ಮೊನ್ನೆ ಅಪ್ರಾಪ್ತ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕೊಲೆಮಾಡಿದ ಟಿವಿ ಯಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಪಾಲಕರು ಗಾಬರಿಗೊಂಡು ನನ್ನ ಮಗ ತುಂಬಾ ಮುಗ್ಧ ಹೀಗೆ ಮಾಡಲು ಸಾಧ್ಯವೆ ಇಲ್ಲ ಎನ್ನುವ ವಾದ ಮಾಡುತಿದ್ದರು, ಕಾಲೇಜನಲ್ಲಿ ಪಾಲಕರಿಗೆ ವಿಚಾರಣೆಗೆ ಕರೆದಾಗ ಕ್ಯಾಂಪಸ್ ನಲ್ಲಿ ಮಗ ರೌಡಿಸಂ ಹಾಗೂ ಹುಡುಗಿಯೊಂದಿಗೆ ಪ್ರೀತಿ ಪ್ರೇಮ ಎಂದು ಸುತ್ತಾಡುತ್ತಿದ್ದಿದ್ದು ಇಡಿ ಊರಿಗೆ ಗೊತ್ತಿತ್ತು, ಆದರೆ ತಮ್ಮ ಮಗನ ನಿಜಾಂಶ ಕುಟುಂಬದವರಿಗೆ ಗೊತ್ತೆ ಇಲ್ಲ.
ಇನ್ನೊಂದೆಡೆ ಅಪ್ರಾಪ್ತ ಕಾಲೇಜ್ ಹುಡುಗಿಯನ್ನು ಪ್ರಿಯಕರ ಪೆಟ್ರೋಲ್ ಸುರಿದು ಕೊಲೆಮಾಡಿದ ದಾರುಣ್ಯ ಘಟನೆ ಮೊಬೈಲ್, ಟಿವಿ ಎಲ್ಲೆಡೆಯು ಹರಿದಾಡಿತು. ಯುವತಿಯ ಪೋಸ್ಟ್ಮಾರ್ಟಮ್ ರಿಪೋರ್ಟ್ ನಲ್ಲಿ ಅವಳು ಗರ್ಭಿಣಿಯಾಗಿದ್ದಳು ಎನ್ನುವ ಸತ್ಯ ಹೊರಬಿದ್ದಾಗ ಪಾಲಕರು ಕಂಗಾಲಾಗಿದ್ದರು.ನಿಜಾಂಶ ಏನು ಗೊತ್ತೆ ಅವಳು ಗೆಳತಿಯರ ಮನೆಗೆ ಗ್ರೂಪ್ ಸ್ಟಡಿಗೆ ಹೋಗುತ್ತೇನೆಂದು ಹೇಳಿ ಪ್ರಿಯಕರನೊಂದಿಗೆ ಜಾಲಿಯಾಗಿ ಓಡಾಡುತ್ತಿದ್ದು, ಅವಳು ಗರ್ಭಿಣಿಯಾದಾಗ ಮುಂದೆ ಸಮಸ್ಯೆ ಆಗುತ್ತದೆ ಎಂದು ದೂರದ ಊರಿಗೆ ಹೋಗಿ ಗರ್ಭಪಾತಮಾಡುವಾಗ ಅಪ್ರಾಪ್ತೆ ಮರಣ ಹೊಂದುತ್ತಾಳೆ, ಗಾಬರಿಗೊಂಡ ಪ್ರಿಯಕರ ಏನು ತೋಚದೆ ಅವಳನ್ನು ದೂರದ ಕಾಡಿನಲ್ಲಿ ಪೆಟ್ರೋಲ್ ಸುರಿದು ಸುಟ್ಟುಬಿಡುತ್ತಾನೆ, ಅದನ್ನು ನೋಡಿದ ಕೆಲವೊಬ್ಬರು ಪೊಲೀಸ್ ಗೆ ಕರೆ ಮಾಡಿ ವಿಷಯ ತಿಳಿಸಿದಾಗ ಘಟನಾ ಸ್ಥಳದಲ್ಲಿ ಯುವತಿಯೊಂದಿಗೆ ಪುಟ್ಟ ಜೀವ ಕೂಡ ಅರೆಬರೆ ಬೆಂದು ಹೋಗಿದ್ದು ದಾರುಣ್ಯ ಘಟನೆ.
