ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರವಹಿಸಿ, ಅದರ ಯಶಸ್ಸಿಗೆ ಶಕ್ತಿಮೀರಿ ದುಡಿದ ಎಸ್. ನಿಜಲಿಂಗಪ್ಪನವರು, ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಹಾಗೂ ಇನ್ನಿತರ ರಾಜಕೀಯ ಹುದ್ದೆಗಳಲ್ಲಿ ಯಶಸ್ಸನ್ನು ಗಳಿಸಿದವರು.
1902ರಲ್ಲಿ ಕೃಷಿ ಪ್ರಧಾನವಾದ ಬಡ ಶೆಟ್ಟರ ಕುಟುಂಬವೊಂದರಲ್ಲಿ ಜನಿಸಿದ ನಿಜಲಿಂಗಪ್ಪ, ತಮ್ಮ ಬದುಕಿನ ಕೊನೆಯ ದಿನಗಳವರೆಗೂ ಸ್ಪಂದಿಸಿದ್ದು ಜನಸಾಮಾನ್ಯರ ಕಷ್ಟ ಸುಖಗಳಿಗೆ.
ಬಸವೇಶ್ವರ ಮತ್ತು ಶಿವಶರಣರ ನೀತಿ-ಸಾಧನೆಗಳನ್ನು ಅಭ್ಯಾಸಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ನಿಜಲಿಂಗಪ್ಪನವರು, ಗಾಂಧೀಜಿಯವರ ವಿಚಾರಧಾರೆಯಿಂದಲೂ ಪ್ರಭಾವಿತರಾದರು. ಚಿತ್ರದುರ್ಗವನ್ನು ತಮ್ಮ ಕರ್ಮಭೂಮಿಯಾಗಿ ಸ್ವೀಕರಿಸಿ ಅಂದಿನ ಚಿತ್ರದುರ್ಗ ಜಿಲ್ಲೆಯ ಏಳಿಗೆಗಾಗಿ ಶ್ರಮವಹಿಸಿದ್ದಾರೆ.
ಎಸ್. ನಿಜಲಿಂಗಪ್ಪನವರು ಹಿಂದೆ ಮೈಸೂರು ರಾಜ್ಯವೆಂಬ ಹೆಸರಿದ್ದ ಕರ್ನಾಟಕ ಮುಖ್ಯಮಂತ್ರಿಗಳಾಗಿ, ಪ್ರಾಮಾಣಿಕ ರಾಜಕಾರಣಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಹೋರಾಟಗಾರರಾಗಿ ಮಹತ್ವದ ಸೇವೆ ಸಲ್ಲಿಸಿದವರು.1902ರ ಡಿಸೆಂಬರ್ 10ರಂದು ಜನಿಸಿದರು. ತಂದೆ ಅಬ್ಬಲೂರು ಅಡಿವೆಪ್ಪ ಅವರು ಮತ್ತು ತಾಯಿ ನೀಲಮ್ಮ. ಬಳ್ಳಾರಿ ಜಿಲ್ಲೆಯ ಹಲುವಾಗಲು ಎಂಬ ಹಳ್ಳಿಯಲ್ಲಿ ತಂದೆ ಒಬ್ಬ ಸಣ್ಣ ವರ್ತಕರಾಗಿದ್ದರು. ತಾಯಿ ಶಿವಭಕ್ತೆ. ಇವರ ಅಣ್ಣ ವೀರಪ್ಪ. ಅಕ್ಕ ಪುಟ್ಟಮ್ಮ.
ನಿಜಲಿಂಗಪ್ಪನವರಿಗೆ ಆರು ವರ್ಷ ಆಗಿದ್ದಾಗ ತಂದೆ ತೀರಿಕೊಂಡರು. ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯಲ್ಲಿದ್ದ ಚಿಕ್ಕಪ್ಪ ರುದ್ರಪ್ಪನವರ ಆಶ್ರಯದಲ್ಲಿ ನಿಜಲಿಂಗಪ್ಪನವರು ಬೆಳೆದರು. ಅಂತೆಯೇ ಇವರು ಸಿದ್ದವನಹಳ್ಳಿ ನಿಜಲಿಂಗಪ್ಪ ಎನಿಸಿಕೊಂಡರು.
