Homeಲೇಖನಮೈಸೂರಿನಲ್ಲಿ ಭೀಮಾರ್ಜುನರ ಕಾಳಗ ಮೂಡಲಪಾಯ ಯಕ್ಷಗಾನ ಪ್ರದರ್ಶನ

ಮೈಸೂರಿನಲ್ಲಿ ಭೀಮಾರ್ಜುನರ ಕಾಳಗ ಮೂಡಲಪಾಯ ಯಕ್ಷಗಾನ ಪ್ರದರ್ಶನ

spot_img

ಕವಯಿತ್ರಿ ಶ್ರೀಮತಿ ಕಲಾವತಿ ಮಧುಸೂದನ ಮೇಡಂ ಮೈಸೂರಿನ ಪ್ರಸಿದ್ಧ ಹಾರ್ಡ್ವಿಕ್ ಪ್ರೌಢಶಾಲೆಯಲ್ಲಿ ದಸರಾ ಕವಿಗೋಷ್ಠಿಯನ್ನು ತಮ್ಮ ಕರ್ನಾಟಕ ರಾಜ್ಯ ಸ್ಪಂದನ ಸಿರಿವೇದಿಕೆ ಮೈಸೂರು ಜಿಲ್ಲಾ ಘಟಕದ ನೆರವಿನಲ್ಲಿ ಕಳೆದ ಸೋಮವಾರ ಏರ್ಪಡಿಸಿದ್ದರು.

ನಾನು ಕವಿಗೋಷ್ಠಿಯಲ್ಲಿ ಒಬ್ಬ ಕವಿಯಾಗಿ ಹೋಗಿ ಭಾಗವಹಿಸಿ ಕವಿತೆ ವಾಚಿಸಿದ್ದೆ. ಇದು ಯಾವುದೇ ಆರ್ಥಿಕ ನೆರವಿಲ್ಲದೇ ಮಹಿಳಾ ಸಂಘಟನೆಯೊಂದು ನಡೆಸಿದ ಕಾರ್ಯಕ್ರಮ ಸರಳವಾಗಿ ನಡೆದರೂ ಉತ್ತಮ ವಿಮರ್ಶಾತ್ಮಕ ಕವಿ ಕಾವ್ಯ ಚಿಂತನ ಮಂಥನವಾಗಿ ಮೂಡಿಬಂದಿತೆಂಬುದು ಪ್ರಶಂಸನೀಯ.

ಕವಿಮೂಡ್‌ನಿಂದ ಹೊರಬಂದು ಹಾಸನಕ್ಕೆ ವಾಪಸ್ಸಾಗಲು ರಾಮಸ್ವಾಮಿ ಸರ್ಕಲ್‌ನಲ್ಲಿ ನಾನು ಮತ್ತು ಮಡದಿ ಶಕುಂತಲೆ ಬಸ್ಸಿಗಾಗಿ ಕಾಯ್ದೆವು. ನಮ್ಮ ಜೊತೆಗೆ ಕವಯಿತ್ರಿ ಪದ್ಮಾವತಿ ಮೇಡಂ ಕೂಡ ಇದ್ದರು. ಈ ವೇಳೆ ಈ ಕಡೆ ಬಸ್ ಬರುವುದಿಲ್ಲವೆಂಬ ವಿಚಾರ ತಡವಾಗಿ ತಿಳಿದು ಬರಲಾಗಿ ರಾತ್ರಿ ಕತ್ತಲಾಗಿ ಅಲಂಕಾರಿಕ ವಿದ್ಯುತ್ ದೀಪಗಳು ಹತ್ತಿಕೊಂಡು ವಿಶೇಷವಾಗಿ ನನ್ನ ಮಡದಿಯ ಮನಸ್ಸನ್ನು ಸೆಳೆದವು. ಲೈಟಿಂಗ್ಸ್ ನೋಡಿಕೊಂಡು ನಡೆದೇ ಹೋಗೊಣ ಬನ್ನಿ ಎಂದು ಪದ್ಮಾವತಿ ಮೇಡಂ ಹೊರಡಲು ನಾವು ಹಿಂಬಾಲಿಸಿ ಜಗನ್ಮೋಹನ ಅರಮನೆ ತಲುಪಿದೆವು. ಅಲ್ಲಿ ಚನ್ನರಾಯಪಟ್ಟಣದ ಡಾ.ಚಂದ್ರು ಕಾಳೇನಹಳ್ಳಿಯವರ ರಂಗ ಮಾದ್ಯಮ ಕಲಾವಿದರಿಂದ ಭೀಮಾರ್ಜುನರ ಕಾಳಗ ಮೂಡಲಪಾಯ ಯಕ್ಷಗಾನ ಪ್ರದರ್ಶನವಿತ್ತಾಗಿ ಚಂದ್ರು ಮೊದಲೇ ಆಹ್ವಾನ ಪತ್ರಿಕೆ ವ್ಯಾಟ್ಸಪ್ ಮಾಡಿ ಬನ್ನಿ ಎಂದು ಮೆಸೇಜ್ ಮಾಡಿದ್ದರು.

