನ ಮತ್ತು ಬೆಳವಾಡಿ ಮಲ್ಲಮ್ಮ ಇವರೊಂದಿಗೆ ಯುದ್ಧ ಮಾಡಿದ ಕಾಲಾವಧಿಯ ಆಧಾರದ ಮೇಲೆ ಇತಿಹಾಸ ತಜ್ಞರು ಮಲ್ಲಮ್ಮ ೧೭ನೇ ಶತಮಾನ ಆಗಸ್ಟ್ ಮಾಹೆಯಲ್ಲಿ ಜನಿಸಿದ್ದಾರೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಈ ಮಹಾರಾಣಿಯ ಪೂರ‍್ವಿಕರಲ್ಲಿ ರಾಜವಂಶ ಸಂಸ್ಥಾಪಕರಾದ ಚಂದ್ರಶೇಖರ ಅವರ ಕಾಲಮಾನ ಕ್ರಿ.ಶ. ೧೫೧೧ ಎಂಬ ಉಲ್ಲೇಖ ಮಾತ್ರ ಇತಿಹಾಸದಲ್ಲಿದೆ. ಉತ್ತರ ಕರ‍್ನಾಟಕದ ಗ್ರಾಮಗಳಲ್ಲಿ ಬಳಕೆಯಲ್ಲಿರುವ ಜಾನಪದ ಲಾವಣಿಗಳ ಆಧಾರದ ಮೇಲೆ ಈ ಘಟನೆ ನಿರೂಪಿಸಲಾಗಿದೆ. ಚಂದ್ರಶೇಖರ ಎಂಬ ಸಾಮಾನ್ಯ ವ್ಯಕ್ತಿ ಬೆಳವಾಡಿ ಪ್ರಾಂತ್ಯದ ರಾಜನಾಗಿ ಭದ್ರ ಬುನಾದಿ ಹಾಕಿದನೆಂದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ. ಈತನ ನಂತರ ಹಲವಾರು ರಾಜರುಗಳು ಬೆಳವಡಿ ಪ್ರಾಂತ್ಯವನ್ನು ಸಮರ್ಥ ರೀತಿಯಲ್ಲಿ ಆಳುತ್ತಾ ಪ್ರಜಾಪಾಲನೆ ಮಾಡಿದರು.

ಸುಮಾರು ೧೭ನೇ ಶತಮಾನದ ಮಧ್ಯದ ಅವಧಿಯಲ್ಲಿ ಬೆಳವಡಿ ಸಂಸ್ಥಾನದ ಸಿಂಹಾಸನವನ್ನು ಮದಲಿಂಗ ನಾಯಕ ಅಲಂಕರಿಸಿ ರಾಜ್ಯವನ್ನು ಪರಿಪಾಲನೆ ಮಾಡಿದ್ದನು. ಈತನ ಪತ್ನಿ ದೇವಕಾಂತೆ. ಮಲ್ಲಮ್ಮನ ವಂಶಸ್ಥರು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲ್ಲೂಕಿನ ಸೋದೆಯ ರಾಜರು. ಅವರು ಲಿಂಗಾಯತ ವರ್ಗದ ಮಲವಗೌಡರು. ಆ ವಂಶದ ಮಧುಲಿಂಗ ನಾಯಕನಿಗೆ ೧೬೬೦ರಲ್ಲಿ ಮಗಳಾಗಿ ಜನಿಸಿದ ಮಲ್ಲಮ್ಮಾಜಿ, ಆಕೆಯ ಅಣ್ಣ ಸದಾಶಿವನಾಯಕ ಇಬ್ಬರೂ ಒಳ್ಳೆಯ ಶಿಕ್ಷಣವನ್ನು ಪಡೆಯುತ್ತಾರೆ. ಮಧುಲಿಂಗನಾಯಕ ವ್ಯವಸ್ಥೆ ಮಾಡಿದ್ದ ಶಾಲೆಯಲ್ಲಿ ೨೦೦ ಹುಡುಗರು, ೨೦೦ ಹುಡುಗಿಯರು ಇದ್ದರು. ಶಿಕ್ಷಣ ನೀಡುವುದರಲ್ಲಿ ಗಂಡು ಹೆಣ್ಣು ಎಂಬ ತಾರತಮ್ಯ ಇರಲಿಲ್ಲ. ೧೪ ವರ್ಷದ ಹೊತ್ತಿಗೆ ಸದಾಶಿವನಾಯಕ ಮಲ್ಲಮ್ಮ ಕನ್ನಡ, ಸಂಸ್ಕೃತಗಳಲ್ಲಿ ಕವಿತೆ ರಚನೆ ಮಾಡುವಷ್ಟು ಪರಿಣಿತಿ ಪಡೆದಿದ್ದರು.