ನಿಜಲಿಂಗಪ್ಪನವರು ಸಿದ್ದವನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನೂ, ದಾವಣಗೆರೆಯ ಆಂಗ್ಲೊ-ವರ್ನ್ಯಾಕುಲರ್ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನೂ ಪಡೆದು ಚಿತ್ರದುರ್ಗದಲ್ಲಿ ಪ್ರೌಢಶಾಲೆ ಸೇರಿದರು. 1924ರಲ್ಲಿ ಸೆಂಟ್ರಲ್ ಕಾಲೇಜಿನಿಂದ ಪದವಿ ಗಳಿಸಿ, 1926ರಲ್ಲಿ ಪುಣೆಯ ನ್ಯಾಯಶಾಸ್ತ್ರ ಕಾಲೇಜಿನಿಂದ ಎಲ್‍ಎಲ್‍ಬಿ ಗಳಿಸಿ ವಕೀಲಿ ವೃತ್ತಿಯಲ್ಲಿ ತೊಡಗಿದರು. ನಿಜಲಿಂಗಪ್ಪನವರ ಮೇಲೆ ಇವರ ಚಿಕ್ಕಂದಿನಲ್ಲಿ ಪ್ರಭಾವ ಬೀರಿದವರು ಶಿವಭಕ್ತೆಯಾಗಿದ್ದ ತಾಯಿ ಹಾಗೂ ಇವರ ಉಪಾಧ್ಯಾಯರಾಗಿದ್ದ ವೀರಪ್ಪ ಮಾಸ್ತರ್. ಬಸವೇಶ್ವರರ ವಚನಗಳೂ ಮತ್ತು ಶಂಕರಾಚಾರ್ಯರ ದರ್ಶನವೂ ನಿಜಲಿಂಗಪ್ಪನವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದವು. ಆನಿಬೆಸೆಂಟ್ ಅವರ ಬರಹಗಳೂ ಅವರ ಮೇಲೆ ಪ್ರಭಾವ ಬೀರಿದ್ದವು.
ನಿಜಲಿಂಗಪ್ಪನವರು ವಿದ್ಯಾರ್ಥಿಯಾಗಿದ್ದಾಗ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನಕ್ಕೆ ಸ್ವಯಂಸೇವಕರಾಗಿ ಹೋಗಿದ್ದರು. ಆ ಸಂದರ್ಭದಿಂದ ಅವರ ಮೇಲೆ ಗಾಂಧೀಜಿಯವರ ಪ್ರಭಾವ ಆವರಿಸಿತು.
1931ರಲ್ಲಿ ಗಾಂಧೀಜಿಯವರು ನಡೆಸಿದ ದಾಂಡೀ ಯಾತ್ರೆಯೂ ಇವರ ಮೇಲೆ ಪ್ರಭಾವ ಬೀರಿತು.
1936ರಲ್ಲಿ ನಿಜಲಿಂಗಪ್ಪನವರು ನೇರ ರಾಜಕಾರಣಕ್ಕಿಳಿದರು. ಆ ವರ್ಷ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. ಹಲವು ಸತ್ಯಾಗ್ರಹಗಳಲ್ಲಿ ಭಾಗವಹಿಸಿ ಅನೇಕ ಸಲ ಕಾರಾಗೃಹವಾಸ ಮಾಡಿದರು. ಕರ್ನಾಟಕದಾದ್ಯಂತ ಪ್ರವಾಸ ಮಾಡಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದರು.
