Homeಲೇಖನಸಹಕಾರದಲ್ಲಿ ಸರಕಾರದ ಕಾರುಬಾರು ಬೇಕೇ ಬೇಕು !

ಸಹಕಾರದಲ್ಲಿ ಸರಕಾರದ ಕಾರುಬಾರು ಬೇಕೇ ಬೇಕು !

spot_img
 ‘ಸಹಕಾರ ರಂಗದಲ್ಲಿ ಸರಕಾರದ ಕಾರುಬಾರು ಬೇಕೆ ?’ ಎಂಬುದಕ್ಕೆ ಉತ್ತರ ‘ಬೇಕೇ ಬೇಕು !’ ಎನ್ನಬಹುದು.  ಯಾಕೆಂದರೆ, ಕೋ ಆಪರೇಟಿವ್ ಅಂದರೆ ಸಹಕಾರ ಕ್ಷೇತ್ರ ಈಗ ಮೊದಲಿನಂತಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲವಾಗಿ ಬೆಳೆದು ನಿಂತಿದೆ. ಒಂದಲ್ಲ ಹತ್ತಲ್ಲ ನೂರಾರು ಕೋಟಿಯಷ್ಟು ಬಂಡವಾಳದೊಂದಿಗೆ ಸಹಕಾರ ಸಂಘಗಳು ಬೃಹತ್ತಾಗಿ ಬೆಳೆದಿವೆ ಅಷ್ಟೇ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಉಪಕಾರಿಯೂ ಆಗಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
    ಆದರೆ ಸಹಕಾರ ಸಂಘಗಳಲ್ಲಿ ಈಗ ಸಹಕಾರ ತತ್ವ ಉಳಿದಿಲ್ಲ ಎಂದು ತೀರ ವಿಷಾದದಿಂದ ಹೇಳಬೇಕಾಗಿದೆ. ಸಂಘಗಳು ರಾಜಕಾರಣದ ಅಡ್ಡೆಗಳಾಗಿ ಪರಿವರ್ತಿತವಾಗಿವೆ. ಕೆಲವೇ ಜನರ ಕೈಯಲ್ಲಿರುವ ಸಂಘಗಳು ಇವರ ವೈಯಕ್ತಿಕ ತೆವಲು ತೀರಿಸಿಕೊಳ್ಳುವ ಐಷಾರಾಮಿ ತಾಣಗಳಾಗಿವೆಯೆಂದರೆ ಮೂಗಿನ ಮೇಲೆ ಬೆರಳಿಡಬೇಕಾಗಿಲ್ಲ.
ರಾಜ್ಯ, ಕೇಂದ್ರ ಸರ್ಕಾರಗಳು ಸಂಘಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿವೆ ನಿಜ ಇದು ಆಗಬೇಕು. ಯಾಕೆಂದರೆ, ಸಂಘದ ಅಭಿವೃದ್ಧಿ ಯ ನೆಪದಲ್ಲಿ ಅಧಿಕಾರಕ್ಕೆ ಬರುವ ಆಡಳಿತ ಮಂಡಳಿಗಳು ಇಲ್ಲಿ ನಡೆಸುವ ದರ್ಪ ದೌಲತ್ತುಗಳು ವರ್ಣನೆಗೆ ಸಿಲುಕಲಾರದೆಂದರೆ ಅತಿಶಯೋಕ್ತಿಯಲ್ಲ. ಮಂಡಳಿಯ ಜೊತೆ ಸೇರಿಕೊಳ್ಳುವವರೆಂದರೆ ಸಂಘದ  ಕಾರ್ಯದರ್ಶಿ. ಸಂಘದ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಾಥ್ ನೀಡುವವರು ಲೆಕ್ಕ ಪರಿಶೋಧಕರು ಮತ್ತು ಸಂಘವನ್ನು ಕಾಯುವ ಉಪನಿಬಂಧಕರು ಮತ್ತು ನಿಬಂಧಕರು !
ಮೊದಲನೆಯದಾಗಿ ಬರುವುದೆಂದರೆ ಸಂಘದಲ್ಲಿ ಸಿಬ್ಬಂದಿ ನೇಮಕಾತಿ ವಿಷಯ. ನೇಮಕಾತಿಗಾಗಿ ಕಾಯ್ದೆಯ ನಿಯಮಗಳನ್ನೇ ಉಲ್ಲಂಘಿಸಿದ್ದರೂ ಸಹಕಾರ ಇಲಾಖೆಯ ಅಧಿಕಾರಿಗಳು ‘ಸಹಿಸಿಕೊಂಡು’ ಹೋಗುತ್ತಾರೆ. ಆದರೆ ಸಂಘದ ಆಡಳಿತ ಮಂಡಳಿಯಿಂದ ಸಿಬ್ಬಂದಿಯ ಮೇಲಾಗುತ್ತಿರುವ ಶೋಷಣೆಯ ಬಗ್ಗೆ ಅಧಿಕಾರಿಗಳು ಕಿವುಡಾಗುತ್ತಾರೆ. ನೌಕರರು ಕೂಡ ತಮ್ಮ ಮೇಲಿನ ದೌರ್ಜನ್ಯದ ಬಗ್ಗೆ ಹೇಳಿಕೊಳ್ಳುವುದು ಕಡಿಮೆ ಯಾಕೆಂದರೆ ಆಡಳಿತ ಮಂಡಳಿಯವರ ಭಯ. ಈ ವಿಷಯದ ಬಗ್ಗೆ ಇಲಾಖೆಯ ಪ್ರಾಮಾಣಿಕ ಅಧಿಕಾರಿಗಳು ವ್ಯಾಪಕ ತನಿಖೆ ನಡೆಸಬೇಕಾದ ಅಗತ್ಯವಿದೆ.
