ಕಳೆದ ಎಂಟು ದಿನಗಳಿಂದ ಒಂದು ರಾಜ್ಯ ಹೆದ್ದಾರಿ ( ನಿಪ್ಪಾಣಿ-ಮುಧೋಳ ) ಬಂದ್ ಆಗಿದೆ. ದೂರ ಪ್ರಯಾಣಕ್ಕೆ ಹೋಗುವ ಸರ್ಕಾರಿ ಬಸ್ ಗಳು ಬಂದ್ ಆಗಿವೆ. ಖಾಸಗಿ ವಾಹನಗಳು ಕೂಡ ರಸ್ತೆಯಲ್ಲಿ ತಿರುಗಾಡದಂತೆ ಆಗಿದೆ. ಪ್ರಯಾಣಿಕರಿಗೆ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ, ಉದ್ಯೋಗಸ್ಥರಿಗೆ ಉದ್ಯೋಗವಿಲ್ಲದೆ ಪರದಾಡುವಂತಾಗಿದೆ….ಈ ಎಲ್ಲ ಬೆಳವಣಿಗೆಗಳು ರೈತರ ಹೋರಾಟದಿಂದಾಗಿ ನಡೆದಿವೆ ಆದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತುಕೊಂಡಿದೆ. ರೈತರ ಬೇಡಿಕೆಯ ಬಗ್ಗೆ ವಿಚಾರ ಮಾಡುವುದಿರಲಿ ಅದನ್ನು ಈಡೇರಿಸುವ ಒಂದು ಸಣ್ಣ ಪ್ರಯತ್ನವನ್ನೂ ಮಾಡುತ್ತಿಲ್ಲ. ಇದು ನಿಜವಾಗಲೂ ಜನಪರ ಸರ್ಕಾರವೇ ಎಂಬ ಸಂದೇಹ ಉಂಟಾಗುತ್ತಿದೆ.
ರೈತರು ತಮ್ಮ ಕಬ್ಬಿನ ಬೆಳೆಗೆ ಟನ್ನಿಗೆ ರೂ.೩೫೦೦ ದರ ನೀಡಬೇಕೆಂದು ಆಗ್ರಹಿಸಿ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರ ಎರಡು ಸಕ್ಕರೆ ಕಾರ್ಖಾನೆಗಳು, ಪ್ರಭಾವಿ ಸಚಿವರ, ಶಾಸಕರ ನೇತೃತ್ವದ ಸಕ್ಕರೆ ಕಾರ್ಖಾನೆಗಳಿದ್ದರೂ ಯಾರೂ ರೈತರೊಂದಿಗೆ ಮಾತನಾಡುವ ದೊಡ್ಡ ಮನಸ್ಸು ಮಾಡುತ್ತಿಲ್ಲ. ಸಂಬಂಧವಿಲ್ಲದ ಯಾರು ಯಾರೋ ಬಂದು ರೈತರೊಡನೆ ಕುಳಿತು ಮಾತನಾಡಿ ನೈತಿಕ ಬೆಂಬಲ ಕೊಟ್ಟು ಹೋದರು ಆದರೆ ಸಂಬಂಧಿಸಿದ ಶಾಸಕರು, ಸಚಿವರು, ಕಾರ್ಖಾನೆಗಳ ಮಾಲಿಕರು, ಅಧ್ಯಕ್ಷ ಮಹಾಶಯರು ಯಾರೂ ಬರಲಿಲ್ಲ. ರೈತರೇನು ಭಿಕ್ಷೆ ಬೇಡುತ್ತಿದ್ದಾರೇನೋ ಎಂಬಂಥ ಅಹಂಕಾರ ಈ ಆಳುಗರಿಗೆ ಹಾಗೂ ಬಂಡವಾಳಶಾಹಿಗಳಿಗೆ. ರೈತರು ಕೇಳಿದ ದರವನ್ನು ಕೊಡುವುದಕ್ಕೆ ಈ ಕಾರ್ಖಾನೆಯವರಿಗೆ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಈ ದರ ನಿಗದಿ ರಾಜ್ಯ ಸರ್ಕಾರಕ್ಕೆ ಸೇರಿದ್ದೋ ಕೇಂದ್ರ ಸರ್ಕಾರಕ್ಕೆ ಸೇರಿದ್ದೋ ಗೊತ್ತಿಲ್ಲ ಆದರೆ ಧರಣಿ ನಿರತ ರೈತರ ಹತ್ತಿರ ಬಂದು ಕುಳಿತು ಮಾತನಾಡುವ ಕನಿಷ್ಠ ಸೌಜನ್ಯವೂ ಈ ಸರ್ಕಾರಕ್ಕೆ ಇಲ್ಲವಾಯಿತಲ್ಲ ಎಂಬುದೇ ಈ ರಾಜ್ಯದ ದುರಂತ.
