ಮಾತೆಯ ಮಡಿಲಲ್ಲಿ ಮುದ್ದು ಕಂದಮ್ಮಗಳಾಗಿ

Must Read

ಕಣ್ಣಲ್ಲಿ ಅಚ್ಚೊತ್ತುವಂತಿರುವ ಹಚ್ಚು ಹಸಿರಿನ ಕಾಡು, ಮನೆಯ ಸುತ್ತಮುತ್ತಲಿರುವ ನಳನಳಿಸುವ ಹೂಗಿಡಗಳು, ಕೈ ಬೀಸಿ ಕರೆಯುವಂತಿರುವ, ಬಾಯಲ್ಲಿ ನೀರೂರಿಸುವ, ಬಣ್ಣ ಬಣ್ಣದ ಗೊಂಚಲು ಗೊಂಚಲು ಹಣ್ಣುಗಳು, ಗಗನದೆತ್ತರಕ್ಕೆ ಮುಟ್ಟಿರುವ ಬೃಹದಾಕಾರದ ಹೆಮ್ಮರಗಳು, ಇವುಗಳ ಮುಂದೆ ತೀರಾ ಚಿಕ್ಕದಾದರೂ ಭೂ ರಮೆಗೆ ಸೀರೆ ಉಡಿಸಿದಂತಿರುವ ಹಸಿರಾದ ಹುಲ್ಲು, ಗಿಡ, ಬಳ್ಳಿ ಬೇರುಗಳು, ರುಚಿರುಚಿಯಾದ ತರಕಾರಿಗಳು, ಶಕ್ತಿ ನೀಡುವ ದವಸ-ಧಾನ್ಯಗಳು, ಹಾಲು ಕೊಡುವ ದನ ಕರುಗಳು ಬೇಕೆಂದೇ ನೀರು ಹಾಕಿ ಬೆಳೆಸಿರುವ ಮನೆಯ ಮುಂದಿನ ಚಿಕ್ಕ ಹೂದೋಟ, ಅರುಣನ ಸುವರ್ಣ ವರ್ಣದ ಪ್ರಥಮ ಕಿರಣಗಳು ಸ್ಪರ್ಶವಾಗುವುದೇ ತಡ ಅರಳುವ ಕಮಲದ ಹೂಗಳು, ಸುಗಂಧ ಸೂಸುವ ಜಾಜಿಮಲ್ಲೆಗಳು, ಮಕರಂದ ಹೀರುವ ದುಂಬಿಗಳು. ಹಿಗ್ಗಿ ಹಿಗ್ಗಿ ಹಿರಿದಾಗಿರುವ ವಿಧವಿಧದ ರಂಗು ರಂಗಿನ ಸುಮಗಳು. ಬೆಟ್ಟಗಳ ನಡುನಡುವೆ ಅಲ್ಲಲ್ಲಿ ನೆಲೆ ನಿಂತ ನೀಲಿ ನೀರಿನ ಸರೋವರ, ಇನ್ನೇನು ಗಗನವನ್ನು ಚುಂಬಿಸುತ್ತವೆ ಎನ್ನುವಷ್ಟು ಎತ್ತರವಿರುವ ಶಿಖರಗಳು.ಆಳವಾದ ಕಣಿವೆಗಳು ನೋಡುಗರ ಕಣ್ಣಿಗೆ ಹಬ್ಬವೇ ಹಬ್ಬ