ಯಕ್ಷಗಾನ ರಾತ್ರಿ ಎಂಟೂವರೆಯಿಂದ ಹತ್ತು ಗಂಟೆಯವರೆಗೆ ಇತ್ತಾಗಿ ನಾನು ಮಡದಿಗೆ ಯಕ್ಷಗಾನ ನೋಡುವ ವಿಷಯ ಈ ಮೊದಲು ತಿಳಿಸಿರಲಿಲ್ಲ. ಅವಕಾಶ ಸಿಕ್ಕರೆ ನೋಡೆಬಿಡುವ ಮನಸ್ಸು ನನ್ನದಾಗಿತ್ತು. ಇನ್ನೂ ಪದ್ಮಾವತಿ ಮೇಡಂಗೆ ನಾಟಕದಲ್ಲಿ ರಂಗದ ಮೇಲೆ ಬರುವ ಅವಕಾಶ ದೊರೆತಿತ್ತೆಂಬ ಅಭಿಲಾಶೆ ಇದ್ದಿದ್ದನ್ನು ಮಡದಿಯಲ್ಲಿ ಹೇಳಿಕೊಂಡಿದ್ದರು. ಮಡದಿ ಶಕುಂತಲೆ ದಾರಿ ಉದ್ದಕ್ಕೂ ಅಲಂಕಾರಿಕ ಲೈಟಿಂಗ್ಸ್ ಸೀನ್‌ನನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಾ ಹಾದಿ ಸೆವೆಸಿದಳು ಸದ್ಯ. ಇಲ್ಲದಿದ್ದರೇ ಆಟೋ ಮಾಡಿ ಎಂದು ನನಗೆ ಹಿಂಸೆ ಕೊಡುತ್ತಿದ್ದಳು. ಅವಳ ಮೊಬೈಲ್‌ಗೆ ಸೆರೆ ಸಿಕ್ಕ ಪೋಟೋಗಳಲ್ಲಿ ಸರ್ಕಾರದ ಉಚಿತ ಸ್ಕೀಂಗಳ ಪ್ರಚಾರ ಲೈಟಿಂಗ್ಸ್ ವಿಶೇಷವಾಗಿತ್ತು. ಹೀಗೂ ಸರ್ಕಾರ ಜಾಹೀರಾತು ಮಾಡಬಹುದೇ ಎನಿಸಿತು.

ನಾವು ಅರಮನೆ ತಲುಪಿದ ಕಾಲಕ್ಕೆ ಕಲಾವಿದರು ವೇಷದಾರಿಗಳಾಗಿ ಗ್ರೂಪ್ ಪೋಟೋ ತೆಗೆಸಿಕೊಳ್ಳುತ್ತಿದ್ದರು. ನಮ್ಮ ಮುಖ ನೋಡಿ ಬನ್ನಿ ಅನಂತರಾಜು ಎಂದು ನಮ್ಮನ್ನು ನೋಡಿ ಕರೆಯಲು ಗುಂಪಿನಲ್ಲಿ ಸೇರಿಕೊಂಡು ಮೊಬೈಲ್‌ನಲ್ಲಿ ಸೆರೆಯಾದವು.