ನಿಜಲಿಂಗಪ್ಪನವರು ಒಳ್ಳೆಯ ವಾಗ್ಮಿ. ರಾಜಕೀಯ ವಿಮೋಚನೆ, ಸಮಾಜ ಸುಧಾರಣೆ, ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಏಕೀಕರಣ, ಗ್ರಾಮೀಣ ಅರ್ಥ ವ್ಯವಸ್ಥೆಯ ಪುನರುದ್ಧಾರ ಇವುಗಳಲ್ಲಿ ಅಪಾರ ಆಸಕ್ತಿ ವಹಿಸಿದ್ದರು. ಸ್ತ್ರೀ ಪುರುಷ ಸಮಾನತೆ ಮತ್ತು ವಿಧವಾ ವಿವಾಹವನ್ನು ಪ್ರತಿಪಾದಿಸಿದರು. ಅರಣ್ಯ ಸತ್ಯಾಗ್ರಹದ ನಿಮಿತ್ತವಾಗಿ ನಿಜಲಿಂಗಪ್ಪನವರನ್ನು ಆಗಿನ ಮೈಸೂರು ಸರ್ಕಾರ ಬಂಧಿಸಿ ಒಂದೂವರೆ ವರ್ಷಗಳ ಕಾಲದ ಸಶ್ರಮ ಕಾರಾಗೃಹವಾಸ ಶಿಕ್ಷೆ ವಿಧಿಸಿದ್ದರ ಜೊತೆಗೆ, ಇವರ ವಕೀಲಿಯ ಸನದನ್ನೂ ಹಿಂದಕ್ಕೆ ತೆಗೆದುಕೊಂಡಿತು. ಮತ್ತೆ 1942ರ ಚಲೇಜಾವ್ ಚಳವಳಿಯ ಕಾಲದಲ್ಲಿ ಸರ್ಕಾರ ಇವರನ್ನು ಸ್ಥಾನಬದ್ಧತೆಯಲ್ಲಿಟ್ಟಿತ್ತು.
ನಿಜಲಿಂಗಪ್ಪನವರು 1945-1946ರಲ್ಲಿ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಗೂ 1948-54ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೂ ಅಧ್ಯಕ್ಷರಾದರು. 1945-47ರಲ್ಲಿ ಸಂವಿಧಾನ ಸಭೆಗೂ 1952-56ರಲ್ಲಿ ಲೋಕಸಭೆಗೂ ಸದಸ್ಯರಾಗಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದು ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿತವಾದ ಮೇಲೂ ಇವರು ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮುಂದುವರಿಸಿದರು. 1956ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಮುಂಬಯಿ ಮತ್ತು ಮದರಾಸು ಕರ್ನಾಟಕ ಭಾಗಗಳು, ಕೊಡಗು ಹಾಗೂ ಆಗಿನ ಮೈಸೂರು ರಾಜ್ಯ ಸೇರಿ ವಿಶಾಲ ಮೈಸೂರು ರಾಜ್ಯವಾದಾಗ ಇವರು ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ, 1958ರ ಏಪ್ರಿಲ್‍ವರೆಗೂ ಆ ಹೊಣೆ ನಿರ್ವಹಿಸಿದರು.
1958ರಲ್ಲಿ ನಿಜಲಿಂಗಪ್ಪನವರು ಸಹಕಾರಿ ಕೃಷಿ ಪದ್ದತಿಯ ಅಧ್ಯಯನ ತಂಡದ ಮುಖ್ಯಸ್ಥರೂ, ದಿ ಇಂಡಿಯನ್ ಆಯಿಲ್ ಕಂಪೆನಿಯ ಗೌರವಾಧ್ಯಕ್ಷರೂ ಆದರು. ಆ ಸಮಯದಲ್ಲಿ ಇವರು ಮತ್ತೆ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿಯೂ, 1961ರಲ್ಲಿ ಕಾಂಗ್ರೆಸ್ ಪಾರ್ಲಿಮೆಂಟರಿ ಬೋರ್ಡಿನ ಸದಸ್ಯರಾಗಿಯೂ ಆಯ್ಕೆಯಾದರು.
