ಕವನ : ಮತ್ತೆ ಬರುವ ಭಗತ್ ಸಿಂಗ್

Must Read

ಮತ್ತೆ ಬರುವ ಭಗತ್ ಸಿಂಗ್

ಭಗತ್ ಸಿಂಗ್ ಎಂದರೆ
ಅದು ಬರಿ ವ್ಯಕ್ತಿಯ ಹೆಸರಲ್ಲ
ಇತಿಹಾಸದ ಪುಟಗಳಲ್ಲಿನ
ಹಸಿ ಹಸಿ ರಕ್ತದಕ್ಷರ

ಭಗತ್ ಸಿಂಗ್ ಎಂದರೆ
ಶೋಷಣೆಯ ವಿರುದ್ಧ
ಸಿಡಿದ ಬೆಂಕಿಯ ಚೆಂಡು
ಸಮತೆಯ ಕನಸು

ಸತ್ಯ ಪ್ರೇಮ ಶಾಂತಿ
ನಿತ್ಯ ಅವನ ಜಪತಪ
ಶಸ್ತ್ರ ನಿಶಸ್ತ್ರ ಹೋರಾಟ
ಕೊನೆ ಹೇಳಿದ ಗುಲಾಮಗಿರಿಗೆ

ಭಗತ್ ಸಿಂಗ್ ಎಂದರೆ.
ಶತಮಾನಗಳ ಆಕ್ರೋಶ
ವಂಚನೆಯ ಚಕ್ರವ್ಯೂಹ ಮೆಟ್ಟಿ
ಭವಿಷ್ಯದ ಬದುಕು ಕಟ್ಟಿಕೊಟ್ಟವ

ಭಗತ ಸಿಂಗ ಎಂದರೆ
ಕರಾಳ ರಾತ್ರಿಯ ಕಳೆದು
ಹುಣ್ಣಿಮೆಯ ಬೆಳಕು ತೋರುವ
ಸಮರಸದ ಋತುಗಾನ

ಪ್ರತಿಯುಗದ ಅಗಾಧ ಶಕ್ತಿ
ಪ್ರತಿಮನದ ಯುಕ್ತಿ
ಪ್ರತಿಕ್ಷಣದ ಕ್ರಾಂತಿ
ಲಾಲ್ ಸಲಾಂ ಭಗತ್ ಸಿಂಗ್

ಭಗತ್ ಸಿಂಗ್ ಎಂದರೆ..
ಸುಳ್ಳುಗಳ ಸರಮಾಲೆ ಕಿತ್ತು
ವರ್ತಮಾನದ ವಂಚನೆ ದಹಿಸಿ
ಇಂಕಿಲಾಬ್ ಮೆನಿಫೆಸ್ಟೋ ಕೂಗಿದವ

ಭಗತ ಸಿಂಗ ಕೋರ್ಟ್ ನಲ್ಲಿ
ಬಾಂಬಿನ ಸದ್ದಿನಿಂದ ಸುದ್ಧಿ ಮಾಡಿ
ಬೇಧಿಸಿದ ಸತ್ಯದ ಗುಟ್ಟು
ಕೊಲ್ಲಲಿಲ್ಲ ಯಾರನ್ನೂ

ಭಗತ್ ಸಿಂಗ ಬಯಲು ಮಾಡಿದ
ಆಂಗ್ಲರ ದರ್ಪ ದಳ್ಳುರಿ
ಅಹಿಂಸೆ ಮಂತ್ರ ಜಪಿಸಿ ಜೀವ ತೆತ್ತ
ಮುಗ್ಧ ನಗೆ ಬೆಳ್ಳಗೆ

ಇದೋ ಈಗ ಇತಿಹಾಸ
ಮತ್ತೆ ಮರಕಳಿಸುತ್ತಿದೆ
ಹುಟ್ಟಿ ಬರುವರು ನೂರು ನೂರು
ದೇಶ ಯೋಧ ಭಗತರು

ಕಲಬೆರಕೆಯ ಅವ್ಯವಹಾರ
ಆಡಳಿತ ವಿರೋಧ ಪಕ್ಷಗಳ ಕಿರುಚಾಟ
ಸದನದ ವಂಚನೆಗೆ ಸೂರ್ಯೋದಯ
ಭಗತ ಗುಡುಗು ಸಿಡಿಲು ಕೋಲ್ಮಿಂಚು

ಕಿಚ್ಚಿಲ್ಲದ ಬೆಳಕಿನಲಿ
ಕತ್ತಲು ಹೆಪ್ಪುಗಟ್ಟುತ್ತಿದೆ.
ಕನಸು ಕವನಗಳು ಮುದುಡಿ
ಭಗತ ಎಂಬ ಚಿಗುರು ಭರವಸೆ

ಭಗತ್ ಸಿಂಗ ಸುಖದೇವ್ ರಾಜಗುರು
ಮತ್ತೆ ಮತ್ತೆ ಮರಳುತ್ತಾರೇ
ಸುಳ್ಳಿನ ಸಾಮ್ರಾಜ್ಯದಲ್ಲಿ
ಸತ್ಯ ಹೊತ್ತಿ ಉರಿಯಲು

ಬೆಚ್ಚಗಿರುವ ರಾಜಕಾರಣಿ
ಬುರೋಕ್ರಾಟ್ ಬಂಡವಾಳಶಾಹಿಗಳ
ಮುಖವಾಡ ಕಳಚಲು ಬರುತ್ತಾನೆ
ಗಟ್ಟಿ ಧ್ವನಿಯ ಭಗತ್ ಸಿಂಗ್

ದುರಹಂಕಾರಿ ಅರಸನ ರಾಜ್ಯದಲ್ಲಿ
ನಾವೆಲ್ಲರೂ ಬೆತ್ತಲೆಂಬ ಅರಿವು
ಮೂಡಿಸಲು ಬರುತ್ತಾನೆ ಭಗತ್
ಸರ್ವೋದಯ ಪರಿಪೂರ್ಣದೆಡೆಗೆ

ಕಾಲ ಮತ್ತೆ ನಗೆಯ ಕೇಕೆ ಹಾಕಿದ
ಭಗತ್ ಸಿಂಗನ ಆಗಮನಕೆ
ಈಗ ಘಳಿಗೆ ಮತ್ತೆ ಎದುರಾಗಿದೆ
ಕ್ರಾಂತಿಯೊಂದೇ ಭಾಷೆ

ಪ್ರತಿಮನದ ಮೌನ ಸ್ಮಶಾನದಿ
ಭಗತ್ ಸಿಂಗನ ಕ್ರಾಂತಿ ಕಿಡಿ ಸಿಡಿಸಿ
ಮಾತಾಡಬೇಕಿದೆ ಈಗಲಾದರೂ ಸತ್ಯ
ಏಳು ದಶಕಗಳೇ ಕಳೆದವು ಕಾಯುತಿಹೆವು ನಿತ್ಯ

ಭಗತ್ ಸಿಂಗನ ಬರುವ ಘಳಿಗೆ
ಕತ್ತೆತ್ತಿ ನೋಡುವೆ ಮತ್ತೆ ಮತ್ತೆ
ದುಷ್ಟ ಚಂಡಾಲರ ಹುಟ್ಟಡಗಿಸಿ
ಮೆರೆವ ಬುದ್ಧ ಬಸವರ ದಿವ್ಯ ಭಾರತ

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group