ಆ ಶಾಲೆಯ ವಿದ್ಯಾರ್ಥಿಗಳಲ್ಲಿ ಮಲ್ಲಮ್ಮ ಅತ್ಯಂತ ಮೇಧಾವಿ. ಅವರ ಕೃತಿಗಳು ದೊರಕದಿದ್ದರೂ ಅಣ್ಣ ಸದಾಶಿವ ನಾಯಕನ ಭಜನೆ ಪದಗಳು, ಶೃಂಗಾರದ ಜಾವಡಿ ಪದ್ಯಗಳು ದೊರಕಿವೆ. ಶಾಲೆಯ ಮಕ್ಕಳಿಗೆ ಯುದ್ಧ ಶಿಕ್ಷಣವನ್ನು ನೀಡಲು ಉತ್ತರ ಭಾರತದಿಂದ ರಣವೀರಸಿಂಗ್ ಎಂಬ ಸಿಖ್ ಜನಾಂಗದ ವ್ಯಕ್ತಿಯನ್ನು ನೇಮಕ ಮಾಡಲಾಗಿತ್ತು.

ಬೆಳವಾಡಿ ಸಂಸ್ಥಾನದ ಪಾರಂಪರಿಕ ತಾಣವಾದ ಬೃಹನ್ಮಠದ ಶಿವಬಸವ ಶಾಸ್ತ್ರಿಯವರು ಬರೆದ ತರಾತುರಿ ಪಂಚಮರ ಇತಿಹಾಸ ಪುಸ್ತಕದಲ್ಲಿ ಬೆಳವಾಡಿ ಸಂಸ್ಥಾನದ ಇತಿಹಾಸವು ೧೫೧೧ರಿಂದ ರಾಜ ಚಂದ್ರಶೇಖರ ರಾಜನೊಂದಿಗೆ ಪ್ರಾರಂಭವಾಗುತ್ತದೆ. ಈ ಪುಸ್ತಕದಲ್ಲಿ ಮರಾಠಿ ರಾಜ ಶಿವಾಜಿ ಮತ್ತು ಬೆಳವಡಿ ಮಲ್ಲಮ್ಮನವರ ನಡುವೆ ನಡೆದ ಯುದ್ಧ ದಾಖಲಾಗಿದೆ. ಇಶಾಪ್ರಭು ಯುದ್ಧಭೂಮಿಯಲ್ಲಿ ನಿಧನರಾದ ನಂತರ ಮಲ್ಲಮ್ಮ ಶಿವಾಜಿಯನ್ನು ಹೋರಾಡಿ ಸೋಲಿಸಿದಳು. ಈ ಯುದ್ಧದ ನೆನಪಿಗಾಗಿ ವೀರಗಲ್ಲುಗಳನ್ನು ಬೆಳವಾಡಿಯ ಸಂಸ್ಥಾನದಲ್ಲಿ ಮಲ್ಲಮ್ಮನ ಹೆಸರಲ್ಲಿ ಕಟ್ಟಿಸಲಾಯಿತು. ತರಾತುರಿ ಪಂಚಮರ ಇತಿಹಾಸ ಪುಸ್ತಕ ೧೯೨೯ರಲ್ಲಿ ಪ್ರಕಟವಾಯಿತು. ಮಲ್ಲಮ್ಮನ ಗುರುಗಳಾಗಿದ್ದ ಶಂಕರ ಭಟ್ಟರು ಬರೆದ ಸಂಸ್ಕೃತ ಪುಸ್ತಕ ಶಿವವಂಶ ಸುಧರ್ನವದಲ್ಲಿ ಶಿವಾಜಿಯನ್ನು ಬೆಳವಡಿ ಮಲ್ಲಮ್ಮ ಸೋಲಿಸಿದರು ಎಂದು ದಾಖಲಾಗಿದೆ.

ಅಮೋಘ ವರ್ಷ ನೃಪತುಂಗ ಕನ್ನಡನಾಡನ್ನು ಆಳಿದ ರಾಷ್ಟ್ರಕೂಟ ವಂಶದ ಚಕ್ರವರ್ತಿ. ಕ್ರಿ.ಶ.೮೧೪ರಲ್ಲಿ ಸಿಂಹಾಸನವೇರಿದ ಈ ದೊರೆ ೬೪ ವರ್ಷಗಳ ಕಾಲ ರಾಜ್ಯವಾಳಿದ. ಈತ ವೈದಿಕ, ಜೈನ, ಬೌದ್ದ ಧರ್ಮಗಳಿಗೆ ಆಶ್ರಯ ನೀಡಿ ಸಮಾನ ಭಾವದಿಂದ ಗೌರವಿಸಿದ. ಸ್ವತಃ ರಾಜನೇ ಒಳ್ಳೆಯ ಪಂಡಿತನಿದ್ದನು. ಕನ್ನಡದ ಮೊಟ್ಟ ಉಪಲಬ್ಧ ಗ್ರಂಥ ಕವಿರಾಜಮಾರ್ಗ ಒಂದು ಲಾಕ್ಷಣಿಕ ಗ್ರಂಥ. ರಾಜನೇ ಇದನ್ನು ಶ್ರೀವಿಜಯನೇ ಮೊದಲಾದ ವಿದ್ವಾಂಸರ ಸಹಕಾರದಿಂದ ರಚಿಸಿದಂತೆ ತಿಳಿದುಬರುತ್ತದೆ. ಅದರಲ್ಲಿ ಕನ್ನಡನಾಡು, ನುಡಿ ಮತ್ತು ನಾಡವರ ಬಗ್ಗೆ ವಿಶೇಷ ಉಲ್ಲೇಖಗಳು ಇವೆ.

ಈ ಒಂದು ಐತಿಹಾಸಿಕ ಕಥಾವಸ್ತುವನ್ನು ಆಯ್ದುಕೊಂಡು ಬಶೀರ್ ಅಮೋಘವರ್ಷ ನೃಪತುಂಗ ನಾಟಕ ಬರೆದಿದ್ದಾರೆ. ನಾಟಕದಲ್ಲಿ ನೃಪತುಂಗನ ಮಾತು: ನಮ್ಮ ಅಂಕೆಯಲ್ಲಿರುವ ಶಿಷ್ಟ ಭಾಷೆಯ ಪ್ರದೇಶವಾದ ಕನ್ನಡನಾಡಿನ ಮೇರೆಯನ್ನು ಹೀಗೆ ನಿರೂಪಿಸೋಣ
ಕಾವೇರಿಯಿಂದಮಾ ಗೋ
ದಾವರಿವರಮಿರ್ಪ ನಾಡದಾ ಕನ್ನಡದೊಳ್
ಬಾವಿಸಿದ ಜನಪದಂ ವಸು
ದಾವಳಯ ವಿಲೀನ ವಿಶದ ವಿಷಯ ವಿಶೇಷಂ

