ಸಿಂದಗಿ: ಸ್ವತಂತ್ರ ಭಾರತದಲ್ಲಿ ಹತ್ತು ಹಲವಾರು ಜಯಂತಿಗಳನ್ನು ಆಚರಿಸುತ್ತ ಬರಲಾಗುತ್ತಿದೆ ಅಲ್ಲದೆ ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಮಹಾತ್ಮಾ ಗಾಂಧಿಜಿಯವರು ಸೇರಿದಂತೆ ಅನೇಕ ಮಹನೀಯರ ಜಯಂತಿಗಳಲ್ಲಿ ಇಲಾಖಾ ಅಧಿಕಾರಿಗಳು ಇರದಿರುವುದು ಖೇದಕರ ಸಂಗತಿ. ಮುಂದಿನ ಎಲ್ಲ ರಾಷ್ಟ್ರೀಯ ಹಬ್ಬಗಳಲ್ಲಿ ಎಲ್ಲ ಅಧಿಕಾರಿಗಳು, ಪತ್ರಕರ್ತರು, ನಾಯಕರು, ಯುವಕರು ಪಾಲ್ಗೊಂಡು ಮಹನೀಯರ ಆದರ್ಶಗಳನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮನವಿ ಮಾಡಿದರು.
ಪಟ್ಟಣದ ತಹಶೀಲ್ದಾರ ಕಾಯಾಲಯದಲ್ಲಿ ತಾಲೂಕು ಆಡಳಿತದವತಿಯಿಂದ ಹಮ್ಮಿಕೊಂಡ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರೀಜಿಯವರ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಸತ್ಯ, ಅಹಿಂಸೆಗಳಂತಹ ಶಾಂತಿಯುತ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾನ್ ಚೇತನ ಮಹಾತ್ಮ ಗಾಂಧಿಯವರ ಪ್ರಭಾವ ಈ ದೇಶಕ್ಕಿಂತಲೂ ವಿದೇಶಗಳಲ್ಲಿ ಪ್ರಚಲಿತವಾಗಿದ್ದರೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರೀಜಿಯವರು ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಗಳ ಮೂಲಕ ದೇಶದಲ್ಲಿ ಜನಸ್ನೇಹಿ ಆಡಳಿತವನ್ನು ನೀಡಿದ ಅಪರೂಪದ ಪ್ರಧಾನಿಯಾಗಿದ್ದರು. ಗಾಂಧೀಜಿ ಸತ್ಯ, ಸಮಾನತೆ, ಅಹಿಂಸೆ, ಶಾಂತಿಯ ಬಹುದೊಡ್ಡ ಪ್ರತಿಪಾದಕರಾಗಿದ್ದಾರೆ. ಇಂದು ವಿಶ್ವದಾದ್ಯಂತ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯನ್ನು ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಈರ್ವರು ಮಹನೀಯರ ಪೋಟೋ ಪೂಜೆ ನೆರವೇರಿಸಿದ ತಹಶೀಲ್ದಾರ ಕರೆಪ್ಪ ಬೆಳ್ಳಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಚಳವಳಿ ಹಾಗೂ ಹೋರಾಟಗಳನ್ನು ರೂಪಿಸಿ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದರು. ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಕೊಡುಗೆ ಅಪಾರವಾಗಿದ್ದರು ಕೂಡಾ ಪಕೀರರಂತೆ ಜೀವನ ನಡೆಸಿದವರು ಪ್ರಸ್ತುತ ದಿನಮಾನಗಳಲ್ಲಿ ಇಂತಹ ಮಹಾತ್ಮರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರ ಹಾದಿಯಲ್ಲಿ ರ್ಸಾಜನಿಕರಿಗೆ ಒಳ್ಳೆಯ ಆಡಳಿತ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಆಹಾರ ವಿಭಾಗದ ಶಿರಸ್ತೆದಾರ ದಶರಥ ಬೋವಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಅಧಿಕಾರಿ ಆರ್.ಎಸ್.ಬನ್ನೆಟ್ಟಿ, ಚಂದ್ರಶೇಖರ ದೇವರಡ್ಡಿ, ನಿವೃತ ಶಿಕ್ಷಕ ರುದ್ರಗೌಡ ಬಿರಾದಾರ, ಸೇರಿದಂತೆ ಅನೇಕರಿದ್ದರು.

