ಸಿಂದಗಿ; ಸರಕಾರ ನಿಗದಿಗೊಳಿಸಿದ ಕಬ್ಬಿಗೆ ಪ್ರತಿ ಟನ್ನಿಗೆ ೩೩೦೦/- ಬೆಂಬಲ ಬೆಲೆಯನ್ನು ಕೊಡುವದಾಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಅಡಳತ ಮಂಡಳಿಗಳು ಒಪ್ಪಿಗೆ ಸೂಚಿಸಿ ಸಾರ್ವಜನಿಕ ಜಾಹಿರ ನೋಟಿಸು ಪ್ರಕಟಿಸುವದು ಮತ್ತು ೨೦೨೫ ಸಾಲಿನ ಫಸಲ ಭೀಮಾ ಮತ್ತು ಬೆಳೆ ಪರಿಹಾರವನ್ನು ರೈತರಿಗೆ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಪತ್ರಿಭಟನೆ ನಡೆಸಿ ತಹಶೀಲ್ದಾರ ಕರೇಪ್ಪ ಬೆಳ್ಳಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷ ದಾನಪ್ಪಗೌಡ ಚನಗೊಂಡ,ವಕೀಲರು ಮಾತನಾಡಿ, ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿ ಮಾಡುವ ಪ್ರತಿ ಟನ್ ಕಬ್ಬಿಗೆ ರೂ. ೩೩೦೦/- ಕೊಡುವಂತೆ ನಿರ್ದೇಶನ ನೀಡಿದ್ದು ಇರುತ್ತದೆ. ನಮ್ಮದೇ ಪಕ್ಕದ ಜಿಲ್ಲೆಗಳಾದ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಸರ್ಕಾರ ನಿಗದಿಗೊಳಿಸಿದಂತೆ ರೈತರಿಗೆ ೩೩೦೦/- ರೂಪಾಯಿಗಳನ್ನು ಕೊಡುವದಾಗಿ ಒಪ್ಪಿಗೆ ಸೂಚಿಸಿ ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ತಮ್ಮ ಕಾರ್ಖಾನೆಗಳಿಗೆ ಕಳುಹಿಸುವಂತೆ ಸಾರ್ವಜನಿಕವಾಗಿ ನೋಟಿಸು ಬಹಿರಂಗಪಡಿಸಿದ್ದು ಆದರೆ ವಿಜಯಪುರ ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಸರ್ಕಾರದ ಆದೇಶ ಪಾಲಿಸುತ್ತಿಲ್ಲ ಕಾರಣ ಕಾರ್ಖಾನೆ ಮಾಲೀಕರ ಸಭೆ ಕರೆದು ಸರಕಾರದ ಬೆಲೆ ನೀಡುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಚಂದ್ರಗೌಡ, ಗೌ. ಪಾಟೀಲ ಮಾತನಾಡಿ, ಸರ್ಕಾರ ನಿಗದಿಗೊಳಿಸಿದಂತೆ ಬೆಲೆ ಕೊಡಲು ಸಾಧ್ಯವಿಲ್ಲ ಅಂತಾ ರೈತರ ಮುಂದೆ ಹೇಳುತ್ತಿದ್ದಾರೆ ಅನ್ನುವ ವದಂತಿ ಆರಂಭವಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರ ಅವಶ್ಯಕ ಇಲಾಖೆ ಸಹಯೋಗದಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಮತ್ತು ರೈತರ ಜಂಟಿ ಸಭೆ ನಡೆಸಿ ಸರ್ಕಾರ ನಿಗದಿಗೊಳಿಸಿದಂತೆ ಬೆಲೆ ಕೊಡುವದಾಗಿ ಸಾರ್ವಜನಿಕ ಜಾಹಿರ ನೊಟೀಸು ಹೊರಡಿಸಿ ಕಾರ್ಖಾನೆಗಳನ್ನು ಆರಂಭಿಸುವದಕ್ಕೆ ಒಪ್ಪಿಗೆ ತೆಗೆದುಕೊಳ್ಳಬೇಕು. ಸನ್ ೨೦೨೫ ರ ಸಾಲಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಅಕಾಲಿಕ ಚಂಡಮಾರುತ ಮಳೆಯಿಂದ ಅತೀವೃಷ್ಟಿಯಾಗಿ ಜಿಲ್ಲೆಯಲ್ಲಿ ಈರುಳ್ಳಿ, ಮೆಕ್ಕೆಜೋಳ, ಹತ್ತಿ, ತೊಗರಿ ಸಜ್ಜೆ, ಹೆಸರು ಬೆಳೆಗಳು ಹಾಳಾಗಿ ರೈತರು ಆರ್ಥಿಕ ನಷ್ಟ ಅನುಭವಿಸಿರುತ್ತಾರೆ. ಸರ್ಕಾರ ಇಲ್ಲಿಯವರೆಗೆ ಯಾವುದೇ ರೀತಿಯಿಂದ ಪರಿಹಾರ ನೀಡಿರುವುದಿಲ್ಲ. ಅದೇ ರೀತಿ ಭೀಮಾ ಫಸಲ್ ಯೋಜನೆಯಲ್ಲಿ ರೈತರಿಗೆ ಸಿಗಬೇಕಾದ ಬೆಳೆ ಪರಿಹಾರ ಇನ್ನೂ ರೈತರ ಕೈಸೇರಿರುವದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ತುರ್ತು ಸಭೆ ಕರೆದು ರೈತರಿಗೆ ಸಿಗಬೇಕಾದ ವಿಮಾ ಪರಿಹಾರ ಮತ್ತು ಸರ್ಕಾರ ಘೋಸಿದ ನೆರೆ ಪರಿಹಾರ ಕೊಡಿಸಲು ೪ ದಿನಗಳಲ್ಲಿ ಸೂಕ್ತ ಕ್ರಮ ಜರಗಿಸದಿದ್ದರೆ ಸಿಂದಗಿ ತಾಲೂಕಿನ ರೈತರು ಹೆದ್ದಾರಿ ತಡೆ ಮೂಲಕ ನಿರಂತರ ಪ್ರತಿಭಟನೆ ಮಾಡಬೇಕಾಗುತ್ತದೆ. ಆಗ ಆಗುವ ಎಲ್ಲ ಹಾನಿಗೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ ಕರೆಪ್ಪ ಬೆಳ್ಳಿ ಮಾತನಾಡಿ, ಇಂದು ಈ ತಾಲೂಕಿನಲ್ಲಿರುವ ಮೂರು ಕಾರ್ಖಾನೆ ಮಾಲೀಕರ ಸಭೆ ಕರೆದು ಬೆಲೆ ನಿಗದಿ ಗೊಳಿಸುವಂತೆ ಜಿಲ್ಲಾದಿಕಾರಿಗಳು ನೋಟೀಸ ನೀಡಿದ್ದು ಅದರಂತೆ ಸಾಯಂಕಾಲದೊಳಗೆ ಬೆಲೆ ನಿಗದಿ ಆಗುತ್ತದೆ ಎಂದ ಅವರು ಹಾನಿಗೊಳಗಾದ ಬಗ್ಗೆ ಎಲ್ಲ ಸಮೀಕ್ಷೆಗಳು ಮುಗಿದಿದ್ದು ಮುಂದಿನ ವಾರದಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಆಗುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೀಲಮ್ಮ ಯಡ್ರಾಮಿ, ಪರಸು ಗೂಳೂರ, ಲಕ್ಕಮ್ಮ ಬಿರಾದಾರ, ಬಸವರಾಜ ಚಂಡ್ರಪ್ಪಗೋಳ, ಸಲೀಮ ಮುಲ್ಲಾ, ಎಂ.ಕೆ ಉಸ್ತಾದ, ಭೀಮಾಶಂಕರ ಹಿರೇಮಠ, ರವಿಕುಮಾರ ಮೂಲಿಮನಿ, ಬಸವಂತ ಚಾವರ, ಎಂ.ಎ.ವಸ್ತ್ರ ದ, ಶಿವಶರಣ ಹೆಗ್ಗಣದೊಡ್ಡಿ, ರೇವಣಸಿದ್ದ ದಿಂಡವಾರ, ಅಮರ ವಾಲೀಕಾರ, ಬಾಪು ಬಗಲಿ, ಬಸಪ್ಪ ಬಗಲಿ, ಪ್ರಕಾಶ ದಾಸರ, ಸಾಗರ ಜೇರಟಗಿ ಸೇರಿದಂತೆ ನೂರಾರು ರೈತರು ಪತ್ರಿಪಭಟನೆಯಲ್ಲಿ ಇದ್ದರು.

