ಬೀದರ – ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಶಾಸಕ ಶರಣು ಸಲಗರ ಅವರು ಅರೆಬೆತ್ತಲೆಯಾಗಿ ರೈತರಿಂದ ಚಡಿ ಏಟು ತಿಂದು ವಿನೂತನವಾಗಿ ಪ್ರತಿಭಟನೆ ಮಾಡಿದರು
ಈ ಸಂದರ್ಭದಲ್ಲಿ ಬಸವಕಲ್ಯಾಣದ ಗಾಂಧಿ ವೃತ್ತದಿಂದ ಅಂಬೇಡ್ಕರ ವೃತ್ತದವರೆಗೆ ನಡೆದ ರ್ಯಾಲಿಯಲ್ಲಿ ಭಾಗವಹಿಸಿ ಸಿಎಂ ಸಿದ್ದರಾಮಯ್ಯ, ಕೃಷಿ ಸಚಿವ ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಸರ್ಕಾರದ ಮಾದರಿಯಂತೆ ರೈತರಿಗೆ ಪರಿಹಾರ ನೀಡುವಂತೆ ಮನವಿ ಮಾಡಿಕೊಳ್ಳಲಾಯಿತು. 3 ಸಾವಿರಕ್ಕೂ ಅಧಿಕ ರೈತರು ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಕೂಡ ಅರೆ ಬೆತ್ತಲೆಯಾಗಿ ಹೋರಾಟದಲ್ಲಿ ಭಾಗಿಯಾದರು.
ಬಾಸುಂಡೆ ಬರುವಂತೆ ಚಡಿ ಏಟು ತಿಂದ ಶಾಸಕ ಶರಣು ಸಲಗರ ಗಮನಸೆಳೆದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕಂದಾಯ ಸಚಿವರ ವೇಷಧಾರಿಗಳಿಗೆ ಮನಸೋ ಇಚ್ಛೆ ಚಡಿಯೇಟು ನೀಡಲಾಯಿತು
ವರದಿ : ನಂದಕುಮಾರ ಕರಂಜೆ, ಬೀದರ