ರೈತರ ಪ್ರತಿಭಟನೆಗೆ ರಾಜ್ಯ ಹೆದ್ದಾರಿಯೇ ಬಲಿಯಾಗಿದೆ. ಇನ್ನೂ ರಾಷ್ಟ್ರೀಯ ಹೆದ್ದಾರಿಗೂ ಈ ಪ್ರತಿಭಟನೆ ವ್ಯಾಪಿಸಿಕೊಳ್ಳುವುದರಲ್ಲಿ ಇದೆ. ಜನ ಸಾಮಾನ್ಯರಿಗೆ ಅಪಾರ ಪ್ರಮಾಣದಲ್ಲಿ ತೊಂದರೆಯಾಗುತ್ತಿದೆ. ಜನಾವಶ್ಯಕ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಬಡವರ ಉದ್ಯೋಗಕ್ಕೆ ಸಂಚಕಾರ ಉಂಟಾಗುತ್ತಿದೆ. ಆದರೂ ಈ ರಾಜಕಾರಣಿಗಳು ತಮ್ಮ ತಮ್ಮಲ್ಲಿ ಕೆಸರೆರಚಿಕೊಳ್ಳುವ ಕೆಲಸದಲ್ಲಿಯೇ ತೊಡಗಿಕೊಂಡಿದ್ದಾರೆ. ರೈತರ ಭೇಟಿಗೆ ಬರಲಿರುವ ಸಕ್ಕರೆ ಸಚಿವರನ್ನೆ ಅಲ್ಲಿಗೆ ಹೋಗಬೇಡಿ ಎಂದು ಉಸ್ತುವಾರಿ ತಡೆದಿದ್ದಾರೆ ಎಂಬ ವಿಡಿಯೋ ಅಂತೂ ಇವರ ಗೋಮುಖ ವ್ಯಾಘ್ರತನವನ್ನು ಬಯಲು ಮಾಡಿದೆ. ಇದು ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸವೆಂದರೆ ತಪ್ಪಾಗಲಾರದು.
ಅಷ್ಟಕ್ಕೂ ಕಬ್ಬಿನ ದರ ಹೆಚ್ಚು ಮಾಡುವುದು ಯಾರ ಕೈಯಲ್ಲಿದೆ ? ಎಂಬುದನ್ನಾದರೂ ಸ್ಪಷ್ಟಪಡಿಸಬೇಕಾಗಿದೆ. ತಮ್ಮ ಕಾರ್ಖಾನೆಗೆ ಕಬ್ಬು ತರಿಸಿಕೊಳ್ಳುವ ಕಾರ್ಖಾನೆಯವರು ದುಡಿಯುವ ರೈತನಿಗೆ ಹೆಚ್ಚಿನ ದರ ಕೊಡಬೇಕೆಂಬ ಮನಸು ಮಾಡಿದರೆ ಸಣ್ಣವರೇನೂ ಆಗುವುದಿಲ್ಲ. ಕಾರ್ಖಾನೆಯ ಹೆಸರಿನಲ್ಲಿ ನೂರಾರು ಕೋಟಿ ಸಾಲ ಪಡೆದು, ಸಬ್ಸಿಡಿಗಳನ್ನು ಪಡೆದುಕೊಂಡು, ಕಬ್ಬಿನಿಂದ ಅನೇಕ ಉಪ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ ಸಾಕಷ್ಟು ಲಾಭ ಪಡೆದುಕೊಳ್ಳುವ ಉದ್ಯಮಿಗಳು ಹನ್ನೆರಡು ತಿಂಗಳವರೆಗೆ ಕಷ್ಟಪಟ್ಟು ಕಬ್ಬು ಬೆಳೆಯುವ ರೈತನ ಕಷ್ಟ ನೋಡಬೇಕು, ಗ್ಯಾರಂಟಿಗಳನ್ನು ಈಡೇರಿಸಲು ಎಲ್ಲಾ ದರಗಳನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರದ ದುರ್ನೀತಿಯನ್ನಾದರೂ ನೋಡಿ ರೈತರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಕೊಡಬೇಕೆಂಬ ಮನಸು ಮಾಡಬೇಕು.
ಪ್ರಸಕ್ತ ಸಿದ್ಧರಾಮಯ್ಯನವರ ಸರ್ಕಾರದ ಈ ಧೋರಣೆ ಖಂಡನೀಯ. ಎಂಟು ಹತ್ತು ದಿನಗಳವರೆಗೆ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆದರೆ ಜನರ ಜೀವನದ ಮೇಲೆ ಯಾವ ಪರಿಣಾಮ ಬೀರುತ್ತದೆಯೆಂಬುದರ ಅರಿವು ಆಳುಗರಿಗೆ ಇರಬೇಕಾಗುತ್ತದೆ. ಇದು ಜನಪರ ಸರ್ಕಾರದ ಲಕ್ಷಣ ಆದರೆ ಇಂಥ ಯಾವ ಲಕ್ಷಣಗಳೂ ಈ ಸರ್ಕಾರದ ಕುರಿತಂತೆ ಕಾಣುತ್ತಿಲ್ಲ. ಇವರಿಗೆ ತಮ್ಮ ರಾಜಕಾರಣವೇ ಮೇಲಾಗಿ ಕಾಣುತ್ತಿದೆ. ಸಕ್ಕರೆ ಲಾಬಿಯ ಎದುರು ಸರ್ಕಾರ ಪೂರ್ತಿಯಾಗಿ ಮಣಿದಂತೆ ತೋರುತ್ತಿದೆ. ರೈತರು ಏನು ಮಾಡಿಕೊಂಡಾರು ಎಂಬ ಅಸಡ್ಡೆ ಮುಖ್ಯಮಂತ್ರಿ ಸೇರಿ ಎಲ್ಲ ಮಂತ್ರಿಗಳಲ್ಲೂ ಕಂಡುಬರುತ್ತಿದೆ. ಇದು ಯಾವ ರೀತಿಯಿಂದಲೂ ಒಳ್ಳೆಯ ಲಕ್ಷಣವಲ್ಲ.
ಉಮೇಶ ಮ.ಬೆಳಕೂಡ
ಅಧ್ಯಕ್ಷರು ಭಾರತೀಯ ಕಿಸಾನ್ ಸಂಘ
ಮೂಡಲಗಿ