ಇನ್ನು ಸಹಕಾರ ಸಂಘಗಳ ಚುನಾವಣೆಯ ವಿಷಯದಲ್ಲಿ ಸಹಕಾರ ಚುನಾವಣಾಧಿಕಾರಿಗಳು ನಡೆಸುವ ಪಕ್ಷಪಾತ ವರ್ಣನೆಗೂ ನಿಲುಕದ್ದು. ಇದು ನನ್ನ ಸ್ವಂತ ಅನುಭವದ ಮಾತು. ಉಪನಿಬಂಧಕರು, ನಿಬಂಧಕರು ಆಡಳಿತ ಮಂಡಳಿಯ ಕೈಗೊಂಬೆಯಾಗಿ ವರ್ತಿಸುತ್ತಾರೆ. ಯಾವುದೇ ದೂರು ನೀಡಿದರೆ ಕೇವಲ ಕಾಲಹರಣ ಮಾಡಿ ದೂರುದಾರರ ನೈತಿಕ ಸ್ಥೈರ್ಯ ಕಳೆಯುವುದರಲ್ಲಿ ಸಿದ್ಧಹಸ್ತರು. ಸರ್ಕಾರ ಸಹಕಾರ ಸಂಘದಲ್ಲಿ ಪ್ರವೇಶ ಮಾಡಿದರೆ ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಬಹುದು ಆದರೂ ಸರ್ಕಾರವಿದ್ದರೆ ಹೋರಾಟ ಮಾಡುವವರಿಗೆ ನ್ಯಾಯ ಸಿಗುತ್ತದೆ. ಇನ್ನು ಮುಂದೆ ಸಹಕಾರಿ ಸಂಘಗಳ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು (ಕಾರ್ಯದರ್ಶಿ) ಪ್ರತಿವರ್ಷ ತಮ್ಮ ಮತ್ತು ಕುಟುಂಬದ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸುವುದು ಕಡ್ಡಾಯ ಮಾಡಿದ್ದು ಸ್ವಾಗತಾರ್ಹ. ಪ್ರತಿ ಸಂಘದ 13 ಸದಸ್ಯರು ಒಟ್ಟು 45 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳ ನಿರ್ದೇಶಕರ ಆಸ್ತಿ ವಿವರ ಪಡೆಯಲು ಹೆಚ್ಚು ಸಿಬ್ಬಂದಿ ಬೇಕಾದರೆ ಹೊಸ ನೇಮಕಾತಿಗಳನ್ನು ಮಾಡಿಕೊಳ್ಳಬಹುದು. ಯುವಕರಿಗೆ ಉದ್ಯೋಗಾವಕಾಶ ದೊರೆತು ಸ್ವಲ್ಪ ಮಟ್ಟಿಗೆ ಸಹಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದರೆ ಸಾಕಷ್ಟು ಪ್ರಯೋಜನವಾಗುತ್ತದೆ.
