ಹುನಗುಂದ: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಏಕಾಏಕಿಯಾಗಿ ಸ್ಥಗಿತಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದನ್ನು ಸಂಬoಧಿಸಿದ ಅಧಿಕಾರಿಗಳು ಬಗೆಹರಿಸುವಲ್ಲಿ ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ಮಂಗಳವಾರ ನೂರಾರು ಜನ ಚಿಕ್ಕಬಾದವಾಡಗಿ ಗ್ರಾಮದ ಗ್ರಾಮಸ್ಥರು ಎತ್ತು-ಬಂಡಿ ಹಾಗೂ ಟ್ರಾಕ್ಟರ್ ಸಮೇತ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಹುನಗುಂದ-ಚಿತ್ತವಾಡಗಿ ರಸ್ತೆಯ ಮಧ್ಯೆ ಇರುವ ಚಿಕ್ಕಬಾದವಾಡಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ಅರ್ಧ ಕಿಮೀ. ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಏಕಾಏಕಿ ನಿಲ್ಲಿಸಲಾಗಿದೆ. ಗ್ರಾಮ ನಕಾಶೆ ದಾಖಲೆಯಲ್ಲಿ ಈ ರಸ್ತೆಯೇ ಇಲ್ಲದ್ದರಿಂದ ಜಮೀನು ಮಾಲಿಕನೊರ್ವ ರಸ್ತೆಗೆ ಹೋಗಿರುವ ಜಮೀನಗೆ ಪರಿಹಾರ ಕೊಡದಿದ್ದಕ್ಕೆ ಕಾಮಗಾರಿಗೆ ತಡೆಯೊಡ್ಡಿ ಕಾಮಗಾರಿ ನಿಲ್ಲಿಸಲಾಗಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದು ಒಂದು ಕಡೆಯಾದರೇ ಇನ್ನೂಂದೆಡೆಯಲ್ಲಿ ರಸ್ತೆಯಲ್ಲಿ ಒಣ ಕಡಿಗಳನ್ನು ಹಾಕಿ ಕೈ ತೊಳೆದುಕೊಳ್ಳಲು ಮುಂದಾಗಿರುವ ಅಧಿಕಾರಿಗಳ ನಡೆಗೆ ಹಾಗೂ ನಿತ್ಯ ವಾಹನಗಳಲ್ಲಿ ಸಂಚರಿಸುವ ಅದೇಷ್ಟೋ ಜನರು ಈ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದು ಇದರಿಂದ ಬೇಸತ್ತ ಗ್ರಾಮಸ್ತರು ಮಂಗಳವಾರದ ಎತ್ತು ಬಂಡಿ ಮತ್ತು ಟ್ಯಾಕ್ಟರ್ ಸಮೇತ ಹೋರಾಟಕ್ಕಿಳಿದರು.
ಗ್ರಾಮದ ಮುಖಂಡ ಬಸವರಾಜ ಹೊರಕೇರಿ ಮಾತನಾಡಿ, ಹುನಗುಂದ ದಿಂದ ಚಿತ್ತವಾಡಗಿ ಹೋಗುವ ಮಾರ್ಗದಲ್ಲಿ ಚಿಕ್ಕಬಾದವಾಡಗಿ ಕ್ರಾಸ್ ದಿಂದ ಗ್ರಾಮಕ್ಕೆ ₹೨೦ ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕಳೆದ ೨೦ ವರ್ಷಗಳಿಂದಲೂ ಗ್ರಾಮಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ ನಿತ್ಯ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಮಾತಿಗೆ ಗ್ರಾಮಸ್ಥರು ದನಿಗೂಡಿಸಿದರು.
ಪರನಗೌಡ ಪಾಟೀಲ, ಸಂಗಪ್ಪ ಗೋಡಿ, ಸಂಗನಬಸಪ್ಪ ಉಪನಾಳ, ಸಿಂಗಾರಿಗೌಡ ಪಾಟೀಲ ಗುರಪ್ಪ ವಂದಾಲಿ, ಮಲ್ಲಪ್ಪ ಉಪನಾಳ, ನಿಂಗನಗೌಡ ಗೌಡರ, ಭೀಮನಗೌಡ ಗೌಡ್ರ, ಅಶೋಕ ಗೌಡರ, ಮಹಾಂತಪ್ಪ ವಂದಾಲಿ, ರೂಪಾ ಗೌಡರ, ಅನುಸೂಯಾ ಗೌಡರ, ನೇತ್ರಾ ಮುಕಪ್ಪನವರ, ಸಿದ್ದವ್ವ ಲಗಳಿ, ಬಸವ್ವ ಲಗಳಿ ಸೇರಿ ಗ್ರಾಮಸ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮಸ್ಥರು ರಸ್ತೆ ಸಮಸ್ಯೆಯನ್ನು ಬಗೆಹರಿಸಲು ಎತ್ತಿನ ಬಂಡಿಯಲ್ಲಿ ಪ್ರಯಾಣಿಸಿದ ತಹಶೀಲ್ದಾರ.