1962-68ರಲ್ಲಿ ನಿಜಲಿಂಗಪ್ಪನವರು ಮತ್ತೆ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ವೇಳೆಗೆ ಅಖಿಲ ಭಾರತ ಖ್ಯಾತಿ ಪಡೆದಿದ್ದ ಇವರು 1968ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಬೇಕಾಯಿತು. ಕಾಂಗ್ರೆಸ್ ಸಂಸ್ಥೆಗೆ ಪುನಶ್ಚೈತನ್ಯ ತುಂಬಲು ಬಹುವಾಗಿ ಶ್ರಮಿಸಿದರು. ಆದರೆ, 1969ರಲ್ಲಿ ಕಾಂಗ್ರೆಸಿನ ವಿವಿಧ ಬಣಗಳಲ್ಲಿ ಭಿನ್ನಾಭಿಪ್ರಾಯಗಳು ಬೆಳೆದು ಆ ಸಂಸ್ಥೆ ಒಡೆಯಿತು.
ನಿಜಲಿಂಗಪ್ಪನವರು ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿದು 1971ರಲ್ಲಿ ಅದರಿಂದ ನಿವೃತ್ತರಾದರು. ಅನಂತರ ಅದರ ಕೋಶಾಧ್ಯಕ್ಷರಾಗಿದ್ದರು. 1977ರಲ್ಲಿ ಸಂಸ್ಥಾ ಕಾಂಗ್ರೆಸ್ಸು ಇತರ ಕೆಲವು ಪಕ್ಷಗಳೊಡನೆ ಸೇರಿತು, ಜನತಾ ಪಕ್ಷದ ಸ್ಥಾಪನೆಯಾಯಿತು. ಜನತಾಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ ಮಾರ್ಗದರ್ಶಕರಾಗಿ ದುಡಿದರೂ ಅಲ್ಲಿಯೂ ಅವರು ಅಶುದ್ಧತೆಗಳನ್ನು ಸಹಿಸಲಿಲ್ಲ.
ಮುಂದೆ ನಿಜಲಿಂಗಪ್ಪನವರು ರಾಜಕೀಯದಿಂದ ಹಿಂದೆ ಸರಿದು ಸರ್ದಾರ್ ವಲ್ಲಭಭಾಯ್ ಸೊಸೈಟಿಯ ಆಧ್ಯಕ್ಷರಾಗಿದ್ದರು.
ನಿಜಲಿಂಗಪ್ಪನವರಿಗೆ ಕರ್ನಾಟಕ ವಿಶ್ವವಿದ್ಯಾಲಯವು 1968ರಲ್ಲಿ ಗೌರವ ಎಲ್.ಎಲ್.ಡಿ. ಪದವಿಯನ್ನಿತ್ತು ಸನ್ಮಾನಿಸಿತು. ನನ್ನ ಬದುಕು ಮತ್ತು ರಾಜಕೀಯ (My Life and Politics) ಅವರ ಆತ್ಮಚರಿತ್ರೆ.