ಈ ಕಡೆ ಶೋಭಾ ಗೆಳತಿಯರೊಂದಿಗೆ ಕಾಲೇಜ್ ಟ್ರಿಪ್ ಹೋಗುತ್ತಿದ್ದೇನೆ ಎಂದು ಹೋಗಿದ್ದಳು, ಮನೆಗೆ ಬಂದು ಒಂದು ವಾರದೊಳಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ, ಕಾರಣ ಏನು ಗೊತ್ತೆ? ಗೆಳೆಯನೊಂದಿಗೆ ಟ್ರಿಪ್ ಗೆ ಹೋಗಿದ್ದಾಗ ಗೆಳೆಯನ ಗುಂಪು ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ವೀಡಿಯೊ ಮಾಡಿ ಅವಳನ್ನು ಬೆದರಿಸಿ ಪದೆ ಪದೆ ಕರೆ ಮಾಡಿ ವೀಡಿಯೊ ವೈರಲ್ ಮಾಡುವ ಬೆದರಿಕೆ ಹಾಕಿ ಅತ್ಯಾಚಾರ ಮಾಡಲು ಪ್ರಾರಂಭಿಸುತ್ತಾರೆ ಬೇಸತ್ತು ಏನೂ ತೋಚದ ಶೋಭಾ ಕುಟುಂಬದೊಂದಿಗೆ ಹೇಳಿಕೊಳ್ಳದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ….
ಹೀಗೆ ಒಂದೇ ಎರಡೇ ಅನೇಕ ಅಹಿತಕರ ಘಟನೆಗಳು ನಡೆಯುತ್ತಿದ್ದರು ಕುಟುಂಬದವರಿಗೆ ತಮ್ಮ ಮಕ್ಕಳ ಬಗ್ಗೆ ಗೊತ್ತೆ ಇಲ್ಲ.
ಒಂದೆ ಕುಟುಂಬ ಎಲ್ಲರೂ ಒಟ್ಟಿಗೆ ಜೀವನ ಮಾಡುತ್ತಿದ್ದರು ಕೂಡ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎನುವ ಅರಿವೆ ಇಲ್ಲ.
ಹಾಗೆಯೆ ದುಬಾರಿ ಬೈಕ್ ಗಾಗಿ ಹಠ ಹಿಡಿದ ಮಗನಿಗೆ ಏನು ಗೊತ್ತು? ತಂದೆಯು ತುಂಬಾ ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲಿದ್ದು, ಶಸ್ತ್ರ ಚಿಕಿತ್ಸೆಗೆ ಹಣ ಜೋಡಿಸಲು ಒದ್ದಾಡುತ್ತಿರುವುದು ಮಗನಿಗೆ ಗೊತ್ತಿರದ ಸಂಗತಿ.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪರಾಧಗಳಲ್ಲಿ ಶೇಕಡ 90ರಷ್ಟು ಅಪರಾಧ ನಡೆಯುತ್ತಿರುವುದಕ್ಕೆ ಕಾರಣ ಯುವಕರು ಎನ್ನುವುದು ದುರಾದೃಷ್ಟದ ಸಂಗತಿ.
ಇಂತಹ ಘಟನೆಗಳು ಸಂಭವಿಸಲು ಕಾರಣ ಹುಡುಕುತ್ತಾ ಹೋದರೆ, ಕುಟುಂಬದಲ್ಲಿದ್ದರೂ ನಾವು ಕುಟುಂಬದವರೊಂದಿಗೆ ಇಲ್ಲ ಎಂಬುದು ಸಾಬೀತಾಗುತ್ತಿದೆ.ನಾವು ಕುಟುಂಬದಲ್ಲಿದ್ದರೆ ಸಾಲದು ಕುಟುಂಬದಲ್ಲಿರುವ ಪ್ರತಿಯೊಬ್ಬರ ಜೊತೆಗೆ ನಮ್ಮ ಸಂಬಂಧ ಗಟ್ಟಿಯಾಗಿರಬೇಕು. ಇದು ನನ್ನ ಕುಟುಂಬ ನನ್ನ ರಕ್ತ, ನನ್ನ ಸಹೋದರ, ಸಹೋದರಿ ,ನನ್ನ ತಂದೆ ತಾಯಿ, ನನ್ನ ಅಜ್ಜಿ ತಾತ ಎನ್ನುವ ಭಾವನೆ ನಮ್ಮಲ್ಲಿರಬೇಕು.
