Homeಸುದ್ದಿಗಳುಪ್ರಭಾ ಶುಗರ್ಸ್ ಅಧ್ಯಕ್ಷರಾಗಿ ಕಂಬಳಿ, ಉಪಾಧ್ಯಕ್ಷರಾಗಿ ಕಬ್ಬೂರ ಅವಿರೋಧವಾಗಿ ಆಯ್ಕೆ

ಪ್ರಭಾ ಶುಗರ್ಸ್ ಅಧ್ಯಕ್ಷರಾಗಿ ಕಂಬಳಿ, ಉಪಾಧ್ಯಕ್ಷರಾಗಿ ಕಬ್ಬೂರ ಅವಿರೋಧವಾಗಿ ಆಯ್ಕೆ

spot_img

ಗೋಕಾಕ- ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಜೋಕಾನಟ್ಟಿ ಗ್ರಾಮದ ಶಿದ್ಲಿಂಗಪ್ಪ ಸಿದ್ದಪ್ಪ ಕಂಬಳಿ ಮತ್ತು ಉಪಾಧ್ಯಕ್ಷರಾಗಿ ರಂಗಾಪೂರ ಗ್ರಾಮದ ಮಲ್ಲಿಕಾರ್ಜುನ ಭೀಮಪ್ಪ ಕಬ್ಬೂರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶನಿವಾರದಂದು ಕಾರ್ಖಾನೆಯ ಸಭಾಗೃಹದಲ್ಲಿ ಜರುಗಿದ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಗೋಕಾಕ ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ಬಿ.ಬಿರಾದಾರ ಪಾಟೀಲ ಅವರು ಪ್ರಕಟಿಸಿದರು.

ಇಲ್ಲಿಯವರೆಗೆ ಅಧ್ಯಕ್ಷರಾಗಿದ್ದ ಅಶೋಕ ಪಾಟೀಲ ಮತ್ತು ಉಪಾಧ್ಯಕ್ಷರಾಗಿದ್ದ ರಾಮಣ್ಣಾ ಮಹಾರೆಡ್ಡಿಯವರ ನಿಧನದಿಂದ ಎರಡೂ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಂಬಳಿ ಮತ್ತು ಕಬ್ಬೂರ ಅವರ ಅಧಿಕಾರವಧಿಯು ಮುಂದಿನ 2028 ರ ವರೆಗೆ ಇರಲಿದೆ.

ಅಭಿವೃದ್ಧಿಗೆ ಯತ್ನ-                                               ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಅವರ ಸಹೋದರರ ಮಾರ್ಗದರ್ಶನದಲ್ಲಿ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆ ರೈತರ ಸಹಾಯ- ಸಹಕಾರ ಅವಶ್ಯವಾಗಿದೆ ಎಂದು ನೂತನ‌ ಅಧ್ಯಕ್ಷ ಶಿದ್ಲಿಂಗಪ್ಪ ಕಂಬಳಿ ತಿಳಿಸಿದರು.

ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರು ಕಂಬಳಿ ಮತ್ತು ಕಬ್ಬೂರ ಅವರನ್ನು ಅಭಿನಂದಿಸಿ ಮಾತನಾಡಿದರು.

*ಶಾಸಕರಿಗೆ ಗೌರವ ಅರ್ಪಿಸಿದ ಅಧ್ಯಕ್ಷ- ಉಪಾಧ್ಯಕ್ಷರು* –      ಕಾರ್ಖಾನೆಗೆ ಹೊಸ ಅಧ್ಯಕ್ಷ- ಉಪಾಧ್ಯಕ್ಷರಾಗುತ್ತಿದ್ದಂತೆಯೇ ಶಾಸಕರ ಗೃಹ ಕಚೇರಿಗೆ ಆಗಮಿಸಿದ ಆಡಳಿತ ಮಂಡಳಿಯ ಸದಸ್ಯರು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಮತ್ತು ಕಾರ್ಖಾನೆಯ ಮಾರ್ಗದರ್ಶಕ ಬಾಲಚಂದ್ರ ಜಾರಕಿಹೊಳಿಯವರನ್ನು ಸತ್ಕರಿಸಿ, ಗೌರವಿಸಿದರು.