ರಾಜಕೀಯ ರಂಗ ಪ್ರವೇಶ
1936 ರಲ್ಲಿ ತಮ್ಮ ರಾಜಕೀಯ ಜೀವನವನ್ನು ತಡವಾಗಿಯೇ ಪ್ರಾರಂಭಿಸಿದ ನಿಜಲಿಂಗಪ್ಪನವರು, ಎನ್.ಎಸ್. ಹರ್ಡೀಕರರ ಸಹಾಯದಿಂದ ಕಾಂಗ್ರೆಸ್ ಸೇರಿದರು.ಇಂಡಿಯನ್ ಆಯಿಲ್ ಸಂಸ್ಥೆಯ ಅಧ್ಯಕ್ಷರಾಗಿ 1956ರಿಂದ 1962 ರ ವರೆಗೆ ದುಡಿದರು.ಪ್ರಾರಂಭದಲ್ಲಿ ಸಾಮಾನ್ಯ ಸದಸ್ಯನಾಗಿ ಸೇರಿ ನಂತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಕೊನೆಗೆ 1968 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷರಾದರು. ಇಂದಿರಾ ಗಾಂಧಿಯವರ ಜೊತೆ ರಾಜಕೀಯ ಬಿನ್ನಾಭಿಪ್ರಾಯ ಹೊಂದಿ ಅಂದಿನ ಅನೇಕ ಹಿರಿಯ ಕಾಂಗ್ರೆಸಿನ ನಾಯಕರೊಂದಿಗೆ ಕಾಂಗ್ರೆಸ್ ಓ ಸ್ಥಾಪಿಸಿದರು.
ಮುಂದೆ ಜಯಪ್ರಕಾಶ ನಾರಾಯಣ ಅವರ ನೇತೃತ್ವದಲ್ಲಿ ಜನತಾ ಪಕ್ಷದ ಸ್ಥಾಪನೆಗೂ ಕಾರಣಕರ್ತರಾದರು. ಪ್ರಧಾನಿ ನೆಹರೂ ವಲ್ಲಭ ಭಾಯಿ ಪಟೇಲ್ ಡಾ ಬಾಬಾಸಾಹೇಬ ಅಂಬೇಡ್ಕರ್ ಕೆ ಕಾಮರಾಜ ಇವರಲ್ಲದೆ ಇನ್ನೂ ಅನೇಕರ ಜೊತೆಗೆ ಅತ್ಯಂತ ನಿಕಟ ಸಂಬಂಧ ಹೊಂದಿದ ಪ್ರಾಮಾಣಿಕ ದಕ್ಷ ಪಾರದರ್ಶಕ ರಾಜಕಾರಣಿ.
ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀವಾದದ ದೀಕ್ಷೆ ಕೈಗೊಂಡು ಬದುಕಿನುದ್ದಕ್ಕೂ ಅದನ್ನು ಪಾಲಿಸಿಕೊಂಡು ಬಂದ ನಿಜಲಿಂಗಪ್ಪನವರ ನಡೆ-ನುಡಿಗಳ ನಡುವೆ ಎಂದೂ ಅಂತರವಿರಲಿಲ್ಲ.ನಿಜಲಿಂಗಪ್ಪನವರು ತೆರಿಗೆದಾರರ ಹಣ ಅವರ ಅಭ್ಯುದಯಕ್ಕೆ ಹೊರತು, ಅವರೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳಿಗಲ್ಲ ಎಂಬ ನಿಲುವುವಿನಲ್ಲಿ ಅಚಲ ವಿಶ್ವಾಸವಿರಿಸಿಕೊಂಡಿದ್ದರು. ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರು, ಸ್ವಂತಕ್ಕಾಗಿ ಅಧಿಕಾರವನ್ನು ಬಳಸಲಿಲ್ಲ.
ಕರ್ನಾಟಕದ ಏಕೀಕರಣ ಮತ್ತು ಅಭಿವೃದ್ಧಿಗಾಗಿ ದುಡಿದ ನಿಜಲಿಂಗಪ್ಪನವರಿಗೆ 1999 ರಲ್ಲಿ ಕರ್ನಾಟಕ ಸರ್ಕಾರವು ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.
ಕರ್ನಾಟಕದ ಏಕೀಕರಣ, ಶರಾವತಿ ಜಲವಿದ್ಯುತ್ ಯೋಜನೆ, ಕೃಷ್ಣಾ ಮೇಲ್ಡಂಡೆ ಯೋಜನೆಗಳು ಹೀಗೆ ಹಲವಾರು ಯೋಜನೆಗಳು ನಿಜಲಿಂಗಪ್ಪನವರ ನೆನಪು ನಾಡಿನ ಜನಮನದಲ್ಲಿ ಹಚ್ಚ ಹಸಿರಾಗಿ ಇಡಬಲ್ಲವು.