ಎಂಟನೇ ಶತಮಾನದಲ್ಲಿದ್ದ ಪ್ರಸಿದ್ದ ಪ್ರವಾಸಿ ಸುಲೇಮಾನನ ಪ್ರಕಾರ ಆಗ ಇದ್ದ ನಾಲ್ವರು ಚಕ್ರವರ್ತಿಗಳಲ್ಲಿ ನೃಪತುಂಗನೂ ಒಬ್ಬನು. ಕಾನಸ್ಟಾಂಟಿನೋಪಾಲ್‌ನ ಚಕ್ರವರ್ತಿ, ಅರಬ್‌ನ ಬಾಗ್ದಾದ್ ಖಲೀಫ, ಚೀನಾದ ಚಕ್ರವರ್ತಿ ಇವರ ಪಂಕ್ತಿಯಲ್ಲಿ ಸೇರಿದವನು. ಈ ದೊರೆಯ ಜೀವನದಲ್ಲಿ ನಡೆದ ಒಂದು ಒಳಸಂಚು, ಇದರಲ್ಲಿ ಇವನ ಮಗನಾದ ಕೃಷ್ಣನೇ ಸಿಕ್ಕಿಕೊಂಡು ವಿದ್ರೋಹಿಯಾಗುವುದು, ನಂತರದಲ್ಲಿ ಆ ಸಂಚು ಬಯಲಾಗಿ ಸುಖಾಂತಗೊಳ್ಳುವಲ್ಲಿ ರಾಜನ ದೀರೋದಾತ್ತ ನಿಲುವು ಪ್ರಕಟಗೊಂಡಿದೆ. ಸಿ.ಜಿ.ಕೃಷ್ಣಸ್ವಾಮಿ ಬರೆದಂತೆ ನಾಟಕದಲ್ಲಿ ದೇಶಪ್ರೇಮ, ಭಾಷಾ ಪ್ರೇಮ, ಭಾವೈಕ್ಯತೆ, ಆಳವಾದ ಐತಿಹಾಸಿಕ ಅಧ್ಯಯನ ಎದ್ದುಕಾಣುತ್ತದೆ. ಆ ಕಾಲದ ಐತಿಹಾಸಿಕ ದಾಖಲೆಗಳನ್ನು ಸೊಗಸಾಗಿ ಚಿತ್ರಿಸುವ ಲಕ್ಷಣ ಗ್ರಂಥ ಕವಿರಾಜಮಾರ್ಗ ಕನ್ನಡಿಗರ ಸಮೃದ್ಧ ಜೀವನ, ಕನ್ನಡ ನಾಡಿನ ವಿಸ್ತಾರ, ಕನ್ನಡ ಜನರ ಬುದ್ದಿವಂತಿಕೆ, ಧೈರ್ಯ ಸಾಹಸಗಳನ್ನು ಮೆಚ್ಚಿ ಮುಕ್ತಕಂಠದಿಂದ ಹೊಗಳುವ ಅಪೂರ್ವ ಗ್ರಂಥ. ಶ್ರೀವಿಜಯನ ಮಾತು:
ಪದನರಿದು ನುಡಿಯಲುಂ ನುಡಿ
ದುದನರಿದಾರಯಲು ಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುರಿತೋ
ದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್..
ಸ್ವಯಂ ಕವಿಯಾಗಿ ಕವಿಜನಾಶ್ರಯನೂ ಉದಾರ ಪ್ರಭುವೂ ಆಗಿದ್ದ ನೃಪತುಂಗನ ಕಾಲದಲ್ಲಿ ಕನ್ನಡ, ಸಂಸ್ಕೃತ ಮತ್ತು ಪ್ರಾಕೃತ ಭಾಷೆ ಹಾಗೂ ಸಾಹಿತ್ಯ ಸಂಸ್ಕೃತಿಯ ಸಂವರ್ಧನ ಕಾರ್ಯ ಹೆಚ್ಚಿದೆವು.

ಶಬ್ದಮಣಿದರ್ಪಣ ಬರೆದ ಕೇಶಿರಾಜನು ವೀರನುದಾರಂ ಸುಚಿ ಗಂಭೀರ ನಯಶಾಲಿ ಕೈದುವೊತ್ತರ ದೇವಂ ಗಾರೆರಗರ್ ನೃಪತುಂಗಂಗೆ ಎಂದಿದ್ದಾನೆ.