ನಂತರ ಮಾತನಾಡಿದ ಅವರು, ರೈತರು ಉತ್ತಮ ಇಳುವರಿಯ ಕಬ್ಬನ್ನು ಕಾರ್ಖಾನೆಗೆ ಪೂರೈಕೆ ಮಾಡಿ, ಪ್ರಗತಿಗೆ ಕೈ ಜೋಡಿಸಬೇಕು.‌ ಹೊಸ ಅಧ್ಯಕ್ಷ- ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ರೈತರ ಹಿತಕ್ಕನುಗುಣವಾಗಿ ಕಾರ್ಯ ನಿರ್ವಹಿಸುವಂತೆ ಸಲಹೆಯನ್ನು ಮಾಡಿದರು.

ಹಿಂದಿನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅಶೋಕ ಪಾಟೀಲ ಮತ್ತು ರಾಮಣ್ಣಾ ಮಹಾರೆಡ್ಡಿಯವರ ನಿಧನದಿಂದ ತೆರವಾಗಿದ್ದ ಎರಡು ಸ್ಥಾನಗಳಿಗೆ ದಿವಂಗತರ ಮಕ್ಕಳನ್ನು ಕಾರ್ಖಾನೆಯ ಹೊಸ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದವರು ಹೇಳಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಗಿರೀಶ ಹಳ್ಳೂರ, ಭೂತಪ್ಪ ಗೊಡೇರ, ಮಹಾದೇವಪ್ಪ ಭೋವಿ, ಮಾಳಪ್ಪ ಜಾಗನೂರ, ಲಕ್ಷ್ಮಣ ಗಣಪ್ಪಗೋಳ, ಶಿವಲಿಂಗಪ್ಪ ಪೂಜೇರಿ, ಜಗದೀಶ ಬಂಡ್ರೋಳಿ, ವಿನೀತ ಪಾಟೀಲ, ಅರುಣ ಮಹಾರೆಡ್ಡಿ, ಶಿವನಗೌಡ ಪಾಟೀಲ (ಶಿವಾಪೂರ), ಅರೀಫ ಪೀರಜಾದೆ, ಯಲ್ಲವ್ವ ಸಾರಾಪೂರ, ಲಕ್ಕವ್ವ ಬೆಳಗಲಿ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಕಚೇರಿಯ ಅಧೀಕ್ಷಕ ಈರಣ್ಣ ಜಂಬಗಿಯವರು ಉಪಸ್ಥಿತರಿದ್ದರು.

ಈ ಭಾಗದ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮನ್ನು ಮುಂದಿನ ನವೆಂಬರ್ ತಿಂಗಳಿನ ಮೊದಲ ವಾರದಲ್ಲಿ ಆರಂಭಿಸಲಾಗುವುದು. ರೈತರು ನಮ್ಮ ಕಾರ್ಖಾನೆಗೆ ಕಬ್ಬನ್ನು ಪೂರೈಕೆ ಮಾಡಿ ನಮ್ಮೊಂದಿಗೆ ಕೈ ಜೋಡಿಸಬೇಕು. ಪ್ರಸಕ್ತ ಹಂಗಾಮಿನಲ್ಲಿ 3 ರಿಂದ 5 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿಯನ್ನು ಹೊಂದಲಾಗಿದೆ. ರೈತರ ಅಭಿವೃದ್ಧಿಯೇ ನಮಗೆ ಮುಖ್ಯವಾಗಿದೆ.

ಬಾಲಚಂದ್ರ ಜಾರಕಿಹೊಳಿ
ಶಾಸಕ, ಬೆಮುಲ್ ಅಧ್ಯಕ್ಷ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group