ರಾಣಿ ಚೆನ್ನಮ್ಮ ವಿ.ವಿ ಯ ಪಠ್ಯದಲ್ಲಿಯ’ ಬಂಗಾರದ ಮನುಷ್ಯ’ ಪಾಠದ ಚಲನಚಿತ್ರ ಪ್ರದರ್ಶನ
ರಾಣಿ ಚೆನ್ನಮ್ಮ ವಿ. ವಿಯ ಬಿ ಸಿ ಎ ಪಠ್ಯದಲ್ಲಿ ಅಳವಡಿಸಲಾಗಿರುವ ‘ಬಂಗಾರದ ಮನುಷ್ಯ’ ಪಾಠದ ಚಲನಚಿತ್ರ ಪ್ರದರ್ಶನ ಶುಕ್ರವಾರ ದಿ. 3 ರಂದು ಬೆಳಗಾವಿಯ ಗೋಗಟೆ ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ಜೀವನದಲ್ಲಿಯ ನೈಜ ಮೌಲ್ಯಗಳನ್ನು ಬಿತ್ತುವ ಮತ್ತು ಎತ್ತಿ ಹಿಡಿಯುವ ಸರ್ವಕಾಲಿಕ ಸತ್ಯಗಳನ್ನು ಅಳವಡಿಸಿಕೊಂಡಿರುವ ಬಂಗಾರದ ಮನುಷ್ಯ ಚಲನಚಿತ್ರ ನಿಜಕ್ಕೂ ಇಂದಿನ ಯುವ ಪೀಳಿಗೆಗೆ ಅತಿ ಅಗತ್ಯವಾಗಿದೆ. ಮೌಲ್ಯ ಗಳು ಮತ್ತು ಸಂಸ್ಕೃತಿ ಎಂಬುದು ಹದಗೆಟ್ಟು ಹೋಗುತ್ತಿರುವ ಇಂದಿನ ಯುವ ಸಮೂಹ ಮತ್ತೆ ಮೂಲ. ತಳಹದಿಗೆ ಬರಲು ಇಂತಹ ದೃಶ್ಯಕಾವ್ಯಗಳು ಸಹಕಾರಿಯಾಗುತ್ತವೆ ಎಂದು ಚಲನಚಿತ್ರ ಪ್ರದರ್ಶನ ಅಧ್ಯಕ್ಷತೆ ವಹಿಸಿದ್ದ ಬಿಸಿಎ ವಿಭಾಗದ ಮುಖ್ಯಸ್ಥೆ ಅಸ್ಮಿತಾ ದೇಶಪಾಂಡೆ ಮಾತನಾಡಿದರು.
ಉದ್ಘಾಟಕರಾಗಿ ಆಗಮಿಸಿದ್ದ ಚಿತ್ರ ನಿರ್ಮಾಪಕ ಡಾ. ದಯಾನಂದ ಚಿಕ್ಕಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಎಲ್ಲಾ ಬುದ್ಧಿ ಮತ್ತೆ ಇದ್ದರೂ ಸಹ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ ಆ ನಿಟ್ಟಿನಲ್ಲಿ ಇಂತಹ ಚಿತ್ರಗಳು ಅವಶ್ಯಕವಾಗಿವೆ ಎಂದರು.
ಕ. ಸಾ. ಪ ಜಿಲ್ಲಾ ಕಾರ್ಯದರ್ಶಿ ಎಂ. ವೈ. ಮೆಣಸಿನಕಾಯಿ, ಆರ್. ಎಲ್.ಎಸ್ ಕಾಲೇಜಿನ ಪ್ರಾಧ್ಯಾಪಕ ಶಶಿಕಾಂತ ತೇರದಾಳೆ,ಸಾಹಿತಿ ಡಾ. ಅ. ಬ. ಇಟಗಿ, ಜ್ಞಾನದೀಪ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಮೇಶ ಬಾಗೇವಾಡಿ, ಸಾಹಿತಿ ಡಿ. ಎಸ್. ದೊಡಭಂಗಿ, ಮಂಜುನಾಥ ವಸ್ತ್ರದ ಇಂದಿನ ಪ್ರಸ್ತುತ ಸ್ಥಿತಿಗತಿ ಮತ್ತು ಚಲನಚಿತ್ರದ ಮೌಲ್ಯಗಳನ್ನು ಕುರಿತಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿಯ ಸದಸ್ಯರು, ಬಿಸಿಎ, ಬಿಬಿಎ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಕನ್ನಡ ಪ್ರಾಧ್ಯಾಪಕ ಬಿ ಬಿ ಮಠಪತಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೃತಿ ಕೆರೂರ ನಿರೂಪಿಸಿದರು. ಶಿವಾನಂದ ತಲ್ಲೂರ ವಂದಿಸಿದರು.