ಪ್ರತಿಯೊಬ್ಬರ ಬಗ್ಗೆ ಅರಿತುಕೊಳ್ಳುವುದು ಅಗತ್ಯವಿದೆ.
ನಿಜ ಹೇಳಬೇಕೆಂದರೆ ಇತ್ತೀಚಿನ ಜೀವನದಲ್ಲಿ ಹೆಣ್ಣು ಗಂಡು ಎಂಬದೆ ಎಲ್ಲರೂ ಉದ್ಯೋಗಸ್ಥರಾಗಿದ್ದು ವೈಯಕ್ತಿಕ ಜೀವನಕ್ಕೆ ಸಮಯ ಕೊಡುವಲ್ಲಿ ಎಡವುತಿದ್ದೇವೆ.
ನಾಗಾಲೋಟದೊಂದಿಗೆ ಓಡುತ್ತಿರುವ ಜಗತ್ತು, ಬಿಡುವಿಲ್ಲದ ಜೀವನ ಶೈಲಿ ನಮ್ಮದಾಗಿದ್ದು, ದೈಹಿಕವಾಗಿ ಕುಟುಂಬದವರೊಂದಿಗೆ ಇದ್ದರೂ ಭಾವನಾತ್ಮಕವಾಗ ಬೆರೆಯುವುದು ಅಗತ್ಯವಿದೆ. ನಮ್ಮ ಕುಟುಂಬದವರೊಂದಿಗೆ ದಿನಾಲು ಒಂದು ಹೊತ್ತಾದರೂ ಕುಳಿತು ಊಟ ಮಾಡುವುದು, ಒಟ್ಟಿಗೆ ಮಾತುಕಥೆ ನಡೆಸಬೇಕು, ಪ್ರತಿ ದಿನ ಕುಟುಂಬದ ಸದಸ್ಯರೊಂದಿಗೆ ಚರ್ಚೆ ಮಾಡಬೇಕು, ಮಕ್ಕಳೊಂದಿಗೆ ಹಬ್ಬ ಹರಿದಿನಗಳ ಆಚರಣೆ, ಪೂಜೆ ಪುನಸ್ಕಾರ, ಪ್ರವಾಸ ಕೈಗೊಳ್ಳಬೇಕು, ಮಕ್ಕಳ ಶಾಲಾ ಕಾಲೇಜ್ ಗಳೊಂದಿಗೆ ಅವರ ಪ್ರಗತಿ ಬಗ್ಗೆ ಪಾಲಕರು ಚರ್ಚಿಸಬೇಕು.
ಕೇವಲ ನಮ್ಮ ನಮ್ಮ ಕರ್ತವ್ಯಗಳನ್ನು ನಿಭಾಯಿಸಿದರೆ ಸಾಲದು.
ನಾನು ನನ್ನದು ಎಂದು ಅರಿತು ಬಾಳುವುದು ಅಗತ್ಯವಾಗಿದೆ.
ನಮ್ಮ ಕುಟುಂಬದ ಪ್ರತಿ ಸದಸ್ಯರ ಬಗ್ಗೆ ಸಂಪೂರ್ಣ ಮಾಹಿತಿ ನಮಗಿರಬೇಕು , ಕುಟುಂಬದಲ್ಲಿ ಹಾಗೂ ಕುಟುಂಬದ ಹೊರಗೆ ಸಮಾಜದೊಂದಿಗೆ ಹೇಗೆ ಇದ್ದಾರೆ ಎನ್ನುವ ವಿಷಯ ನಮಗೆ ಗೊತ್ತಿರಬೇಕು.
ಅನೇಕ ಪಾಲಕರಿಗೆ ತಮ್ಮ ಮಕ್ಕಳ ನಡೆ ನುಡಿ ಆಚಾರ ವಿಚಾರ, ಹೊರಗಿನ ಜಗತ್ತಿನಲ್ಲಿ ಅವರ ಜೀವನಶೈಲಿ ಹೇಗಿದೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ ಇರುವುದು.
