ಸಿಂದಗಿ: ಸ್ವಾಮಿ ರಾಮಾನಂದ ತೀರ್ಥರು ಸಿಂದಗಿಯಲ್ಲಿ ಹುಟ್ಟಿ ದೀಪವಾದರೆ ಮಹಾರಾಷ್ಟ್ರ, ಆಂಧ್ರಪ್ರದೇಶಗಳಲ್ಲಿ ಬೆಳಕು ಚೆಲ್ಲಿದ್ದಾರೆ. ಹೈದ್ರಾಬಾದ-ಕರ್ನಾಟಕ ವಿಮೋಚನೆಯಲ್ಲಿ ಸ್ವತಂತ್ರ ಸಂಗ್ರಾಮ ಚಳವಳಿಯಲ್ಲಿ ಧುಮುಕಿ ಹೋರಾಟ ನಡೆಸಿದ ಸ್ವಾಮಿ ರಾಮಾನಂದ ತೀರ್ಥರನ್ನು ಹುಟ್ಟೂರಿನಲ್ಲಿ ಗುರುತಿಸದಿರುವುದು ಖೇದಕರ ಸಂಗತಿ ಎಂದು ತಹಶೀಲ್ದಾರ ಕರೆಪ್ಪ ಬೆಳ್ಳಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ರಾಮಾನಂದ ತೀರ್ಥರ ಸ್ಮಾರಕ ಭವನದಲ್ಲಿ ಹಮ್ಮಿಕೊಂಡ ಸ್ವಾಮಿ ರಾಮಾನಂದ ತೀರ್ಥರ ೧೨೨ನೇ ಜಯಂತಿ ಸಮಾರಂಭದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸ್ವಾಮಿ ರಾಮಾನಂದ ತೀರ್ಥರ ಭವನದ ಜೀರ್ಣೋದ್ದಾರಕ್ಕೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮಕ್ಕೆ ಮುಂದಾಗುವೆ ಎಂದರು.
ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಸ್ವಾಮಿ ರಾಮಾನಂದ ತೀರ್ಥರು ಸ್ವತಂತ್ರ ಸಂಗ್ರಾಮದಲ್ಲಿ ಅನೇಕ ಸಂಘಟನೆಗಳನ್ನು ಕಟ್ಟಿ ಜಾಗೃತಿಗೊಳಿಸಿದ್ದಾರೆ. ೧೯೫೭ರಲ್ಲಿ ಗುಲಬರ್ಗಾ ಜಿಲ್ಲೆಯ ಸಂಸದರಾಗಿ ಆಯ್ಕೆಯಾದರು ನಂತರ ಮಹಾರಾಷ್ಟ್ರದ ಔರಂಗಾಬಾದ್ ಸಂಸದರಾಗಿ ಹೈದ್ರಾಬಾದ-ಕರ್ನಾಟಕ ವಿಮೋಚನೆಗಾಗಿ ಹಲವಾರು ಹೋರಾಟಗಳನ್ನು ನಡೆಸಿದ್ದಾರೆ. ರಜಾಕರ ದಂಗೆಯಲ್ಲಿ ಧುಮುಕಿ ಸ್ವತಂತ್ರವನ್ನು ದೊರಕಿಸಿಕೊಡುವಲ್ಲಿ ಯಶಸ್ವಿಗೊಂಡು ದೇಶದ ಇತಿಹಾಸ ಬರೆಯುವಂತ ಕಾರ್ಯವಾಗಿದೆ. ಇಂತವರ ಹೆಸರಿನಲ್ಲಿ ಮಹಾರಾಷ್ಟ್ರದ ನಾಂದೇಡ, ನಳಂದ, ಹೈದ್ರಾಬಾದನಲ್ಲಿ ಹಾಗೂ ಕರ್ನಾಟಕದ ಗುಲಬುರ್ಗಾದಲ್ಲಿ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳಿವೆ. ಶಿಷ್ಯರಾಗಿರುವ ಮಾಜಿ ಪ್ರಧಾನಿ ಪಿ.ವ್ಹಿ.ನರಸಿಂಹರಾವ ಅವರ ಅವಧಿಯಲ್ಲಿ ತನ್ನ ಗುರುವಿನ ಸ್ಮರಣೆಗಾಗಿ ಸಿಂದಗಿಯಲ್ಲಿ ಸ್ಮಾರಕ ಭವನ ನಿರ್ಮಾಣವಾಗಿದೆ. ಆದರೆ ನಿರ್ವಹಣೆ ಮಾಡುವಲ್ಲಿ ಪುರಸಭೆ ವಿಫಲವಾಗಿದೆ. ಮತ್ತೆ ಅದರ ನವೀಕರಣಕ್ಕೆ ಶಾಸಕರ ಪುರಸಭೆ ಅದ್ಯಕ್ಷರಿಗೆ ಕೈ ಜೋಡಿಸಬೇಕಾಗಿದೆ ಎಂದು ಹೇಳಿದರು.,
ಈ ಸಂದರ್ಭದಲ್ಲಿ ಪ್ರಕಾಶ ಹಿರೇಕುರಬರ, ಶ್ರೀವಾಸ ಜ್ಯೋಶಿ ಮಾತನಾಡಿದರು.
ಗಣಿತ ತಜ್ಞ ಎಚ್.ಟಿ.ಕುಲಕರ್ಣಿ, ಪುರಸಭೆ ಸದಸ್ಯ ರಾಜಣ್ಣಿ ನಾರಾಯಣಕರ, ಕಂದಾಯ ನಿರೀಕ್ಷಕ ಐ.ಎಂ.ಮಕಾನದಾರ, ಚಂದ್ರಶೇಖರ ದೇವರಡ್ಡಿ, ಬಸವರಾಜ ಜೋಗುರ, ಸಿದ್ದಣ್ಣ ಹಿರೇಕುರಬರ, ಬಸವರಾಜ ಕಲಬುರ್ಗಿ, ಗೌಡಪ್ಪ ಹಿರೇಕುರಬರ, ಎಪಿಎಂಸಿ ನಿರ್ದೇಶಕ ಮಾಳು ಪೂಜಾರಿ, ಶಿವು ಗಣಿಹಾರ, ಶ್ರೀನಿವಾಸ ಬಿರಾದಾರ, ಶಾಂತೂ ರಾಣಾಗೋಳ, ಮಹಾಂತೇಶ ಅಲ್ಲಾಪುರ ಸೇರಿದಂತೆ ಅನೇಕರಿದ್ದರು.
ನಿವೃತ್ತ ಶಿಕ್ಷಕ ರಂಗರಾವ ಖೇಡಗಿ ಸ್ವಾಗತಿಸಿದರು. ಪ್ರದೀಪ ದೇಶಪಾಂಡೆ ವಕೀಲರು ಪ್ರಾಸ್ತಾವಿಕವಾಗಿ ಮಾತನಾಡಿದರು.