ನಿಜಲಿಂಗಪ್ಪನವರ ಮತ್ತೊಂದು ಪ್ರಮುಖವಾದ ಕೆಲಸವೆಂದರೆ, ಟಿಬೇಟ್ ಸಮುದಾಯದವರಿಗೆ ಕರ್ನಾಟಕದಲ್ಲಿ ಆಶ್ರಯ ಒದಗಿಸಿದ್ದು. ಕರ್ನಾಟಕದಲ್ಲಿನ ಟಿಬೇಟಿಯನ್ನರು ಮನಗಳಲ್ಲಿ ನಿಜಲಿಂಗಪ್ಪನವರು ಸದಾ ನೆಲೆಸಿರುತ್ತಾರೆ. ಈ ಕಾರಣಕ್ಕಾಗಿಯೇ, ಚಿತ್ರದುರ್ಗದಲ್ಲಿನ ಅವರ ಸ್ಮಾರಕವನ್ನು ‘ದಲಾಯಿ ಲಾಮ’ರವರು ಉದ್ಘಾಟಿಸಿದರು. ವೀರೇಂದ್ರ ಪಾಟೀಲ ರಾಮಕೃಷ್ಣ ಹೆಗಡೆ ದೇವರಾಜ ಅರಸು ಮುಂತಾದ ಅನೇಕರು ನಿಜಲಿಂಗಪ್ಪನವರ ಗರಡಿಯಲ್ಲಿ ಪಳಗಿದ ರಾಜಕೀಯ ಧುರೀಣರು.ಇಂತಹ ಅಪರೂಪದ ಸಜ್ಜನ ರಾಜಕಾರಣಿ ಈಗ ಬರೀ ನೆನಪು ಮಾತ್ರ.
ಪ್ರಾಮಾಣಿಕತೆಗೆ ಮಾದರಿ
ಏಳು ವರ್ಷ ಸಿಎಂ ಆಗಿದ್ದ ನಿಜಲಿಂಗಪ್ಪ ಅವರಲ್ಲಿ ಸ್ವಂತ ಕಾರು ಇರಲಿಲ್ಲ. ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗಬೇಕೆನಿಸಿದಾಗ ಅಥವಾ ಇನ್ನೆಲ್ಲೋ ಓಡಾಟವಿದೆ ಎಂದಾಗ ಸ್ನೇಹಿತರ ಕಾರಿನಲ್ಲಿ ಅವರು ಹೋಗಿ ಬರುತ್ತಿದ್ದರು. ಬಿದ್ದು ಕಾಲು ಮುರಿದಾಗ ತಮ್ಮನ್ನು ಬೆಂಗಳೂರಿನಲ್ಲಿರುವ ಸರ್ಕಾರಿ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡುವಂತೆ ಸರ್ಕಾರವನ್ನು ಕೋರಿದ್ದರು. ಖಾಸಗಿ ಆಸ್ಪತ್ರೆಗೆ ಸೇರಿಸುವ ಅಂದಿನ ಮುಖ್ಯಮಂತ್ರಿಯ ಸಲಹೆಯನ್ನು ಅವರು ನಿರಾಕರಿಸಿದ್ದರು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಚಿಕಿತ್ಸೆಗೆಂದು ವಿದೇಶಕ್ಕೆ ಹೋಗಿದ್ದರು.