ಇವೆಲ್ಲ ಸಾಲದೆಂಬತೆ ನೋಡುಗರ ಕಣ್ಮನ ಸೆಳೆಯುವ ಹೂದೋಟದಲ್ಲಿ ಹಾರಾಡುವ ಚಿಟ್ಟೆಗಳು ಇವೆಲ್ಲ ನಿಜಕ್ಕೂ ಭೂಮಿಯ ಮೇಲೆ ಸ್ವರ್ಗ ಎನ್ನುವ ಭಾವ ಮೂಡಿಸುವದಂತೂ ನಿಜ. ಇದಕ್ಕೆಲ್ಲ ಕಿರೀಟವಿಟ್ಟಂತೆ ರಾತ್ರಿ ಆಗಸದಲ್ಲಿ ಹೊಳೆಯುವ ನಕ್ಷತ್ರ ರಾಶಿ, ಹುಣ್ಣಿಮೆಯಂದು ಪೂರ್ಣ ಚಂದಿರ ಚೆಲ್ಲುವ ಚೆಂದದ ಬೆಳದಿಂಗಳು. ಅದರೊಂದಿಗೆ ಮೈ ತೀಡುವ ತಂಗಾಳಿ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಭಾವ ಮೂಡದೇ ಇರದು. ಮರದ ಪೊಟರೆಗಳಲ್ಲಿ ವಾಸ ಮಾಡಿಕೊಂಡಿರುವ ಮೋಡ ಕಂಡು ಹೊರ ಬರುವ ಮಯೂರ ನರ್ತನ ನೋಡಿದರಂತೂ ಮನಾನಂದ ಉಕ್ಕುವುದು. ಚಿಕ್ಕ ಮಕ್ಕಳು ನವಿಲು ಗರಿಯನ್ನು ಪುಟ್ಟ ಪುಸ್ತಕದ ನಡುವಿಟ್ಟು ಮರಿ ಹಾಕುತ್ತದೆಂದು ಕಾಯುವದಂತೂ ಸೋಜಿಗವೆನಿಸಿದರೂ ಸಂತಸ ನೀಡುವುದು. ಬೆಳ್ಳಂಬೆಳಿಗ್ಗೆ ಹಾರುವ ಹಕ್ಕಿ ಪಕ್ಕಿಗಳ ಕಲರವ ಕುಹೂ ಕುಹೂ ಎಂದು ಇಂಪಾಗಿ ಕೂಗಿ ಮನ ಅರಳಿಸುವ ಕೋಗಿಲೆ. ಅಬ್ಬಬ್ಬಾ! ಎರಡು ಕಣ್ಣು ಸಾಲವು ನಿಸರ್ಗ ಸೌಂದರ್ಯ ನೋಡಲು. ಅದೆಷ್ಟು ಹೇಳಿದರೂ ತೀರದು. ಪ್ರಕೃತಿಯ ಮಾತೆಯ ಅಂದ ಚೆಂದ. ಆಕೆ ಪದಗಳಿಗೆ ನಿಲುಕದವಳು ಶಬ್ದಗಳಿಗೆ ಎಟುಕದವಳು. ನಮ್ಮನ್ನೆಲ್ಲ ಸಾಕಿ ಸಲಹುವವಳು.
ಆ ದೇವರು ಅದೆಷ್ಟು ಪುರಸೊತ್ತಿನಲ್ಲಿ ಸೃಷ್ಟಿಸಿರಬೇಕು ಈ ಸೃಷ್ಟಿಯನ್ನು ಇಲ್ಲಿ ಒಂದರಂತೆ ಒಂದಿಲ್ಲ ಒಬ್ಬರಂತೆ ಇನ್ನೊಬ್ಬರಿಲ್ಲ. ಒಂದೊಂದು ತಳಿಯಲ್ಲಿ ಮತ್ತೆ ಭಿನ್ನ ವಿಭಿನ್ನ ತಳಿಗಳು ಒಂದನ್ನೊಂದು ಹೋಲವು. ಒಂದು ಸ್ಥಳದಲ್ಲಿ ಇರುವಂತೆ ಇರುವ ಚೆಲುವು ಇನ್ನೊಂದು ಸ್ಥಳದಲ್ಲಿ ಇಲ್ಲ. ಎಲ್ಲವೂ ಅಪ್ರತಿಮವಾದವುಗಳು.ಚಳಿ ಕೊರೆಯುವ, ಹೆಚ್ಚು ಮಳೆ ಬೀಳುವ, ಮಳೆ ಬೀಳದಿರುವ, ತುಸು ಮಳೆ ಸುರಿಯುವ, ಹಿಮದಿಂದ ಆವೃತವಾಗಿರುವ, ಹಿಮಪಾತವಾಗುವ ಎಲ್ಲವೂ ನಯನಾಕರ್ಷಕ.. ಪ್ರತಿಯೊಂದರ ರೂಪ ಅಪರೂಪ.