ಮೈಸೂರಿನ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಜಗನ್ಮೋಹನ ಅರಮನೆ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರದರ್ಶನಗೊಂಡ ಭೀಮಾರ್ಜುನರ ಕಾಳಗ ಮೂಡಲಪಾಯ ಯಕ್ಷಗಾನ ಸಭಿಕರಾದ ನಮಗೆ ಹೊಸ ಮನರಂಜನೆಯ ಅನುಭವ ನೀಡಿತು. ಬಯಲಾಟ ಅಕಾಡೆಮಿ ಸದಸ್ಯರಾದ ಡಾ. ಚಂದ್ರುಕಾಳೇನಹಳ್ಳಿ ರಚಿಸಿ ಹಾಗೂ ಭಾಗವಂತಿಕೆಯಲ್ಲಿ ಮೂಡಿ ಬಂದ ಕಾಳಗ ಕಡಿಮೆ ಪ್ರೇಕ್ಷಕರಿದ್ದರೂ ಇದ್ದವರ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದರೆಲ್ಲಾ ಬಯಲಾಟ ಯಕ್ಷಗಾನಕ್ಕೆ ಹೊಸಬರೇ! ರಂಗತಾಲೀಮಿನ ಕೊರತೆಯೋ ಅಥವಾ ಯಕ್ಷಗಾನಕ್ಕೆ ಹೊಂದಿಕೊಳ್ಳಲು ಕಷ್ಟವೋ ಏನೋ ಇದು ತಂಡದ ೭ನೇ ಪ್ರದರ್ಶನವಾಗಿಯೂ ಇನ್ನೂ ಇಂಪ್ರೂವ್ ಆಗಬಹುದಿತ್ತು. ಕಥಾ ಸಾರಂಶದಲ್ಲಿ ಕೌರವರ ಮೇಲಿನ ಯುದ್ದದಲ್ಲಿ ಪಾಂಡವರ ಗೆಲುವಿಗೆ ಭೀಮ ಕಾರಣನೋ ಅಥವಾ ಅರ್ಜುನ ಕಾರಣನೋ ಎಂಬ ಕಥಾವಸ್ತುವನ್ನಿಟ್ಟುಕೊಂಡು ಅವರಿಬ್ಬರಲ್ಲಿ ನಾರದ ಮಹರ್ಷಿ ಕಲಹ ತಂದಿಟ್ಟು ಭೀಮ ಹಾಗೂ ಅರ್ಜುನರ ನಡುವೆ ನಡೆವ ಯುದ್ಧ ಪ್ರಸಂಗ ಜತೆಗೆ ಭೀಮನ ಮೊಮ್ಮಗ ಊರ್ದ್ವಬಾಹುವಿನ ಅಂತ್ಯ ಹೇಗಾಯಿತು ಎಂಬ ವಿವರಣೆಯೊಂದಿಗೆ ನಡೆಯುವ ಕಥಾ ಪ್ರಸಂಗ ಸ್ವಾರಸ್ಯಕರವಾಗಿದೆ.