ಕಾವ್ಯಾವಲೋಕನ ಗ್ರಂಥ ಬರೆದ ಕವಿ ನಾಗವರ್ಮನು ಕರಿವೋಲ್ ಭದ್ರಗುಣಂ ಕೇಸರಿವೋಲ್ ನಿರ್ವ್ಯಾಜ ಶೌರ್ಯಸಂಭೋನಿಧಿವೋಲ್ ಶರಣಗತ ರಕ್ಷಣ ಪಟು ಗಾರಿವೋಲ್ ನಿಷ್ಕಂಪ ಚಿತ್ತನಾ ನೃಪತುಂಗ ಎಂದು ಗುಣಗಾನ ಮಾಡಿದ್ದಾನೆ. ಕೌಂಡಿನ್ಯರು ತಮ್ಮ ಕಾದಂಬರಿಯಲ್ಲಿ ಕವಿರಾಜನಿಗೆ ಸಲ್ಲಿಸಿದ ನುಡಿ ನಮನದಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ, ಒಲವು ಕೆಲವು ಮಂದಿ ರಾಜರುಗಳಲ್ಲಿತ್ತು. ಸ್ವತಃ ಕವಿಯಾಗಿ, ಗ್ರಂಥಕರ್ತೃವಾಗಿ ರಚನೆ ಮಾಡಿದವರಲ್ಲಿ ವಿಜಯನಗರದ ತುಳುವ ವಂಶದ ಮಹಾರಾಜ ಶ್ರೀಕೃಷ್ಣ ದೇವರಾಯ ಶ್ರೇಷ್ಠರಿಗೆ, ಸಾಹಿತ್ಯದ ದಿಗ್ಗಜರುಗಳಿಗೆ ಆಶ್ರಯ ನೀಡಿ ಪ್ರೋತ್ಸಾಹ ನೀಡಿದ್ದನು ಮತ್ತು ತಾನೇ ಸ್ವಯಂ ಅಮುಕ್ತ ಮೌಲ್ಯ ಕೃತಿ ರಚನೆ ಮಾಡಿದ್ದನು. ನೃಪತುಂಗನ ಕವಿರಾಜ ಮಾರ್ಗ ಕನ್ನಡದ ಮೊದಲ ಕೃತಿ ಮತ್ತು ಪ್ರಶ್ನೋತ್ತರ ಮಾಲ ಎಂಬ ಸಂಸ್ಕೃತ ಗ್ರಂಥವನ್ನು ರಚನೆ ಮಾಡಿದ್ದಾನೆ ಎಂಬುದು ಮಾನ್ಯಖೇಟದ ಶಾಸನಗಳಲ್ಲಿ ನಿರೂಪಿಸಲ್ಪಟ್ಟಿದೆ.

ಒಬ್ಬ ರಾಜ ಪ್ರಜೆಗಳ ಕ್ಷೇಮ, ಆರ್ಥಿಕ ಅಭಿವೃದ್ಧಿ ಮತ್ತು ಶತ್ರು ರಾಜರುಗಳ ಆಕ್ರಮಣದಿಂದ ರಾಜ್ಯ ರಕ್ಷಣೆ ಈ ಕಾರ‍್ಯ ಒತ್ತಡಗಳ ನಡುವೆ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವುದು ವಿಶೇಷ. ರಾಷ್ಟ್ರ ಕೂಟರ ವಂಶವನ್ನು ಹಲವು ಮಂದಿ ರಾಜರು ಆಳಿದ್ದಾರೆ. ಅವರಲ್ಲಿ ಅಮೋಘವರ್ಷ ನೃಪತುಂಗನ ಹೆಸರು ಇತಿಹಾಸದಲ್ಲಿ ಪ್ರತ್ಯೇಕ ಅಧ್ಯಾಯವನ್ನೇ ಸೃಷ್ಟಿ ಮಾಡಿದೆ. ಕೌಂಡಿನ್ಯರ ಕಾದಂಬರಿ ಹತ್ತು ಅಧ್ಯಾಯ ಮತ್ತು ವೇಶ್ಯೆಯ ದುರಂತ ದುಷ್ಟರ ದುರಂತ ಆಂತ್ಯ ಎಂಬ ಎರಡು ಶೀರ್ಷಿಕೆಗಳಲ್ಲಿ ಹಾಗೂ ಉಪಸಂಹಾರದ ಕಡೆಗೆ ಕಾಲಚಕ್ರ ಉರುಳಿದಂತೆ ‘ನೃಪತುಂಗನಲ್ಲಿ ವೈರಾಗ್ಯ ಹೆಚ್ಚಾಗಲಾರಂಭಿಸಿತು. ಈ ಎಲ್ಲಾ ಬಂಧನಗಳನ್ನು ಕಳಚಿಕೊಂಡು ಶಾಶ್ವತವಾದ ಆತ್ಮತೃಪ್ತಿಗಾಗಿ ತಪಸ್ಸನ್ನು ಆಚರಿಸುವ ನಿರ್ಧಾರಕ್ಕೆ ಬಂದು ತಪೋವನದ ಕಡೆ ಸಾಗಿದನ್ನು.. ಎಂಬಲ್ಲಿಗೆ ಕಾದಂಬರಿಯನ್ನು ಮುಗಿಸಿದ್ದಾರೆ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group