ಸದಸ್ಯರು ಕನಿಷ್ಠ ಮೂರು ಸಭೆಗಳಿಗೆ ಹಾಜರಾಗಬೇಕಾಗಿದ್ದುದು ಕಡ್ಡಾಯವೇನೋ ನಿಜ ಆದರೆ ಸಭೆಗೆ ಹೆಚ್ಚು ಜನರು ಬರುವುದಿಲ್ಲ. ಆದರೆ ಸಭೆಯ ನಂತರ ಆಡಳಿತ ಮಂಡಳಿಯವರು ತಮ್ಮ ಸಿಬ್ಬಂದಿಯನ್ನು ತಮಗೆ ‘ಬೇಕಾದ’ ಶೇರುದಾರರ ಮನೆ ಮನೆಗೆ ರಜಿಸ್ಟರ್ ಕೊಟ್ಟು ಕಳಿಸಿ ಸಭೆಯ ಸಹಿ ತೆಗೆದುಕೊಂಡು ಬರುವ ಕಲೆಯನ್ನು ಆಡಳಿತ ಮಂಡಳಿಯವರು ಸಿದ್ಧಿಸಿಕೊಂಡಿರುತ್ತಾರೆ. ಐದು ವರ್ಷಗಳ ಕಾಲ ಒಂದು ಮಂಡಳಿ ಒಂದಾಗಿ ಸಂಘದ ‘ಸವಿ’ ಉಂಡವರು ಮುಂದೆ ಯಾರು ಬರುವುದನ್ನೂ ಸಹಿಸಲಾರರು. ಸಂಘವೆಂದರೆ ತಮ್ಮ ಪೂರ್ವಜರ ಆಸ್ತಿಯೇನೋ ಎಂಬಂತೆ ಇವರ ವರ್ತನೆ. ಯಾರಾದರೂ ತೀರಿಹೋದರೆ ಅವರ ಪತ್ನಿಯನ್ನೇ ನೇಮಕ ಮಾಡಿಕೊಳ್ಳುವುದು, ಚುನಾವಣೆಯಲ್ಲಿ ತಮ್ಮದೇ ಒಂದು ಬಣ ಮಾಡಿಕೊಂಡು ತೀರಾ ಗಂಡ ಹೆಂಡತಿಯರೇ ಎರಡು ಮೂರು ಜೋಡಿಗಳು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿ ಅನೈತಿಕವಾಗಿಯಾದರೂ ಆಯ್ಕೆಯಾಗುವಾಗ ಚುನಾವಣಾಧಿಕಾರಿ ಎನ್ನಿಸಿಕೊಂಡವರು ಕಿವಿ, ಬಾಯಿ ಮುಚ್ಚಿಕೊಂಡೇ ಇರುತ್ತಾರೆ.
ತಮಗೆ ಬೇಕಾದವರಿಗೆ ನಿಯಮ ಮೀರಿ ಸಾಲ ಕೊಟ್ಟಿದ್ದರೂ ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ, ಇದಕ್ಕೆ ಅಧ್ಯಕ್ಷರು, ಕಾರ್ಯದರ್ಶಿ ಹೊಣೆಗಾರರಾಗುತ್ತಾರೆ ಎಂಬ ಒಂದು ಶರಾ ಬರೆದು ಕೈ ತೊಳೆದುಕೊಳ್ಳುತ್ತಾರೆ. ಯಾವುದೇ ಸೆಕ್ಯುರಿಟಿ ನೀಡದೇ ಸಾಲ ತೆಗೆದುಕೊಂಡವನು ನಾಳೆ ಕೈಯೆತ್ತಿದರೆ ಯಾವ ಅಧ್ಯಕ್ಷನಾಗಲೀ, ಕಾರ್ಯದರ್ಶಿಯಾಗಲಿ ಸಂಘದ ಸಾಲ ತುಂಬಲಾರರು ಕೊನೆಗೆ ಅವರೂ ಕೈಯೆತ್ತಿ ಠೇವಣಿದಾರರಿಗೆ, ಶೇರುದಾರರಿಗೆ ನಷ್ಟ.
ಕಳೆದ ಎರಡು ವರ್ಷಗಳಿಂದ ಸಹಕಾರ ಸಂಘಗಳ ಒಳಲೋಕದ ಅನಾವರಣ ಮಾಡುತ್ತಿರುವ ನನಗೆ ಅಲ್ಲಿನ ಆಡಳಿತ ಮಂಡಳಿಯವರ ಬ್ರಹ್ಮಾಂಡ ಭ್ರಷ್ಟಾಚಾರ, ಗೂಂಡಾಗಿರಿ ರಾಜಕಾರಣ, ಕುತಂತ್ರಗಳ ರಾಜಕಾರಣ, ಕಾರ್ಯದರ್ಶಿಯ ಹೊಣೆಗೇಡಿತನ, ಸಿಬ್ಬಂದಿಗಳ ತಾಕಲಾಟ, ನೋವುಗಳ ದರ್ಶನವಾಗಿದೆ. ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳನ್ನು ಸರ್ಕಾರ ವಹಿಸಿಕೊಳ್ಳಬೇಕು, ಅವುಗಳನ್ನು ಮಾಹಿತಿ ಹಕ್ಕಿನ ಅಡಿ ತರಬೇಕು ಎಂಬ ಬೇಡಿಕೆಯೊಂದಿಗೆ ಹೋರಾಟ ಆರಂಭಿಸಿದ್ದೇನೆ. ಲೋಕಲ್ ಗೂಂಡಾಗಳು, ಸಂಘದ ನಿರ್ದೇಶಕರ ಗೂಂಡಾಗಿರಿಯನ್ನೂ, ಸುಳ್ಳು ಪೊಲೀಸ್ ದೂರುಗಳನ್ನು ಎದುರಿಸುತ್ತಿದ್ದೇನೆ. ಈ ನನ್ನ ಹೋರಾಟಕ್ಕೆ ಬೆಂಬಲ ಸೂಚಿಸುವವರ ನಿರೀಕ್ಷೆಯಲ್ಲಿದ್ದೇನೆ.
ನನ್ನ ಮೊಬೈಲ್ ನಂ. 9448863309

ಉಮೇಶ ಮ. ಬೆಳಕೂಡ
ಮೂಡಲಗಿ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group