ಗ್ರಾಮಸ್ತರ ಮನವಿಯನ್ನು ಸ್ವಿಕರಿಸಿದ ತಹಶೀಲ್ದಾರ್ ಪ್ರದಿಪಕುಮಾರ ಹಿರೇಮಠ ಸಮಸ್ಯೆ ಬಗೆ ಹರಿಸಲು ಗ್ರಾಮಸ್ಥರೊಂದಿಗೆ ಎತ್ತಿನ ಬಂಡಿಯಲ್ಲಿ ಗ್ರಾಮಕ್ಕೆ ತೆರಳಿ ಕಾಮಗಾರಿಗೆ ತಡೆ ಮಾಡಿದ ವ್ಯಕ್ತಿ ಮತ್ತು ಗ್ರಾಮಸ್ತರನ್ನು ಸೇರಿಸಿ ಸಭೆ ಮಾಡಿದರು. ಈ ಸಂಪರ್ಕ ರಸ್ತೆ ಬಹುಕಾಲದಿಂದ ಇದ್ದರು ಇದಕ್ಕಾಗಿ ನನ್ನ ಸುಮಾರು ಒಂದು ಎಕರೆ ಹೊಲ ಹೋಗಿದೆ. ರಸ್ತೆ ಡಾಂಬರೀಕರಣಕ್ಕೆ ನನ್ನ ವಿರೋಧ ಇಲ್ಲ. ಪರಿಹಾರ ಬೇಕು. ಈ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ಮಾಡಿ ಎಂದು ತಡೆ ಮಾಡಿದ ವ್ಯಕ್ತಿ ಮನವಿ ಮಾಡಿಕೊಂಡನು.
ಜಮೀನ ಮಾಲಿಕ ಮತ್ತು ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ : ಕೆಲ ಹೊತ್ತು ಪ್ರಕ್ಷುಬ್ದ ವಾತಾವರಣ
ರಸ್ತೆ ಸಲುವಾಗಿ ಜಮೀನ ಮಾಲಿಕ ಮತ್ತು ಅಧಿಕಾರಿಗಳ ಹಾಗೂ ಗ್ರಾಮಸ್ತರ ಮದ್ಯೆ ಮಾತಿನ ಸಂಘರ್ಷ ನಡೆದು ಕೆಲಹೊತ್ತು ಪ್ರಕ್ಷುಬ್ದ ವಾತಾವರಣ ಸೃಷ್ಠಿಯಾಗಿ ತಹಶೀಲ್ದಾರ ಸೇರಿ ಯಾರು ಗ್ರಾಮದಿಂದ ಹೋಗದಂತೆ ಎಲ್ಲ ಮಾರ್ಗಗಳಿಗೆ ಚಕ್ಕಡಿ, ಮುಳ್ಳು ಕಂಟಿ ಹಚ್ಚಿ ಬಂದ ಮಾಡಿದರು. ಪರಿಸ್ಥಿತಿಯ ಗಂಭೀರತೆ ಅರಿತ ತಹಶೀಲ್ದಾರ ಹಿರೇಮಠ, ಈ ರಸ್ತೆ ಹಾಯ್ದು ಹೋದ ಎಲ್ಲ ಕೃಷಿ ಭೂಮಿಗಳ ಸರ್ವೆ ಮಾಡಿ ಯಾರದು ಎಷ್ಟು ಭೂಮಿ ಹೋಗಿದೆ ಎಂಬುದನ್ನು ಗುರುತಿಸಿ, ಇದರ ಸ್ವಾಧಿನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸುವಂತೆ ಕಾಮಗಾರಿ ಉಸ್ತುವಾರಿ ವಹಿಸಿಕೊಂಡ ಜಿಪಂ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣ ನಾಯಕ ಅವರಿಗೆ ಸೂಚಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು.

