ಸಾಹಿತ್ಯದ ಅತ್ಯುನ್ನತ ಪ್ರಶಸ್ತಿಯಾದ ಸರಸ್ವತಿ ಸಮ್ಮಾನ್ ಪ್ರಶಸ್ತಿ ವಿಜೇತ ಕನ್ನಡದ ಸುಪ್ರಸಿದ್ಧ ಸಾಹಿತಿ, ಪದ್ಮಭೂಷಣ ಡಾ.ಎಸ್ ಎಲ್ ಭೈರಪ್ಪನವರು ವಯೋಸಹಜ ಅನಾರೋಗ್ಯದಿಂದ ತೀರಿಕೊಂಡಿದ್ದಾರೆ.
ಅವರಿಗೆ ೯೪ ವರ್ಷ ವಯಸ್ಸಾಗಿತ್ತು. ರಾಷ್ಡ್ರೋತ್ಥಾನ ಆಸ್ಪತ್ರೆಯಲ್ಲಿ ಅವರು ಮಧ್ಯಾಹ್ನ ೨.೩೦ ರ ಸುಮಾರಿಗೆ ನಿಧನ ಹೊಂದಿದರು.
ರಾಜಕಾರಣ ಮೀರಿ ಪ್ರಧಾನಿ ನರೇಂದ್ರ ಮೋದಿಯವರ ಪಕ್ಕಾ ಅಭಿಮಾನಿಯಾಗಿದ್ದ ಭೈರಪ್ಪನವರು ಮೋದಿಯವರಂತೆಯೇ ಬಡತನದ ಪರಿಸ್ಥಿತಿ ಎದುರಿಸಿ ಅಪಾರ ಅನುಭವ ಪಡೆದುಕೊಂಡು ಬೆಳೆದು ಬಂದು ತಮ್ಮ ಅನುಭವಗಳನ್ನೇ ಅನೇಕ ಕಾದಂಬರಿಗಳಲ್ಲಿ ಬಿಂಬಿಸಿದ್ದರು.
ಪರ್ವ ಎಂಬ ಮಹಾ ಕಾದಂಬರಿಯಲ್ಲಿ ಮಹಾಭಾರತ ಕಾಲದ ಘಟನೆಗಳನ್ನು ನೈಜತೆಗೆ ಹತ್ತಿರವಾಗಿ ಚಿತ್ರಿಸಿ ಹೊಸ ದಾಖಲೆಯನ್ನೇ ನಿರ್ಮಿಸಿದ್ದರು. ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ವಂಶ ವೃಕ್ಷ, ಮತದಾನ, ಮಂದ್ರ, ಆವರಣ, ಯಾನ ಎಂಬ ಅನೇಕ ಕಾದಂಬರಿಗಳನ್ನು ಅವರು ಬರೆದಿದ್ದು ಸಾಕಷ್ಟು ಕಾದಂಬರಿಗಳು ವಿಶ್ವದ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ.
ಒಂದು ಕಾದಂಬರಿ ಬರೆಯಬೇಕಾದರೆ ಸುಮಾರು ಎರಡು ವರ್ಷಗಳ ಸಿದ್ಧತೆ, ಅಭ್ಯಾಸ, ಸಂಶೋಧನೆ ಮಾಡಿ ಅವರು ಕಾದಂಬರಿ ರಚನೆ ಮಾಡುತ್ತಿದ್ದರು. ಕೃತಿ ರಚನೆಯ ಕಾಲಕ್ಕೆ ಅವರು ಅನುಸರಿಸುತ್ತಿದ್ದ ಮಾದರಿಗೆ ಅವರಿಗೆ ಅವರೇ ಸಾಟಿ ಎಂಬಂತೆ ಭೈರಪ್ಪನವರು ಇದ್ದರು. ೯೪ ವರ್ಷಗಳ ತುಂಬು ಜೀವನ ಸಾಗಿಸಿರುವ ಭೈರಪ್ಪನವರಿಂದ ಇನ್ನೂ ಸಾಕಷ್ಟು ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಬರಬೇಕಾಗಿತ್ತು ಆದರೆ ಅವರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ಭರಿಸಲಾಗದ ನಷ್ಟವನ್ನುಂಟು ಮಾಡಿದೆಯೆನ್ನಬಹುದು.

