ಬಿ. ಮಲ್ಲಪ್ಪ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನವರು. 1835ರಲ್ಲಿ ಮಲ್ಲಿಕಾರ್ಜುನಪ್ಪ ಮಲ್ಲಮ್ಮಾಜಿ ಎಂಬ ಲಿಂಗಾಯತ ಬಣಜಿಗ ದಂಪತಿಗಳಿಗೆ ಜನಿಸಿದರು. ಬಾಲ್ಯದಿಂದಲೂ ಮೈಸೂರು ಅರಮನೆಯ ಸಂಪರ್ಕ ಹೊಂದಿದ್ದರಿಂದ, ವಿದ್ಯಾಭ್ಯಾಸಕ್ಕೂ ಅಲ್ಲಿಂದಲೇ ಇಂಬು ದೊರೆಯಿತು. ಇವರು ಇಂಗ್ಲಿಷ್, ಪರ್ಶಿಯನ್, ಮರಾಠಿ, ಸಂಸ್ಕೃತ ಸೇರಿದಂತೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದರು. ಮೈಸೂರು ಭಾಗದ ಲಿಂಗಾಯತರಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸ ಮಾಡಿದವರಲ್ಲಿ ಇವರೇ ಮೊದಲಿಗರು. ಇವರನ್ನು ಇಂಗ್ರೇಜಿ ಮಲ್ಲಪ್ಪ ಎಂದೇ ಗುರುತಿಸಲಾಗುತ್ತಿತ್ತು.
ಮಲ್ಲಪ್ಪನವರ ಭಾಷಾಂತರ ಜ್ಞಾನದ ಫಲವಾಗಿ ಅರಮನೆಯ ಕಂಟ್ರೋಲರ್ ಸಿ ರಂಗಾಚಾರ್ಯರು ಇವರನ್ನು ಅರಮನೆಯ ಭಾಷಾಂತರಕಾರರನ್ನಾಗಿ ನೇಮಿಸಿದರು. ‘ಭಾಷೋಜ್ಜೀವಿನಿ’ ಎಂಬ ಶಾಲೆ ಸ್ಥಾಪಿಸಿದ ಮೈಸೂರು ಅರಸರು, ಬಿ ಮಲ್ಲಪ್ಪರನ್ನು ಮುಖ್ಯೋಪಾಧ್ಯಾಯರಾಗಿ ನೇಮಕ ಮಾಡಿದರು. ಇವರು ಮೈಸೂರಿನ ಚಿಕ್ಕಬಸಮ್ಮನವರ ವೀರಶೈವ ಅನಾಥಾಲಯ’, ’ಮಲ್ಲಪ್ಪನವರ ಹೈಸ್ಕೂಲ್’, ’ವೀರಶೈವ ಸಂಸ್ಕೃತ ಪಾಠ ಶಾಲಾ’ ಇವುಗಳ ಸ್ಥಾಪನೆಯಲ್ಲಿ ಶ್ರಮಿಸಿದವರು. ರೈಸ್, ಬಸವಪ್ಪಶಾಸ್ತ್ರಿಗಳಂತಹ ಮೇರು ಸಾಹಿತಿಗಳ ಕೃತಿಗಳ ಮುದ್ರಣ ಹಾಗೂ ಪ್ರಕಟಿಸುವ ಸಂದರ್ಭದಲ್ಲಿ ಮಲ್ಲಪ್ಪನವರ ಸಹಕಾರವಿರುತ್ತಿತ್ತು.
ಅಧ್ಯಾಪಕರಾಗಿ, ಶಾಸ್ತ್ರಕಾರರಾಗಿ ಮಾತ್ರವಲ್ಲದೆ ಗ್ರಂಥ ಸಂಪಾದನಕಾರರಾಗಿಯೂ ಮೂರು ಮಜಲುಗಳಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ. 18-19ನೇ ಶತಮಾನದಲ್ಲಿ ಮನ್ನಣೆ ಗಳಿಸಿದ್ದ ಷಡಕ್ಷರ ಕವಿಯ ರಾಜಶೇಖರ ವಿಳಾಸ’ವನ್ನು ಸಂಪಾದಿಸಿದವರು ಇವರೇ .
ನಾಗವರ್ಮನ ’ಕಾವ್ಯಾವಲೋಕನ’ ಎಂಬ ಲಕ್ಷಣಗ್ರಂಥದ “ಕಾವ್ಯಾವಲೋಕನದ ಅರ್ಥಾಲಂಕಾರ ಪ್ರಕರಣವು’ ಎಂಬ ಒಂದು ಪ್ರಕರಣವನ್ನು ಸಂಪಾದಿಸಿ, 1882ರಲ್ಲಿ ಮೈಸೂರಿನ ವಾಣಿ ವಿಲಾಸ ಪ್ರೆಸ್ ಮೂಲಕ ಪ್ರಕಟಿಸಿದರು. 1897ರಲ್ಲಿ ’ಶಬ್ದಾದರ್ಶ’ ಎಂಬ ವ್ಯಾಕರಣ ಗ್ರಂಥವನ್ನು ರಚಿಸಿ, ‘ವ್ಯಾಕರಣದ ಮಲ್ಲಪ್ಪ ; ಎಂದೇ ಖ್ಯಾತಿ ಪಡೆದರು.
ಗ್ರಂಥ ಸಂಪಾದನೆಯಲ್ಲಿ ತನ್ನದೇ ಆದ ಒಂದು ವಿಧಾನವನ್ನು ಸ್ಥಾಪಿಸುವ ಮೂಲಕ ಕನ್ನಡದಲ್ಲಿ ಪ್ರಾಚೀನ ಸಾಹಿತ್ಯ ಲೋಕದಲ್ಲಿ ಮಹತ್ತರವಾದ ಮೈಲಿಗಲ್ಲುಗಳನ್ನು ಸ್ಥಾಪಿಸಿದರು. 1907 ಫೆಬ್ರವರಿ 14 ರಂದು ಇವರು ಇಹಲೋಕ ತ್ಯಜಿಸಿದರು.
ಹಿಂದುಳಿದ ಚಾಮರಾಜನಗರ ಜಿಲ್ಲೆಯಿಂದ ಬಂದು ಮೈಸೂರು ಮಹಾರಾಜರ ಪ್ರೀತಿಗೆ ಪಾತ್ರರಾಗಿ
ಶ್ರೇಷ್ಠ ವ್ಯಾಕರಣ ತಜ್ಞರೆನಿಸಿಕೊಂಡ ಬೇಗೂರ ಮಲ್ಲಪ್ಪನವರು ಲಿಂಗಾಯತ ಧರ್ಮದ ಸಾವಿಲ್ಲದ ಶರಣರು.
ಡಾ.ಶಶಿಕಾಂತ ಪಟ್ಟಣ ರಾಮದುರ್ಗ 9552002338

