ಸಿಂದಗಿ; ಮಕ್ಕಳ ಬೇಡಿಕೆಗಳನ್ನು ಮುಂದಿನ ಗ್ರಾಮ ಪಂಚಾಯತ್ ಕ್ರಿಯಾ ಯೋಜನೆಯಲ್ಲಿ ಸೇರಿಸಿ ಅನುಷ್ಠಾನಗೊಳಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡಲಾಗುತ್ತದೆ. ಮಕ್ಕಳು ಶ್ರದ್ಧೆಯಿಂದ ಕಲಿತು ತಮ್ಮ ಗ್ರಾಮದ ಹೆಸರಿಗೆ ಕೀರ್ತಿ ತರುವ ಪ್ರಯತ್ನ ಮಾಡಬೇಕು. ಯಾವಾಗ ಬೇಕಾದರೂ ತಮ್ಮ ಸಮಸ್ಯೆಗಳನ್ನು ನಮಗೆ ತಿಳಿಸಬಹುದು ಎಂದು ಗ್ರಾಮ ಸಭೆಯನ್ನು ಉದ್ದೇಶಿಸಿ ಗ್ರಾಮ ಪಂಚಾಯತಿ ಅಧಿಕಾರಿಗಳಾದ ಅಣ್ಣಾರಾಯರೂಗಿ ಹೇಳಿದರು.
ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ಸಂಗಮ ಸಂಸ್ಥೆ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬ್ಯಾಕೋಡ ಹಾಗೂ ಗ್ರಾಮ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಮಕ್ಕಳ ಪ್ರತಿನಿಧಿಗಳಾದ ಕುಮಾರಿ ಯಾಸ್ಮಿನ್ ಕೋಟ್ಯಾಳ ಮತ್ತು ಕುಮಾರಿ ವಂದನಾ ಉದ್ಘಾಟಿಸಿದರು.
ಸಭೆಯಲ್ಲಿ ಮಕ್ಕಳು ತಮ್ಮ ಅಗತ್ಯಗಳು, ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಸ್ಪಷ್ಟವಾಗಿ ಗ್ರಾಮ ಪಂಚಾಯತ್ ಅಧಿಕಾರಿಗಳ ಮುಂದೆ ಮಂಡಿಸಿದರು. ಮಕ್ಕಳ ಪ್ರಮುಖ ಬೇಡಿಕೆಗಳಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣ, ಶಾಲಾ ಕಟ್ಟಡದ ದುರಸ್ತಿ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಸಮತಟ್ಟಾದ ಶಾಲಾ ಮೈದಾನ ನಿರ್ಮಾಣ, ಶಾಲಾ ಆವರಣದಲ್ಲಿ ಎರಡು ಡಸ್ಟ್ಬಿನ್ಗಳ ವ್ಯವಸ್ಥೆ, ವಿಶೇಷ ಚೇತನ ಮಕ್ಕಳಿಗೆ ೫% ಅನುದಾನದ ಅಡಿಯಲ್ಲಿ ನೆರವು, ಹಾಗೂ ಬಿಸಿ ಊಟದ ಅಡುಗೆ ಕೋಣೆ ನಿರ್ಮಾಣ ಮಾಡುವಂತೆ ವಿನಂತಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ರಾಯಗೊಂಡಪ್ಪಗೌಡ ಬಿರಾದಾರ ಮಾತನಾಡಿ,“ಶಾಲೆಯಲ್ಲಿರುವ ಕೆಲವು ಸೌಲಭ್ಯಗಳ ಕೊರತೆಗಳ ಬಗ್ಗೆ ಮಕ್ಕಳ ಮಾತುಗಳನ್ನು ಆಲಿಸಿದ್ದೇವೆ. ಕೆಲವು ವಿಷಯಗಳು ಪಂಚಾಯತ್ ಮಟ್ಟದಲ್ಲಿ ತಕ್ಷಣ ಸಾಧ್ಯವಿಲ್ಲ. ಇದಕ್ಕಾಗಿ ನಾನು ಈಗಾಗಲೇ ಶಾಸಕರಿಗೆ ಮನವಿ ಮಾಡಿದ್ದೇನೆ. ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಹೊಸ ಕಟ್ಟಡ ನಿರ್ಮಿಸಲು ಅವರು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸಂಗಮ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಮಹೇಶ್ ಚವ್ಹಾಣ ಮಾತನಾಡಿ, ಸಂಗಮ ಸಂಸ್ಥೆ ಮಕ್ಕಳ ವಿಶೇಷ ಗ್ರಾಮ ಸಭೆಗಳ ಮೂಲಕ ಮಕ್ಕಳಿಗೆ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಲು, ಅಭಿಪ್ರಾಯ ವ್ಯಕ್ತಪಡಿಸಲು ಮತ್ತು ಅವರ ಅಭಿವೃದ್ದಿ-ರಕ್ಷಣೆಗೆ ಅಗತ್ಯವಾದ ವೇದಿಕೆಯನ್ನು ಒದಗಿಸುತ್ತಿದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಂಠೆಪ್ಪ ಚೋರಗಸ್ತಿ, ಶ್ರೀಮತಿ ಜೆ. ಬಿ. ಭಾಸಗಿ, ಶ್ರೀಮತಿ ಶಮಶಾದ ಬೇಗಂ, ಆನಂದ ನಾಯ್ಕೋಡಿ, ಶ್ರೀಶೈಲ ನಾಯ್ಕೋಡಿ, ಕೃಷ್ಣಾ ಬಡಿಗೇರ ಸೇರಿದಂತೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಸಂವಿಧಾನದ ಪ್ರಸ್ತಾವನೆ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್. ಕೆ. ಜೋಶಿ ನಿರೂಪಿಸಿದರು. ಲಕ್ಷಣ ಪೂಜಾರಿ ವಂದಿಸಿದರು.