ಅಲ್ಲಿಂದ ತಮ್ಮ ರಾಜಕೀಯ ಗುರುವಿನ ಜೊತೆ ಮಾತಾಡಲು ಬಯಸಿ ಫೋನ್ ತಿರುಗಿಸಿದರೆ ಈ ನಂಬರ್ ಚಾಲನೆಯಲ್ಲಿ ಎಂಬ ಉತ್ತರ ಬಂತು. ಎಷ್ಟು ಬಾರಿ ಫೋನ್ ಮಾಡಿದರೂ ಇದೇ ಉತ್ತರ. ಹೆಗಡೆ ಅಲ್ಲಿಂದ ತಮ್ಮ ಆಪ್ತ ಸಹಾಯಕ ರಾಮಪ್ಪನವರಿಗೆ ಫೋನ್ ಮಾಡಿ ರಾಮಪ್ಪ ಚಿತ್ರದುರ್ಗ ಎಸ್ ಪಿ ಯನ್ನು ಸಂಪರ್ಕಿಸಿ ಹಕಿಕತ್ ವಿವರಿಸಿದರು. ಶಂಕರ್ ಬಿದರಿ ಯವರು ಆಗ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಆಯ್ಕೆಯಾಗುವ ಪೂರ್ವದಲ್ಲಿ ದೂರವಾಣಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಏನು ಆಗಿರಬಹುದು ಎಂಬುದನ್ನು ಅವರು ಸರಿಯಾಗಿ ಊಹಿಸಿದರು ರೂ.4೦ ಬಿಲ್ಲು ಹಣ ತುಂಬದ ಕಾರಣ ಮಾಜಿ ಮುಖ್ಯಮಂತ್ರಿ ಮನೆ ದೂರವಾಣಿ ಸಂಪರ್ಕವನ್ನು ಇಲಾಖೆ ಕತ್ತರಿಸಿ ಹಾಕಿತ್ತು.
ತುಂಬ ಬೇಕಿದ್ದ ಬಾಕಿ ಮೊತ್ತವಾದರೂ ಎಷ್ಟು ಅಂತೀರಿ. 10 ಇಲ್ಲ 20 ಸಾವಿರವೇ? ಅಲ್ವೇ ಅಲ್ಲ. ಬರೀ ರೂ.40 ಅಷ್ಟೇ. ಹಲವು ತಿಂಗಳುಗಳಿಂದ ಬಾಕಿ ಇರಿಸಿಕೊಂಡಿದ್ದರಿಂದ ಇಲಾಖೆಯ ನಿಯಮನುಸಾರ ಟೆಲಿಫೋನ್ ಸಂಪರ್ಕ ಕಡಿದು ಹಾಕಲಾಗಿದೆ ಎಂಬ ಮಾಹಿತಿ ಸಂಗ್ರಹಿಸಿದ ಬಿದರಿ ಅವರು ರೂ.40 ಜೊತೆಗೆ ಮರು ಸಂಪರ್ಕಕ್ಕೆ 25 ರೂಪಾಯಿ ದಂಡ ಕಟ್ಟಿ ಒಟ್ಟು 65 ರೂಪಾಯಿಗಳನ್ನು ಅವರಿಗೆ ಗೊತ್ತಾಗದೆ ಪಾವತಿಸಿದ್ದರು.