ನಾವು ಹೊಸದಾಗಿ ಮನೆ ಕಟ್ಟಿದಾಗ ಮನೆಗೆ ಜನರ ಕ್ರೂರದೃಷ್ಟಿ ಬೀಳದಿರಲೆಂದು ಒಂದು ರಾಕ್ಷಸ ಬೊಂಬೆಯನ್ನು ತೂಗು ಹಾಕಿರುತ್ತೇವೆ ಅಷ್ಟೇ. ಅದುವೇ ಊರ್ದ್ವಬಾಹು ಎಂಬ ವಿಚಾರ ನನಗೆ ಚಂದ್ರು ಜೊತೆಗಿನ ಮಾತುಕತೆಯಲ್ಲಿ ತಿಳಿದು ಆಶ್ಚರ್ಯವಾಯಿತು. ಚಂದ್ರು ಹೇಳಿದಂತೆ ಅಜ್ಞಾತ ನಾಟಕದ ಮಾಸ್ಟರ್ ಒಬ್ಬರು ಬರೆದ ಯಕ್ಷಗಾನ ಕಥೆಯನ್ನು ಕೈಗೆತ್ತಿಕೊಂಡು ಅದಕ್ಕೆ ತಮ್ಮದೇ ಬಾಗವಂತಿಕೆ ಹಾಡು ಸಂಭಾಷಣೆ ಹೆಣೆದು ರಂಗದ ಮೇಲೆ ತಂದಿರುವುದು ತಿಳಿಯಿತು. ಭಾಗವಂತಿಕೆಯಲ್ಲಿ ಡಾ. ಚಂದ್ರು ಕಾಳೇನಹಳ್ಳಿ ಹಾಡುಗಾರಿಕೆಯಲ್ಲಿ ವಿಶೇಷವಾಗಿ ಗಮನ ಸೆಳೆದರು. ಅವರು ಮಾತನಾಡುವ ಸ್ವರಕ್ಕೂ ಹಾಡು ಹೇಳುವ ಸ್ವರಕ್ಕೂ ಬಹಳಷ್ಟು ವ್ಯತ್ಯಾಸಗಳಿದ್ದು ಹಾಡು ಖುಷಿ ನೀಡಿತು. ಯಕ್ಷಗಾನ ಅಕಾಡೆಮಿ ಸದಸ್ಯ ಅರಳಗುಪ್ಪೆ ಪುಟ್ಟಸ್ವಾಮಿ ಪ್ರಸಾಧನ ಹಾಗೂ ತಾಳವಾದ್ಯದಲ್ಲಿ, ಯೋಗೇಶ್ ಅರಳಗುಪ್ಪೆ ಮದ್ದಳೆಯಲ್ಲಿ ಸಹಕರಿಸಿದರು.

ಇನ್ನು ರಂಗದ ಮೇಲೆ ಸಾರಥಿಯಾಗಿ ಪ್ರೊ. ಈ ನಾಗಣ್ಣ,
ಶ್ರೀಕೃಷ್ಣನ ಪಾತ್ರದಲ್ಲಿ ಹೊಳೆನರಸೀಪುರ ತಾಲ್ಲೂಕು ಕ.ಸಾ.ಪ.ಅಧ್ಯಕ್ಷರು ಆರ್.ಬಿ.ಪುಟ್ಟೇಗೌಡರು, ರುಕ್ಮಿಣಿ ಪಾತ್ರದಲ್ಲಿ ಹಾಸನದ ರಾಣಿ ಚರಾಶ್ರಿ ನಟಿಸಿದ್ದರು. ನಾರದನ ಪಾತ್ರದಲ್ಲಿ ಹಡವನಹಳ್ಳಿ ನಿಂಗೇಗೌಡರು ವಿಶೇಷ ಸರಳ ಶೈಲಿಯ ಮಾತಿನಲ್ಲಿ ಪ್ರೇಕ್ಷಕರಿಗೆ ಹತ್ತಿರವಾದರೆ ಭೀಮನ ಪಾತ್ರದಲ್ಲಿ ಹೊಳೆನರಸೀಪುರ ತಾ. ರಾಮೇನಹಳ್ಳಿಯ ರೈತ ಪುಟ್ಟಸ್ವಾಮಿಗೌಡ ಆರ್.ಕೆ ಪೌರಾಣಿಕ ನಾಟಕ ಛಾಯೆಯಲ್ಲೇ ಆರ್ಭಟಿಸಿದರು. ಅರ್ಜುನ ಪಾತ್ರದಲ್ಲಿ ಚನ್ನರಾಯಪಟ್ಟಣದ ಎನ್.ಎಸ್.ಗುಣಶಂಕರ್ ಮತ್ತು ಧರ್ಮರಾಯನ ಪಾತ್ರದಲ್ಲಿ ರಾಘವೇಂದ್ರ ಅವರು ಅಭಿನಯಿಸಿದರು. ಇವಿಷ್ಟೇ ಪಾತ್ರಗಳು ಒಂದೂವರೆ ಗಂಟೆ ಯಕ್ಷಗಾನಲ್ಲಿ ಪ್ರೇಕ್ಷಕರನ್ನು ಹಿಡಿದುಟ್ಟುಕೊಳ್ಳುವಲ್ಲಿ ಶ್ರಮಿಸುತ್ತವೆ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ೩ನೇ ಕ್ರಾಸ್, ಹಾಸನ.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group