ಪ್ರಕೃತಿಯ ಸಿರಿಯನ್ನು ತನ್ನ ಕಣ್ಣೆಂಬ ಕ್ಯಾಮೆರಾದಲ್ಲಿ ಬಹುದಿನ ಹಿಡಿದಿಡಲಾಗದೆಂದು ಕ್ಯಾಮೆರಾ ಕಣ್ಣಲ್ಲಿ ಹಿಡಿದಿಡುತ್ತಾನೆ. ಕಲಾವಿದ ಕೊಂಚ ಕೊಂಚವಾಗಿ ಕುಂಚದಲ್ಲಿ ಹಿಡಿಯುವುದನ್ನು ಬಿಡುವುದಿಲ್ಲ. ಇದು ಸಾಲದೆಂಬಂತೆ ಕವಿ ಪದಗಳನ್ನು ದಾರದಲ್ಲಿ ಪೋಣಿಸಿ ಸುಂದರ ಕಾವ್ಯ ಮಾಲೆ ಮಾಡುತ್ತಾನೆ. ತಾನು ಆನಂದಿಸುವುದಲ್ಲದೇ ಓದುಗರನ್ನು ಕಾವ್ಯ ಕನ್ನಿಕೆಯ ಮೂಲಕ ಆನಂದಿಸುತ್ತಾನೆ. ನಿಸರ್ಗದ ಸಿರಿಯನ್ನು ಹಿಡಿದಿಟ್ಟ ಪರಿಯೂ ಭಿನ್ನ ವಿಭಿನ್ನ. ಪ್ರತಿ ಋತುವಿಗೂ ಹೊಸ ಹೊಸ ವರ್ಣದ ಅಂದಚೆಂದ ಆಕೆಯದು. ನೋಡುವವರನ್ನು ಬೆಕ್ಕಸ ಬೆರಗಾಗಿಸುವಳು. ತನ್ನ ಮಡಿಲಲಿ ಕುಣಿದು ಕುಪ್ಪಳಿಸುವಂತೆ ಮಾಡುವಳು. ವಯಸ್ಸು ಯಾವುದೇ ಇರಲಿ, ಲಿಂಗ ಯಾವುದೇ ಇರಲಿ, ಅವಳಿಗೆ ಭೇದವಿಲ್ಲ. ತನ್ನ ಸನಿಹ ಬಂದವರಿಗೆ ನೆಮ್ಮದಿ ಶಾಂತಿ ನೀಡದೇ ಮರಳಿಸುವುದಿಲ್ಲ. ಆಕೆಯದು ಉಳ್ಳವರಿಗೂ ಇಲ್ಲದವರಿಗೂ ಒಂದೇ ತೆರನಾದ ಮಮತೆ. ಆಕೆಯ ಪಾಲಿಗೆ ಎಲ್ಲರೂ ಒಂದೇ.ಆಕೆ ನಮಗೆ ಬೇಕಾಗಿರುವ ಅನ್ನ ಗಾಳಿ ನೀರು ಬೆಳಕು ಎಲ್ಲ ಅಂದರೆ ಎಲ್ಲ ನೀಡಿ ಸಲುಹುತ್ತಾಳೆ.

ಸೋಜಿಗವೆಂದರೆ ಆಕೆಯ ಮಕ್ಕಳಾದ ನಾವೇಕೆ ಹೀಗೆ? ಆಕೆಯ ಗರ್ಭವನ್ನು ಬಗೆದು ಸಿರಿವಂತರಾಗಲು ಹವಣಿಸುತ್ತಿದ್ದೇವೆ. ಆಕೆಯನ್ನು ಇಂಚಿಂಚೂ ಬಿಡದೇ ದ್ವಂಸಿಸುತ್ತಿದ್ದೇವೆ. ನಮ್ಮ ದುರಾಸೆಗೆ ಈಗಾಗಲೇ ನಾಶವಾದ ಪ್ರಾಣಿ ಪಕ್ಷಿ ಸಂಕುಲಗಳೆಷ್ಟೋ. ನಾಶದಂಚಿನಲ್ಲಿರುವ ಜೀವ ಸಂಕುಲಗಳೆಷ್ಟೋ? ಲೆಕ್ಕ ಹಾಕಿದರೆ ತಲೆತಿರುಗುವುದು ಪಕ್ಕಾ. ಆಕೆಯಂತೆ ರಕ್ಷಕರಾಗದೇ ಭಕ್ಷಕರಾಗುತ್ತಿದ್ದೇವೆ. ಎಲ್ಲ ಬಂಧ ಭಾವಗಳ ಗಾಳಿಗೆ ತೂರಿ ಮುಖದ ಮುಂದೆ ಚೆಂದದ ಮಾತಾಡಿ ಬೆನ್ನಿಗೆ ಚುಚ್ಚಿ ಹಣ ಸಂಪಾದಿಸುವ ಕೈಗಳಾಗಿ ಬದಲಾಗುತ್ತಿದ್ದೇವೆ. ವಿಚಿತ್ರ ನೋಡಿ ಪರಿಸರ ರಕ್ಷಣೆ ನಮ್ಮ ಹೊಣೆ ಎನ್ನುತ್ತೇವೆ! ವಿಚಿತ್ರವೆನಿಸಿದರೂ ಸತ್ಯ ಅಲ್ಲವೇ? ಪ್ರಾಣಿಗಳಲ್ಲಿ ಸರ್ವಶ್ರೇಷ್ಠ ಎಂದು ಮೆರೆಯುವ ನಾವು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಸಹಜೀವಿಗಳೊಂದಿಗೆ ಸಹಬಾಳ್ವೆ ಕಲಿತು ಪ್ರಕೃತಿ ಮಾತೆಯ ಮಡಿಲಲ್ಲಿ ಮುದ್ದು ಕಂದಮ್ಮಗಳಾಗಿ ನಲಿಯ ಬೇಕಾಗಿದೆಯಲ್ಲವೇ?

ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group