ಹಾಗೆ ಮಕ್ಕಳಿಗೂ ಕೂಡ ತಮ್ಮ ಪಾಲಕ ಪೋಷಕರ ಬಗ್ಗೆ ಕಾಳಜಿ ಇಲ್ಲದೆ ಇರುವುದು, ಅವರ ಬಗ್ಗೆ ಸಂಪೂರ್ಣ ಅರಿಯದೆ ಕೇವಲ ತಮ್ಮ ಬೇಡಿಕೆಗಳನ್ನು ಈಡೇರಿಸುವವರು, ನಮಗೆ ಬೇಕಾದ ಎಲ್ಲಾ ಅನುಕೂಲತೆಗಳನ್ನು ಒದಗಿಸಿ ಕೊಡುವವರು ಎನ್ನುವ ಭಾವನೆ ಇತ್ತೀಚಿನ ಪೀಳಿಗೆಯಲ್ಲಿ ಭಾವನೆ ಬೇರೂರುತ್ತಿರುವುದು ದುಃಖಕರ ಸಂಗತಿ.
ಪಾಲಕರು ಹಾಗೂ ಕುಟುಂಬದ ಪ್ರತಿ ಸದಸ್ಯರ ಬಗ್ಗೆ ಮಕ್ಕಳು ಬಾಂಧವ ಹೊಂದಿರಬೇಕು.
ಮುಂದಿನ ನಮ್ಮ ಜೀವನ ಹಾಗೂ ನಮ್ಮ ಮಕ್ಕಳ ಬದುಕು ಸಾರ್ಥಕತೆಯಿಂದ ಬದುಕು ಕಟ್ಟಿಕೊಳ್ಳಲು ಒಬ್ಬರನ್ನು ಒಬ್ಬರು ಅರಿತುಕೊಂಡು ಬದುಕುವುದು ಬಹಳ ಮುಖ್ಯವಾಗಿದೆ.
ನಿಜವಾದ ಕುಟುಂಬದ ಅರ್ಥವನ್ನು ನಾವು ಅರಿತುಕೊಳ್ಳಬೇಕು, ಎಲ್ಲರ ಬೇಕು ಬೇಡಿಕೆಗಳನ್ನು ನೆರವೇರಿಸುವುದಷ್ಟೇ ನಮ್ಮ ಕರ್ತವ್ಯವಲ್ಲ, ಕುಟುಂಬದಲ್ಲಿ ನಮ್ಮದೇ ಆದಂತಹ ಜವಾಬ್ದಾರಿಗಳನ್ನು ನಾವು ಅರಿತುಕೊಳ್ಳಲೇಬೇಕು .
“ಕುಟುಂಬ ಎಂದರೆ ರಕ್ತ ಸಂಬಂಧ ಹೊಂದಿರುವ ಜನರ ಗುಂಪು”, ಸಾಮಾನ್ಯವಾಗಿ ಒಂದೇ ಮನೆಯಲ್ಲಿ ವಾಸಿಸುತ್ತೇವೆ ಮತ್ತು ಪ್ರೀತಿ, ಬೆಂಬಲ ಮತ್ತು ಸಹಕಾರದ ಭಾವನೆಗಳನ್ನು ಹಂಚಿಕೊಳ್ಳುವುದು ಕುಟುಂಬದಿಂದ.
ಕುಟುಂಬವು ಸಾಮಾಜಿಕ , ಸಾಂಸ್ಕೃತಿಕ ಹಾಗೂ ಭೌತಿಕಬೆಂಬಲದ ಮೂಲವಾಗಿದ್ದು, ಇದು ವ್ಯಕ್ತಿಯ ಯಶಸ್ಸು ಮತ್ತು ಯೋಗಕ್ಷೇಮಕ್ಕೆ ಪ್ರಮುಖವಾಗಿದೆ.
ಕುಟುಂಬದ ಇದು ಮದುವೆ, ರಕ್ತ ಸಂಬಂಧಗಳ ಮೂಲಕ ರಚನೆಯಾದ ಒಂದು ಗುಂಪು.
ಒಂದು ನಾವು ಹುಟ್ಟಿದ ಕುಟುಂಬ. ಇನ್ನೊಂದು ವಿವಾಹವಾದ ನಂತರ ಕಟ್ಟಿಕೊಂಡ ಕುಟುಂಬ.