ಮನೆಯಲ್ಲಿ ಏನನ್ನೋ ಓದುತ್ತಾ ಕುಳಿತಿದ್ದ ಎಸ್ ಎನ್ ಅವರಿಗೆ ಫೋನ್ ರಿಂಗಣಿಸಿದಾಗ ಅಚ್ಚರಿ. ಆ ಕಡೆಯಿಂದ ಹಲೋ ಸರ್ ಎಂದವರು ಹೆಗಡೆ. ಆಗ ಏನನ್ನು ಹೇಳಲು ಎಸ್ ಎನ್ ನಾನು ಬಿಲ್ಲು ತುಂಬಿರಲಿಲ್ಲ ಯಾರು ಈ ಕೆಲಸ ಮಾಡಿದ್ದು ವಿಚಾರಿಸಿ ಎಂದು ತಮ್ಮ ವಿಶ್ವಾಸಿಕರೊಬ್ಬರನ್ನು ಕೋರಿದರು. ಟೆಲಿಫೋನ್ ಎಕ್ಸ್ಚೇಂಜ್ ನಲ್ಲಿ ಅವರು ವಿಚಾರಿಸಿದಾಗ ಎಸ್ಪಿ ಎಂಬುದು ಗೊತ್ತಾಯ್ತು. ತಮ್ಮ ಆತ್ಮಕಥನ ಸತ್ಯಮೇವ ಜಯತೆಯಲ್ಲಿ ಶಂಕರ್ ಬಿದರಿಯವರು ಈ ಘಟನೆಯನ್ನು ಪ್ರಸ್ತಾಪಿಸಿದ್ದಾರೆ. ಎಸ್ ಎನ್ ತಡಮಾಡಲಿಲ್ಲ ಬಿದರಿಯವರನ್ನು ಮನೆಗೆ ಕರೆಸಿಕೊಂಡು ಮಾತಾಡಿಸಿ ಕಾಫಿ ಕುಡಿಸಿ ಮುಂದಿನ ತಿಂಗಳು ಮೊದಲ ವಾರ ಬನ್ನಿ ಎಂದರು. ಅದರಂತೆ ಬಿದರಿಯವರು ಎಸ್ಎನ್ ಅವರ ಮನೆಗೆ ಹೋದಾಗ ಒಂದು ಕವರಿನಲ್ಲಿ 65 ಇಟ್ಟು ಥ್ಯಾಂಕ್ಸ್ ಹೇಳಿದರು. ತಮ್ಮ ದೂರವಾಣಿ ಮರುಸ್ಥಾಪನೆಯಾದ ಕೂಡಲೇ 65 ರೂಪಾಯಿಯನ್ನು ಹಿಂದಿರುಗಿಸುವ ಆರ್ಥಿಕ ಬಲ ಅವರಲ್ಲಿ ಇರ್ಲಿಲ್ಲ ಎಂಬುದು ಇಂದಿನ ರಾಜಕಾರಣಿಗಳಿಗೆ ಭರ್ಚಿ ಯಂತೆ ಚುಚ್ಚಿದರೂ ಆಶ್ಚರ್ಯ ಇಲ್ಲ. ಒಂದಲ್ಲ ಎರಡಲ್ಲ ಏಳು ವರ್ಷ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರಾಗಿದ್ದರು. ಈಗ ಇಂಥ ಸನ್ನಿವೇಶ ಸಂದರ್ಭಗಳನ್ನು ಸ್ಮರಿಸಿಕೊಂಡಾಗ ರಾಷ್ಟ್ರ ನಾಯಕ ಎಸ್ ನಿಜಲಿಂಗಪ್ಪನವರು ಎಷ್ಟೊಂದು ಪ್ರಾಮಾಣಿಕರಾಗಿದ್ದರು ಎಂಬುದು ವೇದ್ಯವಾಗುತ್ತದೆ ಅಲ್ವಾ?.
ಇಂತಹ ರಾಷ್ಟ್ರ ಕಂಡ ಧೀಮಂತ ನಾಯಕನಿಗೆ ಭಾರತ ರತ್ನ ಕೊಟ್ಟಿದ್ದರೆ ಅದರ ಘನತೆ ಗೌರವ ಹೆಚ್ಚುತ್ತಿತ್ತು
ಸರಳತೆ ಮತ್ತು ಪ್ರಾಮಾಣಿಕತೆಗಳಿಂದ ಜನಸಾಮಾನ್ಯರಾಗಿ ಬಾಳ್ವೆ ನಡೆಸಿದ ನಿಜಲಿಂಗಪ್ಪನವರು 2000ದ ಆಗಸ್ಟ್ 8ರಂದು ಬೆಂಗಳೂರಿನ ಸರಕಾರೀ ಆಸ್ಪತ್ರೆಯಲ್ಲಿ ಈ ಲೋಕವನ್ನಗಲಿದರು.
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

