ಮೂಡಲಗಿ ತಾಲ್ಲೂಕಿನ ಪಿಕೆಪಿಎಸ್ ಅಧ್ಯಕ್ಷರ ಸಭೆ
ಗೋಕಾಕ- ಅಕ್ಟೋಬರ್ 19 ರಂದು ನಡೆಯುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಕ್ಷೇತ್ರದಿಂದ ಮೂರ್ನಾಲ್ಕು ದಿನಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗುವುದು. ನಾವು ಒಮ್ಮತದಿಂದ ಆಯ್ಕೆ ಮಾಡುವ ಅಭ್ಯರ್ಥಿಗಳಿಗೆ ತಮ್ಮೆಲ್ಲರ ಸಹಕಾರ ಅವಶ್ಯವಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಇಲ್ಲಿನ ಎನ್ಎಸ್ಎಫ್ ಕಾರ್ಯಾಲಯದಲ್ಲಿ ಮೂಡಲಗಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿಯ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ರೈತರು ಮತ್ತು ಸಂಘಗಳಿಗೆ ಬೇಕಾದ ಅಭ್ಯರ್ಥಿಯನ್ನು ಮೂಡಲಗಿ ಕ್ಷೇತ್ರದಿಂದ ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು.
ಮೂಡಲಗಿ- ಗೋಕಾಕ ಕ್ಷೇತ್ರಗಳಿಂದ ತಲಾ 4 ರಿಂದ 5 ಜನ ಆಕಾಂಕ್ಷಿಗಳಿದ್ದು, ಇದರಲ್ಲಿ ಒಬ್ಬರನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಹಿರಿಯರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದೇವೆ. ಸರ್ವಾನುಮತದಿಂದ ಯೋಗ್ಯವಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಈಗಾಗಲೇ ಕೆಲ ಸಮಾಜಗಳ ಮುಖಂಡರು ನನ್ನನ್ನು ಭೇಟಿ ಮಾಡಿ ತಮ್ಮ- ತಮ್ಮ ಸಮಾಜಗಳಿಗೆ ಪ್ರಾಶಸ್ತ್ಯ ನೀಡುವಂತೆ ಕೋರಿಕೊಂಡಿದ್ದಾರೆ. ನಾನು ಸಹ ಆಯಾ ಸಮಾಜಗಳ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರೊಂದಿಗೆ ಚರ್ಚಿಸಲಾಗಿದ್ದು, ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದರು.
ಇದೇ ತಿಂಗಳಲ್ಲಿ ನಡೆಯುವ ಬಿಡಿಸಿಸಿ ಬ್ಯಾಂಕ್
ಚುನಾವಣೆಯಲ್ಲಿ ನಮ್ಮ ಪೆನೆಲ್ ಸಂಪೂರ್ಣ ಬಹುಮತವನ್ನು ಪಡೆದುಕೊಂಡು ಆಡಳಿತ ಚುಕ್ಕಾಣಿ ಹಿಡಿಯಲಿದೆ. ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದಲ್ಲಿ ಎರಡು ನಿರ್ದೇಶಕರ ಹುದ್ದೆಗೆ ನಾಮ ನಿರ್ದೇಶನ ಮಾಡಿಕೊಳ್ಳಲಾಗುತ್ತಿದ್ದು, ಇದರಲ್ಲಿ ಒಂದು ಮೂಡಲಗಿ ತಾಲ್ಲೂಕು ಮತ್ತು ಇನ್ನೊಂದು ಯರಗಟ್ಟಿ ತಾಲ್ಲೂಕಿಗೆ ನೀಡಲು ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ವೇದಿಕೆಯಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಸಂತೋಷ ತಮ್ಮಣ್ಣ ಪಾರ್ಶಿಯವರು ಉಪಸ್ಥಿತರಿದ್ದರು
ಈ ಸಭೆಯಲ್ಲಿ ಸಹಕಾರಿ ಮುಖಂಡರು, ತಾಲ್ಲೂಕು ಪಿಕೆಪಿಎಸ್ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡು ಅಭ್ಯರ್ಥಿಗಳ ಆಯ್ಕೆ ಕುರಿತಂತೆ ತಮ್ಮ ತಮ್ಮ ಸಲಹೆ- ಸೂಚನೆಗಳನ್ನು ನೀಡಿದರು.
ಸಮಚಿತ್ತದಿಂದ ಸಂಘಗಳ ಅಧ್ಯಕ್ಷರುಗಳ ಸಲಹೆಗಳನ್ನು ಪಡೆದುಕೊಂಡ ಬಾಲಚಂದ್ರ ಜಾರಕಿಹೊಳಿಯವರು ಎಲ್ಲರಿಗೂ ಇಷ್ಟವಾಗುವ, ಒಪ್ಪುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಅವರು ಹೇಳಿದರು.