ಕುಟುಂಬದ ಸದಸ್ಯರು ಸಾಮಾನ್ಯವಾಗಿ ಒಂದೇ ಮನೆಯಲ್ಲಿ ವಾಸಿಸುತ್ತಾರೆ. ಕುಟುಂಬವು ಭಾವನಾತ್ಮಕ ನಿಕಟತೆ, ಪ್ರೀತಿ, ಕಾಳಜಿ ಮತ್ತು ಬೆಂಬಲವನ್ನು ಒದಗಿಸುವ ಒಂದು ಸುರಕ್ಷಿತ ವ್ಯವಸ್ಥೆಯಾಗಿದೆ.
ಕುಟುಂಬವು ಮಾನವೀಯ ದಿನಗಳೊಂದಿಗೆ ಅನುಭವದ ಮೂಲಕ ಕುಟುಂಬ ಸದಸ್ಯರ ಒಡನಾಟದೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಲು ಹಾಗೂ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ರವಾನಿಸುವ ಒಂದು ಪ್ರಮುಖ ಸಾಮಾಜಿಕ ಸಂಸ್ಥೆಯಾಗಿದೆ, ಇದು ಸಮಾಜದ ಅಡಿಪಾಯವಾಗಿದೆ.
ಅದು ಚಿಕ್ಕ ಕುಟುಂಬವೇ ಆಗಿರಲಿ, ದೊಡ್ಡ ಕುಟುಂಬವೇ ಆಗಿರಲಿ ಮಾನವೀಯ ಮೌಲ್ಯ ಹಾಗೂ ನನ್ನದು ಎನ್ನುವ ಭಾವನೆ ಹೆಣ್ಣು ಗಂಡು ಇಬ್ಬರಲ್ಲೂ ಇರುವುದು ಅತಿ ಮುಖ್ಯವಾಗಿದೆ.
ಇಲ್ಲಿ ವೈಯಕ್ತಿಕ ಆಸೆ ಆಕಾಂಕ್ಷೆಗಳಿಗಿಂತ ತ್ಯಾಗಕ್ಕೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಇಚ್ಛಾನುಸಾರ ತಮ್ಮ ತಮ್ಮ ಬದುಕನ್ನು ಕಟ್ಟಿಕೊಂಡು ಬದುಕು ಕಟ್ಟಿಕೊಳ್ಳಲಿಕ್ಕೆ ಅನುಕೂಲವಾಗಿದ್ದರು ಕೂಡ, ವಿದ್ಯಾವಂತರಾದ ನಾವು ಜೀವನದಲ್ಲಿ ಮೊದಲ ಆದ್ಯತೆ ಕುಟುಂಬಕ್ಕೆ ಇರಲಿ, ಬಿಡುವಿಲ್ಲದ ಜೀವನದಲ್ಲಿಯೂ ಕೂಡ ಕುಟುಂಬಕ್ಕೆ ಮೊದಲ ಆದ್ಯತೆ ಕೊಟ್ಟು ಕೆಲವು ಸಂದರ್ಭಗಳಲ್ಲಿ ನಾನು ನೀನು ಎನ್ನದೆ
ವಿಶಾಲ ಮನೋಭಾವದಿಂದ ಬದುಕುವುದು ಅನಿವಾರ್ಯವಾಗಿದೆ. ಪ್ರತಿಯೊಬ್ಬ ಕುಟುಂಬ ಸದಸ್ಯರು ಕೂಡ ತನ್ನ ಕರ್ತವದೊಂದಿಗೆ ಆತ್ಮೀಯತೆಯಿಂದ ಇದ್ದಾಗ ಮಾತ್ರ ನಮ್ಮದು ಸುಖಿ ಕುಟುಂಬ ಸುಂದರ ಕುಟುಂಬವಾಗಲು ಸಾಧ್ಯವಾಗುತ್ತದೆ.
ಮನುಷ್ಯನ ಜೀವನ ಕುಟುಂಬದಿಂದ ಆರಂಭ ಆಗುತ್ತದೆ, ಕುಟುಂಬದ ಪ್ರತಿಯೊಬ್ಬ ಸದಸ್ಯನ ಯಶಸ್ಸು ಏಳಿಗೆ ಎಲ್ಲ ಶ್ರೇಯಸ್ಸು ಕುಟುಂಬದ ಪ್ರತಿಯೊಬ್ಬರಿಗೂ ಸಲ್ಲುತ್ತದೆ.

ನಂದಿನಿ ಸನಬಾಳ್ ಪಾಳಾ ಕಲಬುರಗಿ.

