ರಾಜ್ಯ ರೈತ ಸಂಘದ ಸೇವೆಯಲ್ಲಿ ನವೀಕೃತಗೊಂಡ ಅಮ್ಮಿನಬಾವಿ ಬಸ್ ನಿಲ್ದಾಣದ ಲೋಕಾರ್ಪಣೆ
ಧಾರವಾಡ : ಬೇರೆ ವಿಭಾಗಗಳಿಂದ ದೂರದ ಊರುಗಳಿಗೆ ಧಾರವಾಡ-ಸವದತ್ತಿ ರಸ್ತೆಯಲ್ಲಿ ಸಂಚರಿಸುವ ವೇಗದೂತ ಬಸ್‌ಗಳೂ ಸೇರಿದಂತೆ ಅಮ್ಮಿನಬಾವಿಯಲ್ಲಿ ಎಲ್ಲಾ ಬಸ್‌ಗಳ ನಿಲುಗಡೆಗೆ ಆದೇಶ ಮಾಡಿಸಲು ಶ್ರಮಿಸುವುದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಧಾರವಾಡ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ ಬಸಾಪೂರ ಭರವಸೆ ನೀಡಿದರು.
ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳ ಸೇವೆಯಲ್ಲಿ ನವೀಕೃತಗೊಂಡ ಬಸ್ ನಿಲ್ದಾಣ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಅಮ್ಮಿನಬಾವಿ ಬಸ್ ನಿಲ್ದಾಣಕ್ಕೆ ನಿಯಂತ್ರಕರನ್ನು ನೀಡಲಾಗಿದ್ದು, ಧಾರವಾಡ ಗ್ರಾಮಾಂತರ ವಿಭಾಗ ವ್ಯಾಪ್ತಿಯ ಬಸ್‌ಗಳ ನಿಲುಗಡೆಗೆ ಕ್ರಮವಹಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತಮ್ಮ ಸ್ವಂತದ ದೇಣಿಗೆ ಹಣದಿಂದ ಮಾಡಿರುವ ಅಮ್ಮಿನಬಾವಿ ಬಸ್ ನಿಲ್ದಾಣ ನವೀಕರಣ ಕಾರ್ಯ ಮೆಚ್ಚುವಂತಹದ್ದು. ಪ್ರಸ್ತುತ ಮರೇವಾಡ ಗ್ರಾಮದ ಬಳಿಯ ಟೋಲ್ ಸುಂಕದ ವಸೂಲಾತಿ ನಿಲುಗಡೆಯಾದ ತಕ್ಷಣ ಧಾರವಾಡ-ಅಮ್ಮಿನಬಾವಿ ಬಸ್ ಪ್ರಯಾಣದರ ಇಳಿಕೆಯಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಧಾರವಾಡ ವಿಭಾಗದ ಡಿ.ಟಿ.ಓ. ಸಂತೋಷ ಕಾಮತ, ಸಹಾಯಕ ಸಂಚಾರಿ ಅಧೀಕ್ಷಕ ಗಣೇಶ ಜವಳಿ, ಸಹಾಯಕ ಸಂಚಾರಿ ನಿರೀಕ್ಷಕ ದೇವರಾಜ ಭಜಂತ್ರಿ ಹಾಗೂ ಕನ್ನಡದ ಹಿರಿಯ ನಿಯತಕಾಲಿಕೆ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು. ಅಮ್ಮಿನಬಾವಿ ಗ್ರಾ.ಪಂ. ಸದಸ್ಯ ಸಿದ್ದಪ್ಪ ತಿದಿ ಅಧ್ಯಕ್ಷತೆವಹಿಸಿದ್ದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ, ತಾಲೂಕು ಮತ್ತು ಗ್ರಾಮ ಘಟಕಗಳ ಪದಾಧಿಕಾರಿಗಳು ಇದ್ದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳನ್ನು ಹಾಗೂ ಗ್ರಾಮದ ಗಣ್ಯರನ್ನು ಗೌರವಿಸಲಾಯಿತು.